ಸತ್ಪ್ರಜೆಗಳ ನಿರ್ಮಾಣಕ್ಕೆ ಸಂಸ್ಕಾರದ ಶಿಕ್ಷಣ
Team Udayavani, Dec 26, 2019, 1:06 AM IST
ಉಡುಪಿ: ಸತ್ಪ್ರಜೆಗಳ ನಿರ್ಮಾಣಕ್ಕೆ ಸಂಸ್ಕಾರವಂತ ಶಿಕ್ಷಣ ಅಗತ್ಯ. ಸ್ವತ್ಛ ರಾಷ್ಟ್ರ ನಿರ್ಮಾಣಕ್ಕೆ ಜನತೆಯ ಸಹಕಾರ ಆವಶ್ಯಕ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರತಿಪಾದಿಸಿದರು.
ಬುಧವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಚಿಣ್ಣರ ಸಂತರ್ಪಣೆ ಯೋಜನೆಯ ಶಾಲೆಗಳಿಗೆ ಏರ್ಪಡಿಸಿದ್ದ ಸಾಂಸ್ಕೃತಿಕ ಸ್ಪರ್ಧೆ “ಚಿಣ್ಣರ ಮಾಸೋತ್ಸವ’ದಲ್ಲಿ ವಿಜೇತ ಶಾಲೆಗಳಿಗೆ ಬಹುಮಾನ ವಿತರಣೆ ಮತ್ತು ಎಂಆರ್‌ಪಿಎಲ್‌ನವರು ನಿರ್ಮಿಸಿಕೊಟ್ಟ “ಸ್ವಚ್ಛಾಂಗಣ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭತ್ತ ತುಂಬುವ ಚೀಲಗಳ ಬದಲು ಭತ್ತ ಬೆಳೆಯುವ ಗದ್ದೆಗಳ ಬಗ್ಗೆ ತಿಳಿಸಬೇಕು ಎಂದ ಕುವೆಂಪು ಅವರ ಮಾತುಗಳನ್ನು ಉಲ್ಲೇಖೀಸಿದ ಮುಖ್ಯಮಂತ್ರಿ, ಸಂಸ್ಕಾರವಂತ, ಶುದ್ಧ ಪರಿಸರದ ಆರೋಗ್ಯವಂತ ಶಿಕ್ಷಣವನ್ನು ಮಕ್ಕಳಿಗೆ ನೀಡುವ ಹೊಣೆಗಾರಿಕೆ ಪೋಷಕರು, ಶಿಕ್ಷಕರು, ಸರಕಾರ, ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದರು.
ಸರಕಾರದಿಂದ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಆರಂಭವಾಗುವ ಮುನ್ನವೇ 16 ವರ್ಷಗಳ ಹಿಂದೆ ಶ್ರೀ ಪಲಿಮಾರು ಮಠದ ವತಿಯಿಂದ ಯೋಜನೆ ಆರಂಭವಾದುದನ್ನು ಸ್ಮರಿಸಿಕೊಂಡ ಅವರು, ಎರಡು ವರ್ಷದ ಪರ್ಯಾಯ ಅವಧಿಯಲ್ಲಿ ದೇಶದ ಕರೆಗೆ ಕಿವಿಗೊಡುವ, ಸ್ವತ್ಛತೆಗೆ ಆದ್ಯತೆ ಕೊಡುವ ಪ್ರವೃತ್ತಿಯನ್ನು ಸ್ವಾಮೀಜಿ ತೋರಿದ್ದಾರೆ ಎಂದು ಕೊಂಡಾಡಿದರು.
ಶಾಲೆಗಳಿಗೆ ಬಹುಮಾನ
ಚಿಣ್ಣರ ಮಾಸೋತ್ಸವದಲ್ಲಿ ಪ್ರಥಮ ಮೂರು ಸ್ಥಾನ ಗಳಿಸಿದ ಈದು ಉಜಿಲಾ°ಯ ಅ.ಹಿ.ಪ್ರಾ. ಶಾಲೆ, ಉಪ್ಪೂರು ತೆಂಕಬೆಟ್ಟು ಅ.ಹಿ.ಪ್ರಾ. ಶಾಲೆ ಮತ್ತು ಬಸೂÅರು ಬಿ.ಎಂ. ಅ.ಹಿ.ಪ್ರಾ. ಶಾಲೆಗಳಿಗೆ ಮುಖ್ಯಮಂತ್ರಿಗಳು ಬಹುಮಾನ ವಿತರಿಸಿದರು. ಈ ಶಾಲೆಗಳ ಚಿಣ್ಣರು ಸ್ವತಃ ವೇದಿಕೆಯೇರಿ ಮುಖ್ಯಮಂತ್ರಿಗಳಿಂದ ಬಹುಮಾನ ಸ್ವೀಕರಿಸಿದರು.
ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಧಾರ್ಮಿಕ ದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ರಘುಪತಿ ಭಟ್, ಸುನಿಲ್ ಕುಮಾರ್, ಎಂಆರ್‌ಪಿಎಲ್ ಆಡಳಿತ ನಿರ್ದೇಶಕ ಎಂ. ವೆಂಕಟೇಶ್, ಜಿಲ್ಲಾಧಿಕಾರಿ ಜಿ. ಜಗದೀಶ್, ಪೌರಾಯುಕ್ತ ಆನಂದ ಕಲ್ಲೋಳಿಕರ್ ಉಪಸ್ಥಿತರಿದ್ದರು.
ಶಿಬರೂರು ವೇದವ್ಯಾಸ ತಂತ್ರಿ ಸ್ವಾಗತಿಸಿ, ಪ್ರಹ್ಲಾದ ರಾವ್ ಪ್ರಸ್ತಾವನೆ ಗೈದರು. ಕೊರ್ಲಹಳ್ಳಿ ವೆಂಕಟೇಶ ಆಚಾರ್ಯ ನಿರ್ವಹಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆಗೆ ಸಹಕಾರ
ಉಗ್ರರ ಹಾವಳಿ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ಇದನ್ನು ನಿಯಂತ್ರಿಸಲು ಪೌರತ್ವ ತಿದ್ದುಪಡಿ ಕಾಯ್ದೆಗೆ ಎಲ್ಲರೂ ಸಹಕಾರ ಕೊಡಬೇಕು. ದಕ್ಷ ಆಡಳಿತ, ಸುಭದ್ರ ಆಡಳಿತ ನೆಲೆಗೊಳ್ಳುವಂತಾಗಲಿ ಎಂದು ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹಾರೈಸಿದರು. ದ್ವಾರಕೆಯಿಂದ ಬಂದ ಶ್ರೀಕೃಷ್ಣನಿಗೆ ಚಿಣ್ಣರು ಇಷ್ಟ. ಅದಕ್ಕಾಗಿಯೇ ಚಿಣ್ಣರಿಗೆ ಪ್ರಿಯವಾದ ಯೋಜನೆಗಳನ್ನು ನಡೆಸಿದೆವು ಎಂದು ಸ್ವಾಮೀಜಿ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.