ಆರೋಗ್ಯ ರಕ್ಷಣೆಗೆ ಜೋಳ ಸಹಕಾರಿ
ಪಡಿತರದಲ್ಲಿ ಜೋಳ ವಿತರಣೆಗೆ ಸರ್ಕಾರಕ್ಕೆ ಸೂಕ್ತ ವರದಿ ಸಲ್ಲಿಸುವೆ: ಬೆಳಗುರ್ಕಿ
Team Udayavani, Dec 28, 2019, 12:13 PM IST
ವಿಜಯಪುರ: ಯುರೋಪಿಯನ್ ದೇಶಗಳಲ್ಲಿ ಹೆಚ್ಚು ಬೇಡಿಕೆ ಇರುವ ಅಧಿಕ ಪೌಷ್ಟಿಕಾಂಶ ಹೊಂದಿರುವ ಜೋಳ ಹಾಗೂ ರಾಗಿ ಧಾನ್ಯಗಳನ್ನು ಪಡಿತರ ವ್ಯವಸ್ಥೆಯಲ್ಲಿ ವಿತರಣೆ ಕುರಿತು ಸೂಕ್ತ ಅಧ್ಯಯನ ನಡೆಸಲಾಗುತ್ತದೆ. ಅಧ್ಯಯನದ ಬಳಿಕ ಸಾಧಕ-ಬಾಧಕ ಅರಿತು ಸಮಗ್ರ ವರದಿ ರೂಪಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಹೇಳಿದರು.
ಶುಕ್ರವಾರ ನಗರದ ಹೊರ ವಲಯದಲ್ಲಿರುವ ಹಿಟ್ಟಿನಹಳ್ಳಿ ಕೃಷಿ ಮಹಾವಿದ್ಯಾಲಯ ಸಭಾಂಗಣದಲ್ಲಿ ಜೋಳ ಬೆಳೆಯನ್ನು ಪಡಿತರ ವ್ಯವಸ್ಥೆ ಅಡಿ ತರುವ ನಿಟ್ಟಿನಲ್ಲಿ ರೈತರು ಹಾಗೂ ವಿಜ್ಞಾನಿಗಳೊಂದಿಗಿನ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಹೆಚ್ಚಿನ ಪ್ರದೇಶದಲ್ಲಿ ಬೆಳೆಯಲಾಗುವ ಜೋಳ ಪೌಷ್ಟಿಕಾಂಶ ಹೊಂದಿದೆ. ಇದೇ ರೀತಿ ದಕ್ಷಿಣ ಕರ್ನಾಟಕ ಭಾಗದಲ್ಲಿ ಬೆಳೆಯುವ ರಾಗಿ ಕೂಡ ಪೌಷ್ಟಿಕ ಅಹಾರದಲ್ಲಿ ಮಹತ್ವ ಪಡೆದಿದೆ ಎಂದರು.
ರಾಗಿ ಬೆಳೆ ಕುರಿತು ಈಗಾಗಲೇ ದಕ್ಷಿಣ ಕರ್ನಾಟಕದ 12 ಜಿಲ್ಲೆಗಳಲ್ಲಿ ಕಾರ್ಯಾಗಾರ ಹಮ್ಮಿಕೊಂಡು ಮುಗಿಸಿದ್ದೇವೆ. ಇದೀಗ ಈ ಭಾಗದಲ್ಲಿ ಜೋಳದ ಬೆಳೆಯ ಮಹತ್ವ, ಮಾರುಕಟ್ಟೆ ವ್ಯವಸ್ಥೆ, ಕನಿಷ್ಠ ಬೆಂಬಲ, ಬೆಲೆ ಇತರೆ ತಾಂತ್ರಿಕ ಸೌಲಭ್ಯಗಳ ಕುರಿತು
ಅಧ್ಯಯನ ನಡೆಸಬೇಕಿದೆ.
ಇದಕ್ಕಾಗಿ ಸಮಗ್ರ ಯೋಜನಾ ವರದಿ ಸೂಪಿಸಿ ಸರ್ಕಾರಕ್ಕೆ ಸಲ್ಲಿಸಬೇಕಿದೆ. ಇದಕ್ಕಾಗಿ ವಿಜಯಪುರ ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ 12 ಜಿಲ್ಲೆಗಳಲ್ಲಿ ಕಾರ್ಯಾಗಾರಗಳನ್ನು ಹಮ್ಮಿಕೊಂಡು ರೈತರು ಮತ್ತು ವಿಜ್ಞಾನಿಗಳಿಂದ ಸಲಹೆ ಪಡೆಯಲಾಗುತ್ತದೆ ಎಂದರು.
ಪೌಷ್ಟಿಕ ಅಹಾರ ಎನಿಸಿರುವ ಜೋಳ ಆಹಾರ ಸೇವನೆ ಮಕ್ಕಳ ಆರೋಗ್ಯ ರಕ್ಷಣೆಯಲ್ಲಿ ಸಹಕಾರಿಯಾಗಿದೆ. ಯುರೋಪ್‌ದಲ್ಲಿ ಅಧಿಕ ಬೇಡಿಕೆ ಇರುವ ಮತ್ತು ಜೋಳದಿಂದ ಉತ್ಪಾದಿಸಿದ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಇದ್ದರೂ ಕೂಡ ಈ ಬೆಳೆಯ ಕ್ಷೇತ್ರ ವಿಸ್ತರಣೆ ಕಡಿಮೆಯಾಗುತ್ತಿದೆ. ಈ ಬೆಳೆ ಇಳುವರಿ ಹೆಚ್ಚಿಸಲು ನಿ ರ್ದಿಷ್ಟ ಬೆಲೆ ದೊರಕಿಸುವ ನಿಟ್ಟಿನಲ್ಲಿ ಪಡಿತರ ವ್ಯವಸ್ಥೆಯಲ್ಲಿ ತರುವ ಭಾಗವಾಗಿ ಪ್ರಸ್ತುತ ಬೆಳೆಯ ಪರಿಸ್ಥಿತಿ-ಉತ್ತಮ ಮಾರುಕಟ್ಟೆ ವ್ಯವಸ್ಥೆ ಸೇರಿದಂತೆ ಇನ್ನಿತರ ತಾಂತ್ರಿಕ ಅಂಶಗಳ ಅಧ್ಯಯನಕ್ಕಾಗಿ ರಾಗಿ ಮತ್ತು ಜೋಳ ಬೆಳೆಗಳ ಕುರಿತು ರೈತ ಸಂವಾದ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದು
ಹೇಳಿದರು.
ಇತ್ತೀಚೆಗೆ ಯುವ ಜನಾಂಗವು ಕೃಷಿ ಪದ್ಧತಿಯಿಂದ ದೂರ ಉಳಿಯುತ್ತಿದ್ದು ರೈತರಿಗೆ ಬೇಡಿಕೆ ಆಧಾರಿತ ಬೇಸಾಯದ ಬಗ್ಗೆ ಜ್ಞಾನ ನೀಡಬೇಕಾಗಿದೆ. ನಮ್ಮ ತತ್ರಾಂಶ ಮತ್ತು ದತ್ತಾಂಶಗಳನ್ನು ಬೆಳವಣಿಗೆ ಮಾಡುವ ಮೂಲಕ ಯುವ ಜನಾಂಗಕ್ಕೂ ಕೃಷಿ ಪದ್ಧತಿ
ಬಗ್ಗೆ ತಿಳಿಹೇಳಬೇಕಾಗಿದೆ. ಈಗಾಗಲೇ ಆಹಾರ ಭದ್ರತೆ ಕಾಯ್ದೆಯಡಿ ಅಕ್ಕಿಯನ್ನು ಪಡಿತರ ವ್ಯವಸ್ಥೆಗೆ ತರಲಾಗಿದೆ. ಪಿಡಿಎಸ್ ವ್ಯವಸ್ಥೆಯಡಿ ವರ್ಷಕ್ಕೆ 40 ಲಕ್ಷ ಟನ್ ಹಾಗೂ ಪಿಡಿಎಸ್ ಹೊರತು ಪಡಿಸಿ 40 ಲಕ್ಷ ಟನ್ ಆಹಾರ ಉತ್ಪಾದನೆ ಆಗಬೇಕಾಗಿದೆ. ಉತ್ಪಾದನೆ ಮತ್ತು ಮಾರಾಟಕ್ಕೆ ಅವಶ್ಯಕತೆಗಳೇನು ಎಂಬುವುದನ್ನು ತಿಳಿದು ಜೋಳ ಮತ್ತು ರಾಗಿ ಕುರಿತು ವಿಶೇಷ ವರದಿ ಸಿದ್ಧ ಪಡಿಸಲಾಗುತ್ತಿದೆ ಎಂದರು.
ಕೃಷಿ ಮಹಾವಿದ್ಯಾಲಯದ ಜಿ.ಎಂ. ಸಜ್ಜನವರ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ಬೆಳೆಯುವ ಹಿಂಗಾರಿ ಜೋಳ ವಿಶ್ವದಲ್ಲಿ ಎಲ್ಲಿಯೂ ದೊರೆಯುವುದಿಲ್ಲ. ಗೋಧಿ ಹಾಗೂ ಅಕ್ಕಿಗಳಿಗಿಂತ ಹೆಚ್ಚು ಪೌಷ್ಟಿಕಾಂಶ, ಕ್ಯಾನ್ಸರ್, ಡಯಾಬಿಟಿಸ್ ರೋಗ ನಿವಾರಕ ಶಕ್ತಿ ಜೋಳದಲ್ಲಿದೆ. ಹೀಗಾಗಿ ಕುಸಿತ ಕಂಡಿರುವ ಜೋಳ ಬಿತ್ತನೆ ಪ್ರದೇಶ ವಿಸ್ತರಿಸುವ ಜೊತೆಗೆ ಬೆಲೆ ಸಹ ಹೆಚ್ಚಿಸಬೇಕಾಗಿದೆ. ಕೃಷಿ ಮಹಾವಿದ್ಯಾಲಯದಿಂದ ಉತ್ಪಾದನಾ ತಂತ್ರಜ್ಞಾನ ಮತ್ತು ವಿವಿಧ ತಳಿಗಳಿಗೆ ಮಾಹಿತಿ ಪಡೆಯಬಹುದಾಗಿದೆ ಎಂದು ಹೇಳಿದರು.
ಕೃಷಿ ಮಹಾವಿದ್ಯಾಲಯದ ಡೀನ್ ಕಲಘಟಗಿ ಅವರು ಜೋಳ ಬೆಳೆಯು ಹೆಚ್ಚು ಪೌಷ್ಟಿಕಾಂಶದ ಜೊತೆಗೆ ಜಾನುವಾರುಗಳಿಗೆ ಮೇವು ಕೊಡುವ ಬೆಳೆಯಾಗಿದ್ದು, ಕಡ್ಡಾಯವಾಗಿ ಪಿಡಿಎಸ್ ವ್ಯವಸ್ಥೆಗೆ ತರುವಂತೆ ಸಲಹೆ ನೀಡಿದರು.
ಬಾಗಲಕೋಟೆ ರೈತ ರವಿ ಸಜ್ಜನ, ಮುದ್ದೇಬಿಹಾಳದ ಅರವಿಂದ ಕೊಪ್ಪ ಮಾತನಾಡಿ, ಜೋಳದ ಬೆಳೆಗೆ ಗರಿಷ್ಠ ಬೆಂಬಲ ಬೆಲೆ ಹೆಚ್ಚಿಸಬೇಕು. ಜೋಳದ ರಾಶಿಗೆ ನೂತನ ಯಂತ್ರೋಪಕರಣ ಕಂಡುಕೊಳ್ಳಬೇಕು. ಶಾಶ್ವತ ಖರೀದಿ ಕೇಂದ್ರ ಸ್ಥಾಪಿಸಬೇಕು. ಸಾವಯವ ಜೋಳ ಪದಾರ್ಥಕ್ಕೆ ಮಾರುಕಟ್ಟೆ, ಬೆಲೆ, ಮೂಲಭೂತ ಸೌಕರ್ಯ ಹೆಚ್ಚಿಸುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಂಟಿ ಕೃಷಿ ನಿರ್ದೇಶಕ ಶಿವಕುಮಾರ ಮಾತನಾಡಿದರು. ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಬಿ.ಎಲ್.ಪಾಟೀಲ, ಎಪಿಎಂಪಿ ಸಹಾಯಕ ನಿರ್ದೇಶಕ ಎಂ.ಚಬನೂರ, ಆಹಾರ ಇಲಾಖೆ ಉಪ ನಿರ್ದೇಶಕಿ ಸುರೇಖಾ, ಕೆ.ಆರ್. ಕುಂಬಾರ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.