ಕೋಟಿಕುಳಂ ರೈಲು ನಿಲ್ದಾಣ ಅಭಿವೃದ್ಧಿಯಲ್ಲಿ ಅವಗಣನೆ
ಆದರ್ಶ ರೈಲು ನಿಲ್ದಾಣವಾಗಿದ್ದರೂ ಮೂಲ ಸೌಕರ್ಯಗಳಿಲ್ಲ
Team Udayavani, Jan 1, 2020, 10:01 PM IST
ಕಾಸರಗೋಡು: ಇತಿಹಾಸ ಪ್ರಸಿದ್ಧವಾದ ಪ್ರವಾಸಿಗರ ಸ್ವರ್ಗವೆಂದೇ ಗುರುತಿಸಿಕೊಂಡಿರುವ ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರ ಬೇಕಲ ಕೋಟೆಯ ಹಿನ್ನೆಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾಣಬೇಕಾಗಿದ್ದ ಕೋಟಿಕುಳಂ ರೈಲು ನಿಲ್ದಾಣ ಬಗೆಗಿನ ಅವಗಣನೆಯಿಂದಾಗಿ ನಿರೀಕ್ಷೆಯಂತೆ ಅಭಿವೃದ್ಧಿ ಸಾಧ್ಯವಾಗಲಿಲ್ಲ. ಪ್ರಮುಖ ರೈಲು ಗಾಡಿಗಳ ನಿಲುಗಡೆಗಾಗಿ ಹಲವು ವರ್ಷಗಳಿಂದ ಸ್ಥಳೀಯರು ಬೇಡಿಕೆ ಮುಂದಿರಿಸಿದ್ದರೂ ಬೇಡಿಕೆ ಈಡೇರಿಲ್ಲ.
ಬೇಕಲ ಕೋಟೆಯ ಸೌಂದರ್ಯವನ್ನು ವೀಕ್ಷಿಸಲು ಬರುವ ಪ್ರವಾಸಿಗರಿಗೆ ಕೋಟಿಕುಳಂ ರೈಲು ನಿಲ್ದಾಣ ಪ್ರಮುಖ ರೈಲು ನಿಲ್ದಾಣವಾಗಿದೆ. ಆದರೆ ಈ ದೃಷ್ಟಿಯಿಂದಲಾದರೂ ಅಭಿವೃದ್ಧಿ ಕಾಣಬೇಕಾಗಿದ್ದರೂ ಸಂಬಂಧಪಟ್ಟವರು ಇತ್ತ ಗಮನವನ್ನೇ ಹರಿಸಿಲ್ಲ. ಈ ನಿಲ್ದಾಣ “ಆದರ್ಶ ರೈಲು ನಿಲ್ದಾಣ’ ಗಳ ಸಾಲಿಗೆ ಸೇರಿದ್ದರೂ ಇಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ.
ಮೇಲ್ಸೇತುವೆ ಆಗ್ರಹಕ್ಕೆ ಮನ್ನಣೆಯಿಲ್ಲ
ಪದೇ ಪದೇ ವಾಹನ ದಟ್ಟಣೆ ಅನುಭವಿಸುತ್ತಿರು ವುದರಿಂದ ಈ ರೈಲು ನಿಲ್ದಾಣಕ್ಕೆ ಮೇಲ್ಸೇತುವೆ ನಿರ್ಮಿಸದಿರುವುದರಿಂದ ಪ್ರತಿದಿನ ಸಾರಿಗೆ ತಡೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೋಟಿಕುಳಂ ರೈಲು ನಿಲ್ದಾಣಕ್ಕೆ ಮೇಲ್ಸೇತುವೆ ನಿರ್ಮಿಸಬೇಕೆಂದು ಹಲವು ವರ್ಷಗಳಿಂದ ಆಗ್ರಹಿಸುತ್ತಲೇ ಬಂದಿದ್ದರೂ, ಇನ್ನೂ ಈ ಬೇಡಿಕೆ ಈಡೇರಿಲ್ಲ. ಪರಶುರಾಂ, ಎರನಾಡು ಎಕ್ಸ್‌ಪ್ರೆಸ್ ರೈಲು ಗಾಡಿಗಳಿಗೆ ನಿಲುಗಡೆ ನೀಡಬೇಕೆಂದು ಸ್ಥಳೀಯರು ಆಗ್ರಹಿಸುತ್ತಲೇ ಬಂದಿದ್ದಾರೆ.
ಪ್ರಯಾಣಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂಬ ಬೇಡಿಕೆ ಈಡೇರಿಲ್ಲ. ಕೋಟಿಕುಳಂ ರೈಲು ನಿಲ್ದಾಣವನ್ನು ಟೂರಿಸಂ ರೈಲು ನಿಲ್ದಾಣವನ್ನಾಗಿ ಪರಿವರ್ತಿಸಲು ಶೀಘ್ರವೇ ಕ್ರಮ ತೆಗೆದುಕೊಳ್ಳಬೇಕು ಮೊದಲಾದ ಬೇಡಿಕೆಗಳು ಇನ್ನೂ ಸಾಕಾರಗೊಂಡಿಲ್ಲ.
ವಾಹನ ಸಂಚಾರಕ್ಕೆ ತಡೆ
ರೈಲು ನಿಲ್ದಾಣ ಪ್ಲ್ರಾಟ್‌ಫಾರಂ ಸಮೀಪದಲ್ಲೇ ರೈಲು ಹಳಿಯ ಮಧ್ಯದಲ್ಲಿ ರಸ್ತೆ ಹಾದು ಹೋಗುವುದರಿಂದಾಗಿ ಪದೇ ಪದೇ ರೈಲ್ವೇ ಗೇಟ್ ಹಾಕಬೇಕಾಗಿ ಬರುವುದರಿಂದ ವಾಹನ ಸಂಚಾರಕ್ಕೆ ತಡೆಯಾಗಿ ವಾಹನ ದಟ್ಟಣೆಗೆ ಕಾರಣವಾಗುತ್ತದೆ. ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಈ ರೈಲು ಹಳಿಯಲ್ಲಿ ದಿನಾ ಐವತ್ತಕ್ಕೂ ಹೆಚ್ಚು ರೈಲು ಗಾಡಿಗಳು ಹಾದು ಹೋಗುವುದರಿಂದಾಗಿ ಇಲ್ಲಿ ವಾಹನಗಳು ಉದ್ದನೆಯ ಕ್ಯೂನಲ್ಲಿ ನಿಲ್ಲಬೇಕಾದ ಪರಿಸ್ಥಿತಿಗೆ ಕಾರಣವಾಗಿದೆ. ಈ ಸಮಸ್ಯೆಯನ್ನು ಪರಿಹರಿಸಲು ಮೇಲ್ಸೇತುವೆ ನಿರ್ಮಿಸಬೇಕೆಂಬ ಬೇಡಿಕೆಯನ್ನು ರೈಲು ಇಲಾಖೆ ಅಂಗೀಕರಿಸಿದೆ. ಆದರೆ ಇನ್ನೂ ಮೇಲ್ಸೇತುವೆ ಆರಂಭಿಸಲು ಅಗತ್ಯವಾದ ಪ್ರಾಥಮಿಕ ಪ್ರಕ್ರಿಯೆಯನ್ನೇ ಆರಂಭಿಸಿಲ್ಲ.
ನಿರಾಹಾರ ಸತ್ಯಾಗ್ರಹ
ಕೋಟಿಕುಳಂ ರೈಲು ನಿಲ್ದಾಣಕ್ಕೆ ಮೇಲ್ಸೇತುವೆ ನಿರ್ಮಿಸಬೇಕು, ಪರಶುರಾಂ ಎಕ್ಸ್‌ಪ್ರೆಸ್ ಮತ್ತು ಎರನಾಡು ಎಕ್ಸ್‌ಪ್ರೆಸ್ ರೈಲು ಗಾಡಿಗಳಿಗೆ ನಿಲುಗಡೆ ನೀಡಬೇಕು, ಪ್ರಯಾಣಿಕರಿಗೆ ಮೂಲ ಸೌಕರ್ಯ ಕಲ್ಪಿಸಬೇಕು, ಟೂರಿಸಂ ರೈಲು ನಿಲ್ದಾಣವಾಗಿ ಭಡ್ತಿಗೊಳಿಸಿ ಅಭಿವೃದ್ಧಿಗೊಳಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿರಿಸಿ ಪಾಲಕುನ್ನು ಕಳಗಂ ಭಗವತಿ ಕ್ಷೇತ್ರ ಕರಿಪ್ಪೋಡಿ ಪ್ರಾದೇಶಿಕ ಸಮಿತಿಯ ನೇತೃತ್ವದಲ್ಲಿ ಜ.10 ರಂದು ಪಾಲಕುನ್ನು ಪೇಟೆಯಲ್ಲಿ ಹೋರಾಟದ ಸೂಚನೆಯಾಗಿ ನಿರಾಹಾರ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದೆ.
ಅಂದು ಬೆಳಗ್ಗೆ 9.30ಕ್ಕೆ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ನಿರಾಹಾರ ಸತ್ಯಾಗ್ರಹವನ್ನು ಉದ್ಘಾಟಿಸುವರು. ಶಾಸಕ ಕೆ.ಕುಂಞಿರಾಮನ್ ಅಧ್ಯಕ್ಷತೆ ವಹಿಸುವರು. ಸಂಜೆ 4.30 ಕ್ಕೆ ಪಾಲಕುನ್ನು ಕಳಗಂ ಭಗವತಿ ಕ್ಷೇತ್ರದ ಪೂಜಾರಿಗಳು, ಆಚಾರ ಸ್ಥಾನಿಕರು ಕಿತ್ತಳೆ ಹಣ್ಣಿನ ಪಾನೀಯ ನೀಡಿ ನಿರಾಹಾರ ಸತ್ಯಾಗ್ರಹವನ್ನು ಕೊನೆಗೊಳಿಸಲಾಗುವುದು.
ಅವಗಣನೆ
ಬೇಕಲ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯ ಅಂಗವಾಗಿ ಕೋಟಿಕುಳಂ ರೈಲು ನಿಲ್ದಾಣವನ್ನು ಟೂರಿಸಂ ರೈಲ್ವೇ ಸ್ಟೇಶನ್ ಆಗಿ ಭಡ್ತಿಗೊಳಿಸಿ ಅಭಿವೃದ್ಧಿಗೊಳಿಸಬೇಕೆಂದು ಕೇರಳ ರಾಜ್ಯ ಪ್ರವಾಸೋದ್ಯಮ ಇಲಾಖೆ ಹಲವು ವರ್ಷಗಳಿಂದ ರೈಲ್ವೇ ಇಲಾಖೆಯನ್ನು ಆಗ್ರಹಿಸಿದೆ. ಆದರ್ಶ ರೈಲು ನಿಲ್ದಾಣಗಳ ಯಾದಿಯಲ್ಲಿ ಈ ರೈಲು ನಿಲ್ದಾಣ ಸೇರ್ಪಡೆಗೊಂಡಿದ್ದರೂ ಇಲ್ಲಿ ಮೂಲ ಸೌಕರ್ಯಗಳ ಕೊರತೆ ಇನ್ನೂ ಪರಿಹಾರವಾಗಿಲ್ಲ. ಪರಶುರಾಂ, ಎರನಾಡು ರೈಲು ಗಾಡಿಗಳಿಗೆ ಈ ನಿಲ್ದಾಣದಲ್ಲಿ ನಿಲುಗಡೆ ನೀಡಬೇಕೆಂದು ಪ್ರಯಾಣಿಕರು ಹಲವು ವರ್ಷಗಳಿಂದ ಬೇಡಿಕೆ ಮುಂದಿಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರಕ್ಕೆ ಸಂಬಂಧಿಸಿ ಈ ರೈಲು ನಿಲ್ದಾಣ ಸಾಕಷ್ಟು ಅಭಿವೃದ್ಧಿ ಕಾಣಬೇಕಾಗಿದ್ದರೂ ಸಂಬಂಧಪಟ್ಟವರ ಅವಗಣನೆ ಮತ್ತು ಇಚ್ಛಾಶಕ್ತಿ ಕೊರತೆಯಿಂದ ಇನ್ನೂ ಅಭಿವೃದ್ಧಿ ಸಾಧ್ಯವಾಗಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.