ಸೋಜರ ನಿಷ್ಠೆ-ಉದಯವಾಣಿ ಮತ್ತು ನಮ್ಮ ಮನೆಯ ಅವಿನಾಭಾವ ಸಂಬಂಧ: ಓದುಗ ದೊರೆಯ ಮನದಾಳ
ಗ್ಯಾಸ್ ಲೈಟ್, ಚಿಮಿಣಿ ಬೆಳಕಿನಲ್ಲೂ ಜತೆಯಾಗಿದ್ದ ಉದಯವಾಣಿ ಈಗ ಐವತ್ತರ ಹೊಸ್ತಿಲಲ್ಲಿ
Team Udayavani, Jan 2, 2020, 1:17 PM IST
ಉಡುಪಿ: ನಮ್ಮ ಉದಯವಾಣಿ ಪತ್ರಕರ್ತ ಮಿತ್ರರ ಸ್ಟೇಟಸ್ ಗಳಲ್ಲಿ ಇವತ್ತು..ತಮ್ಮ ಪತ್ರಿಕೆಯ ಐವತ್ತರ ಸಂಭ್ರಮೋತ್ಸವದ ಚಿತ್ರಗಳನ್ನು ನೋಡುತ್ತಿದಂತೆಯೇ ನೆನಪುಗಳ ಸರಮಾಲೆಯೇ ಬಿಚ್ಚಿಕೊಂಡಿತ್ತು. ನಮ್ಮ ಕುಟುಂಬದ ಸದಸ್ಯರಂತೇ ಬೆಳೆದ ಈ ಪತ್ರಿಕೆಯ ಒಡನಾಟ ನಿರಂತರ…ಇದು ಉದಯವಾಣಿ ಪತ್ರಿಕೆಯ ಪ್ರೀತಿಯ ಓದುಗರೊಬ್ಬರ ಪ್ರತಿಕ್ರಿಯೆ.
ಉದಯವಾಣಿ ಪತ್ರಿಕೆ ಜತೆಗಿನ ನಂಟಿನ ಅನುಭವ ಇಲ್ಲಿ ಹಂಚಿಕೊಂಡಿದ್ದಾರೆ:
ಪತ್ರಿಕೆ ಉದಯ ಕಾಲ ದಾಟುವಾಗ ಅರ್ಧ ಗಂಟೆ, ಮಧ್ಯಾಹ್ನವನ್ನೂ ಕ್ರಮಿಸುವಾಗ ಮುಕ್ಕಾಲು ಗಂಟೆ, ಸೂರ್ಯಾಸ್ತವನ್ನು ಕ್ರಮಿಸುವಾಗ ಮತ್ತರ್ಧ ಗಂಟೆ , ರಾತ್ರೆ ಜಾವ ಕಳೆಯುವಾಗ ಮಗದೊಮ್ಮೆ ಅರ್ಧ ಗಂಟೆ ವಾಚಿಸುವಾಗ ಹತ್ತಿರವಾಗುತ್ತಾ,ಆ ದಿವಸಕ್ಕೆ ರಾತ್ರೆ ಹತ್ತುಗಂಟೆಯ ಸಮಯಕ್ಕೆ ಮೌನವಾಗುತಿತ್ತು. ಮರುದಿವಸ ನೆಲ ಗುಡಿಸುವ ಮೊದಲು, ಕೋಣೆಯೊಂದರಲ್ಲಿ ಜತನವಾಗಿ ಪೇರಿಸಿಟ್ಟು, ಆರು ತಿಂಗಳಿಗೊಮ್ಮೆ ಕೊಡುತಿದ್ದೆವು. ನಮ್ಮ ಹಿರಿಯರಿಗೆ ಅದು ಅಕ್ಷರ ಸರಸ್ವತಿಯ ಪ್ರತಿರೂಪದಂತೆ ಕೆಲವೊಮ್ಮೆ ಭಾಸವಾಗುತಿತ್ತು. ಹಾಗಾಗಿ ಹಿರಿಯರು ಒಂದಿನಿತೂ ಸುಕ್ಕು ಬೀಳದಂತೆ ಕಾಪಾಡುವ ಶಿಸ್ತನ್ನು ನಿರಂತರವಾಗಿ ಜ್ಞಾಪಿಸುತಿದ್ದರು.
ಈಗ ಮನೆಯ ಹಿರಿಸದಸ್ಯರೆಲ್ಲ ಗತಿಸಿ, ಉದಯವಾಣಿಯ ಸಂಬಂಧದ ಮಾಹಿತಿ ಕೊಡಲು ಉಳಿದವರು ನನ್ನ ಅಮ್ಮ ಮಾತ್ರ. ಬಾಲ್ಯಕಾಲದ ನೆನಪುಗಳು ಅಸ್ಪಷ್ಟವಾಗಿ ನೆನಪಿನ ಶಕ್ತಿಯ ಕೊರತೆಯೂ ಬಾಧಿಸಿ ಮರೆಯಾದರೂ, ಕೆಲವೊಂದು ಘಟನೆಗಳನ್ನು ಹಚ್ಚ ಹಸುರಾಗಿ ನೆನಪಿನಂಗಳದಲ್ಲಿರುವ ಅಂಕಣಗಳ ಸುಂದರ ಭಾವಗಳನ್ನು ಒತ್ತರಿಸಿ ತರುತ್ತದೆ.
1969-70ರಲ್ಲಿ ನವಭಾರತ ಪತ್ರಿಕೆ ಬರುತಿದ್ದ ಕಾಲ. ಈಗೊಮ್ಮೆ ಆಗೊಮ್ಮೆ ದಕ್ಕುತಿದ್ದ ಮಂಗಳೂರು ಸಮಾಚಾರ ಪತ್ರಿಕೆ. ಮಂಗಳೂರಿಗೆ ಯಾರಾದರೂ ಹೋಗಿದ್ದರೆ ತರುತ್ತಿದ್ದ, ಅಜ್ಜ ,ಅಪ್ಪನಿಗೆ ಸೀಮಿತವಾಗುತಿದ್ದ “ದ ಹಿಂದೂ” ಪತ್ರಿಕೆಯನ್ನು ಮನೆ ಇತಿಹಾಸದ ಕಾಲಗರ್ಭದಲ್ಲಿ ಹುದುಗಿಸಿ, ಉದಯವಾಣಿ ಮನೆಗೆ ಹೊಕ್ಕಿತು. ಸುಂದರ ಸ್ಪುಟ ಅಕ್ಷರಗಳು, ಒಂದಿನಿತೂ ತಪ್ಪು ಕಾಣದ ಅಕ್ಷರಗಳು, ಉನ್ನತ ಮಟ್ಟದ ವಾಕ್ಯಗಳ ಜೋಡಣೆ, ಧರ್ಮ, ರಾಜಕೀಯ ಇನ್ನಿತರ ಮೇಲಾಟಗಳಲ್ಲೂ ಈವರೆಗೆ ಯಾರ ಮನಸನ್ನೂ ನೋಯಿಸದೆ ಅವಶ್ಯ ಇರುವಷ್ಟು ಮಾತ್ರ ತನ್ನ ಇರವನ್ನು ತೋರಿಸುವ ಮಾಹಿತಿಯ ಅಕ್ಷರಂಗಳವಾಗಿ ಮನಸಿಗೆ ಹತ್ತಿರವಾದುದು ಮಾತ್ರ ಅಕ್ಷರಶಃ ಸತ್ಯ.
ಲಾದೀನ ಸೋಜರು ಯಾನೇ ಪೇಪರ್ ಸೋಜರು ನಮ್ಮ ಪತ್ರಿಕಾ ಏಜೆಂಟರು. ಈಗ ಅನಾರೋಗ್ಯ ನಿಮಿತ್ತ ಹಾಸಿಗೆ ಹಿಡಿದಿದ್ದರೂ, ಹಲವು ದಶಕಗಳ ಕಾಲ ನಮಗೆ ಪತ್ರಿಕೆಯನ್ನು ಎಂತಹ ಮಳೆ ,ಚಳಿ, ಬಿಸಿಲು, ಹರತಾಳ ಯಾವ ತಡೆಯಿದ್ದರೂ ಜತನವಾಗಿ ತಲುಪಿಸುತಿದ್ದರು. ಸದ್ಯ ಒಂದು ತಿಂಗಳ ಹಿಂದೆ ಅವರ ಮನೆಗೆ ಹೋಗಿ ಪ್ರೀತಿಯಿಂದ ಮಾತನಾಡಿಸಿದಾಗ ಅವರ ಕಣ್ಣೀರಿನ ಹರಿವು, ಆಗಿನ ಅಮರ ಸದ್ಭಾವಗಳ ಸಂಬಂಧದ ದ್ಯೋತಕ. ಬದುಕಲ್ಲಿ ಎಷ್ಟು ಕಷ್ಟ ಬಂದರೂ ಅದಕ್ಕೆಲ್ಲ ಮೈಯೊಡ್ಡಿ ಬೆಳಗೆ ಪತ್ರಿಕೆ ಹಂಚಿ, ನಂತರ ಟೈಲರ್ ವೃತ್ತಿ ನಡೆಸಿ ಬದುಕು ಕಳೆದಿದ್ದ ಸೋಜರು ಈಗ ಹಾಸಿಗೆವಾಸಿ.
“ಹೆಡ್ ಮಾಟರು” ನಮ್ಮ ಮನೆಯ ಪೇಪರಿನಲ್ಲಿರುವ ಸೋಜರ ಅಕ್ಷರ ಮಾಲೆ, ಮೂವತ್ತು ವರ್ಷ ತಪ್ಪು ಬರೆದಿದ್ದರೂ ಸರಿ ಪಡಿಸುವ ಗೋಜಿಗೆ ನಾವು ಹೋಗಲಿಲ್ಲ. ಅಂತಹ ಮುಗ್ದ ಸೋಜರ ಅಕ್ಷರ ಅವರನ್ನು ಬೇಸರ ಪಡಿಸಲು ಮನಮಾಡಲಿಲ್ಲ. ಅಜ್ಜ ತೀರಿ ಹೋದ ನಂತರ ,ಸೋಜರ ಅಕ್ಷರ ಬದಲಾಯಿತು. ತಂದೆಯ ರಾಘವೇಂದ್ರ ರಾವ್ ಹೆಸರನ್ನು..” ರಾಗವರು” ಎಂದು ಬರೆಯುತಿದ್ದರು ..ಅದನ್ನೆಲ್ಲ ಓದುವಾಗ ನಮಗೂ ಅವರ ಮುಗ್ದತೆ ಅರಿವು. ಉಡುಪರು “ಓಡಿಪಾರು”,ಕೇಶವ ಭಟ್ ” ಕೇಸವ ಭಟರು”, ಪೂಂಜರು “ಪುಂಜ” ರು ಆಗಲ್ಪಟ್ಟು ಹೊಸ ವ್ಯಾಖ್ಯಾನ ಗಳಿಗೆ ದಾರಿಯಾದರೂ ಯಾರೂ ಬೇಸರ ಪಡುತ್ತಿರಲಿಲ್ಲ.
ನಮಗೆ ಸಾಧಾರಣ ಐದು ವರ್ಷ ಆಗುವಾಗ ಪೇಪರ್ ಓದುವ ಕಂಡೀಶನ್ ಶುರುವಾಯಿತು. ಓದುತ್ತಾ ಓದುತ್ತಾ ಬೆಳೆದವರಿಗೆ ಹತ್ತಿರವಾಗುತಿದ್ದದು ಸಿನಿಮಾ ಚಿತ್ರಗಳು ಅದರ ಬರಹಗಳು. ಆದರೆ ಅಪ್ರತಿಮ ವಿರೋಧದ ನಡುವೆ ರಾತ್ರೆ ಅರ್ಧ ಗಂಟೆ ಕಾಲ, ಪೇಪರ್ ಓದಿದ ಮಾಹಿತಿಯನ್ನು ಪ್ರಪಂಚದ ಆಗುಹೋಗುಗಳ ಬಗ್ಗೆ ಪ್ರಶ್ನೆಯನ್ನೂ ಅಜ್ಜನಿಂದ ಓದುವ ಪ್ರಮೇಯವೂ ಇತ್ತು.
ಗ್ಯಾಸ್ ಲೈಟ್, ಚಿಮಿಣಿ ಬೆಳಕಿನಲ್ಲೂ ಜತೆಯಾಗಿದ್ದ ಉದಯವಾಣಿ ಈಗ ಐವತ್ತರ ಹೊಸ್ತಿಲಲ್ಲಿ ವರ್ಣಮಯವಾಗಿ ಹೊಸ ರೀತಿಯ ಜಾಜ್ವಲ್ಯಮಾನವಾದ ಬೆಳಕಲ್ಲಿ ಅಷ್ಟೇ ಸುಂದರವಾಗಿ ಈಗಲೂ ಕಂಗೊಳಿಸುತ್ತಾ ಇದೆ. ಇನ್ನಷ್ಟು ಕಾಲ ಬೆಳಗಲಿ. ಅಕ್ಷರ ಪ್ರೇಮ, ಪತ್ರಿಕಾ ವಾಚನ ಆಸ್ಥೆಯನ್ನು ಬೆಳೆಸಲು ಮುನ್ನುಡಿ ಹಾಡಿದ ಉದಯವಾಣಿಗೆ ನಾನಂತೂ ಜೀವನ ಪರ್ಯಂತ ಚಿರ ಋಣಿ. ವೃತ್ತಿಗೋಸ್ಕರ ಬೆಂಗಳೂರಿಗೆ ಹೋದಾಗ, ಬಲುವಾಗಿ ಕಾಡಿದ್ದು ಉದಯವಾಣಿಯೇ ಅಲ್ಲಿ ಬೆಳಗೆ ದೊರಕದ ಊರಿನ ಉದಯವಾಣಿ..ಒಂದು ರೀತಿಯ ಮ್ಲಾನವತೆ ಬೆಳಗೇ ಆವರಿಸಿ ಮಾನಸಿಕ ಖಿನ್ನತೆ ಆವರಿಸುವಷ್ಡು ಕಾಡಿತೆಂದರೆ! ಅಕ್ಷರ ಶಕ್ತಿ ಮತ್ತು ಬಾಲ್ಯದಿಂದಲೂ ಜೊತೆಯಾಗಿ ಮರೆಯಾದ ಶೂನ್ಯಭಾವದ ಮನವರಿಕೆಯಾಯಿತು.
ಬೆಳಗೆ ಮೀನು ತರುವ ಅಂಬಾಸಿಡರ್ ಕಾರಲ್ಲಿ ಐದೂ ಗಂಟೆಗೆ ಊರಿಂದ ಹೊರಡುತಿದ್ದ ಸೋಜರು, ತಲಪಾಡಿಯಿಂದ ಬಸ್ಸಲ್ಲಿ ಪೇಪರನ್ನು ತಂದು ,ನಂತರ ನಮ್ಮೂರಿನ ಏರುತಗ್ಗಿನ , ಮಣ್ಣಿನ ದಾರಿಯೆಲ್ಲೆಲ್ಲ ಕ್ರಮಿಸಿ, ಬೆವರು ಸುರಿಸುತ್ತ ಹಂಚುವ ಚಿತ್ರಣ ಮಸ್ತಕದಲ್ಲಿ ಸುಸ್ಪಷ್ಟ. ಮನೆಯಲ್ಲಿ ಮಜ್ಜಿಗೆ ಹೆಚ್ಚುವರಿ ಉಳಿದಿದ್ದರೆ ದೊಡ್ಡ ಪಾತ್ರೆಯಲ್ಲಿ ಕೊಡುತಿದ್ದೆವು. ಕೆಲವೊಮ್ಮೆ ಅತೀ ಕಷ್ಟ ಬಂದರೆ ಮಾತ್ರ ಸಣ್ಣ ಮಟ್ಟಿನ ಸಾಲ ಪಡೆದು ಮತ್ತೆ ಪತ್ರಿಕೆಯ ದುಡ್ಡೇ ಕೇಳದೆ ನಮಗೂ ಉಚಿತವಾಗಿ ದಕ್ಕುವಂತಾಗುತಿತ್ತು. ಕೊನೆಗೆ ಪ್ರೀತಿಯಲ್ಲಿ ಹೆಚ್ಚುವರಿ ಸಂದಾಯ ಮಾಡಿ ಋಣಭಾರ ತಗ್ಗಿಸುತಿದ್ದೆವು.
ಆದರೆ ಅದೊಂದು ದಿವಸ, ಪೇಪರ್ ಒಂದು ತಪ್ಪಿಹೋಗಿ ಮನೆಯಲ್ಲಿ ಅಲ್ಲೋಲ ಕಲ್ಲೋಲ ಆಗಿತ್ತು. ಆ ದಿವಸವೇ ಪ್ರಧಾನಿ ಇಂದಿರಾಗಾಂಧಿ ಹತ್ಯೆಯಾದ ಸಮಯ. ಬೆಳಗಿನ ಪತ್ರಿಕೆ ಬರುವ ಸಮಯ ದಾಟಿ, ಅರ್ಧ ಗಂಟೆ ಕಳೆಯುವಾಗ ಅಜ್ಜನ ಕೋಪ ನೆತ್ತಿಗೇರಿದೆ. ಏನು ತಾಪತ್ರಯವೋ ಏನೋ ಗಡಿಬಿಡಿ ಪೇಪರ್ ಸೋಜರಿಗೆ ಗ್ರಹಚಾರಕ್ಕೆ ಸರಿಯಾಗಿ ಅಸಹನೆ ತಾಳಿದ ಅಜ್ಜ. ಪೇಟೆಗೆ ಹೊರಟ ಅಜ್ಜನಿಗೆ ದಾರಿಯಲ್ಲೇ ಸೋಜರು ಸಿಕ್ಕಿದಾಗ ಹೆದರಿ ..ನೀವು ಮನೆಗೆ ಹೋಗಿ ಸಾರ್ ಅರ್ಧ ಗಂಟೆಯೊಳಗೆ ತಲುಪಿಸುತ್ತೇನೆ ಎಂದ ಸೋಜರು , ತಲುಪಿಸಿದರು ಸಹಾ. ಮತ್ತೆ ಗೊತ್ತಾದುದೇನೆಂದರೆ.. ಇನ್ನೊಬ್ಬರ ಮನೆಯಿಂದ ತಂದ ಅವರ ಪೇಪರಿಗೆ ಇಸ್ತ್ರಿ ಹಾಕಿ ನಮ್ಮ ಮನೆಗೆ ತಲುಪಿಸಿ…ಕೊಟ್ಟವರಿಗೆ ಮರಳಿ ಕೊಡಲು ಪುನಃ ಹದಿನೈದು ಕಿ.ಮೀ ಹೋಗಿದ್ದರೆಂದು. ಎಂತಹಾ ಕಾರ್ಯಕ್ಷಮತೆ! ನೆನಪಿಂದ ಮರೆಯಾಗದ ಈ ಘಟನೆ ನಮಗೆ ಮತ್ತಷ್ಟು ಸೋಜರ ಮೇಲೆ ದಯ ಕರುಣಿಸಿದ್ದು ಮಾತ್ರವಲ್ಲದೆ ಉದಯವಾಣಿ ಇಲ್ಲದ ಬದುಕಿನ ಅಸಹನೆ, ಚಡಪಡಿಕೆಯ ದರ್ಶನವೂ ಮಾಡಿಸಿತು.
ಮುಗಿಯದ ಕತೆಗಳನ್ನು ಹೊಂದಿರುವ ಉದಯವಾಣಿ ಮತ್ತೆ ಮನೆಯ ಅನ್ಯೋನ್ಯ ಭಾಂಧವ್ಯ ಚಿರನೂತನ. ಎಷ್ಟೆಷ್ಟು ಹೊಸ ಹೊಸ ಪತ್ರಿಕೆಗಳು ಮನೆಹೊಕ್ಕಿದರೂ ಉದಯವಾಣಿ ಯ ಸ್ಥಾನ, ಆದ್ಯತೆ ತಪ್ಪಲೇ ಇಲ್ಲ, ಉದಯವಾಣಿ ಯ ಸಹವರ್ತಿಗಳಾಗಿ ಮತ್ತೊಂದು ಜತೆಯಾಯಿತೇ ವಿನಹ ಪ್ರಥಮ ಅಕ್ಷರ ಪೂಜೆ ವಿನಾಯಕನಂತೇ ಉದಯವಾಣಿಗೆ ಅಂದೂ. ನೂರ್ಕಾಲ ಬದುಕಲಿ ಈ ಪತ್ರಿಕೆ, ಹಳೆ ಓದುಗರ ಹೊಸ ಪೀಳಿಗೆಗೂ ಹತ್ತಿರವಾಗಲೆಂದು ಹಾರೈಸುತ್ತೇನೆ.
*ದೇವರಾಜ್ ರಾವ್ ಕೊಡ್ಲಮೊಗರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
Zakir Hussain; ನಾದಯೋಗಿಯ ನಿನಾದ ಸ್ತಬ್ಧ
MUST WATCH
ಹೊಸ ಸೇರ್ಪಡೆ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.