ಸರಕಾರದಿಂದ ವಿವರಣೆ ಕೇಳಿದ ಹೈಕೋರ್ಟ್
ಶಿಬಾಜೆ: ರಸ್ತೆ ಒತ್ತುವರಿ ವಿವಾದ
Team Udayavani, Jan 3, 2020, 12:43 AM IST
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಶಿಬಾಜೆ ಗ್ರಾಮದಲ್ಲಿ ರಾಜೀವ್ ಗಾಂಧಿ ಸೇವಾ ಕೇಂದ್ರ ನಿರ್ಮಾಣಕ್ಕೆ ರಸ್ತೆ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಸಮಗ್ರ ವಿವರಣೆ ನೀಡುವಂತೆ ಹೈಕೋರ್ಟ್ ಗುರುವಾರ ರಾಜ್ಯ ಸರಕಾರಕ್ಕೆ ಸೂಚಿಸಿದೆ.
ಬೆಳ್ತಂಗಡಿಯ ಅಶೋಕ್ ಆಚಾರ್ಯ ಮತ್ತು ಇತರರು ಸಲ್ಲಿಸಿರುವ ಪಿಐಎಲ್‌ನ ವಿಚಾರಣೆ ನಡೆಸಿದ ವಿಭಾಗೀಯ ನ್ಯಾಯಪೀಠ ರಾಜ್ಯ ಸರಕಾರ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಬೆಳ್ತಂಗಡಿ ತಾ.ಪಂ. ಸಿಇಒ ಮತ್ತು ತಹಶೀಲ್ದಾರ್ ಸಹಿತ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸಲು ನಿರ್ದೇಶ ನೀಡಿತು. ಅಲ್ಲದೇ ಈ ಕುರಿತು ತಹಶೀಲ್ದಾರ್‌ಗೆ ನೀಡಿರುವ ಮನವಿ ಪತ್ರ ಕೈಗೊಂಡಿರುವ ಕ್ರಮ ಸಹಿತ ರಸ್ತೆ ಒತ್ತುವರಿ ವಿಚಾರದ ಬಗ್ಗೆ ಸಮಗ್ರ ವಿವರಣೆ ನೀಡುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.
ರಸ್ತೆ ಒತ್ತುವರಿ ಆರೋಪ
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ ಶಿಬಾಜೆ ಗ್ರಾಮದಲ್ಲಿ ರಾಜೀವ್ ಗಾಂಧಿ ಸೇವಾ ಕೇಂದ್ರ ಸ್ಥಾಪನೆಗೆ ಸರ್ವೇ ನಂಬರ್ 67/1ರಲ್ಲಿ 5 ಗುಂಟೆ ಜಾಗ ನೀಡಲಾಗಿತ್ತು. ಆ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಪಡೆಯಲಾಗಿದೆ. ಆದರೆ ಅನಂತರ ನಿರ್ಮಾಣ ಕಾರ್ಯ ಆರಂಭಿಸಿದಾಗ ಸಾರ್ವಜನಿಕ ಸಂಚಾರಕ್ಕೆ ಮೀಸಲಾದ ರಸ್ತೆಯನ್ನೂ ಸೇರಿಸಿ ಒತ್ತುವರಿ ಮಾಡಿಕೊಂಡು ನಿರ್ಮಾಣ ಕಾಮಗಾರಿ ನಡೆಸಲಾಗುತ್ತಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಪಂಚಾಯತ್‌ನಿಂದ ಅಕ್ರಮ ಕಾಮಗಾರಿ
ಗ್ರಾ. ಪಂ.ಗೆ ಸೇರಿದ ಆ ರಸ್ತೆ ಶಿಶಿಲೇಶ್ವರದಲ್ಲಿರುವ ಪುರಾತನ ಶಿವ ದೇವಾಲಯಕ್ಕೆ ಹೋಗಲು ಇರುವ ಪ್ರಧಾನ ಮಾರ್ಗವಾಗಿದೆ. ಕಟ್ಟಡ ನಿರ್ಮಾಣದಿಂದ ಸುತ್ತ ಮುತ್ತಲ ಗ್ರಾಮಗಳ ಜನರಿಗೂ ತೊಂದರೆಯಾಗಿದೆ. ಗ್ರಾಮಗಳ ರಸ್ತೆಯನ್ನು ನಿರ್ವಹಣೆ ಮಾಡುವುದು ಪಂಚಾಯತ್‌ನ ಕೆಲಸ, ಆದರೆ ಪಂಚಾಯತ್ ನಿಯಮಬಾಹಿರವಾಗಿ ನಡೆದುಕೊಂಡಿದೆ. ಈ ಬಗ್ಗೆ ತಹ ಶೀಲ್ದಾರ್ 2019ರ ಅ.11ರಂದು ಮನವಿ ನೀಡಿದ್ದರೂ ಪ್ರಯೋಜನವಾ ಗಿಲ್ಲ ಎಂದವರು ದೂರಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.