ಗೇರು ಪೋಷಕಾಂಶ ನೀಡುವುದರಿಂದ ಉತ್ತಮ ಇಳುವರಿ
Team Udayavani, Jan 5, 2020, 5:09 AM IST
ಕೃಷಿ ಲಾಭದಾಯಕವಾಗುವುದು ಯೋಜನಾಬದ್ಧವಾಗಿ, ಜತನದಿಂದ ಬೆಳೆ ಬೆಳೆದಾಗ. ವಾಣಿಜ್ಯ ಬೆಳೆ ಗೇರನ್ನು ಬೆಳೆಯುವುದು ಮತ್ತು ಗರಿಷ್ಠ ಲಾಭವನ್ನು ಪಡೆಯುವುದು ಹೇಗೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ಗೇರು ಕೃಷಿ ಕರಾವಳಿಯ ವಾಣಿಜ್ಯ ಬೆಳೆಗಳಲ್ಲಿ ಒಂದು. ಗೇರು ಮರಕ್ಕೂ ಕಾಲ – ಕಾಲಕ್ಕೆ ನೀರು, ಕೋಳಿ ಗೊಬ್ಬರ, ರಸಗೊಬ್ಬರಗಳನ್ನು ನೀಡಿದಲ್ಲಿ, ಉತ್ತಮ ಇಳುವರಿಯನ್ನು ಪಡೆಯಬಹುದು. ಸರಿಯಾದ ರೀತಿಯಲ್ಲಿ ಪೋಷಕಾಂಶಗಳನ್ನು ನೀಡಿದಲ್ಲಿ 1 ಎಕರೆಗೆ 8 ಕ್ವಿಂಟಾಲ್ ಬರುತ್ತಿದ್ದ ಫಸಲು, ದುಪ್ಪಟ್ಟು ಅಂದರೆ 15 ರಿಂದ 16 ಕ್ವಿಂಟಾಲ್‌ವರೆಗೂ ಗಳಿಸಬಹುದು.
ಗೇರು ಕೃಷಿಯನ್ನು ಕೂಡ ಹೇಗೆ ಆದಾಯದ ಮೂಲವಾಗಿ ಪರಿವರ್ತಿಸಬಹುದು, ಆದರ ಪಾಲನೆ, ಪೋಷಣೆ ಹೇಗೆ ಎನ್ನುವುದರ ಕುರಿತು ಕುಂದಾಪುರ ತಾಲೂಕಿನ ಕೆಂಚನೂರಿನ ಚಂದ್ರಶೇಖರ ಉಡುಪ ವಿವರಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಭೂಮಿಯ ಅಂತರ್ಜಲ ಮಟ್ಟದ ಇಳಿಕೆಯ ಜತೆಗೆ ಮಣ್ಣಿನ ಫಲವತ್ತತೆಯೂ ಕಡಿಮೆಯಾಗುತ್ತಿದೆ. ಇದರಿಂದ ಗೇರು ಮರಕ್ಕೆ ಅಗತ್ಯವಿರುವಷ್ಟು ಪೋಷಕಾಂಶಗಳು ಭೂಮಿಯಿಂದ ಸಿಗುತ್ತಿಲ್ಲ. ಈ ಕಾರಣಕ್ಕೆ ಗೇರು ಮರವನ್ನು ನೆಟ್ಟು, ಅದಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ನೀಡಿದಲ್ಲಿ ಇದರಿಂದಲೂ ಲಾಭ ಗಳಿಸಬಹುದು ಎನ್ನುತ್ತಾರೆ ಉಡುಪರು.
ಗಿಡ ಕಸಿ ಕಟ್ಟುವಿಕೆ
ಗೇರು ಗಿಡಗಳನ್ನು ಕಸಿ ಮಾಡಿ, ನೆಟ್ಟರೆ ಅನೇಕ ಪ್ರಯೋಜನಗಳಿವೆ. ಕಸಿ ಕಟ್ಟುವುದರಿಂದ ಉತ್ತಮವಾಗಿ ಬೆಳೆಯುವುದರ ಜತೆಗೆ ಒಳ್ಳೆಯ ಫಸಲನ್ನು ತಂದುಕೊಡುತ್ತದೆ. ಇದರಿಂದ ಎಲ್ಲ ಮರಗಳಿಂದಲೂ ಒಂದೇ ರೀತಿಯ ಇಳುವರಿಯನ್ನು ಪಡೆಯಬಹುದು. ಗಿಡಗಳ ಕಳೆಯನ್ನು ಕೂಡ ಏಕಕಾಲದಲ್ಲಿ ತೆಗೆಯಬಹುದು. ಆಗಾಗ ಬೀಜ ಕೊಯ್ಯುವ ಬದಲು ಒಟ್ಟಿಗೆ ಕೊಯ್ಲು ಆಗುವುದರಿಂದ ಕೆಲಸಗಾರರನ್ನು ಒಮ್ಮೆಯೇ ಕರೆಯಬಹುದು. ಕೀಟ, ರೋಗಕ್ಕೆ ರಾಸಯನಿಕ ದ್ರವಣವನ್ನು ಕೂಡ ಒಮ್ಮೆಲೇ ಸಿಂಪಡಣೆ ಮಾಡಬಹುದು.
ಗೇರು ತೋಟದಲ್ಲಿರುವ ಕಳೆಯನ್ನು ಆಗಾಗ ತೆಗೆಯುತ್ತಿರಬೇಕು. ಇದರಿಂದ ಮುಖ್ಯವಾಗಿ ಕೀಟ ಹಾಗೂ ಹಲವಾರು ರೋಗಗಳು ಕಾಣಿಸಿಕೊಳ್ಳುವುದು ತಪ್ಪುತ್ತದೆ. ಮಾತ್ರವಲ್ಲದೆ ಬೀಜ ಕೊಯ್ಯಲು ಕೂಡ ಇದರಿಂದ ಅನುಕೂಲವಾಗುತ್ತದೆ. ಇನ್ನು ಹೊಸ ಫಸಲು ಕೊಡುವ ಮರಗಳಿಂದ ಸೆಪ್ಟೆಂಬರ್ – ಅಕ್ಟೋಬರ್‌ನಲ್ಲಿ ಅಂದರೆ ಹೂವು ಬಿಡುವ ಮುನ್ನ ಕಳೆ ತೆಗೆಯಬೇಕು. ಕೀಟನಾಶಕಗಳನ್ನು ಸಿಂಪಡಣೆ ಮಾಡಿದರೆ ಉತ್ತಮ.
ಎಕರೆಗೆ ಎಷ್ಟು ಗಿಡ?
ಒಂದು ಎಕರೆ ಪ್ರದೇಶದಲ್ಲಿ 100 ರಿಂದ 106 ಗೇರು ಗಿಡಗಳನ್ನು ನೆಡಬಹುದು. ಆದರೆ 1 ಮರದಿಂದ ಮತ್ತೂಂದು ಮರಕ್ಕೆ 16 ಅಡಿ ಅಂತರವಿಟ್ಟರೆ ಎಕರೆಗೆ 160 ರ ವರೆಗೆ ಗಿಡಗಳನ್ನು ನೆಡಬಹುದು. ಒಂದು ಎಕರೆಗೆ ಕ್ರಮಬದ್ಧವಾಗಿ ಬೆಳೆಸಿದರೆ 15 ರಿಂದ 16 ಕ್ವಿಂಟಾಲ್‌ವರೆಗೂ ಇಳುವರಿ ಗಳಿಸಬಹುದು.
ಗೊಬ್ಬರ ಹೇಗೆ? ಎಷ್ಟು?
ಒಂದು ಗೇರು ಮರಕ್ಕೆ ಕನಿಷ್ಠ ವರ್ಷಕ್ಕೆ 10 ರಿಂದ 15 ಕೆ.ಜಿ. ಹಟ್ಟಿ ಗೊಬ್ಬರ ಅಥವಾ 5 ರಿಂದ 10 ಕೆ.ಜಿ.ವರೆಗೆ ಕೋಳಿ ಗೊಬ್ಬರ ಹಾಕಬೇಕು. ಇದರ ಜತೆಗೆ ಎನ್‌ಪಿಕೆ ರಸಗೊಬ್ಬರವನ್ನು ಕೂಡ ಹಾಕಬೇಕು. ಇದರ ಜತೆಗೆ ವರ್ಷದಲ್ಲಿ 1 ಸಲ ಅಥವಾ ಕನಿಷ್ಠ 2 ವರ್ಷಕ್ಕೆ ಒಮ್ಮೆಯಾದರೂ ಮರಗಳಿಗೆ ಸುಣ್ಣ ಹಾಕಬೇಕು. ಇದರಿಂದ ಮಣ್ಣಿನಲ್ಲಿರುವ ಹುಳಿಯ ಅಂಶವನ್ನು ಕಡಿಮೆ ಮಾಡಿ, ಗೊಬ್ಬರವನ್ನು ಸುಲಭವಾಗಿ ಹೀರಿಕೊಳ್ಳಲು ಅನುಕೂಲವಾಗುತ್ತದೆ. ಸುಣ್ಣ ಅಡಿಕೆ, ತೆಂಗು ಮರಗಳಿಗೂ ಹಾಕಿದರೆ ಉತ್ತಮ.
ಯಾವ ತಳಿ ಸೂಕ್ತ?
ಕರಾವಳಿಯ ಭಾಗದ ಕುಂದಾಪುರ, ಉಡುಪಿ, ಕಾರ್ಕಳ, ಪುತ್ತೂರು, ಬೆಳ್ತಂಗಡಿಯಂತಹ ಪ್ರದೇಶಗಳಲ್ಲಿ ಈಗ ಉಳ್ಳಾಲ -1 ತಳಿಯ ಗೇರು ಗಿಡಗಳನ್ನು ಬೆಳೆಯಲಾಗುತ್ತಿದೆ. ಇದರ ಜತೆಗೆ ಉತ್ತಮ ಇಳುವರಿ ಬರುವ ತಳಿಗಳಾದ ಉಳ್ಳಾಲ-2, ಉಳ್ಳಾಲ -3, ಭಾಸ್ಕರ, ವೆಂಗೂರ್ಲಾ 7, ವೆಂಗೂರ್ಲಾ -8, ವಿಆರ್‌ಐ-1, ವಿಆರ್‌ಐ-2, ವಿಆರ್‌ಐ-3, ಹೈಬ್ರಿಡ್ ತಳಿಗಳಾದ ಕೇರಳದ ಧನ, ಕನಕ, ಪ್ರಿಯಾಂಕ, ಅಮೃತ್, ಸುಲಭ ಉತ್ತಮ ಫಸಲನ್ನು ತಂದು ಕೊಡುತ್ತದೆ. ಇದಲ್ಲದೆ ಆಂಧ್ರ ಪ್ರದೇಶದ ಬಿಪಿಸಿ-8, ಭುವನೇಶ್ವರ್-1 ತಳಿಯೂ ಕೂಡ ಇಲ್ಲಿನ ಹವಾಗುಣ ಹಾಗೂ ಮಣ್ಣಿನ ತೇವಾಂಶದಲ್ಲಿ ಉತ್ತಮ ಇಳುವರಿಯನ್ನು ಕೊಡುತ್ತದೆ.
ಗೇರು ಕೃಷಿಯಿಂದಲೂ ಆದಾಯ ಗಳಿಸಬಹುದು. ನಾನು ವಾರ್ಷಿಕ 1 ಎಕರೆಗೆ 15 ರಿಂದ 16 ಕ್ವಿಂಟಾಲ್ ಇಳುವರಿಯನ್ನು ಪಡೆಯುತ್ತಿದ್ದೇನೆ. ಆದರೆ ಮುಖ್ಯವಾಗಿ ಗೇರು ತೋಟದಲ್ಲಿ ಉತ್ತಮ ತೇವಾಂಶ, ಉತ್ತಮ ಪೋಷಕಾಂಶ ಸಿಗುವಂತೆ ನೋಡಿ ಕೊಳ್ಳಬೇಕು. ಅಡಿಕೆ ಅಥವಾ ತೆಂಗಿನ ಮರಕ್ಕೆ ನೀಡುವ ಕನಿಷ್ಠ ಶೇ.10 ರಷ್ಟು ಪೋಷಣೆ ಗೇರು ಮರಕ್ಕೆ ಮಾಡಿದರೆ ಒಳ್ಳೆಯ ಆದಾಯ ಗಳಿಸಬಹುದು.
-ಚಂದ್ರಶೇಖರ ಉಡುಪ ಕೆಂಚನೂರು,ಗೇರು ಕೃಷಿಕರು
ಉಪ ಬೆಳೆ ಬೆಳೆಸಬಹುದು
ಗಿಡಗಳ ಮಧ್ಯೆ ಆರಂಭದ 2 ರಿಂದ 3 ವರ್ಷದವರೆಗೆ ಅಂದರೆ ಫಸಲು ಬರುವವರೆಗೆ ಕುಂಬಳ, ಸೌತೆ, ಹೀರೆಕಾಯಿ, ಹಾಗಲಕಾಯಿ, ಸುವರ್ಣಗೆಡ್ಡೆ, ಮತ್ತಿತರ ತರಕಾರಿ ಬೆಳೆ, ಶುಂಠಿ, ಅರಿಶಿನವನ್ನು ಬೆಳೆಸಬಹುದು. ಇದಕ್ಕೆ ಹಾಕುವ ಗೊಬ್ಬರದಿಂದ ಗೇರು ಮರಗಳಿಗೂ ಲಾಭವಿದೆ. ನೀರಿನ ಸೌಕರ್ಯವಿದ್ದರೆ ಮರಗಳು ದೊಡ್ಡದಾದ ಅನಂತರ ಕಾಳು ಮೆಣಸನ್ನು ಕೂಡ ಮಾಡಬಹುದು. ಔಷಧೀಯ ಸಸ್ಯಗಳನ್ನು ಕೂಡ ಬೆಳೆಸಲು ಅವಕಾಶವಿದೆ.
-ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.