ಕಸುವು ತುಂಬಿದ ಕೆಸುವು
Team Udayavani, Jan 6, 2020, 5:17 AM IST
ಕಳೆದ 18- 20 ವರ್ಷಗಳಿಂದ ಕೆಸುವಿನ ಕೃಷಿಯಲ್ಲಿ ಆದಾಯದ ಮೂಲವನ್ನು ಕಂಡುಕೊಂಡಿರುವ ಈ ದಂಪತಿಗೆ ಸ್ವಂತ ಜಮೀನಿಲ್ಲ. ಇತರ ರೈತರ ಜಮೀನನ್ನೇ ಬಾಡಿಗೆಗೆ ಪಡೆದು ಯಶಸ್ವಿ ಕೆಸುವು ಬೆಳೆಗಾರರೆಂಬ ಖ್ಯಾತಿಗೆ ಇವರು ಪಾತ್ರರಾಗಿದ್ದಾರೆ.
ತೆಂಗು, ಅಡಕೆ, ರಬ್ಬರ್ ಇತ್ಯಾದಿ ಬಹುವಾರ್ಷಿಕ ಬೆಳೆಗಳ ಕೃಷಿಯಿಂದ ಸಾಕಷ್ಟು ಆದಾಯ ಪಡೆಯಬಹುದೆಂದು ಬಹುತೇಕ ರೈತರು ಅದರಲ್ಲಿ ತೊಡಗಿಕೊಳ್ಳುತ್ತಾರೆ. ಇನ್ನು ಕೆಲವು ರೈತರು ಸುತ್ತಮುತ್ತಲ ರೈತರು ಏನನ್ನು ಬೆಳೆಯುತ್ತಿದ್ದಾರೋ ಅದೇ ಕೃಷಿಯನ್ನು ತಾವೂ ಅನುಸರಿಸುತ್ತಾ ಸಾಗುತ್ತಾರೆ. ಆದರೆ, ಬುದ್ಧಿವಂತ ರೈತರು, ಸುತ್ತಮುತ್ತಲಿನ ಪ್ರದೇಶದಲ್ಲಿ ಯಾರೂ ಬೆಳೆಯದ ಬೆಳೆ ತೆಗೆದು ಕೈ ತುಂಬಾ ಆದಾಯ ಪಡೆದು ಯಶಸ್ಸು ಸಾಧಿಸುತ್ತಾರೆ. ಆ ವರ್ಗಕ್ಕೆ ಸೇರಿದವರು ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕೆರೆಮನೆ ಗ್ರಾಮದ ರೈತ ದಂಪತಿ ಮಂಜು ಗೌಡ ಮತ್ತು ಪಾರ್ವತಿ. ಕಳೆದ 18- 20 ವರ್ಷಗಳಿಂದ ಕೆಸುವಿನ ಕೃಷಿಯಲ್ಲಿ ಆದಾಯದ ಮೂಲವನ್ನವರು ಕಂಡುಕೊಂಡಿದ್ದಾರೆ.
ಪಟ್ಟೆ ಸಾಲುಗಳ ನಡುವೆ
ಹೊನ್ನಾವರ- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಇವರ ಹೊಲವಿದೆ. ಇವರ ಬಳಿ ಸ್ವಂತ ಜಮೀನು ಇಲ್ಲವಾದರೂ, ಪ್ರತಿ ವರ್ಷ ಇತರರ ಜಮೀನನ್ನು ಬಾಡಿಗೆಗೆ ಪಡೆದುಕೊಂಡು ಕೃಷಿ ಕೈಂಕರ್ಯದಲ್ಲಿ ತೊಡಗಿದ್ದಾರೆ. 10 ಗುಂಟೆ ವಿಸ್ತೀರ್ಣದ ಜವಳು ಗದ್ದೆಯನ್ನು ಬಾಡಿಗೆಗೆ ಪಡೆದು ಕೆಸುವಿನ ಬೀಜದ ಗಡ್ಡೆಗಳನ್ನು ನಾಟಿ ಮಾಡಿದ್ದರು. ಮೊದಲು, ಗದ್ದೆಯನ್ನು ಎತ್ತು ಮತ್ತು ನೇಗಿಲು ಬಳಸಿ ಉಳುಮೆ ಮಾಡಿ ಹದಗೊಳಿಸಿಕೊಳ್ಳುತ್ತಾರೆ. ನಂತರ, ಕೂಲಿಯಾಳುಗಳ ಸಹಾಯ ಪಡೆದು 2 ಅಡಿ ಅಗಲ 40 ಅಡಿ ಉದ್ದ ಮತ್ತು ಸಾಲಿನಿಂದ ಸಾಲಿಗೆ 2 ಅಡಿ ಅಂತರದಲ್ಲಿ ಪಟ್ಟೆ ಸಾಲು ನಿರ್ಮಿಸಿಕೊಳ್ಳುತ್ತಾರೆ. ಈ ಪಟ್ಟೆ ಸಾಲಿನಲ್ಲಿ ಗಿಡದಿಂದ ಗಿಡಕ್ಕೆ ಒಂದು ಅಡಿ ಅಂತರ ಬರುವಂತೆ ಕೆಸುವಿನ ಬೀಜ ನಾಟಿ ಮಾಡುತ್ತಾರೆ.
ಕೊಳೆ ರೋಗದ ಕಾಟವಿಲ್ಲ
10 ಗುಂಟೆ ವಿಸ್ತೀರ್ಣದ ಗದ್ದೆಯಲ್ಲಿ ಒಟ್ಟು ಸುಮಾರು 1,500 ಕೆಸುವಿನ ಗಿಡ ಬರುವಂತೆ ನಾಟಿ ಮಾಡಿದ್ದರು. ಕೆಸುವಿನ ಬೀಜ ನೆಡುವಾಗ ಸಗಣಿ ಗೊಬ್ಬರ ಹಾಕಿ ನಾಟಿ ಮಾಡಿದ್ದರು. ನಾಟಿ ಮಾಡಿದ 15 ದಿನಗಳ ನಂತರ ಗಡ್ಡೆ ಮೊಳಕೆಯಾಗಿ ಎರಡು- ಮೂರು ಎಲೆಗಳು ಕಾಣಿಸುತ್ತಿದ್ದಂತೆ ಸರಾಸರಿ 25 ಗ್ರಾಂ.ನಷ್ಟು ಡಿಎಪಿ ಗೊಬ್ಬರ ನೀಡಿದ್ದರು. ಗದ್ದೆ ಪಕ್ಕದಲ್ಲಿ ಹಳ್ಳ ಹರಿಯುತ್ತಿದ್ದು, ಅದಕ್ಕೆ ಚಿಕ್ಕ ಕಟ್ಟು ಹಾಕಿ ನೀರು ಹಾಯಿಸುವ ವ್ಯವಸ್ಥೆ ರೂಪಿಸಿಕೊಂಡಿದ್ದಾರೆ ದಂಪತಿ. ಪಟ್ಟೆ ಸಾಲಿನಲ್ಲಿ 3 ದಿನಗಳಿಗೊಮ್ಮೆ ನೀರು ಹಾಯಿಸುತ್ತಾರೆ. ನಂತರ, 45 ದಿನಗಳ ಬಳಿಕ ಸಗಣಿ ಗೊಬ್ಬರ, 70 ದಿನಗಳ ನಂತರ ಸಗಣಿ ಸೊಪ್ಪಿನ ಗೊಬ್ಬರ ನೀಡುತ್ತಾರೆ. ಪ್ರತಿ ಸಲ ಗೊಬ್ಬರ ನೀಡಿದ ನಂತರ, ಮಣ್ಣು ಏರಿಸಿ ಕೃಷಿ ನಡೆಸಿದ್ದರು. ಕೆಸುವಿನ ಸಸಿಗಳಿಗೆ ಯಾವುದೇ ಕೊಳೆ ರೋಗ ಬರುವುದಿಲ್ಲವಾದ್ದರಿಂದ ಔಷಧ ಸಿಂಪಡಣೆಯ ಅಗತ್ಯವೇ ಬೀಳುವುದಿಲ್ಲ. 5ರಿಂದ 7 ತಿಂಗಳಿಗೆ ಕೆಸುವಿನ ಫಸಲು ಕೀಳಲು ಸಿದ್ಧವಾಗುತ್ತದೆ.
ಲಾಭ ಸಮಾಚಾರ
ಒಂದೊಂದು ಗಿಡದಿಂದ ಸರಾಸರಿ 2 ಕೆ.ಜಿ.ಯಂತೆ 1,500 ಗಿಡಗಳಿಂದ 30 ಕ್ವಿಂಟಾಲ್ ಫಸಲು ದೊರೆತಿದೆ. ಕ್ವಿಂಟಾಲ್ ಒಂದಕ್ಕೆ ಈ ವರ್ಷ ರೂ. 4000 ದರವಿದೆ. 45 ಕ್ವಿಂಟಾಲ್ ಕೆಸುವಿನ ಗಡ್ಡೆ ಮಾರಾಟದಿಂದ 1 ಲಕ್ಷ 20 ಸಾವಿರ ಆದಾಯ ದೊರೆತಿದೆ. ಜಮೀನಿನ ಬಾಡಿಗೆ, ಗೊಬ್ಬರ, ಕೂಲಿಯಾಳುಗಳ ಸಂಬಳ, ಎಲ್ಲಾ ಬಗೆಯ ಖರ್ಚುಗಳನ್ನು ಲೆಕ್ಕ ಹಾಕಿದರೂ, ತಗುಲಿರುವ ಖರ್ಚು 40,000 ರೂ. ಅಷ್ಟೇ. ಮಿಕ್ಕ 80,000 ಪೂರ್ತಿ ಲಾಭ. 10 ಗುಂಟೆ ಜಮೀನಿನ ಕೆಸುವಿನ ಕೃಷಿ 6 ತಿಂಗಳ ಅವಧಿಯದ್ದಾಗಿದೆ. ಪ್ರತಿ ವರ್ಷ ಈ ರೀತಿ ಬಾಡಿಗೆ ಆಧಾರಿತ ಜಮೀನಿನಲ್ಲಿ ಕೆಸುವಿನ ಕೃಷಿ ನಡೆಸುತ್ತಿರುವ ಇವರು ಸಂಸಾರ ನಿರ್ವಹಣೆಗೆ ಆದಾಯದ ಮೂಲ ಕಂಡುಕೊಂಡಿದ್ದಾರೆ.
ಹೆಚ್ಚಿನ ಮಾಹಿತಿಗೆ: 9972661745
ಫೋಟೋ ಮತ್ತು ಲೇಖನ-ಎನ್.ಡಿ. ಹೆಗಡೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.