ಮೊದಲ ಟಿ20 ಪಂದ್ಯ ಮಳೆ ಪಾಲು
Team Udayavani, Jan 6, 2020, 12:03 AM IST
ಗುವಾಹಾಟಿ: 2020ರ ಮೊದಲ ಟಿ20 ಪಂದ್ಯವೇ ಮಳೆಯ ಪಾಲಾಗಿದೆ. ರವಿವಾರ ರಾತ್ರಿ ಗುವಾಹಾಟಿಯಲ್ಲಿ ನಡೆಯಬೇಕಿದ್ದ ಭಾರತ-ಶ್ರೀಲಂಕಾ ನಡುವಿನ ಮೊದಲ ಮುಖಾಮುಖೀ ಒಂದೂ ಎಸೆತ ಕಾಣದೆ ರದ್ದುಗೊಂಡಿದೆ.
ಈ ಪಂದ್ಯ ಟಾಸ್ ಹಾರಿಸುವುದ್ದಕ್ಕಷ್ಟೇ ಸೀಮಿತಗೊಂಡಿತು. ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ದುಕೊಳ್ಳುವ ನಿರ್ಧಾರಕ್ಕೆ ಬಂದೊಡನೆ ಮಳೆ ಸುರಿಯಿತು. ಈ ಮಳೆಯ ಹೊಡೆತಕ್ಕೆ ಅಂಕಣವನ್ನು ದುರಸ್ತಿ ಮಾಡುವುದೇ ಕ್ಯುರೇಟರ್‌ಗಳಿಗೆ ದೊಡ್ಡ ಸವಾಲಾಗಿತ್ತು. ಸಿಬಂದಿ ಪಾಡುಪಡುತ್ತಿದ್ದರೆ, ಅಭಿಮಾನಿಗಳು ಮಾತ್ರ ತಾಳ್ಮೆ ಕಳೆದುಕೊಳ್ಳದೆ ಪಂದ್ಯ ಆರಂಭವಾಗುತ್ತದೆ ಎಂಬ ನಿರೀಕ್ಷೆಯಿಂದ ಕಾಯುತ್ತಲೇ ಇದ್ದರು. ರಾತ್ರಿ 9.50ಕ್ಕೆ ಪಂದ್ಯ ರದ್ದು ಎಂಬ ಮಾಹಿತಿ ಬಂದಾಗ ಬೇಸರದಿಂದ ಎದ್ದು ಹೋದರು.
ಇಸ್ತ್ರಿ ಬಾಕ್ಸ್, ವ್ಯಾಕ್ಯೂಮ್ ಕ್ಲೀನರ್ ಬಳಕೆ
ಬರ್ಸಾಪಾರ ಮೈದಾನದಲ್ಲಿ ರವಿವಾರ ಕಂಡುಬಂದಿದ್ದು ಅತ್ಯಂತ ಅಚ್ಚರಿಯ ದೃಶ್ಯಗಳು. ಯಾವುದೇ ಅಂಕಣ ಮಳೆಯಿಂದ ತೊಂದರೆಗೊಳಗಾದರೆ, ಅಂಕಣವನ್ನು ಮೊದಲು ಭಾರೀ ಮ್ಯಾಟ್‌ಗಳಿಂದ ಮುಚ್ಚುತ್ತಾರೆ. ಮಳೆ ನಿಂತರೆ ಸೂಪರ್ ಸಾಪರ್ ಬಳಸಿ, ನೀರನ್ನು ಹೊರಹಾಕುತ್ತಾರೆ. ಜತೆಗೆ ಅಂಕಣ ಒಣಗಿಸುವ ಯಂತ್ರಗಳನ್ನು ಬಳಸುತ್ತಾರೆ. ಗುವಾಹಟಿಯಲ್ಲಿ ಇದಕ್ಕೆ ತದ್ವಿರುದ್ಧ ಪರಿಸ್ಥಿತಿ ಕಂಡುಬಂತು. ಇಸ್ತ್ರಿ ಬಾಕ್ಸ್ ಇಟ್ಟು ಅಂಕಣವನ್ನು ಒಣಗಿಸುವ ಯತ್ನ ನಡೆಸಿದರು. ವ್ಯಾಕ್ಯೂಮ್ ಕ್ಲೀನರ್ ಬಳಸಿ ಕಸವನ್ನು ತೆಗೆಯುವುದೂ ಕಂಡುಬಂತು. ಇಂತಹ ದುಃಸ್ಥಿತಿ ಎದುರಾಗುವುದಕ್ಕೆ ಕಾರಣ, ಅಂಕಣದಲ್ಲಿ ವಿಪರೀತ ಸಣ್ಣಸಣ್ಣ ಗುಳಿ ಬಿದ್ದದ್ದು!
ಆ ಗುಳಿಯಿಂದ ಕಸ ಹೊರತೆಗೆದು, ಅದಕ್ಕೆ ಮಣ್ಣು ತುಂಬಿ ಗಟ್ಟಿ ಮಾಡಲು ಸಿಬಂದಿ ಭಾರೀ ಸಾಹಸ ಮಾಡಿದರು. ಅಂಕಣವನ್ನು ಸರಿಪಡಿಸಲು ಈ ರೀತಿಯ ತಂತ್ರಗಾರಿಕೆಯನ್ನು ಬಳಸಿರುವುದು ಆಧುನಿಕ ಕಾಲಘಟ್ಟದಲ್ಲಿ ಬಹುಶಃ ಇದೇ ಮೊದಲು ಎಂದು ಕಾಣುತ್ತದೆ. ಈ ಮೈದಾನವನ್ನು ಅಸ್ಸಾಂ ಕ್ರಿಕೆಟ್ ಮಂಡಳಿ, ಬಿಸಿಸಿಐ ನಿರ್ವಹಿಸಿದ ರೀತಿ ಭಾರೀ ಟೀಕೆ ಎದುರಾಗಿದೆ.
ಸರಣಿಯ ದ್ವಿತೀಯ ಪಂದ್ಯ ಮಂಗಳವಾರ ಇಂದೋರ್‌ನಲ್ಲಿ ನಡೆಯಲಿದೆ.
ಮೊಬೈಲ್ ಫೋನ್ ಬಳಸಿ ವಿರಾಟ್ ಕೊಹ್ಲಿ ಚಿತ್ರ ರಚನೆ!
ವಿಶ್ವ ಕ್ರಿಕೆಟ್‌ನಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕೊಹ್ಲಿಗೆ ಅಭಿಮಾನ ತೋರುತ್ತಾರೆ. ಇಲ್ಲಿ ರಾಹುಲ್ ಪಾರೆಕ್ ಎಂಬ ಯುವ ಅಭಿಮಾನಿಯೊಬ್ಬರು ಬಹಳ ವಿಭಿನ್ನವಾಗಿ ತಮ್ಮ ಪ್ರೀತಿ ತೋರಿದ್ದಾರೆ. ಅವರು 3 ದಿನ ಕಷ್ಟಪಟ್ಟು ಕೊಹ್ಲಿಯ ಚಿತ್ರ ರಚಿಸಿದ್ದಾರೆ. ಅದರಲ್ಲೇನು ವಿಶೇಷ ಎನ್ನುತ್ತೀರಾ? ಈ ಚಿತ್ರ ರಚನೆಗೆ ಅವರು ಹಳೆಯ ಮೊಬೈಲ್ ಫೋನ್‌ಗಳನ್ನು ಬಳಸಿದ್ದಾರೆ!
ಹಳೆಯ ಮೊಬೈಲ್‌ಗಳು, ಅವುಗಳ ವೈರ್‌ಗಳು, ಇತರ ಭಾಗಗಳನ್ನು ಚಿತ್ರ ವಿನ್ಯಾಸಕ್ಕೆ ಸೇರಿಸಿದ್ದಾರೆ. ಈ ಅಪೂರ್ವ ಪ್ರಯತ್ನವನ್ನು ನೋಡಿ ಅಚ್ಚರಿ ಹಾಗೂ ಸಂತಸ ವ್ಯಕ್ತಪಡಿಸಿದ ಕೊಹ್ಲಿ, ಆ ಅಭಿಮಾನಿಗೆ ಮೆಚ್ಚುಗೆ ಸೂಚಿಸಿ ಹಸ್ತಾಕ್ಷರ ಹಾಕಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.