ಇಪಿಎಸ್ 95- ಪೆನ್ಶನ್ ಎಂಬ ಮಕ್ಮಲ್ ಟೋಪಿ
Team Udayavani, Jan 6, 2020, 6:02 AM IST
ಸಾಂದರ್ಭಿಕ ಚಿತ್ರ
ಇಪಿಎಫ್ಒ, 1952 ಅಡಿಯಲ್ಲಿ ಇಪಿಎಸ್, 1995 (ಎಂಪ್ಲಾಯೀಸ್ ಪೆನ್ಶನ್ ಸ್ಕೀಮ…) ಮತ್ತು ಇಪಿಎಫ್, 1952 (ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್) ಎಂಬ ಎರಡೆರಡು ಯೋಜನೆಗಳು ಜಂಟಿಯಾಗಿ ನಡೆಯುತ್ತವೆ. ಜನಪ್ರಿಯವಾಗಿ “ಪಿಎಫ್ ದುಡ್ಡು’ ಎಂದೇ ಕರೆಯಲ್ಪಡುವ ನಿಧಿಗೆ ಉದ್ಯೋಗಿಯ ವತಿಯಿಂದ ಸಂಬಳದ (ಬೇಸಿಕ್+ಡಿಎ) ಶೇ.12 ಹಾಗೂ ಕಂಪೆನಿಯ ವತಿಯಿಂದ ಸಮಾನ ಶೇ.12 ದೇಣಿಗೆ ಹೂಡಲ್ಪಡುತ್ತದಲ್ಲವೇ? ಅದರಲ್ಲಿ ಉದ್ಯೋಗಿಯ ಶೇ. 12 ದೇಣಿಗೆ ಪೂರ್ತಿಯಾಗಿ ಇಪಿಎಫ್ ಫಂಡಿಗೆ ಹೋದರೆ ಕಂಪೆನಿಯ ಶೇ.12 ದೇಣಿಗೆಯಲ್ಲಿ ನಿಜವಾಗಿ 2 ವಿಭಾಗಗಳಿವೆ – ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ (ಇಪಿಎಫ್) ಮತ್ತು ಎಂಪ್ಲಾಯೀಸ್ ಪೆನ್ಶನ್ ಸ್ಕೀಮ್ (ಇಪಿಎಸ್)
ದೇಣಿಗೆ
ಕಂಪೆನಿಯ ಶೇ.12 ದಲ್ಲಿ ಶೇ.8.33 ಮೊತ್ತಮೊದಲು ಎಂಪ್ಲಾಯೀಸ್ ಪೆನ್ಶನ್ ಸ್ಕೀಮ್‌ಗೆ (ಇಪಿಎಸ್) ಹೋಗುತ್ತದೆ; ಆದರೆ ಈ ದೇಣಿಗೆಗೆ ಸಂಬಳದ ಗರಿಷ್ಟ ಮಿತಿ ರೂ. 15,000. ಅಂದರೆ ರೂ. 1,250 ದೇಣಿಗೆಯ ಗರಿಷ್ಠ ಮೊತ್ತ. ಅದನ್ನು ಮೀರಿ ಈ ಪೆನ್ಶನ್ ಫಂಡಿಗೆ ದೇಣಿಗೆ ಹೋಗುವುದಿಲ್ಲ. ಶೇ.12ರಲ್ಲಿ ಉಳಿದ ಮೊತ್ತ ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ (ಇಪಿಎಫ್) ಗೆ ಹೋಗುತ್ತದೆ. ಇದಲ್ಲದೆ, ಈ ಪೆನ್ಶನ್ ಫಂಡಿಗೆ ಉದ್ಯೋಗಿಯ ದೇಣಿಗೆ ಇರುವುದಿಲ್ಲ. ಎಷ್ಟೋ ಉದ್ಯೋಗಿಗಳ ಪೆನ್ಶನ್ ಫಂಡಿಗೆ ಬರುವ ದೇಣಿಗೆ ಮಾಸಿಕ ರೂ. 1,250 ಮಾತ್ರ. ಇದಲ್ಲದೆ ಸರಕಾರದ ವತಿಯಿಂದ ಸಂಬಳದ ಶೇ.1.16 (ಗರಿಷ್ಠ ಮಿತಿ ರೂ. 15,000 ಅಂದರೆ ರೂ. 174) ಸಬ್ಸಿಡಿ ರೂಪದಲ್ಲಿ ಜಮೆಯಾಗುತ್ತದೆ. ಹೀಗೆ ನಿಮ್ಮ ಪೆನ್ಶನ್ ಫಂಡಿಗೆ ಜಮೆಯಾಗುವ ಒಟ್ಟು ದೇಣಿಗೆ ಸಂಬಳದ ಶೇ.9.49 (ಗರಿಷ್ಟ ರೂ. 1,424)
ಪೆನ್ಶನ್ ಅನುದಾನ
ಈ ಸ್ಕೀಮಿನಲ್ಲಿ ಪೆನ್ಶನ್ 58 ತುಂಬಿದವರಿಗೆ, ಸೇವೆಯಲ್ಲಿರುವಾಗಲೇ ಅಂಗ ಊನವಾದವರಿಗೆ, ಉದ್ಯೋಗಿ ತೀರಿಕೊಂಡಲ್ಲಿ ಪತಿ/ಪತ್ನಿಗೆ ಮತ್ತು ಮಕ್ಕಳಿಗೆ ಲಭಿಸುತ್ತದೆ. ಸ್ವಯಂ ನಿವೃತ್ತರಿಗೂ ಇಳಿಸಿದ ದರದಲ್ಲಿ ಲಭಿಸುತ್ತದೆ.
1.58 ತುಂಬಿದ ಉದ್ಯೋಗಿ
nಪ್ರತಿಯೊಬ್ಬ ಉದ್ಯೋಗಿಗೂ ಪೆನ್ಶನ್ 58ರ ವಯಸ್ಸಿನಲ್ಲಿ ಆರಂಭವಾಗುತ್ತದೆ.
nಪೆನ್ಶನ್‌ಗೆ ಅರ್ಹರಾಗಲು ಕನಿಷ್ಠ 10 ವರ್ಷದ ದೇಣಿಗೆ ಫಂಡಿನಲ್ಲಿ ಜಮೆಯಾಗಿರಬೇಕು. ಇದು ಬೇರೆ ಬೇರೆ ಕಂಪೆನಿಗಳಲ್ಲಿ ವರ್ಗಾಯಿಸಲ್ಪಟ್ಟ ಒಟ್ಟು ಅವಧಿಯೂ ಆದೀತು.
nಉದ್ಯೋಗಿಯ ಜೀವಿತಾವಧಿಯವರೆಗೆ ಮತ್ತು ಬಳಿಕ ಕುಟುಂಬದವರಿಗೆ ಪೆನ್ಶನ್ ಲಭಿಸುತ್ತದೆ.
ಪೆನ್ಶನ್ ಮೊತ್ತದ ಲೆಕ್ಕಾಚಾರ ಹೀಗೆ:
ಮಾಸಿಕ ಪೆನ್ಶನ್ = (ಪೆನ್ಶನಾರ್ಹ ಸಂಬಳ x ಪೆನ್ಶನಾರ್ಹ ಸೇವಾ ಅವಧಿ)/70
ಇಲ್ಲಿ ಪೆನ್ಶನಾರ್ಹ ಸಂಬಳ ಎಂದರೆ ನಿವೃತ್ತಿಯ ಹಿಂದಿನ 12 ತಿಂಗಳುಗಳ ಸರಾಸರಿ ಸಂಬಳ (ಬೇಸಿಕ್+ಡಿಎ). ಆದರೆ ಇಲ್ಲಿ ರೂ. 15,000ರ ಗರಿಷ್ಠ ಮಿತಿ ಇದೆ.ಪೆನ್ಶನಾರ್ಹ ಸೇವಾ ಅವಧಿ ಎಂದರೆ ಪೆನ್ಶನ್ ನಿಧಿಗೆ ದೇಣಿಗೆ ನೀಡಿದ ಸೇವಾ ಅವಧಿ; 20 ವರ್ಷ ಸೇವೆ ಸಲ್ಲಿಸಿದವರಿಗೆ 2 ವರ್ಷಗಳ ಸೇವೆಯನ್ನು ಬೋನಸ್ ರೂಪದಲ್ಲಿ ಸೇರಿಸಲಾಗುವುದು. ಗರಿಷ್ಠ 35 ವರ್ಷಗಳು. ಈ ಲೆಕ್ಕ ಪ್ರಕಾರ ಒಬ್ಟಾತನಿಗೆ ಗರಿಷ್ಠ ಪೆನ್ಶನ್ ಮಾಸಿಕ (15000×35)/70 = ರೂ. 7,500 ಮಾತ್ರ.
2.ವಿಡೋ/ವಿಡೊವರ್ ಪೆನ್ಶನ್ ಮತ್ತು ಮಕ್ಕಳ ಪೆನ್ಶನ್
ಸೇವೆಯಲ್ಲಿರುವಾಗಲೋ ಅಥವಾ ಪೆನ್ಶನ್ ಪಡೆಯುತ್ತಿರುವಾಗಲೋ ಉದ್ಯೋಗಿ ಮೃತನಾದರೆ ಆ ಕೂಡಲೇ ಉದ್ಯೋಗಿಯ ಪತ್ನಿ/ಪತಿಗೆ ಮರಣದ ತನಕ ಅಥವಾ ಮರುಮದುವೆಯವರೆಗೆ ಮಾಮೂಲು ದರದ ಶೇ.50 ಪೆನ್ಶನ್‌ಗೆ ಬಾಧ್ಯರಾಗುತ್ತಾರೆ. ಅಲ್ಲದೆ ಹೆಚ್ಚುವರಿಯಾಗಿ ಒಮ್ಮೆಗೆ 2 ಮಕ್ಕಳಿಗೆ ಅವರು 21 ವಯಸ್ಸಾಗುವವರೆಗೆ ತಲಾ ಶೇ. 25 ಮಕ್ಕಳ ಪೆನ್ಶನ್ ಕೂಡಾ ಲಭಿಸುತ್ತದೆ. ಪೂರ್ತಿ ಅಂಗ ಊನ ಇರುವ ಮಕ್ಕಳಿದ್ದರೆ ಅವರಿಗೆ ಈ ವಯಸ್ಸು ಮತ್ತು 2 ಮಕ್ಕಳ ಮಿತಿ ಅನ್ವಯಿಸುವುದಿಲ್ಲ. ಮದುವೆಯಾಗದವರ ಕೇಸಿನಲ್ಲಿ, ಅಥವಾ ಹೆಂಡತಿ/ಮಕ್ಕಳಿಲ್ಲದವರ ಕೇಸಿನಲ್ಲಿ ಆತ ಸೂಚಿಸಿದ ನಾಮಿನಿಗೆ ಅಥವಾ ಅವಲಂಬಿತ ತಂದೆ/ತಾಯಿ ಪೆನ್ಶನ್ ಸಿಗುತ್ತದೆ.
3.ಅನಾಥ/ಆಫನ್ ಪೆನ್ಶನ್
ಮೃತನ ವಾರಾಸುದಾರರಾಗಿ ಮಕ್ಕಳು ಮಾತ್ರ ಇದ್ದರೆ ಗರಿಷ್ಠ ಇಬ್ಬರಿಗೆ ವಿಡೋ ಪೆನ್ಶನ್ ಶೇ. 75 ಮೊತ್ತ ಸಿಗುತ್ತದೆ.
4.ಅರ್ಲಿ ಪೆನ್ಶನ್
ಕನಿಷ್ಟ 50 ವರ್ಷ ವಯಸ್ಸಾದವರಿಗೆ, ಸೇವೆಯಲ್ಲಿ ಇಲ್ಲದವರಿಗೆ, ಕನಿಷ್ಟ 10 ವರ್ಷ ಸೇವೆ ಸಲ್ಲಿಸಿದವರಿಗೆ ಇಳಿಸಿದ ದರದಲ್ಲಿ ಅರ್ಲಿ ಪೆನ್ಶನ್ ಆರಂಭಿಸಬಹುದಾಗಿದೆ. ಇಳಿಸಿದ ದರ ಅಂದರೆ 58ರಿಂದ ಪ್ರತೀ 1 ಕಡಿಮೆ ವಯಸ್ಸಿಗೂ ಸಿಗಬೇಕಾದ ಪೆನ್ಶನ್ ದರದಿಂದ ಶೇ.4 ಕಡಿತವಾಗುತ್ತದೆ.
ಮಕ್ಮಲ್ ಟೋಪಿ
ಪ್ರತಿ ತಿಂಗಳು ರೂ. 1,250 ಕಟ್ಟುವ ಉದ್ಯೋಗಿಗಳಿಗೆ ನಮ್ಮ ಸರಕಾರ ಮಕ್ಮಲ್ ಟೋಪಿ ಹೇಗೆ ಹೊಲಿಯುತ್ತಿದೆ ಎಂದು ಗೊತ್ತಾಗಬೇಕಾದರೆ ಅದೇ ರೂ. 1,250 ಅನ್ನು ಅದೇ ಸರಕಾರ ಸ್ಟೇಟ್ ಬ್ಯಾಂಕು/ಪೋಸ್ಟಾಫೀಸುಗಳ ಮೂಲಕ ನಡೆಸುವ ಪಬ್ಲಿಕ್ ಪ್ರಾವಿಡೆಂಡ್ ಫಂಡಿನಲ್ಲಿ ಅಥವಾ ಆರ್‌ಡಿಯಲ್ಲಿ ಹಾಕಬೇಕು.
ಪ್ರತಿ ತಿಂಗಳು ರೂ. 1,250 ಅನ್ನು 35 ವರ್ಷಗಳ ಕಾಲ
ಒಂದು ಪಿಪಿಎಫ್/ಆರ್‌ಡಿ ಯಲ್ಲಿ ಹಾಕಿದರೆ ಮತ್ತು ಅದಕ್ಕೆ ವಾರ್ಷಿಕ ಸರಾಸರಿ ಶೇ.7.9 ಬಡ್ಡಿ ಸಿಕ್ಕಿದರೆ ಅವಧಿಯ ಅಂತ್ಯಕ್ಕೆ ನಿಮ್ಮ ಕೈಯಲ್ಲಿ ರೂ. 28,67,000 ಇರುತ್ತದೆ. ಅದೇ ದುಡ್ಡನ್ನು ಒಂದು ಶೇ. 7 ಬಡ್ಡಿ ಬರುವ ಎಫ್ಡಿಯಲ್ಲಿ ಇಟ್ಟರೆ ನಿಮಗೆ ಪ್ರತಿ ತಿಂಗಳೂ ರೂ. 16,724 ಬಡ್ಡಿ ಬರುತ್ತದೆ ಹಾಗೂ ಅಸಲು ಮೊತ್ತ ಸದಾ ನಿಮ್ಮದಾಗಿಯೇ ಇರುತ್ತದೆ.
ಅದರ ಬದಲು ನಮ್ಮ ಸರಕಾರದ ಇಪಿಎಸ್ ಎಂಬ ಟೊಪ್ಪಿ ಸ್ಕೀಮಿಗೆ ದೇಣಿಗೆ ಕಟ್ಟುತ್ತಾ ಹೋದರೆ ನಿಮ್ಮ ಅಸಲು ಮೊತ್ತವನ್ನು ಸಂಪೂರ್ಣವಾಗಿ ನುಂಗಿಹಾಕುವುದಲ್ಲದೆ ನಿಮ್ಮ ಕೈಯಲ್ಲಿ ಪಿಂಚಣಿ ಹೆಸರಿನಲ್ಲಿ ಸಿಗುವ ಮಾಸಿಕ ಮೊತ್ತ ರೂ. 7,500 ಮಾತ್ರ. ನಿಮ್ಮ ಅಸಲು ಮೊತ್ತ ಹಿಂತಿರುಗಿ ಬಾರದಲ್ಲಿಗೆ ಹೋದದ್ದಲ್ಲದೆ ನಿಮ್ಮ ಕೈಗೆ ಬರುವ ಪಿಂಚಣಿ ಜುಜುಬಿ! ಉಳಿದ ಮೊತ್ತ ಅದೆಲ್ಲಿಗೆ ಹೋಗುತ್ತದೋ ಆ ದೇವನೇ ಬಲ್ಲ. ಈ ಜಯದೇವನಿಗಂತೂ ಖಂಡಿತಾ ಗೊತ್ತಿಲ್ಲ.
ಆದಾಯ ಕರ
ಪೆನ್ಶನ್ ಮೂಲಕ ಬರುವ ದುಡ್ಡು ಸಂಪೂರ್ಣವಾಗಿ ಕರಾರ್ಹ ಆದಾಯವಾಗಿರುತ್ತದೆ. ಅಂದರೆ ಈ ಆದಾಯವನ್ನು ನಿಮ್ಮ ಇತರ ಆದಾಯದೊಡನೆ ಸೇರಿಸಿ ಟೇಬಲ್ ಆದಾಯ ಕೋಷ್ಟಕದ ಪ್ರಕಾರ ನೀವು ತೆರಿಗೆ ನೀಡತಕ್ಕದ್ದು.
ಹಿಂಪಡೆತ
ಈ ಪೆನ್ಶನ್ ಫಂಡಿನಿಂದ ಅವಧಿಪೂರ್ವ ಹಿಂಪಡೆತ ಸಾಧ್ಯ. ಆದರೆ ನಿಮ್ಮ ಪೆನ್ಶನ್ ಫಂಡಿಗೆ 10 ವರ್ಷಗಳಿಂದ ಕಡಿಮೆ ವಯಸ್ಸಾದರೆ ಮಾತ್ರ. 10 ವರ್ಷಗಳು ಮೀರಿದರೆ ಹಿಂಪಡೆತ ಸಾಧ್ಯವಿಲ್ಲ. ನಿಮ್ಮ ಉದ್ಯೋಗ ಬದಲಾದರೆ ನಿಮ್ಮ ಹೊಸ ಉದ್ಯೋಗದಾತರಿಗೆ ನಿಮ್ಮ ಫಂಡನ್ನು ಖಡ್ಡಾಯವಾಗಿ ವರ್ಗಾಯಿಸಬೇಕು. ಉದ್ಯೋಗ ಇಲ್ಲದಿದ್ದರೆ ನಿಮಗೆ 58 ವರ್ಷ ವಯಸ್ಸಾಗುವವರೆಗೆ ಕಾದು ಕುಳಿತ ಬಳಿಕ ಫಾರ್ಮುಲಾ ಪ್ರಕಾರ ಮಾಸಿಕ ಪೆನ್ಶನ್ ಪಡೆಯಬಹುದು.
ಈ ಕೆಳಗಿನ ಟೇಬಲ್-ಡಿ ಪ್ರಕಾರ ಕೆಲಸ ಬಿಟ್ಟ ಕೊನೆಯ ತಿಂಗಳ ಸಂಬಳದ (ಗರಿಷ್ಠ ಮಿತಿ ರೂ. 15,000) ಇಂತಿಷ್ಟು ಪಾಲು ಮೊತ್ತವನ್ನು ಏಕಗಂಟಿನಲ್ಲಿ ಹಿಂಪಡೆಯಬಹುದು. ಅಲ್ಲಿಗೆ ಆತನ ಪೆನ್ಶನ್ ಖಾತೆ ಕೊನೆಗೊಳ್ಳುತ್ತದೆ.
1 ವರ್ಷ 1.02 ಪಾಲು
2 ವರ್ಷ 1.99 ಪಾಲು
3 ವರ್ಷ 2.98 ಪಾಲು
4 ವರ್ಷ 3.99 ಪಾಲು
5 ವರ್ಷ 5.02 ಪಾಲು
6 ವರ್ಷ 6.07 ಪಾಲು
7 ವರ್ಷ 7.13 ಪಾಲು
8 ವರ್ಷ 8.22 ಪಾಲು
9 ವರ್ಷ 9.33 ಪಾಲು
ಉದಾಹರಣೆಗೆ, ಒಬ್ಟಾತನ ಕೊನೆ ತಿಂಗಳ ಬೇಸಿಕ್+ಡಿಎ ರೂ. 20,000 ಆಗಿದ್ದಲ್ಲಿ ಮತ್ತು ಆತ 7 ವರ್ಷಗಳ ಕಾಲ ಈ ಫಂಡಿಗೆ ದೇಣಿಗೆ ನೀಡಿದ್ದಲ್ಲಿ ಆತ ಫಂಡ್ ಬಿಟ್ಟು ಹೋಗುವಾಗ ಗರಿಷ್ಠ ಮಿತಿ ರೂ. 15,000ರ 7.13 ಪಾಲು = ರೂ. 1,06,950 ಏಕಗಂಟಿನಲ್ಲಿ ಸಿಗುತ್ತದೆ ಮತ್ತು ಆತನ ಪೆನ್ಶನ್ ಖಾತೆ ಅಲ್ಲಿಗೆ ಕೊನೆಗೊಳ್ಳುತ್ತದೆ. ಗಮನಿಸಿ: ಈ 7 ವರ್ಷಗಳಲ್ಲಿ ಮಾಸಿಕ ಗರಿಷ್ಠ 1,250ರಂತೆ ಒಟ್ಟು ದೇಣಿಗೆ ರೂ.1250x12x7 = ರೂ 1,05,000 ನೀಡಿರುತ್ತಾನೆ. ಅಂದರೆ ಹಿಂಪಡೆವ ಮೊತ್ತ ಮತ್ತು ನೀಡಿದ ದೇಣಿಗೆ ಸರಿಸುಮಾರು ಒಂದೇ ಆಗಿರುತ್ತದೆ. ಅಂದರೆ, ದೇಣಿಗೆಯ ಮೇಲೆ ಯಾವುದೇ ಬಡ್ಡಿ ಸಿಗುವುದಿಲ್ಲ. ಇಲ್ಲೂ ಟೊಪ್ಪಿಯೇ!
ಹಾಂ! ಈ ವಿವರಗಳು ನಾವು ಈಗ ಚರ್ಚೆ ಮಾಡುತ್ತಿರುವ ಇಪಿಎಸ್, 1995 ಎಂಬ ಪೆನ್ಶನ್ ಸ್ಕೀಮಿಗೆ ಸಂಬಂಧ ಪಟ್ಟದ್ದು. ಇಪಿಎಫ್ ಅಲ್ಲದ ಬೇರೆ ಬೇರೆ ಪೆನ್ಶನ್ ಸ್ಕೀಮುಗಳ ವಿವರಗಳು ಬೇರೆ ಬೇರೆ ಇರುತ್ತವೆ. ಎಲ್ಲವನ್ನೂ ಅರೆಬರೆ ತಿಳಿದುಕೊಂಡು ಅವುಗಳ ಸಜ್ಜಿಗೆ-ಬಜಿಲ್ ಮಾಡಿಕೊಂಡು ಗೊಂದಲಕ್ಕೊಳಗಾಗಬೇಡಿ.
ಜಯದೇವ ಪ್ರಸಾದ ಮೊಳೆಯಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.