ಯಾವುದೇ ದಿನಾಂಕ ಹೇಳಿದ್ರೂ ಇಂಥದ್ದೇ ವಾರ ಎನ್ನುವ ವಿದ್ಯಾರ್ಥಿ!
Team Udayavani, Jan 6, 2020, 8:26 AM IST
ದುಬಾೖ: ಯುಎಐನಲ್ಲಿರುವ ಅನಿವಾಸಿ ಭಾರತೀಯ ವಿದ್ಯಾರ್ಥಿಯೋರ್ವ ಅಸಾಧಾರಣ ಜ್ಞಾಪಕ ಶಕ್ತಿ ಹೊಂದಿದ್ದಾನೆ. ತಮಿಳುನಾಡು ಮೂಲದ 19 ವರ್ಷದ ರೋಹಿತ್ ಪರಿಥಿ ರಾಮಕೃಷ್ಣನ್, ‘ಆಟಿಸಂ’ ಕಾಯಿಲೆಯಿಂದ ಬಳಲುತ್ತಿದ್ದರೂ ಗಣಿತದಲ್ಲಿ ಚಾಕಚಾಕ್ಯತೆ ಹೊಂದಿದ್ದಾನೆ. ಭೂತ ಹಾಗೂ ಭವಿಷ್ಯದ ಯಾವುದೇ ದಿನಾಂಕವನ್ನು ಕೇಳಿದರೆ, ಆ ದಿನವು ಇಂಥದ್ದೇ ದಿನ (ಭಾನು, ಸೋಮ ಇತ್ಯಾದಿ) ಆಗಿರುತ್ತದೆ ಎಂದು ಥಟ್ಟೆಂದು ಹೇಳಿ ನಿಬ್ಬೆರಗಾಗಿಸುತ್ತಾನೆ ಎಂದು ಇಲ್ಲಿನ ಮಾಧ್ಯಮ ವರದಿ ಮಾಡಿದೆ.
2018ರಲ್ಲಿ 10ನೇ ತರಗತಿ ಪಾಸಾಗಿರುವ ಈತ, ಸಾಮಾನ್ಯರಂತೆ ಶಾಲೆ ಕಾಲೇಜಿನಲ್ಲಿ ಓದಲು ಶಕ್ತನಾಗಿಲ್ಲ. ಜನಿಸಿದಾಗ ಕೇವಲ ಒಂದು ಕೆ.ಜಿ. ತೂಕ ಹೊಂದಿದ್ದ ಈತ ಹಲವು ಶಸ್ತ್ರಚಿಕಿತ್ಸೆಗೊಳಗಾಗಿದ್ದಾನೆ. ಆದರೂ ಬುದ್ಧಿ ಪಾದರಸದಂತೆ ಚುರುಕಾಗಿದೆ. ಹಲವು ಸ್ಪರ್ಧೆಗಳಲ್ಲಿ ವಿಜೇತನಾಗಿದ್ದಾನೆ. ಎರಡ್ಮೂರು ಬಾರಿ ಯಾವುದೇ ಸಂಗೀತವನ್ನು ಕೇಳಿದರೆ ಬಳಿಕ ಆತನೇ ಆ ಸಂಗೀತ ನುಡಿಸುವ ಸಾಮರ್ಥ್ಯ ಹೊಂದಿದ್ದಾನೆ. ಸಂಸ್ಕೃತ ಭಗದ್ಗೀತೆಯ 40ಕ್ಕೂ ಹೆಚ್ಚು ಶ್ಲೋಕ ಪಠಿಸುತ್ತಾನೆ ಎಂದು ಆತನ ತಾಯಿ ಮಾಲಿನಿ ಹೆಮ್ಮೆಯಿಂದ ಹೇಳುತ್ತಾರೆ.