ಹಮಾರಾ ಬಜಾಜ್…
ಸ್ಕೂಟರೆಂಬ ಮುಗಿಯದ ನೆನಪು...
Team Udayavani, Jan 8, 2020, 5:45 AM IST
ಎರಡು ಮೂರು ದಶಕಗಳ ಹಿಂದೆ ವಾಹನ ಅಂದರೆ ಸ್ಕೂಟರ್ ಮಾತ್ರ. ಸ್ಕೂಟರ್ ಎಂದ ಕೂಡಲೇ ಅದರ ಮೇಲೆ ಸವಾರಿ ಮಾಡುವ ಪುಟ್ಟ ಕುಟುಂಬ ಮನಸ್ಸಿಗೆ ಬರುತ್ತದೆ. ನೆನಪಿಸಿಕೊಳ್ಳಿ, ಹಮಾರಾ ಬಜಾಜ್ ಸ್ಕೂಟರಿನ ಆ ಜಾಹೀರಾತನ್ನು. ಕುಟುಂಬ ಎಂದರೆ ಗಂಡ, ಹೆಂಡತಿ, ಎರಡು ಮಕ್ಕಳು, ಸ್ಕೂಟರಿನ ಹಿಡಿಯಲ್ಲಿ ನೇತಾಡುವ ಸಾಮಾನು ತುಂಬಿದ ಚೀಲಗಳು ಎಂದು ಸಾರುತ್ತಿದ್ದ ಅದು ಕುಟುಂಬ ಯೋಜನೆಯ ಜಾಹಿರಾತೂ ಆಗಿತ್ತು…
ಒಂದು ಕಾಲದಲ್ಲಿ ಸ್ಕೂಟರ್, ಮಧ್ಯಮ ವರ್ಗದ “ಬೇಕು’ಗಳಲ್ಲೊಂದಾಗಿತ್ತು. ಆಗೆಲ್ಲಾ ಎಲ್ಲರದ್ದೂ ಆರಕ್ಕೇರದ, ಮೂರಕ್ಕಿಳಿಯದ ಸಂಸಾರವೇ. ತಿಂಗಳ ಶುರುವಿನಲ್ಲಿ ಎಲ್ಲವೂ ಇದೆಯೆಂಬ ಖುಷಿ, ತಿಂಗಳ ಅಂತ್ಯದಲ್ಲಿ ಎಲ್ಲವೂ ಕರಗಿತಲ್ಲ ಎಂಬ ದುಃಖ. ಕುಟುಂಬದ ಸುಖ-ದುಃಖದಲ್ಲಿ ಸದಾ ಸಾಥ್ ಕೊಡುತ್ತಿದ್ದುದು ಎರಡು ಚಕ್ರದ ಬಂಟ!
ಆ ಸ್ಕೂಟರೋ, ಮಣ ಭಾರದ್ದು. ಸ್ಟಾಂಡ್ ಹಾಕಿ ನಿಲ್ಲಿಸಲೂ ತಾಕತ್ತು ಬೇಕು. ಏಳೆಂಟು ಸಲ ಕಿಕ್ ಕೊಟ್ಟ ನಂತರ, ಗುರ್ ಗುರ್ ಎನ್ನುತ್ತಾ ಶುರುವಾಗುತ್ತಿತ್ತು. ಎರಡು ಚಕ್ರದ ಸ್ಕೂಟರಿನಲ್ಲಿ ಎರಡೇ ಸೀಟಿದ್ದರೂ ನಾಲ್ಕೈದು ಜನರ ಸವಾರಿ ಸಾಮಾನ್ಯ. ಹೆಲ್ಮೆಟ್ ಧರಿಸಿದ ಸಾರಥಿ ಮುಂದಿದ್ದರೆ, ಸೀರೆ ಉಟ್ಟ ಹೆಂಡತಿ ಹಿಂದಿನ ಸೀಟಿನಲ್ಲಿ, ಮಧ್ಯದಲ್ಲಿ ಅರೆ ನಿಂತ ಭಂಗಿಯಲ್ಲಿ ಮಗ/ಮಗಳು, ಮುಂದಿನ ಚಿಕ್ಕ ಜಾಗದಲ್ಲಿ ನಿಲ್ಲುವ ಕಿರಿಯ ಮಗ/ಮಗಳು. ಕೆಲವೊಮ್ಮೆ ಹೆಂಡತಿಯ ಕೈಯಲ್ಲಿ ಇನ್ನೊಂದು ಮಗುವೂ ನಿದ್ದೆ ಮಾಡುತ್ತಿರುತ್ತಿತ್ತು! ಬದುಕಿನಲ್ಲಿ ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಬೇಕು ಅಂತ ಆ ಸ್ಕೂಟರ್ ಪ್ರಯಾಣ ಸಾರಿ ಹೇಳುತ್ತಿತ್ತು.
ಗಾಡಿ ಅಷ್ಟು ಚಿಕ್ಕದಾದರೂ, ಎಲ್ಲರ ಮುಖದಲ್ಲಿ ಸಂತೋಷ, ಹೆಮ್ಮೆ ಎದ್ದು ಕಾಣುತ್ತಿತ್ತು. ಗಂಡನ ಹೆಗಲೋ, ಸೊಂಟವನ್ನೋ ಬಳಸಿದ ಹೆಂಡತಿ, ಗಂಡನ ಮೇಲೆ ತನಗಿರುವ ಹಕ್ಕು, ಪ್ರೇಮವನ್ನು ಮೌನವಾಗಿಯೇ ಜಗತ್ತಿಗೆ ಸಾರುತ್ತಿದ್ದಳು. ಗಂಡ, ಹೆಂಡತಿ ಮುನಿಸಿಕೊಂಡಿದ್ದರೂ ಸ್ಕೂಟರ್ ಮೇಲೆ ಕೂರುತ್ತಿದ್ದಂತೆ ಎಲ್ಲಾ ಮುನಿಸೂ ಮಾಯ! ರಸ ಗಳಿಗೆ ಬರುವುದು ಯಜಮಾನ ಬೇಕಂತ ಬ್ರೇಕ್ ಹಾಕಿದಾಗಲೇ, ಅಂಟಿಕೊಂಡಿದ್ದವರು ಮತ್ತಷ್ಟು ಅಂಟಿಕೊಳ್ಳುತ್ತಿದ್ದರು. ಆದೊಂದು ಸುಖೀ ಸಂಸಾರದ ಚೈತ್ರ ಯಾತ್ರೆ.
ಅಪ್ಪಯ್ಯನ ಆ ಸ್ಕೂಟರ್
ನನ್ನ ಅಪ್ಪಯ್ಯನ ಹತ್ತಿರ ಲ್ಯಾಂಬ್ರೆಟಾ ಸ್ಕೂಟರ್ ಇತ್ತು. ನೀಲಿ, ಬಿಳಿ ಬಣ್ಣದ್ದು. ಯಾವಾಗ ಮನೆಗೆ ಬಂತೆಂದು ನೆನಪಾಗುತ್ತಿಲ್ಲ. ಆದರೆ, ತಮ್ಮ ಮುಂದೆ ನಿಲ್ಲಲು ಶುರು ಮಾಡಿದಾಗ ನನಗೆ ಹಿಂದಕ್ಕೆ ಕೂರಲು ಹಿಂಬಡ್ತಿ ಸಿಕ್ಕಿತು. ನಾನು, ಅಪ್ಪ-ಅಮ್ಮನ ಮಧ್ಯೆ ಕೂರುತ್ತಿ¨ªೆ ಎನ್ನುವುದಕ್ಕಿಂತ ನಿಲ್ಲುತ್ತಿ¨ªೆ ಎಂದರೇ ಸರಿ. ಮೈಗೆ ಅಂಟಿಕೊಂಡಂತೆ ಕೂತ ಅಪ್ಪ, ಅಮ್ಮನ ಸಾನ್ನಿಧ್ಯ ಸ್ಕೂಟರಿನ ಸವಾರಿಯಷ್ಟೇ ಪ್ರಿಯವಾಗಿತ್ತು.
ಸ್ಕೂಟರ್ ನಮ್ಮ ಮನೆಯ ಸದಸ್ಯರಲ್ಲೇ ಒಂದಾಗಿತ್ತು. ಹಲವು ಸಿಹಿ-ಕಹಿ ಘಟನೆಗಳಿಗೆ ಸಾಕ್ಷಿಯಾಗಿತ್ತು. ನಾನು ಮಾವಿನ ಮರದಿಂದ ಬಿದ್ದು ಕಾಲು ಪೆಟ್ಟು ಮಾಡಿಕೊಂಡಾಗ ಆಸ್ಪತ್ರೆಗೆ ಹೊದದ್ದು ಸ್ಕೂಟರಿನಲ್ಲೇ. ಎಸ್ಸೆಸ್ಸೆಲ್ಸಿಯಲ್ಲಿ ಫಸ್ಟ್ ಕ್ಲಾಸಿನಲ್ಲಿ ಪಾಸಾಗಿ, ಸ್ಕೂಟರಿನಲ್ಲಿ ಹೋಗಿಯೇ ಸಿಹಿ ಖೂದಿಸಿದ್ದು! ಹಬ್ಬಗಳು ಬಂತೆಂದರೆ ಅಜ್ಜಿ ಮನೆಗೆ, ದೇವಸ್ಥಾನಗಳಿಗೆ, ಅಕ್ಕಪಕ್ಕದ ಊರಿನಲ್ಲಿ ನಡೆಯುವ ಮದುವೆ, ಮುಂಜಿಗಳಿಗೆ ನಮ್ಮ ಕುಟುಂಬದ ಪ್ರಯಾಣ ಸ್ಕೂಟರಿನಲ್ಲೇ. “ಕುಟುಂಬ ಸಮೇತ’ ಅಂದರೆ, ಅದರಲ್ಲಿ ಸ್ಕೂಟರ್ ಕೂಡಾ ಬರುತ್ತಿತ್ತು.
ಕಾರು ಬಂತು, ಖುಷಿ ಹೋಯ್ತು
ಈಗ ಬಹುತೇಕ ಎಲ್ಲರ ಬಳಿಯೂ ಕಾರ್ ಇದೆ. ಮನೆ ಮಂದಿಯೆಲ್ಲ ಆರಾಮಾಗಿ ಕುಳಿತು, ಎಲ್ಲಿಗೆ ಬೇಕಾದರೂ ಹೋಗಬಹುದು. ಆದರೆ, ಕಾರಿನಲ್ಲಿ ಹೋಗುವುದು ಸ್ಕೂಟರಿನಲ್ಲಿ ಪ್ರಯಾಣ ಮಾಡಿದಷ್ಟು ಚಂದ ಅಂತ ಅನ್ನಿಸುವುದೇ ಇಲ್ಲ. ಅಂಟಿಕೊಂಡು ಕೂರಬೇಕಾದ ಸ್ಕೂಟರ್ ಕೊಡುತ್ತಿದ್ದ ಅಪ್ಯಾಯಮಾನತೆ, ಬಿಡುಬೀಸಾಗಿ ಕೂರಬಲ್ಲ ಕಾರು ಕೊಡುವುದಿಲ್ಲ.
ನನ್ನ ಮದುವೆ ನಿಶ್ಚಯವಾದಾಗ ಮನೆಗೆ ಹಸಿರು ಬಣ್ಣದ ಕಾರು ಬಂತು. ಆದರೂ, ಆಪತ್ಕಾಲಕ್ಕೆ ಸಹಾಯಕ್ಕೆ ಬಂದದ್ದು ಸ್ಕೂಟರೇ. ತುಂಬಿದ ಬಸುರಿಯಾದ ನನಗೆ ರಾತ್ರೋ ರಾತ್ರಿ ಹೊಟ್ಟೆ ನೋವು ಕಾಣಿಸಿದಾಗ, ಕಾರು ಗ್ಯಾರೇಜಿನಲ್ಲಿ ಮುನಿಸಿಕೊಂಡು ಕೂತಿತ್ತು. ಆಸ್ಪತ್ರೆಗೆ ಸ್ಕೂಟರಿನಲ್ಲೇ ಪ್ರಯಾಣ. ಹಾಗಾಗಿಯೇ ಇರಬೇಕು, ನನ್ನ ಮಗನಿಗೂ ಅಜ್ಜನ ಸ್ಕೂಟರೇ ಅಚ್ಚುಮೆಚ್ಚು. ರಜೆಯಲ್ಲಿ ಊರಿಗೆ ಬಂದಾಗಲೆಲ್ಲಾ ಅಜ್ಜ, ಮೊಮ್ಮಗ ಮೂರು ಹೊತ್ತೂ ಸ್ಕೂಟರಿನಲ್ಲಿ ಕೂತ್ತಿದ್ದರು. ಉರಿ ಬೇಸಿಗೆಯ ದಿನಗಳು, ಬೆಳಗ್ಗೆ ಅಪ್ಪಯ್ಯನ ಫೋನ್ ಬಂತು, “ಸ್ಕೂಟರ್ ಬಿಡಲು ಕಷ್ಟವಾಗುತ್ತಿದೆ. ಯಾರೋ ಕೆಲಸದವರಿಗೆ ಕೊಟ್ಟುಬಿಟ್ಟೆ’ ಅಂದಾಗ, ಮನಸ್ಸಿಗೆ ಕಸಿವಿಸಿ. ಪ್ರೀತಿಪಾತ್ರರನ್ನು ಕಳೆದುಕೊಂಡ ಅನುಭವ.
ಸ್ಕೂಟರೂ ಬದಲಾಗಿದೆ
ಬದಲಾವಣೆ ಜಗದ ನಿಯಮ ಅನ್ನುವುದು ಸ್ಕೂಟರ್‌ಗೂ ಅನ್ವಯ. ಇತ್ತೀಚೆಗೆ, ಮಣಭಾರದ ಸ್ಕೂಟರ್ ಹಗುರವಾಗಿದೆ. ಆಕರ್ಷಕ ಬಣ್ಣಗಳಿಂದ ಕಂಗೊಳಿಸುತ್ತಿದೆ. ಅದನ್ನು ಚಲಾಯಿಸುವವರೂ ಹೆಚ್ಚಾಗಿ ಮಹಿಳೆಯರೇ. ನಾವಿಬ್ಬರು, ನಮಗಿಬ್ಬರು ಎಂದು ಸಂದೇಶ ಸಾರುತ್ತಿದ್ದ ಸ್ಕೂಟರ್ ಈಗ “ನಾನು ಮತ್ತು ನನ್ನ ಸ್ವಾತಂತ್ರ್ಯ’ ಎನ್ನುತ್ತಿದೆ. ಮನೆಗೊಂದರಂತೆ ಕಾರು ಕೂಡಾ ಸಾಮಾನ್ಯ. ಸುಖ ಪ್ರಯಾಣಕ್ಕೆ ಸಹಕರಿಸುವ ಕಾರುಗಳು, ಸುಖ ಸಂಸಾರವನ್ನು ದೂರ ಸರಿಸುತ್ತಿವೆ ಅಂತ ನೋವೂ ಕಾಡುತ್ತದೆ. ನೀವೇನಂತೀರಾ?
-ಗೀತಾ ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.