ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ರೈತರು ಆಗ್ರಹ
Team Udayavani, Jan 9, 2020, 3:00 AM IST
ಚಾಮರಾಜನಗರ: ತಾಲೂಕಿನ ಸಂತೇಮರಹಳ್ಳಿ ಹೋಬಳಿಯ ಕೆಲವು ಗ್ರಾಮಗಳಲ್ಲಿ ಉಂಟಾಗಿರುವ ವಿದ್ಯುತ್ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ, ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ರೈತರು ನಗರದ ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನಗರದ ಶ್ರೀ ಚಾಮರಾಜೇಶ್ವರ ಉದ್ಯಾನವನದ ಮುಂಭಾಗ ರಾಜ್ಯ ಕಬ್ಬು ಬೆಳೆಗಾರರ ಸಂಘದ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು, ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಸೆಸ್ಕ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭ ಟನೆ ನಡೆಸಿದರು.
ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಇಲ್ಲ: ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿ ಹೋಬಳಿಯ ನವಿಲೂರು, ಹಳ್ಳಿಕೆರೆಹುಂಡಿ, ಆಲ್ದೂರು, ಗಣಿಗನೂರು, ಜನ್ನೂರು, ಹೊಸೂರು, ಗೊದೆಹುಂಡಿ, ಬಿಎಂಕೆ ಹುಂಡಿ, ಭೋಗಯ್ಯನಹುಂಡಿ ಗ್ರಾಮಗಳ ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ.
ಕಡಿಮೆ ಗುಣಮಟ್ಟದ ವೋಲ್ಟೆಜ್ ಸರಬರಾಜಾಗುತ್ತಿದೆ. ಇದರಿಂದ ನೀರಿನ ಅಭಾವ ಉಂಟಾಗಿದ್ದು, ಜನ- ಜಾನುವಾರುಗಳಿಗೆ ಹಾಗೂ ಕಬ್ಬು, ಬಾಳೆ, ತರಕಾರಿ, ತೋಟಗಾರಿಕೆ ಬೆಳೆಗಳಿಗೆ ನೀರಿನ ಸಮಸ್ಯೆಯಾಗಿದೆ. ಕೂಡಲೇ ಈ ಭಾಗದಲ್ಲಿ ಉಂಟಾಗಿರುವ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ನಿರಂತರ ಜ್ಯೋತಿ ಮನರಂಜನೆಗೆ ಸೀಮಿತ: ಸರ್ಕಾರ 7 ಗಂಟೆ ವಿದ್ಯುತ್ ನೀಡಬೇಕು ಎಂದು ಆದೇಶ ಮಾಡಿದೆ. ಆದರೆ, ಅಧಿಕಾರಿಗಳು ಅನಿಯಮಿತ ವಿದ್ಯುತ್ ನೀಡುತ್ತಿದ್ದು, ಗುಣಮಟ್ಟದ ವಿದ್ಯುತ್ ನೀಡುವಲ್ಲಿ ನಿರ್ಲಕ್ಷ್ಯವಹಿಸಿದ್ದಾರೆ. ಈಗಾಗಲೇ ನೀಡುತ್ತಿರುವ ನಿರಂತರ ಜ್ಯೋತಿ ಮನರಂಜನೆಗೆ ಸೀಮಿತವಾಗಿದ್ದು, ಸರ್ಕಾರ ರೈತ ಯೋಜನೆಯನ್ನು ಜಾರಿಗೆ ತಂದು ಅನ್ನದಾತರ ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿದರು.
ವಿದ್ಯುತ್ ಸಮಸ್ಯೆ ಬಗೆಹರಿಸಲು ಭರವಸೆ: ಸೆಸ್ಕ್ ಅಧಿಕಾರಿಗಳು ಲಿಖೀತರೂಪದಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಸುವುಧಾಗಿ ಭರವಸೆ ನೀಡಿದ ಮೇಲೆ ಪ್ರತಿಭಟ ನಾನಿರತರು ಪ್ರತಿಭಟನೆ ಅಂತ್ಯಗೊಳಿಸಿದರು. ಪ್ರತಿಭಟನೆಯಲ್ಲಿ ಮೂಕಹಳ್ಳಿ ಮಹದೇವಸ್ವಾಮಿ, ಪಟೇಲ್ ಶಿವಮೂರ್ತಿ, ಹಾಡ್ಯರವಿ, ಮಧು, ನಾಗರಾಜು, ನವಿಲೂರು ನಾಗಣ್ಣ, ಪಾಪಣ್ಣ, ನಾಗೇಶ್,
ಚಿಕ್ಕಮಲ್ಲಪ್ಪ, ಸೋಮಣ್ಣ, ರಮೇಶ್, ಶಿವಸ್ವಾಮಿ, ಕುಮಾರ್, ಜನ್ನೂರು ಸಿದ್ದಪ್ಪ, ರವಿ, ಪುಟ್ಟಬುದ್ದಿ, ಸಿದ್ದರಾಜು, ಹೊಸೂರು ಶಾಂತಮೂರ್ತಿ, ಗುರುಸ್ವಾಮಿ, ಹಳ್ಳಿಕೆರೆಹುಂಡಿ ಪುಟ್ಟೇಶ್, ಮಹದೇವಸ್ವಾಮಿ, ಚಿನ್ನಸ್ವಾಮಿ, ಪ್ರಭುಸ್ವಾಮಿ, ಗೊದೆಹುಂಡಿರವಿ, ಶೇಖರಪ್ಪ, ರಾಜಣ್ಣ, ಮಧುಸೂದನ್ ಇತರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.