ಅಯ್ಯಪ್ಪನ ಹಾದಿಯಲ್ಲಿ…
ಶ್ರೀ ಅಯ್ಯಪ್ಪ ಸನ್ನಿಧಿ, ಶಬರಿಮಲೈ; ನೋಡಿ, "ಸ್ವಾಮಿ' ದಾರಿ ಇರುವುದೇ ಹೀಗೆ...
Team Udayavani, Jan 11, 2020, 6:00 AM IST
“ಕಟ್ಟು ಕಟ್ಟು ಇರುಮುಡಿ ಕಟ್ಟು… ಯಾರ ಕಾಣಲ್, ಸ್ವಾಮಿ ಕಾಣಲ…’ ಎನ್ನುವ ಭಕ್ತಿಯ ಹಾಡು ಎಲ್ಲೆಲ್ಲೂ ಕೇಳಿಸುತ್ತಲೇ ಇದೆ. ಇದು ಅಯ್ಯಪ್ಪನ ಧ್ಯಾನ. ಈ ಘೋರ ಚಳಿಯನ್ನು ಮಣಿಸಿ, ಭಕ್ತರ ಪೊರೆವ ಮಣಿಕಂಠನ ಮಹಿಮೆ ಅಪಾರ. ಮಾಲೆಧಾರಿಯಾಗಿ ಹೋದ, ಲೇಖಕರ ಅನುಭವವೊಂದು ಇಲ್ಲಿದೆ…
ಕಗ್ಗಾಡಿನ ನಡುವಿನಲ್ಲಿ ತಣ್ಣಗೆ ಹರಿಯುವ ಪಂಪಾ ನದಿ. ಅಯ್ಯಪ್ಪ ಭಕ್ತಿಯ ತಂಪು ಹಬ್ಬಿದ ತಾಣ. ಇರುಮುಡಿ ಹೊತ್ತವರಿಗೆ ಅಸಲಿ ಶಬರಿಮಲೆ ಯಾತ್ರೆ ಇಲ್ಲಿಂದಲೇ ಶುರುವಾಗುತ್ತದೆ. ನಮ್ಮೆಲ್ಲರ ಭಕ್ತಿಯನ್ನು ತುಪ್ಪದ ಮೂಲಕ ಕಾಯಿಯಲ್ಲಿ ತುಂಬಿಸಿ ಅಕ್ಕಿ ಸಮೇತ ತಲೆಮೇಲೆ ಹೊತ್ತಿರುವ ಇರುಮುಡಿಯನ್ನು ಒಂದೆಡೆ ಇರಿಸುತ್ತೇವೆ. ನಿತ್ಯಕರ್ಮ ಪೂರೈಸಿ, ಪಂಪಾ ನದಿಯಲ್ಲಿ ಸ್ನಾನ ಮುಗಿಸಿ, ಪೂಜಿಸಿದ ಇರುಮುಡಿ ಹೊತ್ತು ಯಾತ್ರೆಯನ್ನು ಮುಂದುವರಿಸುತ್ತೇವೆ. ತಲೆಯ ಮೇಲೆ ಎರಡು ಕೈಗಳಿಂದ ಹಿಡಿದುಕೊಂಡ ಇರುಮುಡಿ, ಕೊರಳಲ್ಲಿ ಮಾಲೆ, ಭುಜಕ್ಕೆ ತೂಗುಬಿಟ್ಟ ಚೀಲ, ಸೊಂಟಕ್ಕೆ ಕಟ್ಟಿಕೊಂಡ ಪರ್ಸ್, ಬಾಯಲ್ಲಿ ಶರಣುಘೋಷ, ಬರಿಗಾಲ ಪಯಣ… ಕಣ್ಣು ಹಾಯಿಸಿದೆಡೆಗೆ ಕಪ್ಪುವಸನಧಾರಿಗಳು, ನಮ್ಮವರಾರು ಎಂಬ ಹುಡುಕಾಟ… ಆ ಯಾತ್ರೆ ಬಲುಚೆಂದ.
ಚಹಾ, ಬಜ್ಜಿ, ಭಕುತಿ…
ಮೊದಲ ಐವತ್ತು ಮೆಟ್ಟಿಲು ಹತ್ತಿದಂತೆ ಕನ್ನಿಮೂಲ ಗಣಪತಿಯ ದರ್ಶನ. ಪಯಣ ನಿರ್ವಿಘ್ನವಾಗುವಂತೆ ಪ್ರಾರ್ಥಿಸಿ, ಒಂದು ತೆಂಗಿನ ಕಾಯಿಯನ್ನು ಒಡೆದೇ ಸಾಗಬೇಕು. ಪಂಪಾದಿಂದ ಅಯ್ಯಪ್ಪನ ಸನ್ನಿಧಿಗೆ ನಾಲ್ಕು ಕಿ.ಮೀ. ಕಲ್ಲಿನ ಹಾದಿಯನ್ನು ಸವೆಸಬೇಕು. ಅಷ್ಟೇನಾ ಎನಿಸಬಹುದು; ಆದರೆ, ಭರ್ತಿ 2- 3 ಗಂಟೆ ಬೇಕೇ ಬೇಕು. ಒಮ್ಮೊಮ್ಮೆ ಕಣ್ಣೆತ್ತಿ ನೋಡಿದಷ್ಟೂ ಎತ್ತರವೇ ಕಾಣಿಸುವ ದಾರಿ. ಇಕ್ಕಟ್ಟಾದ ಜಾಗ. ಹತ್ತು ರೂಪಾಯಿಗೆ ಸಿಗುವ ಲೋಟ ತುಂಬಾ ಚಹಾ, ಉದ್ದದ ಬಾಳೆಕಾಯಿ ಬಜ್ಜಿ, ಕಲ್ಲಂಗಡಿ ಹಣ್ಣುಗಳ ಇಕ್ಕೆಲಗಳ ಅಂಗಡಿ, ಸರಿ ರಾತ್ರಿಗೂ ಸಾಗುವ ಲಕ್ಷಾಂತರ ಭಕ್ತರು… ಇವೆಲ್ಲದರ ಮಧ್ಯೆ ಕೇಳಿಸುವ “ಡೋಲಿ ಡೋಲಿ ಡೋಲಿ’ ಎಂಬ ಗಟ್ಟಿ ಸ್ವರ. ಬಲಿಷ್ಠ ನಾಲ್ವರು ಪುರುಷರು ಅನಾಯಾಸವಾಗಿ ಒಬ್ಬರನ್ನು ಹೊತ್ತು ಸಾಗುವುದನ್ನು ಕಂಡಾಗ, ಆಶ್ಚರ್ಯವಾಗುತ್ತದೆ.
ಅಬ್ಟಾ, ಆ ಕಾಡೇ..!
ಅಲ್ಲಲ್ಲಿ ಸಿಂಗಳೀಕಗಳು, ಮಂಗಗಳು, ಕಾಡುಹಂದಿಗಳು ಕಾಣಿಸುತ್ತಲೇ ಇರುತ್ತವೆ. ಎಂಥ ನಟ್ಟನಡುರಾತ್ರಿಯೇ ಇರಲಿ, ಬೆಳಗಿನ ಜಾವವೇ ಇರಲಿ, ಭಕ್ತರ ಸಾಲಂತೂ ಇದ್ದೇ ಇರುತ್ತದೆ. ಮರಗಳಿಂದ ತಂಪಾಗಿ ಬೀಸುವ ಗಾಳಿ; ಅದು ದೇವರ ಫ್ಯಾನು. ಹಾದಿಯ ಇಕ್ಕೆಲಗಳಿಗೆ ಕಂಬಿಗಳಿದ್ದರೂ, ಅದರಾಚೆಗಿನ ಭೀಕರ ಪ್ರಪಾತ, ಕಾನನ ಭಯ ಹುಟ್ಟಿಸುವಂಥದ್ದು. ಆ ಬೃಹತ್ ಗುಡ್ಡದ ಮೇಲೆ ಸಾಗುವುದೇ ಒಂದು ಸಾಹಸ.
18 ಮೆಟ್ಟಿಲುಗಳನ್ನು ಏರುತ್ತಾ…
ಅರ್ಧ ಪಯಣ ಮುಗಿದಂತೆ ಸಿಗುವುದು, ಶರಂಗುತ್ತಿ. ಅಲ್ಲಿನ ಶಬರಿ ಪೀಠಕ್ಕೆ ನಮಸ್ಕರಿಸಿ, ಮುಂದೆ ಸಾಗಿದಾಗ ಏನೋ ನವೋಲ್ಲಾಸ ದಕ್ಕುತ್ತದೆ. ಸ್ವಾಮಿಯನ್ನು ಕಾಣುವ ಸಂಭ್ರಮ. ಕೆಳಮುಖವಾಗಿ ಸಾಗುವ ಮೆಟ್ಟಿಲುಗಳು. ಅವು ತಲುಪುವುದು, ಅಯ್ಯಪ್ಪನ ಸನ್ನಿಧಾನದೆಡೆಗೆ. “ಪಡಿ’ ಎಂದರೆ, 18 ಮೆಟ್ಟಿಲು. ಮೊದಲು ಪಕ್ಕದಲ್ಲಿ ತೆಂಗಿನಕಾಯಿ ಒಡೆದು, ಪಡಿ ಹತ್ತುವ ಮೊದಲು ತೆಳುವಾಗಿ ಹರಿವ ನೀರಲ್ಲಿ ಪಾದ ತೊಳೆದು, ಮೆಟ್ಟಿಲು ಹತ್ತಬೇಕು. ಮೆಟ್ಟಿಲಿನ ಇಕ್ಕೆಲಗಳಲ್ಲಿನ ನಿಂತ ಪೊಲೀಸರು ನಮ್ಮ ಹತ್ತುವಿಕೆಗೆ ಚುರುಕು ತುಂಬುತ್ತಲೇ ಇರುತ್ತಾರೆ.
ಇರುಮುಡಿ ಇಳಿಸುವ ಹೊತ್ತು…
ಮೆಟ್ಟಿಲು ಹತ್ತಿದ ನಂತರ, ಅಂದು ಅಯ್ಯಪ್ಪ ಬಾಣ ಮುಖೇನ ಸ್ಥಳ ಗುರುತಿಸಿದ ಸ್ತಂಭದ ಸ್ವಾಗತ ಸಿಗುತ್ತದೆ. ದೇಗುಲಕ್ಕೆ ಅರ್ಧ ಸುತ್ತು ಬಂದು ಕೆಳಗಿದರೆ, ಚಿನ್ಮಯಿ ಮೂರ್ತಿಯ ಅಪೂರ್ವ ದರ್ಶನ. ಅಪಾರ ಶಕ್ತಿಯ ಚೈತನ್ಯ ಮೂರ್ತಿ ಅದು. ಆ ದರ್ಶನದವರೆಗೂ ನಮ್ಮ ತಲೆ ಮೇಲಿನ ಇರುಮುಡಿ ತಪ್ಪುವಂತಿಲ್ಲ. ಆವರಣದ ಹೊರಗೆ ಪುಟ್ಟ ಜಾಗ ಹುಡುಕಿ, ಅಲ್ಲಿ ಗುರುಸ್ವಾಮಿ, ಇರುಮುಡಿ ಬಿಚ್ಚಿ ತುಪ್ಪದ ಕಾಯಿ ಒಡೆಯುತ್ತಾರೆ. ಭಕ್ತಿವ್ರತದ ಕಾಯಿಯ ತುಪ್ಪ ಮಾತ್ರ ಗಟ್ಟಿಯಾಗಿರುತ್ತದೆ ಎಂಬ ನಂಬಿಕೆಯಿದೆ. ಆ ತುಪ್ಪವನ್ನು ಸ್ವಾಮಿಗೆ ಅರ್ಪಿಸಿ, ಅಭಿಷೇಕದ ತುಪ್ಪದೊಂದಿಗೆ ಇಳಿಮುಖ ಪಯಣ. ಪರಿಶುದ್ಧಗೊಳ್ಳಲು ಅಲ್ಲೊಂದು ಭಸ್ಮಕೊಳವಿದೆ. ಅಲ್ಲಿ ಸ್ನಾನಮಾಡಿದರೆ ಚರ್ಮದ ಸೋಂಕು ಬಾಧಿಸದು ಎನ್ನುವುದು ನಂಬಿಕೆ.
ಬೆಟ್ಟ ಹತ್ತಿದ್ದಕ್ಕಿಂತ ಇಳಿಯುವುದು ಇನ್ನೂ ಸಾಹಸ. ಹತ್ತಿ ಸುಸ್ತಾದ ಕಾಲುಗಳು ಇಳಿಮುಖವಾದಂತೆ ದಣಿಯುತ್ತವೆ. ಇಳಿಯುವ ಹಾದಿ ಕಠಿಣವಿದ್ದರೂ, ರಸ್ತೆಗಳಿಂದ ಕೂಡಿದೆ. ಆದರೆ, ಆ ಎಲ್ಲ ದಣಿವನ್ನೂ ಮರೆಸುವ ಮಹಾನ್ ಶಕ್ತಿ ಅಯ್ಯಪ್ಪನಿಗೆ ಎಂಬುದೇ ನಮ್ಮ ನಂಬಿಕೆ.
ಇವರಿಗಿಲ್ಲ, ಆಯಾಸ
ಹತ್ತಾರು ದಿನ ವ್ರತ ಮಾಡಿದ ಭಕ್ತರಿಗೆ, ಬರಿಗಾಲಿನ ಅಭ್ಯಾಸದಿಂದ ಕಲ್ಲಿನ ಪಯಣ ತೀರಾ ಕಷ್ಟವೆನಿಸದು. ಸಣ್ಣ ಮಕ್ಕಳು, ವೃದ್ಧರು, ವಿಶೇಷಾಂಗರೂ ಅಯ್ಯಪ್ಪನ ಧ್ಯಾನದಲ್ಲೇ, ಅನಾಯಾಸವಾಗಿ ಹೆಜ್ಜೆ ಹಾಕುವುದನ್ನು ಕಂಡಾಗ, ಅಯ್ಯಪ್ಪನ ಬಗ್ಗೆ ಇನ್ನೂ ಭಕ್ತಿ ಹುಟ್ಟುತ್ತದೆ.
– ನಾಗರಾಜ್ ನೈಕಂಬ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.