ಮತ್ತೂಬ್ಬರನ್ನು ಗೌರವದಿಂದ ಮಾತನಾಡಿಸುವ ಅಭ್ಯಾಸ
ಪರಮೇಶ್ವರ ಜೋಳಿಗೆಯಿಂದ ಢಮರುಗ ತೆಗೆದು ಬಾರಿಸಲಾರಂಭಿಸಿದ. ಆ ಸದ್ದಿಗೆ ಧೋ ಮಳೆ ಆರಂಭವಾಯಿತು...
Team Udayavani, Jan 11, 2020, 6:21 AM IST
ಇಂದು ಪ್ರಪಂಚ ಹೇಗಾಗಿದೆ ಎಂದರೆ ಯಾರನ್ನಾದರೂ ಗೌರವದಿಂದ ಮಾತನಾಡಿಸಿದರೆ ಕೆಲವರು, ನಮ್ಮಲ್ಲಿ ಏನೋ ದುರುದ್ದೇಶ ಅಡಗಿರಬಹುದು ಎಂದು ನೋಡುತ್ತಾರೆ!
ನಾನು ಫೇಸ್‌ಬುಕ್ ಅಥವಾ ಸೋಷಿಯಲ್ ಮೀಡಿಯಾಗಳನ್ನು ಬಹಳ ಗಂಭೀರವಾಗಿ ಪರಿಗಣಿಸುವ ವ್ಯಕ್ತಿ. ಸಾಮಾಜಿಕ ಮಾಧ್ಯಮಗಳನ್ನು ನಕಾರಾತ್ಮಕತೆ ಹರಡುವುದಕ್ಕಿಂತ, ಸಕಾರಾತ್ಮಕತೆ ಹರಡುವುದಕ್ಕೂ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು. ಈ ಕಾರಣಕ್ಕಾಗಿಯೇ, ನನ್ನ ಖಾತೆಯ ನಿರ್ವಹಣೆಯನ್ನು ಸ್ವತಃ ನಾನೇ ಮಾಡುತ್ತೇನೆ. ಏಕೆಂದರೆ, ನನ್ನ ಪಾಲಿಗೆ ಸೋಷಿಯಲ್ ಮೀಡಿಯಾದ ಪ್ರತಿಯೊಂದು ವೇದಿಕೆಯೂ ಸಕಾರಾತ್ಮಕತೆ, ಸೌಹಾರ್ದವನ್ನು ಪಸರಿಸುವ ಮಾಧ್ಯಮವಾಗಿದೆ.
ಫೇಸ್‌ಬುಕ್ ಆಗಲಿ, ಟ್ವಿಟರ್ ಆಗಲಿ, ವಾಟ್ಸಾಪ್ ಅಥವಾ ಇನ್ಯಾವುದೇ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಇರಲಿ…ಹಿರಿಯರಷ್ಟೇ ಅಲ್ಲದೆ, ಚಿಕ್ಕ ಮಕ್ಕಳೊಂದಿಗೂ ಗೌರವಪೂರ್ವಕವಾದ ಮಾತುಕತೆ ನಡೆಸುವುದಕ್ಕೆ ನಾನು ಪೂರ್ತಿ ಪ್ರಯತ್ನ ಪಡುತ್ತೇನೆ. ಈ ಪ್ರಯತ್ನಗಳಿಂದಾಗಿ ಇಂದು ನನ್ನ ಸೋಷಿಯಲ್ ಮೀಡಿಯಾದ ಟೈಂ ಲೈನ್ ಕೂಡ ಸಕಾರಾತ್ಮಕ ಸಂದೇಶಗಳು, ಪರಸ್ಪರ ಗೌರವ, ಪರಿಶುದ್ಧ ಸಂಭಾಷಣೆಯಿಂದಲೇ ಕೂಡಿರುತ್ತದೆ.
ಆಗಲೇ ಹೇಳಿದಂತೆ ಯಾರೇ ಆಗಲಿ ನನ್ನನ್ನು ಫೇಸ್‌ಬುಕ್, ವಾಟ್ಸ್ ಆಪ್‌ನಲ್ಲೇ ಮಾತನಾಡಿಸಲಿ ಅಥವಾ ಮುಖತಃ ಭೇಟಿಯಾಗಲಿ ಅವರನ್ನು ಗೌರವಪೂರ್ಣವಾಗಿ ಮಾತನಾಡಿಸುವ ಅಭ್ಯಾಸ ರೂಢಿಸಿಕೊಂಡಿದ್ದೇನೆ. ಮಾನ್ಯರೇ, ಆದರಣೀಯರೇ, ಶ್ರೀಯುತರೇ ಎಂಬ ನನ್ನ ಪದಬಳಕೆಯನ್ನು ನೋಡಿ ಬಹಳಷ್ಟು ಜನ ಅಚ್ಚರಿಯಿಂದ, “”ನಾವು ನಿಮಗಿಂತ ವಯಸ್ಸಲ್ಲಿ ಚಿಕ್ಕವರು ಅದೇಕೆ ಇಷ್ಟೊಂದು ಗೌರವದಿಂದ ಮಾತನಾಡಿಸುತ್ತೀರಿ?” ಎಂದು ಪ್ರಶ್ನಿಸುತ್ತಾರೆ, ಕೆಲವರಂತೂ ನಾನು ಬೇಕೆಂದೇ ಶ್ರೀಯುತ, ಗೌರವಾನ್ವಿತ ಎಂದು ಕರೆದು ಅವರನ್ನು ಅಣಕಿಸುತ್ತಿದ್ದೇನೆ, ಕೊಂಕು ಮಾತನಾಡುತ್ತಿದ್ದೇನೆ ಎಂದೂ ಭಾವಿಸಿದ್ದುಂಟು!
ದುರಂತವೆಂದರೆ ಇದೇ ಅಲ್ಲವೇ? ಇಂದು ಪ್ರಪಂಚ ಹೇಗಾಗಿಬಿಟ್ಟಿದೆಯೆಂದರೆ ಯಾರಾದರೂ ನಮ್ಮನ್ನು ಗೌರವದಿಂದ ಮಾತನಾಡಿಸಿದರೆ ಅದರಲ್ಲಿ ಏನೋ ದುರುದ್ದೇಶ ಅಡಗಿರಬಹುದು ಎಂದು ನೋಡುವಂತಾಗಿದೆ!
ಅಗೌರವ ತೋರಿಸಿದರೆ ಯಾರೂ ಪ್ರಶ್ನಿಸುವುದಿಲ್ಲ, ಗೌರವಿಸಿದರೆ ಅನುಮಾನಿಸುತ್ತಾರೆ! ನಾನು ಯಾರಿಗೂ ಅವಮಾನಿಸುತ್ತಿಲ್ಲ ಅಥವಾ ಒಳ್ಳೆಯತನದ ನಾಟಕವನ್ನೂ ಮಾಡುತ್ತಿಲ್ಲ. ನಾನು ಗೌರವಪೂರ್ಣವಾಗಿ ಮಾತನಾಡುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದೇನೆಷ್ಟೇ… ಈ ವಿಚಾರ ಪ್ರಸ್ತಾಪವಾದಾಗಲೆಲ್ಲ ನನಗೆ ಬಾಲ್ಯದಲ್ಲಿ ಹಿರಿಯರೊಬ್ಬರು ಹೇಳಿದ್ದ ಕಥೆ ನೆನಪಾಗುತ್ತದೆ.
ರೈತ, ಪರಮೇಶ್ವರ, ಅಭ್ಯಾಸದ ಶಕ್ತಿ
ಒಂದು ಬಾರಿ ಪರಮೇಶ್ವರನಿಗೆ ಯಾವುದೋ ವಿಷಯವಾಗಿ ಮಾನವ ಕುಲದ ಮೇಲೆ ಬಹಳ ಸಿಟ್ಟು ಬಂದಿತಂತೆ. ಹೀಗಾಗಿ ಇನ್ನು ಮುಂದೆ ನಾನು ಢಮರುಗ ಬಾರಿಸುವುದಿಲ್ಲ ಎಂದು ಪರಮೇಶ್ವರ ನಿರ್ಧರಿಸಿಬಿಟ್ಟ !
ಪರಮೇಶ್ವರ ಢಮರುಗ ಬಾರಿಸಲಿಲ್ಲವೆಂದರೆ, ಪೃಥ್ವಿಯ ಮೇಲೆ
ಅಲ್ಲೋಲಕಲ್ಲೋಲವಾಗುತ್ತದೆ ಎಂದು ಉಳಿದ ದೇವತೆಗಳಿಗೆಲ್ಲ ಚಿಂತೆಯಾಯಿತು. ಢಮರುಗ ನಿಂತಿತೆಂದರೆ, ಮೇಘಗಳು ಮರೆಯಾಗಿ ಮಳೆಯೇ ಇಲ್ಲವಾಗುತ್ತದೆ. ಮಳೆಯೇ ಇಲ್ಲವೆಂದರೆ ಭಯಂಕರ ಬರಗಾಲ ಎದುರಾಗುತ್ತದೆ. ತೀವ್ರ ಬರದ ಸಂಕಟಕ್ಕೆ ಮನುಷ್ಯ ಜಾತಿಯೇ ನಿರ್ಮೂಲನೆಯಾಗಿಬಿಡುವ ಅಪಾಯವಿತ್ತು. ದೇವತೆಗಳೆಲ್ಲ ಬಂದು ವಿನಂತಿಸಿದರೂ ಶಿವನ ಮನಸ್ಸು ಬದಲಾಗಲಿಲ್ಲ. ಢಮರುಗವನ್ನು ಜೋಳಿಗೆಯಲ್ಲಿಟ್ಟು ಪರಮೇಶ್ವರ ಸಮಾಧಿ ಸ್ಥಿತಿಗೆ ತೆರಳಿಬಿಟ್ಟ.
ಎರಡು-ಮೂರು ವರ್ಷಗಳಾಗಿಬಿಟ್ಟವು. ಭೂಮಿಯ ಮೇಲೆ ಒಂದೇ ಒಂದು ಹನಿಯೂ ಬೀಳಲಿಲ್ಲ. ಕೊನೆಗೆ ಒಂದು ದಿನ ಪರಮೇಶ್ವರ ತನ್ನ ಸಮಾಧಿ ಸ್ಥಿತಿಯಿಂದ ಹೊರಬಂದ. ಒಮ್ಮೆ ಪೃಥ್ವಿಯ ಪರಿಸ್ಥಿತಿ ಹೇಗಿದೆಯೋ ನೋಡಿಕೊಂಡು ಬರೋಣ ಎಂದು ಪಾರ್ವತಿಯ ಸಂಗಡ ಹೊರಟ.
ಒಂದು ಕುಗ್ರಾಮದಲ್ಲಿ ಪಾರ್ವತಿ-ಪರಮೇಶ್ವರ ನೋಡುತ್ತಾರೆ, ರಣರಣ ಬಿಸಿಲಿನಲ್ಲಿ ರೈತನೊಬ್ಬ, ಒಣಗಿ ಬಿರುಕುಬಿಟ್ಟಿದ್ದ ತನ್ನ ನೆಲದಲ್ಲಿ ನೇಗಿಲು ಹೊಡೆದುಕೊಂಡು ಹೊರಟಿದ್ದ! ರೈತನ ಈ ಕೆಲಸವನ್ನು ನೋಡಿ, ಶಿವ- ಪಾರ್ವತಿಗೆ ಅಚ್ಚರಿಯಾಯಿತು. ಮಾನವ ರೂಪ ಧರಿಸಿದ ಪಾರ್ವತಿ ದೇವಿ, ರೈತನ ಬಳಿ ತೆರಳಿ ಕೇಳಿದಳು- “”ಅಣ್ಣಾ, ನಿನ್ನ ಮೂರ್ಖತನವನ್ನು ನನಗೆ ನೋಡಲಾಗುತ್ತಿಲ್ಲ. ಮಳೆಯಿಲ್ಲದೇ ಮೂರು ವರ್ಷಗಳಾದವು. ಪರಮೇಶ್ವರ ಢಮರುಗ ಬಾರಿಸುವುದನ್ನು ನಿಲ್ಲಿಸಿಬಿಟ್ಟಿದ್ದಾನಂತೆ. ಸನಿಹದ ದಿನಗಳಲ್ಲೂ ಮಳೆಯಾಗುವ ಲಕ್ಷಣ ಕಾಣಿಸುತ್ತಿಲ್ಲ. ನೀನು ವ್ಯರ್ಥವಾಗಿ ಭೂಮಿಗೆ ನಿನ್ನ ಬೆವರು ಚೆಲ್ಲುತ್ತಿದ್ದೀಯಲ್ಲ? ನೀನು ಈ ಪರಿ ಹೈರಾಣಾದ ಮಾತ್ರಕ್ಕೆ ಒಣ ಭೂಮಿಯಲ್ಲಿ ಚಿಗುರು ಚಿಮ್ಮುವುದೇನು? ವ್ಯರ್ಥ ಶ್ರಮಪಟ್ಟು ಪ್ರಾಣ ಕಳೆದುಕೊಳ್ಳುವೆಯಾ?”
ರೈತ ಹೇಳಿದ- “”ತಂಗೀ… ಮಳೆ ಆಗಲಿ, ಆಗದೇ ಇರಲಿ. ನಾವಂತೂ ನಮ್ಮ ಅಭ್ಯಾಸವನ್ನು ನಿಲ್ಲಿಸಬಾರದು. ಅಭ್ಯಾಸ ನಿಂತರೆ ಕೌಶಲ್ಯವು ಕೊನೆಯಾಗಿಬಿಡುತ್ತದೆ. ಒಮ್ಮೆ ಕೌಶಲ್ಯ ಅಂತ್ಯವಾಯಿತೆಂದರೆ, ಆನಂತರ ಎಷ್ಟೇ ಅನುಕೂಲದ ಪರಿಸ್ಥಿತಿಗಳು ಎದುರಾದರೂ, ಅವಕಾಶ ಎದುರಾದರೂ ನಮಗೆ ಅದನ್ನು ಸದುಪಯೋಗಪಡಿಸಿಕೊಳ್ಳಲು ಆಗುವುದಿಲ್ಲ. ಅರ್ಥಪೂರ್ಣ
ವ್ಯವಸ್ಥೆಯಿದ್ದರೂ, ಎಲ್ಲವೂ ವ್ಯರ್ಥವಾಗಿಹೋಗುತ್ತದೆ. ನನಗೆ ಗೊತ್ತಿದೆ, ಈಗಿನ ನನ್ನ ಶ್ರಮಕ್ಕೆ ವರ್ತಮಾನದಲ್ಲಿ ಯಾವ ಮೌಲ್ಯವೂ ಇಲ್ಲ ಎಂದು. ಆದರೆ ನಾನು ನನ್ನ ಕುಶಲತೆಯು ಸಾಯಬಾರದು ಎಂಬ ಕಾರಣಕ್ಕಾಗಿ ಅಭ್ಯಾಸ ಮಾಡುತ್ತಿದ್ದೇನೆ….”
ಇದನ್ನು ಕೇಳಿಸಿಕೊಂಡ ಶಿವನಿಗೆ ಚಿಂತೆ ಆರಂಭವಾಯಿತು. ತಾನೂ ಢಮರುಗ ಬಾರಿಸುವುದನ್ನು ಬಿಟ್ಟು ಮೂರು ವರ್ಷವಾಗಿಹೋಯಿತು, ಜಗತ್ತಿನ ಲಯಕ್ಕೆ ತಕ್ಕಂತೆ ಢಮರುಗ ಬಾರಿಸುವುದನ್ನು ಮರೆತೇಬಿಟ್ಟೆನಾ? ಎಂದು ಭಾವಿಸಿದ ಪರಮೇಶ್ವರ ತನ್ನ ಜೋಳಿಗೆಯಿಂದ ಢಮರುಗ ತೆಗೆದು ಬಾರಿಸಲಾರಂಭಿಸಿದ. ಆ ಢಮರುಗದ ಸದ್ದಿಗೆ ತಕ್ಕಂತೆ ಮೇಘಗಳು ಗರ್ಜಿಸಲಾರಂಭಿಸಿದವು. ನೋಡನೋಡುತ್ತಲೇ ಧೋ ಎಂದು ಮಳೆ ಸುರಿಯಲಾರಂಭಿಸಿತು.
ರೈತ ಪ್ರಸನ್ನನಾದ. ಆತನ ದೃಷ್ಟಿ ಢಮರುಗ ಬಾರಿಸುತ್ತಿದ್ದ ಮನುಷ್ಯ ವೇಷದಲ್ಲಿದ್ದ ಶಿವನತ್ತ ಹರಿಯಿತು. ಆನಂತರ ಆತ ಪಾರ್ವತಿಯತ್ತ ನೋಡಿ ಅಂದ- “”ನೋಡಿದೆಯಾ ತಂಗಿ, ಪ್ರಾಮಾಣಿಕತೆಯಿಂದ ಹಾಕಿದ ಶ್ರಮ ಎಂದಿಗೂ ವ್ಯರ್ಥವಾಗುವುದಿಲ್ಲ. ನಿನ್ನ ಗಂಡನ ವೇಷಭೂಷಣ, ಢಮರುಗ ನೋಡಿದರೆ, ಅವರು ಮಂಗನಾಟ ಆಡಿಸುವವರು ಅಂತ ಗೊತ್ತಾಗುತ್ತದೆ. ಅವರಿಗೆ ಹೇಳು, ಅವರ ಬಳಿ ಮಂಗಗಳು ಇರಲಿ, ಇಲ್ಲದಿರಲಿ…ಢಮರುಗ ಬಾರಿಸುವ ಅಭ್ಯಾಸವನ್ನು ಮಾತ್ರ ನಿಲ್ಲಿಸಬೇಡ ಅಂತ!”
ಫೇಸ್‌ಬುಕ್‌ನಲ್ಲಾಗಲಿ ಅಥವಾ ಯಾವುದೇ ಸಾಮಾಜಿಕ ಮಾಧ್ಯಮಗಳಲ್ಲಾಗಲಿ… ನನ್ನೊಡನೆ ಮಾತನಾಡುವವರಿಗೆ ನಾನು ಶ್ರೀಯುತರೇ, ಆತ್ಮೀಯರೆ, ಪ್ರಣಾಮ, ಸಾದರ ಪ್ರಣಾಮ ಎಂಬ ಪದ ಬಳಸುವುದು “ಗೌರವದ’ ಅಭ್ಯಾಸ ತಪ್ಪದಿರಲಿ ಎಂಬ ಕಾರಣಕ್ಕಾಗಿ. ಅಕಾಲದ ಸಮಯದಲ್ಲೂ ಈ ಅಭ್ಯಾಸವು ನನ್ನನ್ನು, ನನ್ನ ಜತೆ ಮಾತನಾಡುವವರನ್ನು ಪ್ರಸನ್ನತೆಯಿಂದ ಇಡುತ್ತದೆ ಎಂಬ ನಂಬಿಕೆ ನನ್ನದು. ಶುಭಂ ಭವತು!
ನನ್ನ ಪಾಲಿಗೆ ಸೋಷಿಯಲ್ ಮೀಡಿಯಾದ ಪ್ರತಿಯೊಂದು ವೇದಿಕೆಯೂ ಸಕಾರಾತ್ಮಕತೆ, ಸೌಹಾರ್ದವನ್ನು ಪಸರಿಸುವ ಮಾಧ್ಯಮವಾಗಿದೆ.
ರಣರಣ ಬಿಸಿಲಿನಲ್ಲಿ ರೈತನೊಬ್ಬ, ಒಣಗಿ ಬಿರುಕುಬಿಟ್ಟಿದ್ದ ತನ್ನ ನೆಲದಲ್ಲಿ ನೇಗಿಲು ಹೊಡೆದುಕೊಂಡು ಹೊರಟಿದ್ದ! ಇದನ್ನು ನೋಡಿ ಶಿವ-ಪಾರ್ವತಿಗೆ ಆಶ್ಚರ್ಯವಾಯಿತು
ಅಭ್ಯಾಸ ನಿಂತರೆ ಕೌಶಲ್ಯ ಕೊನೆಯಾಗುತ್ತದೆ. ಕೌಶಲ್ಯ ಅಂತ್ಯವಾಯಿತೆಂದರೆ, ಮುಂದೆ ಅವಕಾಶ ಬಂದರೂ ಸದುಪಯೋಗಪಡಿಸಿಕೊಳ್ಳಲು ಆಗುವುದಿಲ್ಲ.
ಅಶುತೋಷ್ ರಾಣಾ, ಹಿಂದಿ-ಮರಾಠಿ ನಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.