ಮಗುವನ್ನು ಹಂಗಿಸುವಂತಿರುವ ವೀಡಿಯೊ; ಶಿಕ್ಷಕರು ಇಂಥ ತಪ್ಪು ಮಾಡಬಾರದು
Team Udayavani, Jan 11, 2020, 6:26 AM IST
ಶಿಕ್ಷಕನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಬರೆದಿರುವ ಪತ್ರ.
ಶಿಕ್ಷಕರು ಇರುವುದೇ ಮಕ್ಕಳ ತಪ್ಪುಗಳನ್ನು ತಿದ್ದಿತೀಡಿ ಸರಿಮಾಡಲು. ತಪ್ಪನ್ನೇ ವ್ಯಂಗ್ಯವಾಗಿ ಬಿಂಬಿಸಿ ಪ್ರಸಾರ ಮಾಡುವುದು ನಿಜಕ್ಕೂ ಅಮಾನವೀಯ. ಇದರಿಂದ ಆ ಮಗುವಿನ ಆತ್ಮಸ್ಥೈರ್ಯವೇ ಕುಸಿಯುವ ಸಾಧ್ಯತೆಯಿದೆ. ಎಲ್ಲ ಶಿಕ್ಷಕರೂ ಅಲ್ಲದಿದ್ದರೂ ಕೆಲವು ಶಿಕ್ಷಕರಿಗೆ ಈ ಕೆಟ್ಟ ಅಭ್ಯಾಸ ಇರುತ್ತದೆ.
ಶಾಲೆಯಲ್ಲಿ ಮಗುವೊಂದು ಶಿಕ್ಷಕರು ಹೇಳಿಕೊಟ್ಟ ಪಕ್ಕೆಲುಬು ಎಂಬ ಶಬ್ದವನ್ನು ಸರಿಯಾಗಿ ಉಚ್ಚರಿಸಲು ಕಷ್ಟಪಡುತ್ತಿರುವ ಒಂದು ವೀಡಿಯೊ ತುಣುಕು ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಒಂದು ರೀತಿಯಲ್ಲಿ ಆ ಮಗುವನ್ನು ಹಂಗಿಸುವಂತಿದ್ದ ಈ ವೀಡಿಯೊವನ್ನು ಯಾರು ಚಿತ್ರೀಕರಿಸಿದ್ದಾರೆ ಮತ್ತು ಯಾರು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿದ್ದಾರೆ ಎನ್ನುವುದು ತನಿಖೆಯಿಂದ ಪತ್ತೆಯಾಗಬೇಕಷ್ಟೆ. ಆದರೆ ತರಗತಿ ಕೊಠಡಿಯೊಳಗೆ ನಡೆದಿರುವ ಘಟನೆಯಾಗಿರುವ ಕಾರಣ ಇದನ್ನು ಯಾರೋ ಶಿಕ್ಷಕರೇ ಚಿತ್ರೀಕರಿಸಬೇಕೆಂದೇ ನಂಬಲಾಗಿದೆ. ಇದೊಂದು ಚಿಕ್ಕ ಘಟನೆಯೇ ಆಗಿರಬಹುದು. ಆದರೆ ಎರಡು ವಿಚಾರಗಳ ಕುರಿತಾದ ಚರ್ಚೆಯನ್ನು ಇದು ಮುನ್ನೆಲೆಗೆ ತರುತ್ತದೆ, ಒಂದು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿರುವ ಲೋಪ ಮತ್ತು ಇನ್ನೊಂದು ಸಾಮಾಜಿಕ ಮಾಧ್ಯಮಗಳ ವಿವೇಚನಾರಹಿತ ಬಳಕೆ.
ಸಾಮಾಜಿಕ ಮಾಧ್ಯಮಗಳ ವಿವೇಚನಾರಹಿತ ಬಳಕೆಯ ಬಗ್ಗೆ ಈಗಾಗಲೇ ಟನ್‌ಗಟ್ಟಲೆ ದೂರುಗಳಿವೆ. ಶಿಕ್ಷಣ ಎಂದಲ್ಲ ಎಲ್ಲ ಕ್ಷೇತ್ರಗಳಲ್ಲೂ ಇದು ಇದ್ದದ್ದೇ. ಈ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಆದರೆ ಶಿಕ್ಷಕರು ಸಾಮಾಜಿಕ ಮಾಧ್ಯಮಗಳನ್ನು ಬಳಸುವಾಗ ತುಸುವಾದರೂ ವಿವೇಚನೆ ತೋರಿಸಬೇಕು ಎನ್ನುವುದನ್ನು ಮಾತ್ರ ಈ ಘಟನೆ ಒತ್ತಿ ಹೇಳುತ್ತದೆ.
ಇಲ್ಲಿ ಹೇಳಿರುವ ಘಟನೆಗೆ ಸಂಬಂಧಪಟ್ಟಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಕೈಗೊಂಡ ಕ್ರಮವನ್ನು ಮೆಚ್ಚಿಕೊಳ್ಳಬೇಕು. ಹೀಗೊಂದು ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ ಎಂಬ ವಿಚಾರ ತಿಳಿಯುತ್ತಲೇ ಯಾರೂ ದೂರು ನೀಡದಿದ್ದರೂ ಸ್ವಯಂಪ್ರೇರಣೆಯಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲು ಸೈಬರ್ ಕ್ರೈಂ ವಿಭಾಗಕ್ಕೆ ಸೂಚಿಸಿದ್ದಾರೆ.
ಮಕ್ಕಳು ತಪ್ಪು ಉಚ್ಚಾರ ಮಾಡುವುದು ಸಹಜ. ನಿರಂತರವಾಗಿ ಕಲಿಕೆಯ ಬಳಿಕ ಉಚ್ಛಾರ ಸರಿಯಾಗುತ್ತದೆ. ಶಿಕ್ಷಕರು ಇರುವುದೇ ಮಕ್ಕಳ ತಪ್ಪುಗಳನ್ನು ತಿದ್ದಿತೀಡಿ ಸರಿಮಾಡಲು. ತಪ್ಪನ್ನೇ ವ್ಯಂಗ್ಯವಾಗಿ ಬಿಂಬಿಸಿ ಪ್ರಸಾರ ಮಾಡುವುದು ನಿಜಕ್ಕೂ ಅಮಾನವೀಯ. ಇದರಿಂದ ಆ ಮಗುವಿನ ಆತ್ಮಸ್ಥೈರ್ಯವೇ ಕುಸಿಯುವ ಸಾಧ್ಯತೆಯಿದೆ. ಎಲ್ಲ ಶಿಕ್ಷಕರೂ ಅಲ್ಲದಿದ್ದರೂ ಕೆಲವು ಶಿಕ್ಷಕರಿಗೆ ಈ ಅಭ್ಯಾಸ ಇರುತ್ತದೆ. ಮಕ್ಕಳ ತಪ್ಪನ್ನು ಪದೇ ಪದೆ ಎತ್ತಿ ತೋರಿಸುವುದು, ತಪ್ಪುಗಳನ್ನೇ ದೊಡ್ಡದಾಗಿ ಬಿಂಬಿಸಿ ಹೆದರಿಸುವುದು, ತಮಾಷೆ ಮಾಡುವುದು ಇತ್ಯಾದಿ ಕೃತ್ಯಗಳಿಂದ ಅವರು ತಾವೇನೋ ಸಾಧಿಸುತ್ತೇವೆ ಎಂದು ಭಾವನೆ ಹೊಂದಿರಬಹುದು. ಆದರೆ ಇದರಿಂದ ಮಕ್ಕಳ ಮುಗ್ಧ ಮನಸ್ಸಿನ ಪರಿಣಾಮದ ಬಗ್ಗೆ ಅವರು ಆಲೋಚಿಸುವುದಿಲ್ಲ.
ಇದಕ್ಕೆ ಪೂರ್ಣವಾಗಿ ಶಿಕ್ಷಕರನ್ನೇ ಹೊಣೆ ಮಾಡುವುದೂ ಸರಿಯಾಗುವುದಿಲ್ಲ. ಏಕೆಂದರೆ ನಮ್ಮ ಶಿಕ್ಷಣ ವ್ಯವಸ್ಥೆಯ ಪಾಲೂ ಇಲ್ಲಿದೆ. ಮುಖ್ಯವಾಗಿ ಶಿಕ್ಷಕರ ತರಬೇತಿಗೆ ಸಂಬಂಧಪಟ್ಟಂತೆ ನಮ್ಮ ಸಾಧನೆ ಏನೇನೂ ಸಾಲದು. ವೃತ್ತಿಪರವಾದ, ಗುಣಮಟ್ಟದ ತರಬೇತಿ ಪಡೆದ ಶಿಕ್ಷಕರ ಕೊರತೆ ದೇಶದ ಎಲ್ಲೆಡೆ ಇರುವ ಒಂದು ಸಾಮಾನ್ಯ ಸಮಸ್ಯೆ. ಶಿಕ್ಷಣ ಹಕ್ಕು ಕಾಯಿದೆಯ ಪರಿಚ್ಛೇದ 23 ಸರಕಾರಿ ಶಾಲಾ ಶಿಕ್ಷಕರು ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ ನಿಗದಿಪಡಿಸಿರುವ ಕನಿಷ್ಠ ವಿದ್ಯಾರ್ಹತೆ ಹೊಂದಿರುವುದನ್ನು ಕಡ್ಡಾಯಗೊಳಿಸಿದೆ. ಶಿಕ್ಷಕರಿಗೆ ತರಬೇತಿ ನೀಡಲು ಶಿಕ್ಷಣ ಇಲಾಖೆಯೇ ವಿವಿಧ ಕಾರ್ಯಕ್ರಮಗಳನ್ನೂ, ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಿದೆ. ಅದಾಗ್ಯೂ 2015-16ರ ಅಂಕಿ ಅಂಶದ ಪ್ರಕಾರ ಪ್ರಾಥಮಿಕ ಮಟ್ಟದಲ್ಲಿರುವ 66 ಲಕ್ಷ ಶಿಕ್ಷಕರ ಪೈಕಿ 1.1 ಶಿಕ್ಷಕರು ತರಬೇತಿ ರಹಿತರು. ಈ ಪೈಕಿ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 5,12,000 ಮತ್ತು ಖಾಸಗಿ ಶಾಲೆಗಳಲ್ಲಿ 5,98,000 ಶಿಕ್ಷಕರಿದ್ದಾರೆ ಎನ್ನುತ್ತಿದೆ ಈ ವರದಿ. ಸರಕಾರಿ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸಲು ಕೆಲವು ಕಠಿನ ನಿಯಮಾವಳಿಗಳಾದರೂ ಇವೆ. ಖಾಸಗಿ ಶಾಲೆಗಳಿಗೆ ಶಿಕ್ಷಕರ ನೇಮಕಾತಿಗೆ ಇಂಥ ನಿಯಮಗಳೇನೂ ಇಲ್ಲ. ಶಿಕ್ಷಕರಾದವರು ಟಿಸಿಎಚ್, ಬಿಎಡ್, ಡಿಎಡ್‌ನಂಥ ಕೋರ್ಸ್‌ಗಳನ್ನು ಮಾಡಿರಬೇಕೆಂಬ ನಿಯಮಗಳಿದ್ದರೂ ಅವುಗಳು ಪಾಲಿಸುವುದಿಲ್ಲ. ಚೆನ್ನಾಗಿ ಇಂಗಿಷ್ ಓದಲು, ಮಾತನಾಡಲು ತಿಳಿದರೆ ಸಾಕು ಅವರಿಗೆ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಶಿಕ್ಷಕರ ನೌಕರಿ ಸಿಗುತ್ತದೆ. ಕಡಿಮೆ ಸಂಬಳಕ್ಕೆ ದುಡಿಯುತ್ತಾರೆ ಎಂಬ ಕಾರಣಕ್ಕೆ ಶಾಲೆಗಳು ಇವರನ್ನು ನೇಮಿಸಿಕೊಳ್ಳುತ್ತವೆ. ಶಿಕ್ಷಕರು ಕಲಿಸುವುದನ್ನು ಒಂದು ಪವಿತ್ರ ಕಾರ್ಯ ಎಂದು ಭಾವಿಸದೆ, ಉಳಿದಂತೆ ಇದು ಕೂಡ ಬದುಕಲು ಇರುವ ಒಂದು ನೌಕರಿ ಎಂದು ಭಾವಿಸಿದರೆ ಇಂಥ ಅಪಸವ್ಯಗಳಾಗುತ್ತವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.