ಹೊಸ್ತೋಟ ಮಂಜುನಾಥ ಭಾಗವತರು; ಅನಿಕೇತನದ ಚೇತನ
Team Udayavani, Jan 12, 2020, 6:04 AM IST
1983ರಲ್ಲಿ ಕೊಲ್ಕತಾದಲ್ಲಿ ಬಿ. ವಿ. ಕಾರಂತರ ನಿರ್ದೇಶನದ ವಾಲಿವಧೆ- ಚೂಡಾಮಣಿ ಯಕ್ಷಗಾನ ಪ್ರದರ್ಶನದಲ್ಲಿ ಹಾಡುತ್ತಿರುವ ಹೊಸ್ತೋಟ ಮಂಜುನಾಥ ಭಾಗವತರು.
ಯಕ್ಷಋಷಿ ಎಂಬ ಬಿರುದಿಗೆ ಪಾತ್ರರಾದ ಹೊಸ್ತೋಟ ಮಂಜುನಾಥ ಭಾಗವತರು ಇತ್ತೀಚೆಗೆ ನಮ್ಮನ್ನಗಲಿದ್ದಾರೆ. 1940ರಲ್ಲಿ ಉತ್ತರಕನ್ನಡ ಜಿಲ್ಲೆಯ ಹನ್ಮಂತಿ ಹೊಸ್ತೋಟದಲ್ಲಿ ಜನಿಸಿದ ಅವರು ತಮ್ಮ ಎಂಟು ದಶಕಗಳ ಬದುಕನ್ನು ಕಲೆಗೆ ಸಮರ್ಪಿಸಿಕೊಂಡವರು. 250ಕ್ಕೂ ಅಧಿಕ ಪ್ರಸಂಗಗಳನ್ನು ರಚಿಸಿದ್ದರು. ರಾಮಕೃಷ್ಣಾಶ್ರಮದ ಅನುಯಾಯಿಯಾಗಿ ರಾಮಕೃಷ್ಣ ಚರಿತೆ ಮಹಾಕಾವ್ಯವನ್ನು ಹೊಸೆದಿದ್ದರು.
ಯಕ್ಷಗಾನಕ್ಕೆ ಸಂಬಂಧಿಸಿ ಅನೇಕ ಸಂಶೋಧನ ಲೇಖನಗಳನ್ನು ಬರೆದಿದ್ದರು. ಒಡಲಿನ ಮಡಿಲು- ಯಕ್ಷತಾರೆ, ಪವಾಡವಲ್ಲ ವಿಸ್ಮಯ ಮೊದಲಾದ ಅನುಭವ ಕೃತಿಗಳನ್ನು ಬರೆದಿದ್ದರು. ಇತ್ತೀಚೆಗೆ ಅವರ ವಿದ್ವತೂ³ರ್ಣ ಕೃತಿ ಯಕ್ಷಗಾನ ಶಿಕ್ಷಣ ಲಕ್ಷಣ ಪ್ರಕಟವಾಗಿದೆ. ಯಕ್ಷಗಾನದ ವಿವಿಧ ಅಂಗಗಳಲ್ಲಿ ಪರಿಣತರಾಗಿದ್ದ ಅವರು ಪ್ರದರ್ಶನ-ಪ್ರಯೋಗಗಳಲ್ಲಿ ಸಾಧನೆ ಮಾಡಿದ್ದರು.
ಕುವೆಂಪು ಅವರ ಒಂದು ಉಕ್ತಿ ಇದು- ಆಗು ನೀ ಅನಿಕೇತನ!
ಹಾಗೆಂದು ಎಲ್ಲರೂ ನಿಕೇತನರೇ. ಯಾರು ಮನೆ ಕಟ್ಟಿಕೊಳ್ಳುವುದಿಲ್ಲ ಹೇಳಿ! ಎಲ್ಲರಿಗೂ ತಲೆಯ ಮೇಲೊಂದು ಸೂರು ಬೇಕು. ಹಾಗಾಗಿಯೇ, ನಮ್ಮೆಲ್ಲರಿಗಿಂತ ಬೇರೆಯಾಗಿ ನಿಲ್ಲುವವರು ಹೊಸ್ತೋಟ ಮಂಜುನಾಥ ಭಾಗವತರು. ಅವರನ್ನು ಎಲ್ಲಿದ್ದಾರೆ ಎಂದು ಕಂಡು ಹಿಡಿಯುವುದೇ ಕಷ್ಟವಾಗಿತ್ತು. ಹುಟ್ಟಿ ಬೆಳೆದ ಹೊಸ್ತೋಟವನ್ನು ಎಂದೋ ಬಿಟ್ಟುಬಂದವರವರು. ಹಾಗಾಗಿ, ನಿಂತಲ್ಲಿ ನೆಲೆ. “ಹೊಸ್ತೋಟರವರಲ್ಲಿ ಮಾತನಾಡಬೇಕಿತ್ತು. ಎಲ್ಲಿದ್ದಾರೆ ಗೊತ್ತೆ ?’ ಎಂದು ಕೆಲವರು ನನಗೆ ಫೋನ್ ಮಾಡುತ್ತಾರೆ. “ಕೆರೆಮನೆಯಲ್ಲಿರಬಹುದು’ ಎಂದು ಅವರಿಗೆ ಯಾರೋ ಮಾಹಿತಿ ಕೊಟ್ಟಿರಬಹುದು. ಆದರೆ, ಭಾಗವತರು ನಮ್ಮಲ್ಲಿಗೆ ಬಂದಿರುವುದಿಲ್ಲ. ನಾನು, “ಕೆರೆಕೊಪ್ಪ ಸುಬ್ರಾಯ ಹೆಗಡೆಯವರಿಗೆ ಗೊತ್ತಿರಬಹುದು’ ಎನ್ನುತ್ತೇನೆ. ಉಡುಪಿಯ ಮುರಲಿ ಕಡೆಕಾರ್ ಅವರಲ್ಲಿ ಕೇಳಿ ಎಂದು ಇನ್ನೊಬ್ಬರು ಹೇಳುತ್ತಾರೆ. ಬೆಳಿಯೂರು ರಂಗಣ್ಣನವರಿಗೋ ಹಂದಿಮುಲ್ಲೆ ಕೆ. ವಿ. ಹೆಗಡೆಯವರಿಗೋ ಶ್ರೀಪಾದ ಜೋಶಿಯವರಿಗೋ ಭೈರುಂಬೆ ನಾರಾಯಣ ಹೆಗಡೆಯವರಿಗೋ ತಿಳಿದಿರಬಹುದು ಎಂದು ಹಲವರು. ಅಂತೂ ಕಡೆಗೆ ಒಂದು ಕಡೆಯಲ್ಲಿ ಸಿಕ್ಕಿಯೇ ಸಿಗುತ್ತಾರೆ. ಅದೂ ಶ್ರಾವಣವಾದರೆ, ಮೌನವ್ರತಿ. ಮಾತಿಲ್ಲ ಕತೆಯಿಲ್ಲ. ಕೈಯಲ್ಲಿ ಮೊಬೈಲ್ ಮೊದಲೇ ಇಲ್ಲ. ಹಾಗೆಂದು, ಅವರಿಗೆ ಒಂಟಿತನ ಎಂಬುದಿಲ್ಲ. ಜೊತೆಗೆ ಯಕ್ಷಗಾನ ಎಂಬ ಸಂಗಾತಿ ಇರುವಾಗ ಒಂಟಿತನ ಕಾಡುವುದಾದರೂ ಹೇಗೆ?
ಕೊನೆಗೂ ಗೋಕರ್ಣದಿಂದ ಯಲ್ಲಾಪುರದ ನಡುವೆ ಮೋತಿಗುಡ್ಡ ಎಂಬದಲ್ಲಿ ಪುಟ್ಟದೊಂದು ಕುಟೀರ ಕಟ್ಟಿ ನೆಲೆಸುವಂತಾದರು- ಅದು ಅಭಿಮಾನಿ ಬಂಧುಗಳ ಒತ್ತಾಯದ ಮೇರೆಗೆ. ಆದರೆ, ಕುಟೀರದಲ್ಲಿ ಕೂರುವುದೇ ಅಪರೂಪ. ಕಾಲಕ್ಷೇಪವೆಲ್ಲ ಹೊರಗೆ ಅರಳಿಕಟ್ಟೆಯ ಮೇಲೆಯೇ. ಅವರ ಬದುಕಿನ ಕಾಣೆRಯೂ ಅಂತೆಯೇ ಇದೆ. ಅವರ ಚಿಂತನೆಗಳೆಂಬ ಆಲಯಗಳೂ ಬಾಗಿಲುಗಳಿಲ್ಲದ, ಗೋಡೆಗಳಿಲ್ಲದ, ಛಾವಣಿಯಿಲ್ಲದ ಮುಕ್ತಬಯಲು! ಯಕ್ಷಗಾನದ ಪೌರಾಣಿಕ ಚೌಕಟ್ಟಿನ ಬಗ್ಗೆ ಪರಂಪರೆಯ ಕುರಿತು ಬದ್ಧತೆಯನ್ನು ಹೊಂದಿದವರಾಗಿದ್ದರೂ ನಿಲುವನ್ನು ಹೊಂದಿದವರಾಗಿದ್ದರೂ ಪರಿಸರ ಸಂಧಾನ ಎಂಬ ಸಮಕಾಲೀನ ವಸ್ತುವಿನ ಕುರಿತ ಪ್ರಸಂಗ ಬರೆದರು. ಯಕ್ಷಗಾನ ಎಂಬ ದೃಶ್ಯ ಕಲೆಯನ್ನು ಅಂಧರಿಗೂ ಕಲಿಸುವುದರ ಮೂಲಕ ನೋಟಕ್ಕೆ ಅತೀತವಾಗಿ ಕಲೆಯ ಸಂವೇದನೆಯ ಹೊಂದುವ ಸಾಧ್ಯತೆಯನ್ನು ಯಕ್ಷಗಾನದಲ್ಲಿ ತೋರಿಸಿದರು. ಹೊಸ್ತೋಟ ಭಾಗವತರು ಷೇಕ್ಸ್ ಪಿಯರ್‌ನ ನಾಟಕವನ್ನು ಯಕ್ಷಗಾನಕ್ಕೆ ರೂಪಾಂತರಿಸಿದ್ದನ್ನು ಕಂಡರೆ ಯಾರೂ ಆಶjರ್ಯ ಪಡಬೇಕು. “ಯಕ್ಷಗಾನ ಎಂಬುದು ಗಂಡು ಕಲೆ’ ಎಂಬ ಕ್ಲೀಷೆಯ ಮಾತನ್ನು ಆಡುವವರಿಗೆ ಪ್ರತಿಪಕ್ಷವಾಗಿ ಹೆಣ್ಣುಮಕ್ಕಳಿಗೆ ಯಕ್ಷಗಾನ ಹೇಳಿಕೊಟ್ಟರು. ಯಕ್ಷಗಾನ ಮೇಲ್ವರ್ಗಕ್ಕೆ ಸೀಮಿತವಾಗಬಾರದು ಎಂಬ ಕಾರಣಕ್ಕೆ ಎಲ್ಲ ವರ್ಗದ ಆಸಕ್ತರಿಗೂ ಹೆಜ್ಜೆ ಕಲಿಸಿದರು. ದಲಿತರು ಹೇಳಿದ ಕತೆಗೆ ಯುಕ್ತವಾದ ಪದ್ಯ ಬರೆದು, ಆ ಪ್ರಸಂಗ ಬಿಡುಗಡೆಯ ಸಂದರ್ಭದಲ್ಲಿ ಕಥನಕಾರನನ್ನು ಸಂಮಾನಿಸಿದರು.
ಯಕ್ಷಗಾನದ ಶಿಕ್ಷಣದ ಕುರಿತ ಹೊಸ್ತೋಟರವರ ಯೋಚನೆಯ ಕ್ರಮ ಪ್ರಯೋಗಶೀಲವಾದುದು. ಅವರ ಪ್ರಕಾರ ಕಲಿಕೆ ಒಂದು ಪ್ರಕ್ರಿಯೆ. ಮಕ್ಕಳ ಪಾಲಿಗೆ ಆಟವೆನ್ನಿಸುವಂಥ ಸರಳ ಯಕ್ಷಗಾನ ಶಿಕ್ಷಣ ಕ್ರಮವನ್ನು ರೂಪಿಸಿದರು.
ನಮ್ಮ ಕೆರೆಮನೆ ಮನೆತನಕ್ಕೂ ಹೊಸ್ತೋಟ ಮಂಜುನಾಥ ಭಾಗವತರಿಗೂ ಹತ್ತಿರದ ಸಂಬಂಧ. ಅವರು ನಮ್ಮ ಮನೆಯ ಸದಸ್ಯನೇನೋ ಎಂಬಂತೆ ನಮ್ಮ ಜೊತೆಗಿದ್ದರು. ನನ್ನ ಅಜ್ಜ ಶಿವರಾಮ ಹೆಗಡೆಯವರ ಬಗ್ಗೆ ಹೊಸ್ತೋಟರಿಗೆ ಗುರುಗೌರವ. ಅವರ ಉತ್ಕಟ ಅಭಿಮಾನಿಯೂ ಹೌದು. ಶಿವರಾಮ ಹೆಗಡೆಯವರು ಒಮ್ಮೆ ಹೊಸ್ತೋಟರವರನ್ನು ಕರೆದು ಹೇಳಿದರಂತೆ: “”ನೀನು ನನ್ನ ಅಭಿಮಾನಿಯಾಗುವುದು ಬೇಡ. ಯಕ್ಷಗಾನದ ಅಭಿಮಾನಿಯಾದರೆ ಸಾಕು!” ಅಂತ.
ಹೊಸ್ತೋಟ ಭಾಗವತರು ಮುಂದೆ ಯಕ್ಷಗಾನದ ಕುರಿತ ಅಧ್ಯಯನ, ಸಂಶೋಧನೆ ಮತ್ತು ಚಿಂತನೆಗಳಲ್ಲಿ ತೊಡಗಿಸಿಕೊಂಡರು. ಶಿವರಾಮ ಹೆಗಡೆಯವರ ಮಾತನ್ನು ಹೊಸ್ತೋಟ ಭಾಗವತರು ಸದಾ ನೆನಪಿಸಿಕೊಳ್ಳುತ್ತಿದ್ದರು. ಸಮಷ್ಟಿ ಕಲಾಸ್ವಾದನೆಗಿಂತ ವ್ಯಕ್ತಿಪೂಜೆಗೆ ಹೆಚ್ಚು ಒತ್ತು ನೀಡುತ್ತಿರುವ ದಿನಗಳಲ್ಲಿ ಆ ಮಾತು ಸ್ಮರಣೀಯವೇ.
ಸಂಪ್ರದಾಯ ವಿರೋಧಿಯಾಗಿರಲಿಲ್ಲ ಅವರು. ಹಾಗೆಂದು, ಪ್ರಶ್ನಿಸದೇ ಒಪ್ಪಿಕೊಳ್ಳುವವರಲ್ಲ. ಹಾಗಾಗಿ, ಅವರ ಚಿಂತನೆಗಳು ಕೆರೆಮನೆಯವರ ಮನೋಧರ್ಮದೊಂದಿಗೆ ಹೊಂದಿಕೆಯಾಗುತ್ತಿತ್ತು. ಅವರು, ಕೆರೆಮನೆ ಮಹಾಬಲ ಹೆಗಡೆಯವರನ್ನು , ಕೆರೆಮನೆ ಶಂಭು ಹೆಗಡೆಯವರನ್ನು ತುಂಬಾ ಮೆಚ್ಚಿಕೊಂಡಿದ್ದರು. ಆದರೆ, ಅವರ ಪಾತ್ರ ಪ್ರಸ್ತುತಿಯನ್ನು ವಿಮರ್ಶೆ ಮಾಡದೇ ಬಿಡುತ್ತಿರಲಿಲ್ಲ. ಹೊಸ್ತೋಟ ಭಾಗವತರು ಶ್ರೀರಾಮ ನಿರ್ಯಾಣ ಪ್ರಸಂಗ ಬರೆದಾಗ ಅದನ್ನು ಸಮರ್ಥವಾಗಿ ರಂಗದ ಮೇಲೆ ತರುವವರಾರು ಎಂದು ನಿರೀಕ್ಷಿಸುತ್ತಿದ್ದರಂತೆ. ಮುಂದೆ, ಶಂಭು ಹೆಗಡೆಯವರ ರಾಮ ಪಾತ್ರ ನೋಡಿ ನನ್ನಲ್ಲಿ ಸಾರ್ಥಕ ಭಾವವನ್ನು ಅನುಭವಿಸಿದರಂತೆ.
1995-96ರ ಆಸುಪಾಸಿನಲ್ಲಿ ಅವರು ನಮ್ಮ ಮನೆಗೆ ಬರುತ್ತಿದ್ದಾಗ ಅವರ ಗುರುತ್ವದ ಘನತೆಯನ್ನು ಅನುಭವಿಸಿದ್ದೇನೆ. ಬಡಾಬಡಗು ಪಾರಂಪರಿಕ ಶೈಲಿಯ ಬಗ್ಗೆ ಹಲವನ್ನು ನನಗೆ ಅವರೇ ಹೇಳಿಕೊಟ್ಟರು. ನನ್ನ ಯಕ್ಷಗಾನ ಪ್ರಯೋಗಗಳನ್ನು ಅವರು ನೇರವಾಗಿ ಹೊಗಳಿದ್ದಿಲ್ಲ. ಪರೋಕ್ಷವಾಗಿ ಕೆಲವರಲ್ಲಿ ಒಳ್ಳೆಯ ಮಾತುಗಳನ್ನಾಡಿದ್ದರೆಂದು ಕೇಳಿದ್ದೇನೆ. ಮುಖ್ಯವಾಗಿ ವಾಲಿಮೋಕ್ಷ ಅವರಿಗೆ ತುಂಬ ಇಷ್ಟವಾಗಿತ್ತಂತೆ. ನನಗೂ ಒಂದು ಬಗೆಯ ಧನ್ಯತಾಭಾವ.
ಯಕ್ಷಗಾನದ ಎಲ್ಲ ವಿಭಾಗಗಳ ಕುರಿತು ಅನುಭವವಿದ್ದರೂ ಅವರು ವ್ಯವಸಾಯಿ ಮೇಳಗಳಲ್ಲಿ ದೀರ್ಘ ಅವಧಿಯ ತಿರುಗಾಟ ನಡೆಸಿದವರಲ್ಲ. ಆಗೊಮ್ಮೆ ಈಗೊಮ್ಮೆ ಅವರು ಭಾಗವತರಾಗಿ ಭಾಗವಹಿಸಿರಬಹುದು. ಯಕ್ಷಗಾನವೆಂದರೆ ರಂಗಸ್ಥಳದ ಮೇಲಿನ ಚಟುವಟಿಕೆ ಎಂಬಷ್ಟಕ್ಕೇ ಸೀಮಿತವಾಗಿತ್ತು. ಹೊಸ್ತೋಟ ಭಾಗವತರು ರಂಗದ ಮೇಲೆ ಕಲಾವಿದರಾಗಿರುವುದಕ್ಕಿಂತ ರಂಗದ ಹೊರವಲಯದಲ್ಲಿ ವಿಚಾರಶೀಲರಾಗಿ ಪ್ರವೃತ್ತರಾಗಿದ್ದರು. ಒಂದರ್ಥದಲ್ಲಿ ಯಕ್ಷಗಾನಕ್ಕೆ ಸಂಪೂರ್ಣ ಸಮರ್ಪಿತ ಬದುಕು ಅವರದು. ರಂಗದ ಮೇಲೆ ಕುಣಿಯುವ ಕಲಾವಿದರಿಗೆ ಜನಪ್ರಿಯತೆ ಬರುವುದು ಸಹಜ. ಆದರೆ, ರಂಗಸ್ಥಳದ ಹೊರಗೆ ಯಕ್ಷಗಾನದ ಕುರಿತು ಲೇಖನ ಬರೆಯುವವರಿಗೆ, ಉಪನ್ಯಾಸ ನೀಡುವವರಿಗೆ, ಸಂಶೋಧನೆ ನಡೆಸುವವರಿಗೆ ಸ್ಟಾರ್ ವ್ಯಾಲ್ಯೂ ಬರುವುದಾದರೆ ಅದು ನಿಜವಾದ ಸಾಧನೆಯೇ. ಹೊಸ್ತೋಟ ಭಾಗವತರ ಸರಳತೆ ನನಗೂ ಎಲ್ಲರಂತೆ ಇಷ್ಟವೇ. ಆ ಸರಳತೆಯೇ ಅವರಿಗೆ ಗೌರವವನ್ನು ತಂದುಕೊಟ್ಟಿದೆ.
ವಿಜಯನಾಥ ಶೆಣೈಯವರ ಸಂಗ್ರಹದಲ್ಲಿದ್ದ ಚಿತ್ರವಿದು.
ಕೆರೆಮನೆ ಶಿವಾನಂದ ಹೆಗಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kadri: ಬೃಹತ್ ಗಾತ್ರದ ಚಿಟ್ಟೆ, ಜೀರುಂಡೆ !
Shimoga: ಮೊಬೈಲ್ ಕೊಡದಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಕಾಲೇಜು ವಿದ್ಯಾರ್ಥಿನಿ
Pushpa 2: ಖಾಕಿಗೆ ಸವಾಲು ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್
IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್ ಬುಕ್ಕಿಂಗ್ ಸಮಸ್ಯೆ-ಪ್ರಯಾಣಿಕರ ಆಕ್ರೋಶ
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.