ಕತೆ: ತವರಿನ ಸೀರೆ
Team Udayavani, Jan 12, 2020, 4:24 AM IST
ಸಾಂದರ್ಭಿಕ ಚಿತ್ರ
ಮಗಾ, ಒಂಚೂರು ಪಟ್ಟಿ ಸೆರಗು ಹಾಕಿಕೊಡೆ” ಎಂಬ ಅಮ್ಮನ ಮಾತು ಕೇಳಿದ ದಿವ್ಯಾ ಓದುತ್ತಿದ್ದ ಪುಸ್ತಕವನ್ನು ಬದಿಗಿಟ್ಟು ಅಮ್ಮ ಸೀರೆ ಉಡುತ್ತಿದ್ದ ಕೋಣೆಗೆ ಹೋದಳು. ಅಮ್ಮ ಅದಾಗಲೇ ನೆರಿಗೆ ಸಿಕ್ಕಿಸಿ ಸೀರೆ ಉಟ್ಟಾಗಿತ್ತು. ಇವಳನ್ನು ಕಂಡೊಡನೆಯೇ ಹೊದೆದಿದ್ದ ಸೆರಗನ್ನು ಕೆಳಗೆ ಹಾಕಿ, “”ಇದೊಂದು ಸುಟ್ಟ ಸೀರೆ ಮಾರಾಯ್ತಿ. ಹೆಗಲ ಮೇಲೆ ಹಾಗೇ ಹಾಕಿದರೆ ನಿಲ್ಲೋದೇ ಇಲ್ಲ. ಈ ನಿನ್ನ ಪಟ್ಟಿ ಸೆರಗು ಹಾಕಲಿಕ್ಕೆ ನಂಗೆ ಬರೋದಿಲ್ಲ” ಎಂದು ಗೊಣಗತೊಡಗಿದಳು. ದಿವ್ಯಾ ಸೆರಗಿನ ತುದಿಯನ್ನು ಕೈಯಲ್ಲಿ ಹಿಡಿದು ತನ್ನ ಅಂಗೈಯಗಲದ ಪಟ್ಟಿ ಮಾಡುತ್ತ, “”ಅಮ್ಮಾ, ನಿಂಗೆಷ್ಟು ಸಲ ಹೇಳಿಲ್ಲ, ಪಟ್ಟಿ ಸೆರಗು ಹಾಕೋದಾದ್ರೆ ಸೆರಗು ಹಾಕಿದ ನಂತರವೇ ನೆರಿಗೆ ಸಿಕ್ಕಿಸಬೇಕು ಅಂತ. ಸೀರೆ ಎಲ್ಲ ಉಟ್ಟಾದ ಮೇಲೆ ಸೆರಗು ಹಾಕಿದ್ರೆ ಹಿಂದೆಲ್ಲ ಅಲೆಬಲೆ ಆಗ್ತದೆ” ಎಂದು ತಗಾದೆ ತೆಗೆದಳು. “”ಆಗ್ಲಿ ಬಿಡೆ, ನನ್ನನ್ಯಾರು ನೋಡ್ಬೇಕಾಗಿದೆ? ಸೆರಗು ಜಾರಿಬೀಳದಿದ್ದರೆ ಆಯ್ತು” ಎನ್ನುತ್ತಿರುವಂತೆ ದಿವ್ಯಾ ಸೆರಗನ್ನು ಪಿನ್ ಮಾಡಲು ನೋಡಿದರೆ, ಪಿನ್ನು ಹಾಕಿ ಹಾಕಿ ಆ ಜಾಗವೇ ಪೂರ್ತಿಯಾಗಿ ಹರಿದುಹೋಗಿತ್ತು. “”ಇದೆಲ್ಲಿ ಪಿನ್ ಮಾಡೋಕೆ ಬರ್ತದೆ? ನೋಡಿಲ್ಲಿ , ಪೂರ್ತಿ ಹರಿದು ಹೋಗಿದೆ. ಇದೊಂದೇ ಸೀರೆ ಎಷ್ಟು ಅಂತ ಉಡ್ತೀಯಾ? ಬೇರೆದು ಉಡಬಾರದಾ?” ಎಂದು ಕೋಪದಿಂದಲೇ ಅಮ್ಮನನ್ನು ಪ್ರಶ್ನಿಸಿದಳು. “”ಅಯ್ಯೋ, ಹೇಗಾದ್ರೂ ಹಾಕು ಮಾರಾಯ್ತಿ. ಬೇರೆ ಸೀರೆ ಉಡಲಿಕ್ಕೆ ಸೀರೆ ಎಲ್ಲಿದೆ? ಇರೋದೇ ಇದೊಂದು. ಮೊದಲೇ ತಡ ಆಯ್ತು, ಇವಳದೊಂದು!” ಎಂದು ಗಡಿಬಿಡಿ ಮಾಡಿದಳು.
ದಿವ್ಯಾ ಕಷ್ಟಪಟ್ಟು ನೆರಿಗೆ ಸಿಕ್ಕಿಸುತ್ತ ನುಡಿದಳು, “”ಮತ್ತೆ ಮೊನ್ನೆ ಅಪ್ಪ ಎಲ್ಲರಿಗೂ ವರ್ಷದ ಬಟ್ಟೆ ತರುವಾಗ ನಂಗೆ ಈ ಸಲ ಸೀರೆ ಬೇಡ, ಇದೆ ಎಂದೆ?”
ಅಮ್ಮ ಸೀರೆಯನ್ನು ಸರಿಪಡಿಸಿಕೊಳ್ಳುತ್ತ ನುಡಿದಳು, “”ಓ ಅದಾ? ನಿನ್ನ ಅತ್ತೆ ಒಂದು ಸೀರೆ ಬೇಕು ಅಂತ ಯಾವಾಗಲೂ ಹೇಳ್ತಾ ಇದ್ಲು. ಪಾಪ, ಅವಳೂ ಇತ್ತೀಚೆಗೆ ಹೊರಗೆ ಹೋಗುವಾಗ ಸೀರೇನೇ ಉಡೋದು. ಯಾರ ಹತ್ತಿರವಾದ್ರೂ ಎಷ್ಟು ಸಲ ಅಂತ ಕೇಳ್ಳೋದು? ನಿನ್ನ ಅಪ್ಪನೋ ಹಣವಿಲ್ಲದಾಗ ದೂರ್ವಾಸ ಮುನಿ ಥರ ಆಡ್ತಾರೆ. ಅವಳಿಗೆ ಡ್ರೆಸ್ಸೂ ಬೇಕು, ಸೀರೇನೂ ಬೇಕು ಅಂದ್ರೆ ಇವರೆಲ್ಲಿ ತರ್ತಾರೆ? ಹಾಗಾಗಿ, ನನಗೆ ಈ ಸಲ ಸೀರೆ ಬೇಡ, ಅವಳಿಗೊಂದು ತನ್ನಿ ಎಂದೆ. ನನಗೆ ಹೇಗಾದ್ರೂ ಇವತ್ತೂಂದು ಸೀರೆ ಸಿಗುತ್ತಲ್ಲ!”
ದಿವ್ಯಾಳಿಗೆ ಆಗ ನೆನಪಾಯಿತು. ಇವತ್ತು ಅಜ್ಜನ ಮನೆಯಲ್ಲಿರುವುದು ಅಜ್ಜಿಯ ಶ್ರಾದ್ಧವೆಂದು. ಪ್ರತಿವರ್ಷ ಅಜ್ಜಿಯ ಶ್ರಾದ್ಧದಂದು ಐವರು ಹೆಣ್ಣುಮಕ್ಕಳಿಗೂ ಸೀರೆ ತರುವುದು ಅನೂಚಾನವಾಗಿ ಅಜ್ಜನ ಮನೆಯಲ್ಲಿ ನಡೆದುಕೊಂಡು ಬಂದ ಪದ್ಧತಿ.ಕಳೆದ ವರ್ಷ ಸೀರೆ ತರುವುದು ಸಣ್ಣ ಮಾವನ ಬಾರಿಯಾಗಿತ್ತು. ಅವನೋ ನಮ್ಮಂತೆಯೇ ತುಂಡು ಭೂಮಿಯ ಒಡೆಯ. ಹಾಗಾಗಿ, ಎಲ್ಲರಿಗೂ ದಿನಾ ಉಡುವಂಥ ವಾಯಿಲ್ ಸೀರೆ ತಂದಿದ್ದ. ಈ ವರ್ಷ ದೊಡ್ಡ ಮಾವನ ಬಾರಿ. ಹೇಗೂ ನೌಕರಿಯಲ್ಲಿರುವವನು. ಹಾಗಾಗಿ, ಒಳ್ಳೆಯ ಸೀರೆಯನ್ನೇ ತಂದಾನೆಂದು ಅಮ್ಮನ ಲೆಕ್ಕಾಚಾರವಿದ್ದೀತು ಎಂದುಕೊಂಡಳು ದಿವ್ಯಾ.
“”ಅಯ್ಯೋ, ಪೂರ್ತಿ ಬೆಳಗು ಹರಿದೇ ಬಿಟ್ಟಿತಲ್ಲೇ. ಇನ್ನು ಆರು ಮೈಲಿ ನಡೆದು ಬಸ್ ಹಿಡಿದು ಹೋಗುವಾಗ ಗಂಟೆ ಹತ್ತು ಆಗಬಹುದೋ ಏನೋ? ನಿನ್ನೆ ಹೋಗುವ ಎಂದರೆ ಮನೆತುಂಬ ಆಳುಗಳು. ಇವತ್ತಂತೂ ಎಲ್ಲರಿಂದ ಬೈಸಿಕೊಳ್ಳುವುದೇ ಸೈ” ಎಂದು ಅಮ್ಮ ಚೀಲಗಳನ್ನು ತುಂಬಿಸತೊಡಗಿದಳು. ಬರೋಬ್ಬರಿ ತುಂಬಿರುವ ಎರಡು ಚೀಲಗಳು! ಒಂದರಲ್ಲಿ ಶ್ರಾದ್ಧದ ಅಡುಗೆಗೆಂದು ಮನೆಯಲ್ಲೇ ಬೆಳೆದ ಬಾಳೆಕಾಯಿಗಳು, ಮಕ್ಕಳಿಗೆ ತಿನ್ನಲೆಂದು ಎಳೆಯ ಸೌತೆಕಾಯಿಗಳು, ಮೇಲೋಗರಕ್ಕೆಂದು ದೊಡ್ಡದೊಂದು ಕುಂಬಳಕಾಯಿ, ಪಲ್ಯಕ್ಕೆಂದು ಎಳೆಯ ಹಲಸಿನಗುಜ್ಜೆ, ಇನ್ನೊಂದರಲ್ಲಿ ಊಟಕ್ಕೆಂದು ಬಾಳೆಲೆಯ ಕಟ್ಟು , ವೀಳ್ಯದೆಲೆಯ ಪಿಂಡಿಗಳು, ಹಣ್ಣಾದ ಕೆಂಪು ಅಡಿಕೆಗಳು. ಎಲ್ಲವನ್ನೂ ತನ್ನ ಗಡಿಬಿಡಿಯ ನಡುವೆಯೂ ಅಮ್ಮ ಹಿಂದಿನ ದಿನವೇ ಸಜ್ಜುಮಾಡಿಟ್ಟಿದ್ದಳು. “”ಅಮ್ಮಾ, ಇಷ್ಟೆಲ್ಲ ಹೊತ್ತು ಅಷ್ಟು ದೂರ ಹೇಗೆ ನಡೆಯುತ್ತಿ?” ದಿವ್ಯಾ ಕಳವಳದಿಂದ ಪ್ರಶ್ನಿಸಿದಳು. “”ಮತ್ತೆ ನಿನ್ನ ಹತ್ತಿರ ಬಾ ಅಂದ್ರೆ ನೀನೆಲ್ಲಿ ಕೇಳ್ತೀಯ? ದೊಡ್ಡವರಾದ ಹಾಗೆ ನಿಮಗೆ ನೆಂಟರು-ಇಷ್ಟರು ಯಾರೂ ಬೇಡ. ನೀನು ಬಂದಿದ್ರೆ ಒಂದು ಚೀಲ ಹಿಡಿದುಕೊಳ್ಳಬಹುದಿತ್ತು” ಅಮ್ಮ ಆಕ್ಷೇಪಿಸುವ ಧ್ವನಿಯಲ್ಲಿ ಹೇಳಿದಳು. ದಿವ್ಯಾ ಅಮ್ಮನ ಸೆರಗಿನೊಂದಿಗೆ ಆಟವಾಡುತ್ತ, “”ನಿನ್ನೇನೆ ಹೇಳಿದೆನಲ್ಲಮ್ಮ, ನನಗೆ ಇವತ್ತು ಪರೀಕ್ಷೆ ಇದೆ ಅಂತ. ಇಲ್ಲದಿದ್ರೆ ಖಂಡಿತ ಬರುತ್ತಿದ್ದೆ” ಎಂದಳು.
ಅಮ್ಮ “”ಹೋಗಿಬರುತ್ತೇನೆ” ಎಂದು ಅತ್ತೆ, ಅಪ್ಪನಿಗೆ ಹೇಳಿ ಎರಡು ಕೈಯಲ್ಲಿ ಎರಡು ಚೀಲಗಳನ್ನು ಎತ್ತಿಕೊಂಡು ಲಗುಬಗೆಯಿಂದ ಹೆಜ್ಜೆ ಹಾಕಿದಳು.
ನಿಜವಾಗಿ, ಆ ದಿನ ದಿವ್ಯಾಳಿಗೆ ಪರೀಕ್ಷೆಯೇನೂ ಇರಲಿಲ್ಲ. ಆದರೆ, ಅವಳಿಗೆ ಅಜ್ಜನ ಮನೆಗೆ ಹೋಗುವುದೇ ಇಷ್ಟ ಇರಲಿಲ್ಲ. ಅಲ್ಲಿ ಅಮ್ಮನ ಅಕ್ಕತಂಗಿಯರ, ಅಣ್ಣ¡ತಮ್ಮಂದಿರ ಮಕ್ಕಳೊಡನೆ ಸೇರುವಾಗಲೆಲ್ಲ ಅವಳಿಗೆ ಒಂದು ಬಗೆಯ ಕೀಳರಿಮೆ ಕಾಡುತ್ತಿತ್ತು. ಕಳೆದ ವರ್ಷ ಹೋದಾಗಲಂತೂ ಕಾನ್ವೆಂಟಿನಲ್ಲಿ ಓದುವ ಚಿಕ್ಕಿಯ ಮಕ್ಕಳು ತಮ್ಮದೇ ಗುಂಪು ಮಾಡಿಕೊಂಡು ಇಂಗ್ಲಿಷ್‌ನಲ್ಲಿ ಮಾತನಾಡುತ್ತ ಇವಳನ್ನು ಗೇಲಿ ಮಾಡಿದ್ದರು. ಇವಳು ಅಡುಗೆಮನೆಯಲ್ಲಿದ್ದ ಅಮ್ಮನ ಹಿಂದೆಯೇ ತಿರುಗುತ್ತಿದ್ದಳು. ಅಮ್ಮ, “”ಹೋಗಿ ಅವರೊಂದಿಗೆ ಆಟವಾಡಿಕೊ” ಎಂದರೆ ಚಿಕ್ಕಿಯ ಮಗಳು, “”ಅವಳಿಗೆ ನಮ್ಮ ಆಟವೆಲ್ಲ ಎಲ್ಲಿ ಬರುತ್ತೆ? ನಾವೆಲ್ಲ ಇಂಗ್ಲಿಷ್ ಆಟವಾಡೋದು” ಎಂದು ಗೇಲಿ ಮಾಡಿದ್ದಳು. ಅದಕ್ಕೆ ಅಮ್ಮ, “”ನಮ್ಮ ದಿವ್ಯಾನೂ ಕಲಿಯೋದರಲ್ಲಿ ಫಸ್ಟ್ ಗೊತ್ತಾ?” ಎಂದು ಇವಳನ್ನು ಹೊಗಳಿದಳು. ಆಗ ಅವರೆಲ್ಲ “ಕನ್ನಡದಲ್ಲಿ ಬರೆಯೋದಾದರೆ ನಾವೂ ಫಸ್ಟೇ, ನಮಗೆ ಎಲ್ಲಾನೂ ಇಂಗ್ಲಿಷಲ್ಲೇ ಕಲಿಸೋದು ಗೊತ್ತಾ?” ಎಂದು ಪೋಸು ಕೊಟ್ಟಿದ್ದರು. ಅದರಲ್ಲೂ ಅಮ್ಮನ ಕಿರಿಯ ತಂಗಿಯಂತೂ ಯಾರನ್ನಾದರೂ ಲೇವಡಿ ಮಾಡಲೆಂದೇ ಕಾದು ಕುಳಿತಿರುತ್ತಿದ್ದಳು. ಏನಿಲ್ಲವೆಂದರೆ ಇವಳು ಹಾಕಿರುವ ಡ್ರೆಸ್‌ನ ಬಗೆಗಾದರೂ ತಗಾದೆ ತೆಗೆಯದಿದ್ದರೆ ಅವಳಿಗೆ ನೆಮ್ಮದಿಯಿರಲಿಲ್ಲ. “”ಅಕ್ಕಾ, ದಿವ್ಯಾ ಈಗ ದೊಡ್ಡೋಳಾಗ್ತಿದ್ದಾಳೆ, ಅವಳಿಗಾದರೂ ಒಂದು ಒಳ್ಳೆಯ ಡ್ರೆಸ್ ತಂದುಕೊಡಲು ಭಾವನಿಗೆ ಹೇಳಬಾರದಾ? ಅವಳ ಅಂಗಿ ನೋಡು. ನಮ್ಮ¾ನೆಯ ಕೆಲಸದ ಹುಡುಗಿಯಾದರೂ ಇದಕ್ಕಿಂತ ಒಳ್ಳೆಯ ಡ್ರೆಸ್ ಹಾಕ್ತಾಳೆ” ಎಂದಿದ್ದಳು. ಆಗೆಲ್ಲ ದಿವ್ಯಾಳಿಗೆ ಭೂಮಿಗೆ ಇಳಿದುಹೋದ ಅನುಭವವಾಗುತ್ತಿತ್ತು. ಅಮ್ಮ ಯಾವಾಗಲೂ ಹೇಳುತ್ತಿದ್ದಳು, “”ಅವರವರ ಪ್ರಾರಬ್ಧ ಅವರವರೇ ಅನುಭವಿಸಬೇಕು. ದೊಡ್ಡವಳಾಗಿ ಹುಟ್ಟಿದ್ದೇ ನನ್ನ ತಪ್ಪಾಯಿತು. ತಂಗಿಯರ ಆರೈಕೆ ಮಾಡಲು ನಾನು ಶಾಲೆ ಬಿಡಬೇಕಾಯಿತು. ತಂಗಿಯರೆಲ್ಲ ಕಲಿಯುವ ಹೊತ್ತಿಗೆ ಅಣ್ಣ ಕೆಲಸಕ್ಕೆ ಸೇರಿದ್ದ. ಅವರೆಲ್ಲ ಕಲಿತವರೆಂದು ಒಳ್ಳೆಯ ಸಂಬಂಧ ಸಿಕ್ಕಿತು. ನಾನೊಬ್ಬಳೇ ಹಳ್ಳಿಗೆ ಮದುವೆಯಾಗಿ ಬಂದೆ. ಇಲ್ಲೂ ಅದೇ ಕಥೆ. ತುಂಡು ಭೂಮಿಯಲ್ಲಿ ಅಪ್ಪ ಎಷ್ಟಂತ ಗಳಿಸ್ತಾರೆ? ಅತ್ತೆಗೆ ಇನ್ನೂ ಮದುವೆ ಮಾಡ್ಬೇಕು. ಅವರ ಕಷ್ಟ ನೋಡಿ ಖರ್ಚುಮಾಡಬೇಕು” ಎಂದು.
ದಿನವೂ ಸಂಜೆ ದೇವರ ಮುಂದೆ ಕುಳಿತು ಭಜನೆ ಮಾಡುವಾಗ ಕೆಲವೊಮ್ಮೆ ಅಮ್ಮನ ಕಣ್ಣಿಂದ ನೀರ ಬಿಂದುಗಳು ಜಾರುವುದನ್ನು ದಿವ್ಯಾ ನೋಡಿದ್ದಾಳೆ. ಆದರೆ, ಅಮ್ಮ ಯಾರಿಗೂ ಏನೊಂದನ್ನೂ ಹೇಳುವವಳಲ್ಲ. ಅಜ್ಜನ ಮನೆಯಲ್ಲಿಯೂ ಅಷ್ಟೆ. ಬೆಳಗಿನಿಂದ ಅಮ್ಮನಿಗೆ ಒರಳುಗಲ್ಲಿನಲ್ಲಿ ಅರೆಯುವ ಕೆಲಸ. ಒಂದಾದ ಮೇಲೊಂದರಂತೆ ರುಬ್ಬುತ್ತಲೇ ಇರುತ್ತಾಳೆ ಅಮ್ಮ. ಉಳಿದವರಿಗೆಲ್ಲ ಖಾರ ತಾಗಿದರೆ ಕೈಗಮೆಯುತ್ತದೆಯಂತೆ. ಅಮ್ಮನ ಕೈಮರಗಟ್ಟಿ ಹೋಗಿದೆಯೋ ಅಥವಾ ಅವರೆಲ್ಲ ಕೆಲಸ ತಪ್ಪಿಸಿಕೊಳ್ಳಲು ಅದೊಂದು ನೆವವೋ ಅವಳಿಗೆ ತಿಳಿಯದು. ಊಟವಾದ ಮೇಲೂ ಅಷ್ಟೆ. ಉಳಿದವರೆಲ್ಲ ನಡುಮನೆಯಲ್ಲಿ ಕುಳಿತು ಮಾವ ತಂದಿರುವ ಹೊಸ ಸೀರೆಗಳ ಗಂಟು ತೆಗೆದು ಅವರವರಿಗೊಪ್ಪುವ ಸೀರೆ ಆರಿಸಿಕೊಳ್ಳುತ್ತಾರೆ. ಅಮ್ಮ ಮಾತ್ರ ಎಲೆ ತೆಗೆದು, ಸಾರಿಸಿ, ಕೆಲಸದವಳಿಗೆ ಊಟಬಡಿಸಿ, ಪಾತ್ರೆಗಳನ್ನೆಲ್ಲ ಹೊರಗಿಡುತ್ತಾಳೆ. ಎಲ್ಲ ಮುಗಿಸಿ ಬರುವಾಗ ಉಳಿದ ಸೀರೆ ಅಮ್ಮನ ಪಾಲು! ಹಾಗಾಗಿ, ಅಮ್ಮ ಮೊದಲನೆಯ ದಿನವೇ ಬಾರದಿದ್ದರೆ ಅವರಿಗೆಲ್ಲ ಮುನಿಸು. ಅಮ್ಮನಿಗೆ ಹೇಳಿದರೆ ಏನೂ ಗೊತ್ತಾಗುವುದಿಲ್ಲ ಅಥವಾ ಹಾಗೆ ನಟಿಸುತ್ತಾಳ್ಳೋ ತಿಳಿಯದು.
“”ಎಲ್ಲಾರೂ ಒಳ್ಳೆಯವರೆ. ಕೈಲಾಗೋ ಕೆಲಸ ಮಾಡೋಕೆ ಉದಾಸೀನ ಮಾಡಬಾರದು ಮಗಾ” ಎನ್ನುತ್ತಾಳೆ. ಆದರೆ, ದಿವ್ಯಾ ಮಾತ್ರ ತಾನಿನ್ನು ಅಜ್ಜನ ಮನೆಯ ಯಾವುದೇ ಕಾರ್ಯಕ್ಕೂ ಹೋಗಬಾರದೆಂದು ನಿರ್ಧರಿಸಿಯಾಗಿದೆ. ಹಾಗಾಗಿಯೇ ಪರೀಕ್ಷೆಯೆಂಬ ಸುಳ್ಳು ನೆವ ಹೇಳುತ್ತಿದ್ದಳು.
ಸಂಜೆ ಶಾಲೆ ಮುಗಿಸಿ ಮನೆಗೆ ಬಂದಾಗ ಅಪ್ಪನೂ ಮನೆಯಲ್ಲಿರಲಿಲ್ಲ. ಅಜ್ಜನ ಮನೆಯ ಶ್ರಾದ್ಧಕ್ಕೆ ಸಂಜೆ ಹೋಗುವುದು ಅಪ್ಪನ ರೂಢಿ. ನಾಳೆ ಇಬ್ಬರೂ ಸೇರಿ ಬರುತ್ತಾರೆ. ಹಾಗೆ ಅಪ್ಪಅಮ್ಮ ಇಬ್ಬರೂ ಮನೆಯಲ್ಲಿರದ ರಾತ್ರಿಗಳು ತುಂಬಾ ಕಡಿಮೆ. ಹಾಗಾಗಿ, ಮನೆಯಲ್ಲಿರುವವರಿಗೆಲ್ಲ ಇಂದು ವಿಶೇಷ ದಿನ. ಅತ್ತೆ, ಚಿಕ್ಕಪ್ಪ ಸೇರಿ ಏನಾದರೂ ವಿಶೇಷ ತಿಂಡಿಯ ಯೋಜನೆ ಹಾಕುತ್ತಾರೆ. ಅವರೊಂದಿಗೆ ದೊಡ್ಡಪ್ಪನ ಮಕ್ಕಳೂ ಬಂದು ಸೇರುತ್ತಾರೆ. ಮೊದಲೆಲ್ಲ ದಿವ್ಯಾಳೂ ಅಜ್ಜನ ಮನೆಯಲ್ಲಿರುವುದರಿಂದ ಅವರಿಗೆ ನಿಶ್ಚಿಂತೆಯಾಗುತ್ತಿತ್ತು. ಈಗಿವಳು ಇಲ್ಲೇ ಇರುವುದು ಅವರಿಗೆ ಅಷ್ಟೇನೂ ಪಥ್ಯವಲ್ಲ. ಮೊದಲೆಲ್ಲ ದಿವ್ಯಾಳಿಗೆ ಏನೂ ಅರ್ಥವಾಗುತ್ತಿರಲಿಲ್ಲ. ಅಮ್ಮ ಬರುವುದನ್ನೇ ಕಾದು ಇವರು ಮಾಡಿರುವುದನ್ನೆಲ್ಲ ವರದಿ ಒಪ್ಪಿಸುತ್ತಿದ್ದಳು.ಅವರೆಲ್ಲ ಸೇರಿ “ಚಾಡಿಪುಟ್ಟಿ’ ಎಂಬ ಅಡ್ಡ ಹೆಸರು ಇಟ್ಟು ಕರೆಯತೊಡಗಿದ ಮೇಲೆ ಇವಳಿಗೆ ವಿಷಯದ ಅರಿವಾಗಿದೆ. ಅಂಥ ದಿನಗಳಲ್ಲಿ ಅವಳು ತನ್ನ ಕೋಣೆಯನ್ನು ಬಿಟ್ಟು ಹೊರ ಬರುತ್ತಿರಲಿಲ್ಲ. ಓದುವ ನೆಪದಲ್ಲಿ ಕೋಣೆಯಲ್ಲೇ ಕುಳಿತು, ಕರೆದಾಗ ಹೋಗಿ ಕೊಟ್ಟುದನ್ನು ತಿಂದು ಬರುತ್ತಿದ್ದಳು. ಅವಳ ಈ ನಡೆ ಮನೆಯವರಿಗೆಲ್ಲ ಇಷ್ಟವಾಗಿ, “”ಮಕ್ಕಳೆಂದರೆ ನಮ್ಮ ದಿವ್ಯಾಳಂತಿರಬೇಕು, ಅವಳಾಯ್ತು ಅವಳ ಓದಾಯ್ತು” ಎಂದು ಎಲ್ಲರೆದುರು ಪ್ರಶಂಸೆಯೂ ದೊರಕಿತ್ತು. ದಿವ್ಯಾ ಕೈಕಾಲು ತೊಳೆದುಬಂದು ಅತ್ತೆ ಕೊಟ್ಟ ತಿಂಡಿಯನ್ನು ತಿಂದು ತನ್ನ ಕೋಣೆಯತ್ತ ನಡೆದಳು. ಅಡುಗೆಮನೆಯಲ್ಲಿ ಸೇರಿದವರ ಕಾರುಬಾರು ಜೋರಾಗಿ ಸಾಗಿತ್ತು. ನಾಳೆ ಮಧ್ಯಾಹ್ನದ ಹೊತ್ತಿಗೆಲ್ಲ ಅಮ್ಮ ಬಂದು ಬಿಡುತ್ತಾರೆ. ಇನ್ನೊಂದು ಶ್ರಾದ್ಧ ಬರುವವರೆಗೆ ಎಲ್ಲವೂ ನಿರಾಳ ಎಂದುಕೊಂಡಳು ದಿವ್ಯಾ.
ಇನ್ನೇನು ಕತ್ತಲಾಗುವ ಹೊತ್ತು. ಒಳಗಿನಿಂದ ಈರುಳ್ಳಿಯ ಒಗ್ಗರಣೆಯ ಪರಿಮಳ ಗಾಢವಾಗಿ ತೇಲಿ ಬರುತ್ತಿತ್ತು. ಓದಿ ಬೇಸರವಾಗಿ ದಿವ್ಯಾ ಮನೆಯ ಮುಂದಿನ ಮೆಟ್ಟಿಲ ಮೇಲೆ ಬಂದು ಕುಳಿತು ಆಗಸ ದಿಟ್ಟಿಸತೊಡಗಿದಳು. ಮಸುಕಾದ ಬೆಳಕಿನಲ್ಲಿ ಯಾರೋ ಮನೆಯ ಕಡೆಗೇ ನಡೆದು ಬರುತ್ತಿರುವುದು ಅವಳ ಕಣ್ಣಿಗೆ ಬಿತ್ತು. ಹತ್ತಿರ ಬರುತ್ತಿದ್ದಂತೆ ಅಮ್ಮನ ನಡಿಗೆಯೇ ಇದು ಎಂದು ಅನಿಸಿತಾದರೂ, ಅಮ್ಮ ಇವತ್ತು ಬರುವ ಪ್ರಮೇಯವೇ ಇಲ್ಲವೆಂದು ಅತ್ತ ದಿಟ್ಟಿಸಿದಳು.
ಪರಮಾಶ್ಚರ್ಯ! ಅಮ್ಮನೆ! ಎರಡು ಚೀಲ ಹಿಡಿದು ಹೋದವಳು ಅರೆ ತುಂಬಿದ ಒಂದೇ ಚೀಲ ಹಿಡಿದು ಬರುತ್ತಿದ್ದಾಳೆ. ದಿವ್ಯಾ ಅಮ್ಮನನ್ನು ಪ್ರಶ್ನಾರ್ಥಕವಾಗಿ ನೋಡಿದಳು.
ಅಮ್ಮ ಅವಳ ದೃಷ್ಟಿಗೆ ದೃಷ್ಟಿ ಸೇರಿಸದೇ, ಒಳಬಂದವಳೇ ಚೀಲವನ್ನು ಬದಿಗಿಟ್ಟು ಕೈಕಾಲು ತೊಳೆಯಲು ಬಚ್ಚಲಿಗೆ ಹೋದಳು.ಅಡುಗೆ ಮನೆಯಲ್ಲಿ ಸೇರಿದವರೆಲ್ಲ ಒಂದು ಕ್ಷಣ ತಬ್ಬಿಬ್ಟಾಗಿ ಅವರವರ ಮನೆಗೆ ಹಿತ್ತಲ ಬಾಗಿಲಿನಿಂದಲೇ ಪರಾರಿಯಾದರು. ಅತ್ತೆ, ಚಿಕ್ಕಪ್ಪ ಮತ್ತೆ ಮಾಡಬೇಕೆಂದಿರುವುದನ್ನೆಲ್ಲ ಬಿರಬಿರನೆ ತುಂಬಿಸಿ ದೊಡ್ಡಪ್ಪನ ಮನೆಗೆ ಸಾಗಿಸಿದರು. ಮಾಡಿದ್ದನ್ನೆಲ್ಲ ಮುಚ್ಚಿಟ್ಟು ಏನೂ ನಡೆದಿಲ್ಲವೆಂಬಂತೆ ಹೊರಗೆ ಬಂದು ಕುಳಿತರು. ಅಮ್ಮ ದೇವರಿಗೆ ದೀಪ ಬೆಳಗಿಸಿ ಅಜ್ಜನಮನೆಯಿಂದ ತಂದ ಪ್ರಸಾದವನ್ನು ಎಲ್ಲರಿಗೂ ಕೊಟ್ಟು ಊಟಕ್ಕೆ ಅಣಿಮಾಡಲು ಒಳಗೆ ಹೋದಳು.
ರಾತ್ರಿಯ ಕೆಲಸವನ್ನೆಲ್ಲ ಮುಗಿಸಿ ಅಮ್ಮ ಮಲಗಲು ಬಂದಾಗ ದಿವ್ಯಾ ದೀಪದ ಬೆಳಕಿನಲ್ಲಿ ಅಮ್ಮನ ಮುಖವನ್ನೇ ದಿಟ್ಟಿಸಿದಳು. ಅಮ್ಮ ಯಾಕೋ ತುಂಬಾ ಸುಸ್ತಾದಂತಿದ್ದಳು. ಕೆಲಸ ಮಾಡಿ ದಣಿದಿರಬೇಕೆಂದುಕೊಂಡಳು ದಿವ್ಯಾ.
ಹಾಸಿಗೆಯಲ್ಲಿ ಕುಳಿತ ಅಮ್ಮನ ಕಾಲಮೇಲೆ ಮಲಗಿ ದಿವ್ಯಾ ಅಮ್ಮನೊಂದಿಗೆ, “”ಅಮ್ಮಾ, ಇವತ್ತೇ ಬಂದೆಯಲ್ಲ. ನಾನು ಯಾವಾಗಿನ ಥರಾನೆ ನಾಳೆ ಬರ್ತೀಯಾ ಅಂದುಕೊಂಡಿದ್ದೆ. ಆದರೆ, ಬಂದಿದ್ದು ಮಾತ್ರ ತುಂಬಾ ಒಳ್ಳೆಯದಾಯ್ತು. ಯಾಕೋ ನಿನ್ನನ್ನು ನೋಡಬೇಕೆಂದು ತುಂಬಾ ಅನಿಸ್ತಿತ್ತು” ಎಂದು ಮುದ್ದು ಮಾಡಿದಳು. ಮತ್ತೆ ಥಟ್ಟನೆ ನೆನಪಾಗಿ ನುಡಿದಳು. “”ಅಮ್ಮಾ, ಎಲ್ಲಿ ನಿನ್ನ ಸೀರೆ ತೋರಿಸು. ಕಳ್ಳಿ! ಈ ಸಲ ದೊಡ್ಡ ಮಾವ ಅಲ್ವಾ ಸೀರೆ ತರೋದು? ಅದಕ್ಕೇ ಒಳ್ಳೆಯ ಸೀರೇನೆ ಸಿಗುತ್ತೆ ಅಂತ ಖಾತ್ರಿಯಾಗಿ ಅಪ್ಪನ ಹತ್ರ ಸೀರೆ ಬೇಡ ಅಂದಿದ್ದೀಯಲ್ವಾ? ತೋರಿಸು ನೋಡುವ” ಎಂದಳು.
ಅಮ್ಮ ಅವಳ ತಲೆಯಲ್ಲಿ ಬೆರಳಾಡಿಸುತ್ತ, “”ನಂಗೆ ಸಾಕಾಗಿದೆ. ಕಾಲೆಲ್ಲ ನೋವು. ಈಗ ಸುಮ್ಮನೆ ಮಲಗು” ಎಂದಳು ನಿರಾಸಕ್ತಿಯಿಂದ. ದಿವ್ಯಾ ಥಟ್ಟನೆ ಅವಳ ಕಾಲಿಂದ ಎದ್ದವಳೇ, “”ಇರು, ನಾನೇ ಚೀಲದಿಂದ ತೆಗೆದು ನೋಡ್ತೇನೆ” ಎಂದಳು. ಅಮ್ಮ ಅವಳನ್ನು ಹಿಡಿದು ಕೂರಿಸುತ್ತ ಹೇಳಿ ದಳು, “”ಅದನ್ನು ನೋಡೋದಕ್ಕೇನಿದೆ? ಇಲ್ಲಿ ಹಾಸಿದೆಯಲ್ಲ, ಅಂಥಾದ್ದೇ ಸೀರೆ”.
ದಿವ್ಯಾ ಅರ್ಥವಾಗದೆ, “”ಅಂದರೆ?” ಎಂದು ರಾಗವೆಳೆದಳು. “”ಅದೇ ರೇಶನ್ ಸೀರೆ” ಅಮ್ಮ ತಣ್ಣಗೆ ನುಡಿದಳು. “”ರೇಶನ್ ಸೀರೆ ತಂದಿದ್ದಾನಾ ಮಾವ? ದೊಡ್ಡಮ್ಮ, ಚಿಕ್ಕಿ ಎಲ್ಲ ಸುಮ್ಮನೆ ತೆಗೆದುಕೊಂಡ್ರಾ? ಸಣ್ಣ ಚಿಕ್ಕಿಯಂತೂ ಮಾವನ ಗ್ರಹಚಾರ ಬಿಡಿಸಿರಬೇಕು” ದಿವ್ಯಾ ಆಶ್ಚರ್ಯದಿಂದ ಕೇಳಿದಳು.
ಅಮ್ಮ ಕಿಟಕಿಯಾಚೆ ದಿಟ್ಟಿಸುತ್ತ ನುಡಿದಳು, “”ಅವರವರ ಯೋಗ್ಯತೆಗೆ ತಕ್ಕಂತೆ ತಂದಿದ್ದಾನೆ. ಬುದ್ಧಿವಂತ ನೋಡು” ಎನ್ನುತ್ತ ತುಟಿ ಕಚ್ಚಿ ಹಿಡಿದಿದ್ದರೂ ಅಮ್ಮನ ಕಣ್ಣಿನಿಂದ ನೀರಹನಿಗಳು ಪಟಪಟನೆ ಉದುರಿ ಕೆನ್ನೆಯ ಮೇಲೆ ಉರುಳತೊಡಗಿದವು.
“”ನನ್ನ ಯೋಗ್ಯತೆಗೆ ಇದು”- ಅಮ್ಮ ಕೊನೆಯ ವಾಕ್ಯವನ್ನು ಕಷ್ಟಪಟ್ಟು ನುಡಿದಳು. ಅಮ್ಮ ಈ ದಿನವೇ ಬಂದಿದ್ದರ ಹಿಂದಿನ ಕಾರಣ ದಿವ್ಯಾಳಿಗೆ ಹೊಳೆಯಿತು. ಅಮ್ಮನ ಕಣ್ಣೀರನ್ನು ಒರೆಸುತ್ತ ಹೇಳಿದಳು, “”ಅಮ್ಮಾ, ಚಿಂತೆ ಮಾಡಬೇಡ. ನಾನು ಓದಿ ಮಾವನಿಗಿಂತ ದೊಡ್ಡವಳಾದಾಗ, ನಿನಗೆ ಅವರೆಲ್ಲರಿಗಿಂತ ಚೆಂದದ ಸೀರೆ ತಂದು ಕೊಡುತ್ತೇನೆ” ಎಂದಳು.
ಅಮ್ಮ ಅವಳನ್ನು ತಬ್ಬಿ ದೀಪವಾರಿಸಿ ಮಲಗಿದಳು. ಅವಳ ಹೆರಳಲ್ಲಿ ತನ್ನ ಬೆರಳನ್ನಾಡಿಸುತ್ತ ಏಳುಕೋಟೆಯಲ್ಲಿ ಬಂಧಿಯಾಗಿರುವ ಏಳುಮಲ್ಲಿಗೆ ತೂಕದ ರಾಜಕುಮಾರಿಯ ಕಥೆ ಹೇಳತೊಡಗಿದಳು.
ಸುಧಾ ಆಡುಕಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.