ದಿಲ್ಲಿ ಪ್ರವಾಸ ರದ್ದು ಮಾಡಿದ ಬಿಎಸ್‌ವೈ ! ಸಂಪುಟ ವಿಸ್ತರಣೆ ಇನ್ನಷ್ಟು ದೂರ
ಸಂಕ್ರಾಂತಿ ಬಳಿಕವೂ ವಿಸ್ತರಣೆ ಅನುಮಾನ
Team Udayavani, Jan 11, 2020, 9:42 PM IST
ಬೆಂಗಳೂರು: ಸಂಕ್ರಾಂತಿ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಕಾಯುತ್ತಿದ್ದವರಿಗೆ ಮತ್ತೆ ನಿರಾಸೆಯಾಗಿದೆ. ವರಿಷ್ಠರ ಭೇಟಿಗೆ ಕಾಲಾವಕಾಶ ಸಿಗದ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು, ದಿಲ್ಲಿ ಪ್ರವಾಸ ಕೈಬಿಟ್ಟಿದ್ದಾರೆ. ಜತೆಗೆ ಸ್ವಿಟ್ಸರ್ಲಂಡ್ ಪ್ರವಾಸ ಕೈಗೊಳ್ಳುವ ಬಗ್ಗೆಯೂ ಗಂಭೀರ ಚಿಂತನೆ ನಡೆಸಿದ್ದಾರೆ. ಹೀಗಾಗಿ, ಸದ್ಯಕ್ಕೆ ಸಂಪುಟ ವಿಸ್ತರಣೆಯಾಗುವುದಿಲ್ಲ ಎಂಬುದು ಖಚಿತವಾದಂತಿದೆ.
ಕೇಂದ್ರ ಗೃಹ ಸಚಿವ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ರಾಜ್ಯ ಪ್ರವಾಸದ ವೇಳೆಯೇ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಿ ತೀರ್ಮಾನಿಸುವುದಾಗಿ ಯಡಿಯೂರಪ್ಪ ಹೇಳಿದ್ದಾರೆ. ಒಂದೊಮ್ಮೆ ಮುಖ್ಯಮಂತ್ರಿಗಳು ಸಂಪುಟ ವಿಸ್ತರಣೆ ಬಗ್ಗೆ ತೀರ್ಮಾನಿಸಿದರೂ ಸ್ವಿಜರ್ಲೆಂಡ್ ಪ್ರವಾಸ ಕೈಗೊಂಡರೆ ಸಂಪುಟ ವಿಸ್ತರಣೆ ಇನ್ನಷ್ಟು ದಿನ ಮುಂದೂಡಿಕೆಯಾಗಲಿದೆ. ಈ ನಡುವೆ ಸಂಪುಟ ವಿಸ್ತರಣೆಯೋ, ಪುನಾರಚನೆಯೇ ಎಂಬ ಚರ್ಚೆ ಶುರುವಾಗಿ ಹಾಲಿ ಸಚಿವರು, ಸಚಿವಾಕಾಂಕ್ಷಿಗಳಲ್ಲಿ ಆತಂಕ ಮನೆ ಮಾಡಿದ್ದು, ಗೊಂದಲ ಸೃಷ್ಟಿಯಾಗಿದೆ.
ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸಿ 13 ಸ್ಥಾನ ಗೆದ್ದು ಸರ್ಕಾರ ಸುಭದ್ರವಾದ ಬೆನ್ನಲ್ಲೇ ಸಂಪುಟ ವಿಸ್ತರಣೆ ಪ್ರಕ್ರಿಯೆ ಜಟಿಲವಾಗುತ್ತಿದೆ. ವರಿಷ್ಠರ ಭೇಟಿ ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕೆ ಪದೇ ಪದೆ ಸಂಪುಟ ವಿಸ್ತರಣೆ ಮುಂದೂಡಿಕೆಯಾಗುತ್ತಿರುವುದು ಆಕಾಂಕ್ಷಿಗಳಲ್ಲೂ ಬೇಸರ ಮೂಡಿಸಿದೆ. ಹಾಗಾಗಿ ಉಪಚುನಾವಣೆಯಲ್ಲಿ ಗೆದ್ದ ಬಿಜೆಪಿ ಶಾಸಕರ ಪೈಕಿ ಬಹುತೇಕರು ಸಚಿವ ಸ್ಥಾನ ಹಾಗೂ ಪ್ರಭಾವಿ ಖಾತೆಗೆ ಮತ್ತೆ ಒತ್ತಡ ಹೇರಲಾರಂಭಿಸಿದ್ದಾರೆ.
ಕಳೆದ ಡಿಸೆಂಬರ್ ಅಂತ್ಯದಲ್ಲಿ ದೆಹಲಿಗೆ ತೆರಳುವುದಾಗಿ ಹೇಳಿದ್ದ ಯಡಿಯೂರಪ್ಪ ಅವರು ಬಳಿ ಜನವರಿ ಎರಡನೇ ವಾರದಲ್ಲಿ ವರಿಷ್ಠರನ್ನು ಭೇಟಿಯಾಗಿ ಸಂಪುಟ ವಿಸ್ತರಣೆಗೆ ಒಪ್ಪಿಗೆ ಪಡೆಯುವುದಾಗಿ ಹೇಳಿದ್ದರು. ಇದೀಗ ಮತ್ತೆ ವರಿಷ್ಠರ ಭೇಟಿಗೆ ಅವಕಾಶ ಸಿಗದ ಕಾರಣ ದೆಹಲಿ ಪ್ರವಾಸ ರದ್ದಾಗಿದ್ದು, ಸಂಪುಟ ವಿಸ್ತರಣೆಯ ಅನಿಶ್ಚಿತತೆ ಮುಂದುವರಿದೆ.
ರಾಜ್ಯ ಭೇಟಿ ವೇಳೆ ಚರ್ಚೆ
ಅಮಿತ್ ಶಾ ಅವರು ರಾಜ್ಯ ಪ್ರವಾಸ ಕೈಗೊಂಡ ಸಂದರ್ಭದಲ್ಲೇ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಿ ತೀರ್ಮಾನಿಸುವುದಾಗಿ ಯಡಿಯೂರಪ್ಪ ಹೇಳಿದ್ದಾರೆ. ಆದರೆ ನಿರ್ದಿಷ್ಟ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅಮಿತ್ ಶಾ ಅವರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಈ ಸಂದರ್ಭದಲ್ಲಿ ಸಂಪುಟದ ಕುರಿತು ಚರ್ಚೆ ನಡೆಯುವ ಸಾಧ್ಯಾಸಾಧ್ಯತೆ ಬಗ್ಗೆಯೂ ಚರ್ಚೆಯಾಗುತ್ತಿದೆ.
ಸ್ವಿಸ್ ಪ್ರವಾಸಕ್ಕೆ ಸಿದ್ಧತೆ
ಬಹುತೇಕ ಸ್ವಿಜರ್ಲೆಂಡ್ ಪ್ರವಾಸ ಕೈಗೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರಷ್ಟೇ ಹೇಳಿದ್ದರು. ಆದರೆ ಪೂರ್ವ ನಿಗದಿಯಂತೆ ಸ್ವಿಸ್ ಪ್ರವಾಸ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಿದ್ದಾರೆ.
ಸ್ವಿಜರ್ಲೆಂಡ್‌ನ ದಾವೋಸ್‌ನಲ್ಲಿ ಜ.20ರಿಂದ 24ರವರೆಗೆ ವಿಶ್ವ ಆರ್ಥಿಕ ವೇದಿಕೆಯ 50ನೇ ವಾರ್ಷಿಕ ಸಭೆ ನಡೆಯಲಿದೆ. ಮುಖ್ಯಮಂತ್ರಿಗಳು ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದರಿಂದ ಹಲವು ಪ್ರತಿಷ್ಠಿತ ಕಂಪನಿಗಳು ಆರ್ಥಿಕ ವ್ಯವಹಾರ ಕುರಿತ ಚರ್ಚೆಗೆ ಸಮಯ ನಿಗದಿಪಡಿಸಿಕೊಂಡಿವೆ.
ಒಂದೊಮ್ಮೆ ಮುಖ್ಯಮಂತ್ರಿಗಳು ಪಾಲ್ಗೊಳ್ಳದಿದ್ದರೆ ವ್ಯತ್ಯಯವಾಗಲಿದೆ. ಆ ಹಿನ್ನೆಲೆಯಲ್ಲಿ ಪೂರ್ವ ನಿಗದಿಯಂತೆ ಪ್ರವಾಸ ಕೈಗೊಳ್ಳಲು ಚಿಂತನೆ ನಡೆಸಿದಂತಿದೆ. ಪ್ರಯಾಣ ಟಿಕೆಟ್ ಸೇರಿದಂತೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಮುಖ್ಯಮಂತ್ರಿಗಳ ನಿರ್ಧಾರದ ಮೇಲೆ ಪ್ರವಾಸ ಅವಲಂಬಿತವಾಗಿದೆ ಎಂದು ಮೂಲಗಳು ಹೇಳಿವೆ.
ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ
ಅಮಿತ್ ಶಾ ಅವರು ಜ.18ಕ್ಕೆ ರಾಜ್ಯಕ್ಕೆ ಬರಲಿದ್ದು, ಈ ವೇಳೆ ಯಡಿಯೂರಪ್ಪ ಅವರು ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆ ಕುರಿತು ಚರ್ಚಿಸಿ ತೀರ್ಮಾನಿಸಬೇಕಿದೆ. ಹಾಗೆಯೇ ಸ್ವಿಜರ್ಲೆಂಡ್ ಪ್ರವಾಸ ಕೈಗೊಳ್ಳಲು ನಿರ್ಧರಿಸಿದರೆ ಜ.19ರಂದು ಬೆಳಗ್ಗೆ ಪ್ರಯಾಣ ಬೆಳೆಸಿ, ಜ. 23ಕ್ಕೆ ಹಿಂತಿರುಗಲಿದ್ದಾರೆ. ಹಾಗಾಗಿ ಅಲ್ಲಿಯವರೆಗೆ ಸಂಪುಟ ವಿಸ್ತರಣೆ ಅನುಮಾನ.
ಸಾಕಷ್ಟು ಗೊಂದಲ
ಉಪಚುನಾವಣೆಯಲ್ಲಿ ಗೆದ್ದ 13 ಮಂದಿ ಪೈಕಿ ಯಾರಿಗೆಲ್ಲಾ ಸಚಿವ ಸ್ಥಾನ ನೀಡಬೇಕು ಎಂಬ ವಿಚಾರದ ಜತೆಗೆ ಯಾರಿಗೆ ಯಾವ ಖಾತೆ ನೀಡಬೇಕು ಎಂಬುದು ಸವಾಲಾದಂತಿದೆ. ಇನ್ನೊಂದೆಡೆ ಹಾಲಿ ಸಚಿವರಲ್ಲಿ ಕೆಲವರನ್ನು ಕೈಬಿಟ್ಟು, ಪಕ್ಷದ ಮೂಲ ನಿವಾಸಿಗಳಲ್ಲಿ ಕೆಲವರಿಗೆ ಸಚಿವ ಸ್ಥಾನ ನೀಡುವ ಚಿಂತನೆಯೂ ಇದೆ. ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆ ಬಗ್ಗೆ ಮುಖ್ಯಮಂತ್ರಿಗಳಲ್ಲೇ ಸ್ಪಷ್ಟತೆ ಇಲ್ಲದ ಕಾರಣ ಗೊಂದಲ ಸೃಷ್ಟಿಯಾಗಿದೆ. ಹೀಗಾಗಿ ವರಿಷ್ಠರ ಭೇಟಿ ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳೂ ಇವೆ.
ದೆಹಲಿಯಲ್ಲಿ ಕೇಂದ್ರ ಗೃಹ ಸಚಿವರಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಭೇಟಿಗೆ ಅವಕಾಶ ಸಿಕ್ಕಿಲ್ಲ. ಇದೇ 17, 18ರಂದು ಅಮಿತ್ ಶಾ ಅವರು ರಾಜ್ಯಕ್ಕೆ ಬರುತ್ತಿದ್ದಾರೆ. ಅವರು ರಾಜ್ಯಕ್ಕೆ ಬಂದಾಗ ಭೇಟಿಯಾಗುತ್ತೇನೆ. ಅವರೊಂದಿಗೆ ಚರ್ಚಿಸಿ ಸಂಪುಟ ವಿಸ್ತರಣೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು.
– ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
MUST WATCH
ಹೊಸ ಸೇರ್ಪಡೆ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.