ಸ್ವಧರ್ಮಪ್ರೇಮಿ, ಅನ್ಯಧರ್ಮ ದ್ವೇಷಿಯಲ್ಲ
Team Udayavani, Jan 12, 2020, 3:06 AM IST
ಒಮ್ಮೆ ಬಂಡಾಯ ಸಾಹಿತಿ ಚಂದ್ರಶೇಖರ ಪಾಟೀಲ ಅವರು ಚಿದಾನಂದ ಮೂರ್ತಿ ಅವರನ್ನು “ಕೋಮುವಾದಿ, ಹಿಂದೂ ಪಕ್ಷಪಾತಿ, ಆರೆಸ್ಸೆಸ್ ಸಂಘಟನೆಗಳಿಗೆ ಸೇರಿದವರು’ ಎನ್ನುವ ಅರ್ಥದಲ್ಲಿ ವ್ಯಂಗ್ಯವಾಡಿದ್ದರು. ಆಗ ಮೂರ್ತಿಯವರು ಬಹಳ ಸ್ಪಷ್ಟವಾಗಿ ತಮ್ಮ ನಿಲುವು ವ್ಯಕ್ತಪಡಿಸಿದ್ದರು. “ನನ್ನ ಸ್ವಧರ್ಮಾಭಿಮಾನದಲ್ಲಿ ಅನ್ಯಧರ್ಮದ ಕುರಿತಾಗಿ ಯಾವುದೇ ದ್ವೇಷಗಳಿಲ್ಲ. ನನಗೆ ಆರೆಸ್ಸೆಸ್ ಸಂಘಟನೆಗಳ ಮುಖಂಡರು ಹತ್ತಿರ ನಿಜ. ಆದರೆ, ಅವರೂ ಕೂಡ ಯಾರನ್ನೂ ದ್ವೇಷಿಸುವವರಲ್ಲ. ವ್ಯಂಗ್ಯ, ಕುಚೋದ್ಯಗಳು, ವ್ಯಕ್ತಿಯ ವಾದದ ಕೊರತೆಯಿಂದ ಹೊರ ಬರುತ್ತವೆ’ ಎಂದು ಚಿಮೂ ಖಡಕ್ ಆಗಿ ಪ್ರತ್ಯುತ್ತರಿಸಿದ್ದರು.
ಪ್ರಭಾವದ ಹಾದಿ ತುಳಿಯದ ನಿಷ್ಠುರವಾದಿ: ಚಿ.ಮೂ., ಯಾವತ್ತೂ ಪ್ರಭಾವಗಳ ಹಾದಿ ತುಳಿದವರೇ ಅಲ್ಲ. ಒಮ್ಮೆ ಅವರ ಹತ್ತಿರದ ಸಂಬಂಧಿ, ವರ್ಗಾವಣೆ ಬಯಸಿ ಅವರಲ್ಲಿಗೆ ಬಂದಿದ್ದರು. “ನೀವು ಕನ್ನಡದ ಶಕ್ತಿಕೇಂದ್ರದ ಶಕ್ತಿ. ನಿಮ್ಮ ಗರ್ಜನೆಗೆ ಮಂತ್ರಿಮಂಡಲವೇ ನಡುಗುತ್ತೆ’ ಅಂತೆಲ್ಲ ಹೇಳಿ, ಹೇಗಾದರೂ ವರ್ಗಾವಣೆ ಕೆಲಸವನ್ನು ಮಾಡಿಕೊಡಿ ಎಂದು ಕೇಳಿಕೊಂಡರು. “ನಿನ್ನ ಮಾತು ಕೇಳಿ, ನಾನು ಇನ್ನೂ ಎಚ್ಚರಗೊಳ್ಳಬೇಕಾಗಿ ಬಂದಿದೆ. ಶಕ್ತಿಕೇಂದ್ರ ಇರುವುದು, ಕನ್ನಡಿಗರ ಹಿತಾಸಕ್ತಿ ಕಾಪಾಡಲು; ನನ್ನ ಸಂಬಂಧಿಗಳ ಟ್ರಾನ್ಸ್‌ಫರ್ ಮಾಡಿಸಲು ಅಲ್ಲ’ ಎಂದು ನಿಷ್ಠುರವಾಗಿ ನುಡಿದಿದ್ದರು.
ಸಿದ್ಧಗಂಗಾ ಮಠದ ಜತೆಗಿನ ನಂಟು: “ಸಿದ್ಧಗಂಗಾ ಶ್ರೀಗಳಿಗೆ ಭಾರತರತ್ನ ಸಿಕ್ಕರೆ, ಆ ಪ್ರಶಸ್ತಿಯ ಮೌಲ್ಯ ಹೆಚ್ಚುತ್ತದೆ’ ಎಂಬ ಆಶಯದಲ್ಲಿ ಚಿ.ಮೂ.“ಉದಯವಾಣಿ’ಗೆ ಪತ್ರ ಬರೆದಿದ್ದರು. ಶಿವಕುಮಾರ ಶ್ರೀಗಳೆಂದರೆ, ಚಿ.ಮೂ.ಗೆ ಬಹಳ ಪ್ರೀತಿ. ಚಿ.ಮೂ.ತಮ್ಮ ಕೃತಿ ರಚನೆ ವೇಳೆ ಬೆಂಗಳೂರಿನಲ್ಲಿ ಏಕಾಂತ ಸಿಗದೇ ಇದ್ದಾಗ, ಸಿದ್ಧಗಂಗಾ ಮಠದ ಪ್ರಶಾಂತ ವಾತಾವರಣದಲ್ಲಿ ಕುಳಿತು, ಕೃತಿರೂಪ ನೀಡಿದ ಪ್ರಸಂಗಗಳೂ ಇದ್ದವು. ಚಿ.ಮೂ.ಅವರ “ಭಾಷಿಕ ಬೃಹತ್ ಕರ್ನಾಟಕ’ ಕೃತಿ ರಚಿತಗೊಂಡಿದ್ದು ಸಿದ್ಧಗಂಗಾ ಮಠದ ಪರಿಸರದಲ್ಲಿಯೇ.
ಸಾಕ್ಷಿಗಳ ಪಟ್ಟಿಯ ಸರದಾರ: ನಾಲ್ಕಡಿ ಎತ್ತರದ ತೆಳ್ಳಗಿನ ದೇಹ. ಬಿಳಿಯ ಫುಲ್ ಶರ್ಟು, ಅದೇ ಬಣ್ಣದ ಪ್ಯಾಂಟು. ಸಂಜೆಯ ವೇಳೆಯಾಗಿದ್ದರೆ ಒಂದು ಟೊಪ್ಪಿ ಮತ್ತು ಸ್ವೆಟರ್, ಕೈಲೊಂದು ಡೈರಿ ಅಥವಾ ಪುಸ್ತಕ…ಸಭೆ, ಸಮಾರಂಭಗಳಲ್ಲಿ ಚಿಮೂ ಅವರು ಎದುರಾಗುತ್ತಿದ್ದುದೇ ಹೀಗೆ. ನಿಧಾನಕ್ಕೆ ಹೆಜ್ಜೆ ಇಡುತ್ತಾ ವೇದಿಕೆ ಏರುತ್ತಿದ್ದ ಅವರು, ಕಂಚಿನ ಕಂಠದ ಭಾಷಣಕಾರ ಆಗಿರಲಿಲ್ಲ. ಆದರೆ, ಅವರ ಮಾತುಗಳಲ್ಲಿ ಸ್ಪಷ್ಟತೆ ಇರುತ್ತಿತ್ತು. ಹೇಳಬೇಕಾದುದನ್ನು ನೇರವಾಗಿ ಮತ್ತು ಖಚಿತವಾಗಿ ಹೇಳುತ್ತಿದ್ದರು. ತಮ್ಮ ಮಾತಿಗೆ ಆಧಾರವೆಂಬಂತೆ ಸಾಕ್ಷಿಗಳ ಪಟ್ಟಿಯನ್ನೂ ಕೊಡುತ್ತಿದ್ದರು. ಅಕಸ್ಮಾತ್ ಈ ಹೇಳಿಕೆ ವಿವಾದವಾಗಿ ಆ ಕುರಿತು ಪರ-ವಿರೋಧದ ಚರ್ಚೆ ಆರಂಭವಾದರೆ, ಪತ್ರಿಕೆಗಳ ಓದುಗರ ಪತ್ರ ವಿಭಾಗಕ್ಕೆ ನಿರಂತರವಾಗಿ ಪತ್ರ ಬರೆಯುತ್ತ, ಕಡೆಯವರೆಗೂ ತಮ್ಮ ನಿಲುವಿಗೆ ಅಂಟಿಕೊಂಡಿರುತ್ತಿದ್ದರು.
“ಮಕ್ಕಳಿಗೆ ಆಸ್ತಿ ಮಾಡಿಡಬೇಡಿ…’: ಕನ್ನಡದ ಅಸ್ತಿತ್ವಕ್ಕೆ ಧಕ್ಕೆ ಬರುತ್ತಿದೆ ಅನಿಸಿದರೆ ಸಾಕು, ಚಿಮೂ ತಕ್ಷಣ ಪ್ರತಿಭಟನೆಗೆ ಸಿದ್ಧರಾಗುತ್ತಿದ್ದರು. ತಮ್ಮ ಪ್ರಿಯ ಶಿಷ್ಯ ರಾ.ನಂ. ಚಂದ್ರಶೇಖರ್‌ಗೆ ತಕ್ಷಣ ಕರೆ ಮಾಡಿ ವಿಷಯ ತಿಳಿಸುತ್ತಿದ್ದರು. ನಂತರದ ಕೆಲವೇ ಸಮಯದಲ್ಲಿ, ಚಿಮೂ ಅವರ ಪತ್ರಿಕಾ ಹೇಳಿಕೆಗಳು (ಕಪ್ಪು ಇಂಕಿನ ಸಣ್ಣ ಅಕ್ಷರಗಳು, ಪೂರ್ತಿ ಪುಟವನ್ನು ಆವರಿಸುತ್ತಿದ್ದ ವಿವರಗಳು, ಮಧ್ಯೆ ಒಂದೆರಡು ಕಡೆ ಕಾಟು, ಚಿತ್ತಿನ ಪದಗಳು-ಇದು ಚಿಮೂ ಬರಹದ ಶೈಲಿ) ರಾ. ನಂ.ಅವರ ಮೂಲಕ ಎಲ್ಲಾ ಪತ್ರಿಕಾ ಕಚೇರಿಗಳನ್ನೂ ತಲುಪುತ್ತಿದ್ದವು. ಈ ಹಿರಿಯನ ಹೋರಾಟದ ಹುಮ್ಮಸ್ಸು ನೋಡಿ – “ನಿಮ್ಮ ಶಿಷ್ಯ ಅಂತ ಹೇಳ್ಳೋಕೆ ಹೆಮ್ಮೆ ಆಗುತ್ತದೆ ಸಾರ್. ನಮಗೆ ಎರಡು ಹಿತವಚನ ಹೇಳಿ’ ಎಂದು ಕೇಳಿದರೆ, “ಮಕ್ಕಳಿಗಾಗಿ ಆಸ್ತಿ ಮಾಡಿಡಬೇಡಿ. ಮಕ್ಕಳನ್ನೇ ನಾಡಿನ ಆಸ್ತಿಯನ್ನಾಗಿ ರೂಪಿಸಿ’ ಎಂದು ಮುಗುಳ್ನಗುತ್ತಿದ್ದರು ಚಿಮೂ.
ಕನ್ನಡ ಶಕ್ತಿ ಕೇಂದ್ರದ ಹುಟ್ಟು: ಜಾರಿಗೆ ಹೋರಾಟ ಶುರುವಾದಾಗ, ಅದೇ ವರ್ಷದ ಏಪ್ರಿಲ್ 13ರಂದು “ಸಾಹಿತಿ-ಕಲಾವಿದರ ಬಳಗ’ ಅಸ್ತಿತ್ವಕ್ಕೆ ಬಂತು. ಚಿಮೂ, ಕನ್ನಡ ಚಳವಳಿಯ ಹೊಸ ನಾಯಕರಾದರು. ಗೋಕಾಕ್ ಚಳವಳಿಯಲ್ಲಿ ಮೂರ್ತಿಗಳು ತೋರಿದ ಕ್ರಿಯಾಶೀಲತೆ, ಹಿರಿಯರನ್ನು, ಕಿರಿಯರನ್ನು ಉತ್ಸಾಹಿಸಿ ತಮ್ಮೊಂದಿಗೆ ಕೊಂಡೊಯ್ದ ರೀತಿ, ಮೌನ ಮೆರವಣಿಗೆ, ಧರಣಿ, ನಿರಶನ ಸಮಾವೇಶಗಳನ್ನು ಏರ್ಪಡಿಸಿದ ವಿಧಾನಗಳು ಕನ್ನಡ ಚಳವಳಿಗೆ ಹೊಸ ರೂಪ, ವರ್ಚಸ್ಸು, ಗೌರವಗಳನ್ನು ತಂದಿತ್ತವು. 1988ರಲ್ಲಿ “ಕನ್ನಡ ಶಕ್ತಿಕೇಂದ್ರ’ವನ್ನು ಅಸ್ತಿತ್ವಕ್ಕೆ ತಂದರು. ಇದು, ಕರ್ನಾಟಕದಾದ್ಯಂತ ವ್ಯಾಪಿಸಿದ ಸಂಘಟನೆ. ಜಿಲ್ಲಾಮಟ್ಟಗಳಲ್ಲಿ ಇದರ ಶಾಖೆಗಳು ಆರಂಭಗೊಂಡವು. ಕನ್ನಡದ ಕಾರಣಕ್ಕಾಗಿಯೇ ರಾಜ್ಯಾದ್ಯಂತ ವ್ಯಾಪಿಸಿದ ಏಕೈಕ ಸಂಘಟನೆ ಇದೊಂದೇ.
ಓರ್ವ ಶ್ರೇಷ್ಠ ಸಂಶೋಧಕ, ಇತಿಹಾಸಕಾರನನ್ನು ಕಳೆದು ಕೊಂಡಂತಾಗಿದೆ. ವಿಧಾನ ಪರಿಷತ್ ಸದಸ್ಯರಾಗಿ ಎಂದು ಹೇಳಿದ್ದೆ. ಆದರೆ, ಅದನ್ನು ಒಪ್ಪಿಕೊಂಡಿಲ್ಲ. ಅವರ ಅಗಲಿಕೆ ನೋವು ಭರಿಸುವ ಶಕ್ತಿ ಕುಟುಂಬಕ್ಕೆ ನೀಡಲಿ.
-ಯಡಿಯೂರಪ್ಪ ಮುಖ್ಯಮಂತ್ರಿ
ಚಿದಾನಂದ ಮೂರ್ತಿ ಅವರ ಅಗಲಿಕೆ ನೋವುಂಟು ಮಾಡಿದೆ. ಅವರು ನಾಡು -ನುಡಿಗಾಗಿ ಶ್ರಮಿಸಿದ್ದರು. ಕನ್ನಡ ಸಾಹಿತ್ಯ ಲೋಕ ಅಮೂಲ್ಯವಾದ ರತ್ನ ವೊಂದನ್ನು ಕಳೆದುಕೊಂಡಂತಾಗಿದೆ.
-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
ಟಿಪ್ಪು ಸುಲ್ತಾನ್ ರಾಜ್ಯಕ್ಕೆ ಮಾಡಿದ್ದ ಅನ್ಯಾಯ ಖಂಡಿಸಿದ ಏಕೈಕ ವ್ಯಕ್ತಿ ಚಿದಾನಂದ ಮೂರ್ತಿ. ಚಿಕ್ಕ ಶರೀರ ಇದ್ದರೂ ದೊಡ್ಡ ಸಾಧನೆ ಮಾಡಿದ್ದಾರೆ. ಸಂಶೋಧಕರಾಗಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.
-ರಾಮಾ ಜೋಯಿಸ್, ಮಾಜಿ ರಾಜ್ಯಪಾಲ
ಚಿದಾನಂದಮೂರ್ತಿ ಅವರ ಅಗಲಿಕೆಯಿಂದ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದೆ. ಜೀವನದಲ್ಲಿ ತುಂಬ ಶಿಸ್ತಿನ ವ್ಯಕ್ತಿಯಾಗಿದ್ದರು. ಅವರ ಕುಟುಂಬ ವರ್ಗದ ವರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ.
-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಡಾ.ಚಿದಾನಂದಮೂರ್ತಿ ಅವರ ನಿಧನದಿಂದ ನಾಡು ಅಪರೂಪದ ವಿದ್ವಾಂಸರನ್ನು ಕಳೆದು ಕೊಂಡಿದೆ. ಮೃತರ ಕುಟುಂಬ ಸದಸ್ಯರಿಗೆ ಅವರ ಅಪಾರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ.
-ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ
ಚಿದಾನಂದ ಮೂರ್ತಿ ನಿಧನರಾಗಿರುವುದು ದುಃಖದ ಸಂಗತಿ. ನಾಡು, ನುಡಿಗೆ ಅನನ್ಯ ಸೇವೆ ಸಲ್ಲಿಸಿ ದ್ದಾರೆ. ಶೂನ್ಯ ಸಂಪಾದನೆ, ಭಾಷಾ ವಿಜ್ಞಾನದ ಮೂಲ ತತ್ವಗಳು, ಸಂಶೋಧನಾ ತರಂಗ ಸೇರಿ ಮೌಲಿಕ ಕೃತಿಗಳನ್ನು ನೀಡಿದ್ದಾರೆ.
-ಡಾ.ಮನುಬಳಿಗಾರ್, ಕಸಾಪ ಅಧ್ಯಕ್ಷ
ರಾಷ್ಟ್ರೀಯ ವಿಚಾರಧಾರೆಯ ಚಿಮೂ ಅವರು ಅಗಲಿರುವುದು ದುಃಖದ ಸಂಗತಿ. ನಾಡು, ನುಡಿ, ಸಂಸ್ಕೃತಿಗಳ ವಿಚಾರವಾಗಿ ಸಂಶೋಧನಾ ಬರಹಗಳನ್ನು ಬರೆದು ಸತ್ಯವನ್ನು ನಿರ್ಭಯವಾಗಿ ತಿಳಿಸಿದವರು.
-ವಿ.ನಾಗರಾಜ, ಆರ್‌ಎಸ್‌ಎಸ್ ದಕ್ಷಿಣ ಮಧ್ಯಕ್ಷೇತ್ರ ಕ್ಷೇತ್ರೀಯ ಸಂಘಚಾಲಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.