ನಿಷ್ಠೆ, ಬದ್ಧತೆ, ಪ್ರಾಮಾಣಿಕತೆಗೆ ಮತ್ತೊಂದು ಹೆಸರೇ ಚಿಮೂ
Team Udayavani, Jan 12, 2020, 3:05 AM IST
ನವೋದಯ ಕಾಲದಲ್ಲಿ ಬಹಳ ಗಟ್ಟಿಯಾದ ವಿದ್ವಾಂಸರಿದ್ದರು. ಅವರ ನಂತರದಲ್ಲಿ ಚಿದಾನಂದಮೂರ್ತಿಯವರಷ್ಟು ಗಟ್ಟಿಯಾದ ವಿದ್ವಾಂಸರ್ಯಾರೂ ಬರಲಿಲ್ಲ. ಶಿಲಾಶಾಸನಗಳನ್ನು ಚೆನ್ನಾಗಿ ಅಧ್ಯಯನ ಮಾಡಿ ಕರ್ನಾಟಕದ ಸಂಸ್ಕೃತಿಯನ್ನು ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡುತ್ತಿದ್ದರು. ಹಂಪಿಯಲ್ಲಿನ ಅವರ ಸಂಶೋಧನೆ ಬಹಳ ಮಹತ್ವದ್ದು, ಟಿಪ್ಪು ಆಳ್ವಿಕೆ ಬಗ್ಗೆ ಬಹಳ ಚೆನ್ನಾಗಿ ಅಧ್ಯಯನ ಮಾಡಿದ್ದರು. ಸತ್ಯವನ್ನು ಧೈರ್ಯವಾಗಿ ಹೇಳುತ್ತಿದ್ದು ಅವರ ಗುಣ. ಅವರ ಪ್ರಯತ್ನದಿಂದಲೇ ಹೈದ್ರಾಬಾದ್ ಕರ್ನಾಟಕ ಮರು ನಾಮಕರಣವಾಗಿದ್ದು, ರಚನಾತ್ಮಕವಾಗಿ ತುಂಬಾ ಚಟುವಟಿಕೆಯಲ್ಲಿದ್ದರು. ಅವರದು ತುಂಬಾ ಪರಿಶುದ್ಧವಾದ ಕೈ. ವೈಯಕ್ತಿಕವಾಗಿಯೂ ಪರಿಶುದ್ಧವಾದ ಜೀವನ ನಡೆಸಿದರು, ಅವರು ಇಷ್ಟು ಬೇಗ ತೀರಿ ಹೋಗಿದ್ದು ದುಃಖವಾಗಿದೆ. ಅವರು ಇನ್ನೊಂದು ಹತ್ತು ವರ್ಷ ಇರಬೇಕಿತ್ತು.
-ಡಾ.ಎಸ್.ಎಲ್.ಭೈರಪ್ಪ, ಖ್ಯಾತ ಕಾದಂಬರಿಕಾರರು
ಇಂದು ಸಂಶೋಧಕರು ಹೆಚ್ಚಿನ ಸಂಖ್ಯೆಯಲ್ಲಿ ಹುಟ್ಟಿಕೊಳ್ಳುತ್ತಿದ್ದಾರೆ. ಅದರಲ್ಲಿ ಅರ್ಧಟೊಳ್ಳಿರಬಹುದು, ಉಳಿದರ್ಧ ಗಟ್ಟಿಯಿರ ಬಹುದು. ಅದರೆ, ಸಂಶೋಧನಾ ವಿದ್ವತ್ತಿನ ಪ್ರಾಮಾಣಿಕತೆ ಕಡಿಮೆಯಾಗುತ್ತಿದೆ. ಡಾ.ಎಂ.ಚಿಮೂರವರು ಪ್ರಾಮಾಣಿಕ ಸಂಶೋಧನೆಯ ಪ್ರತೀಕ ವಾಗಿದ್ದಾರೆ. ಸಂಶೋಧನೆಯಲ್ಲಿ ಆತ್ಮ ವಂಚನೆ ಮಾಡಿ ಕೊಳ್ಳುತ್ತಿರಲಿಲ್ಲ. ತಾವು ಹೇಳಿದ್ದಕ್ಕೆ ಬದ್ಧರಾಗಿದ್ದರು. ಯಾರನ್ನೋ ಮೆಚ್ಚಿಸಲಿಕ್ಕಾಗಿ ಮಾತನಾಡುತ್ತಿರಲಿಲ್ಲ. ಒಮ್ಮೆ ಶೂನ್ಯ ಸಂಪಾದನೆಯ ಬಗ್ಗೆ ಕೃತಿ ಪ್ರಕಟವಾಗಿದ್ದಾಗ ಚಿದಾನಂದ ಮೂರ್ತಿಯವರು ಪ್ರತಿಕ್ರಿಯಿಸಿ, ಈ ಸಂಶೋಧನಾ ಕೃತಿಯಲ್ಲಿ ಸಂಶೋಧನೆಯೇ ಶೂನ್ಯ ಎಂದಿದ್ದರು. ಅಷ್ಟು ಹೇಳುವುದಕ್ಕೆ ಅವರಿಗೆ ಮಾತ್ರ ಸಾಧ್ಯವಿತ್ತು. ಏಕೆಂದರೆ ಅವರ ನಾಲಿಗೆ, ಮನಸ್ಸು ಮತ್ತು ಹೃದಯಕ್ಕೆ ಸಂಬಂಧ ಇಟ್ಟುಕೊಂಡಿದ್ದರು. ಇತ್ತೀಚಿನ ವರ್ಷಗಳಲ್ಲಿ ನನ್ನ ಮತ್ತು ಅವರ ವಿಚಾರದ ಧಾರೆಯಲ್ಲಿ ವ್ಯತ್ಯಾಸವಿತ್ತು. ಆದರೆ, ಇದೇ ಕಾರಣಕ್ಕೆ ನಮ್ಮಿಬ್ಬರ ನಡುವೆ ಯಾವುದೇ ಬೇಧಭಾವ ಹುಟ್ಟಿಲ್ಲ.
-ಪ್ರೊ.ಬರಗೂರು ರಾಮಚಂದ್ರಪ್ಪ, ಹಿರಿಯ ಸಾಹಿತಿ
ಬೆಳವಡಿ ಮಲ್ಲಮ್ಮ ಶಿವಾಜಿಯನ್ನೇ ಸೋಲಿಸಿದ್ದಳು ಎಂಬುದನ್ನು ಚಿಮೂ ದಾಖಲೆ ಸಮೇತ ತೋರಿಸಿದ್ದರು. ನಾಡಗೀತೆ ಬಗ್ಗೆ ಕೃತಿ ಬರೆದಿದ್ದರು. ನಾಡಗೀತೆಯ ಸ್ವರೂಪ, ಹಿನ್ನೆಲೆ ಮತ್ತು ಅರ್ಥದ ಕುರಿತ ಈ ಕೃತಿಯನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷನಾಗಿದ್ದಾಗ 5 ಸಾವಿರ ಪ್ರತಿಗಳನ್ನು ಪ್ರಕಟಿಸಿ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದೇವೆ. ಚಿಮೂರವರು ಜ್ಞಾನದ ಆಕರವಾಗಿದ್ದರು. ನೇಪಾಳದ ಕೆಲವು ಭಾಗ, ಬಿಹಾರದ ಕೆಲವು ಭಾಗವನ್ನು ಕನ್ನಡ ದೊರೆಗಳು ಆಳ್ವಿಕೆ ಮಾಡುತ್ತಿದ್ದರು. ಮಹಾರಾಷ್ಟ್ರದ ಬಹುಭಾಗದಲ್ಲಿ ಕನ್ನಡಿಗರು ಮೂಲ ನಿವಾಸಿಗಳಾಗಿದ್ದರು ಎಂಬುದನ್ನು ದಾಖಲೆ ಸಮೇತವಾಗಿ ತೋರಿಸಿಕೊಟ್ಟಿದ್ದಾರೆ. ನಾನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದಾಗ ಭಾಷಾಶಾಸ್ತ್ರ ಮತ್ತು ಸಂಸ್ಕೃತಿ ಅಧ್ಯಯನ ವಿಷಯವನ್ನು ಬೋಧನೆ ಮಾಡುತ್ತಿದ್ದರು. ಕನ್ನಡ ಪರ ಹೋರಾಟಕ್ಕಾಗಿ ವಿದ್ಯಾರ್ಥಿಗಳನ್ನು ಸಿದ್ಧ ಪಡಿಸುತ್ತಿದ್ದ ಮಹನ್ ಸಂಶೋಧಕ ನನ್ನ ಗುರುಗಳಾಗಿದ್ದರು ಎನ್ನುವುದೇ ನನ್ನ ಹೆಮ್ಮೆ.
-ಡಾ.ಸಿದ್ದಲಿಂಗಯ್ಯ, ಖ್ಯಾತ ಕವಿ
ಚಿಮೂ ಅವರಿಗೆ ತಮ್ಮ ಕಾರ್ಯದ ಬಗ್ಗೆ ನಿಷ್ಠೆ, ಬದ್ಧತೆ ಹಾಗೂ ಪ್ರಾಮಾಣಿಕತೆ ಇತ್ತು. ಯಾರನ್ನೋ ಮೆಚ್ಚಿಸಲು ಸಂಶೋಧನಾ ಕಾರ್ಯ ಮಾಡುತ್ತಿರಲಿಲ್ಲ. ಕನ್ನಡದ ಕೆಲಸ ಎಂದರೆ ಚಿದಾನಂದ ಮೂರ್ತಿ ಎಂದು ಹೇಳುತ್ತಿದ್ದ ಕಾಲವೂ ಒಂದಿತ್ತು. ನಾಲ್ಕನೇ ಅಖೀಲ ಭಾರತ ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಇವರೇ ಆಗಿದ್ದರು. ಶರಣ ಸಾಹಿತ್ಯ ಪರಿಷತ್ತಿನ ಪ್ರಕಟಣಾ ಸಮಿತಿಯ ಸದಸ್ಯರೂ ಆಗಿದ್ದರು. ನೇಪಾಳದ ಕಠ್ಮಂಡುವಿನಲ್ಲಿ ಕೆಲವು ಬೀದಿಗೆ, ಸಾರಿಗೆ ಬಸ್‌ಗಳಿಗೆ ಜಂಗಮ ಪದ ಬಳಕೆ ಮಾಡುತ್ತಿದ್ದ ಮಾಹಿತಿಯನ್ನು ಚಿದಾನಂದ ಮೂರ್ತಿಯವರಿಗೆ ನೀಡಿದ್ದೆ. ನಂತರ ಅವರು ಅಲ್ಲಿಗೆ ಹೋಗಿ ಅಲ್ಲಿದ್ದ ಕನ್ನಡ ಶಿಲಾಶಾಸನವನ್ನು ಪತ್ತೆ ಮಾಡಿ, ಅದರ ಮೇಲೆ ಲೇಖನವನ್ನು ಬರೆದಿದ್ದರು. ಯಾವುದೇ ಕನ್ನಡ ಕೆಲಸ ಬಂದಾಗಲೆಲ್ಲ ದೂರವಾಣಿ ಮೂಲಕ ಹೇಳುತ್ತಿದ್ದರು. ಯಾವುದೇ ಹೊಸ ವಿಷಯವಾಗಲಿ ಅಥವಾ ತಮ್ಮ ಸಂಶೋಧನೆಯೇ ಆಗಲಿ, ಹತ್ತಾರು ಜನರಿಂದ ಖಚಿತ ಪಡಿಸಿಕೊಳ್ಳುತ್ತಿದ್ದರು. ತಮ್ಮ ನಿಲುವಿಗೆ ಯಾವಾಗಲೂ ಬದ್ಧರಾಗಿರುತ್ತಿದ್ದರು.
-ಗೊ.ರು.ಚನ್ನಬಸಪ್ಪ, ಹಿರಿಯ ಸಾಹಿತಿ
ಶಾಸ್ತ್ರೀಯ ಭಾಷೆ ಸ್ಥಾನಮಾನ ಎಂಬುದು ಯಾವುದೇ ಪದವಿ, ಪದಕ ಅಲ್ಲ. ಭಾಷೆಯೊಂದನ್ನು ನಿತ್ಯ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಬಳಸಿಕೊಳ್ಳಲು ಸಾಧ್ಯವಾದರೆ ಅದೇ ಶಾಸ್ತ್ರೀಯ ಸ್ಥಾನಮಾನ. ಈ ಪುರಸ್ಕಾರ ಕನ್ನಡಕ್ಕೆ ಯಾವತ್ತೋ ಸಿಕ್ಕಿದೆ.
-ಚಿಮೂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.