ಸಂಶೋಧನಾ ದುರ್ಬೀನಿನಲ್ಲಿ ಗುಬ್ಬಚ್ಚಿಯನ್ನೂ ಬಿಡದ ಗರುಡ


Team Udayavani, Jan 12, 2020, 6:15 AM IST

n-39

ಕರ್ಮಕ್ಷೇತ್ರ ಯಾವುದೇ ಇರಲಿ, ವ್ಯಕ್ತಿಯೊಬ್ಬ ತನ್ನ ಬುದ್ಧಿಮತ್ತೆ, ಸತ್ಯನಿಷ್ಠೆ ಮತ್ತು ನೇರವಂತಿಕೆಯನ್ನು ಸಮಾಜಮುಖಿಯಾಗಿ ದುಡಿಸಿಕೊಂಡರೆ ಎಷ್ಟು ಎತ್ತರಕ್ಕೆ ಬೆಳೆಯಬಹುದು ಎಂಬುದಕ್ಕೆ ಚಿದಾನಂದಮೂರ್ತಿಯವರು ಸ್ಪಷ್ಟ ನಿದರ್ಶನ. ಚಿಮೂ ಹುಟ್ಟಿದ್ದು ದಾವಣ ಗೆರೆಯ ಚನ್ನಗಿರಿ ತಾಲೂಕಿನ ಹಿರೇಕೋಗಲೂರಿನಲ್ಲಿ, 1933ರ ಮೇ 1ರಂದು. ತಂದೆ ಕೊಟ್ಟೂರಯ್ಯ ಪ್ರವೃತ್ತಿ ಯಲ್ಲಿ ಜಂಗಮರು. ಅವರು ನಡೆಸುತ್ತಿದ್ದ ಕೂಲಿಮಠದಲ್ಲಿ ಮಗ ಚಿದಾನಂದನ ಪ್ರಾಥಮಿಕ ವಿದ್ಯಾಭ್ಯಾಸ. ತಂದೆಯೇ ಅಕ್ಷರ ಕಲಿಸಿದ ಮೊದಲ ಗುರುವೂ ಕೂಡ.

ಪ್ರಚಂಡ ಬುದ್ಧಿಮತ್ತೆಯ ಬಾಲಕ, ತನ್ನ 14ನೇ ವರ್ಷದವರೆಗೂ ಎಣ್ಣೆಬುಡ್ಡಿಯಲ್ಲಿ ಓದಿದ. ದಾವಣ ಗೆರೆಯಲ್ಲಿ ಹಾಸ್ಟೆಲ್‌ವಾಸ ಮಾಡುತ್ತ ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ಹುಡುಗನಿಗೆ ವಿಜ್ಞಾನ, ಗಣಿತ, ಇತಿಹಾಸ ಆಸಕ್ತಿಯ ವಿಷಯಗಳಾದವು. ಇಂಟರ್‌ಮೀಡಿಯೆಟ್‌ನಲ್ಲಿ ಗಣಿತ, ವಿಜ್ಞಾನಗಳಲ್ಲಿ ಅಧಿಕ ಅಂಕಗಳನ್ನು ಸಂಪಾ ದಿಸಿದ ಹುಡುಗನಿಗೆ, ಬಯಸಿದ್ದರೆ ವೈದ್ಯ ಅಥವಾ ಎಂಜಿನಿಯರಿಂಗ್‌ ದಾರಿ ಹಿಡಿದು ಬದುಕನ್ನು ಭದ್ರಪಡಿಸಿ ಕೊಳ್ಳುವ ಸುವರ್ಣಾವಕಾಶವಿತ್ತು. ಆದರೆ, ಆತ ಆಯ್ದು ಕೊಂಡದ್ದು ತರ್ಕಗ್ರಾಹಿ ವಿಜ್ಞಾನವನ್ನಲ್ಲ; ಹೃದಯಕ್ಕೆ ಹತ್ತಿರದ ಕನ್ನಡವನ್ನು! ಚಿದಾನಂದಮೂರ್ತಿಯವರು ಅಂಥ ಗಟ್ಟಿ ನಿರ್ಧಾರ ಕೈಗೊಂಡ ಆ ಅಜ್ಞಾತದಿನ ಕನ್ನಡ – ಕರ್ನಾಟಕದ ಪಾಲಿಗೆ ಮಹತ್ವದ್ದು!

ರಭಸ ಹರಿವಿನ ವ್ಯಕ್ತಿತ್ವ
ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಆನರ್ಸ್‌ ಗೆ ಸೇರ್ಪಡೆ. ಸುತ್ತೂರು ಮಠದ ಆಸರೆಯಲ್ಲಿ ನೀಗಿತು ಅನ್ನ-ವಸತಿಯ ಚಿಂತೆ. ಕಾಲೇಜಿನಲ್ಲಿ ಕುವೆಂಪು, ಡಿ.ಎಲ್‌.ಎನ್‌., ತೀ.ನಂ.ಶ್ರೀ., ತ.ಸು. ಶಾಮರಾಯರು ಮೊದಲಾದ ಘಟಾನುಘಟಿಗಳಡಿ ಶಿಷ್ಯತ್ವದ ಭಾಗ್ಯ. ಕೈನುರಿತ ಶಿಲ್ಪಿ ಗುಣಮಟ್ಟದ ಶಿಲೆ ಸಿಕ್ಕರೆ ಬಿಟ್ಟಾನೆ? ಹತ್ತು ಹದಿನೆಂಟು ದಿಕ್ಕಿಗೆ ರಭಸದಲ್ಲಿ ಹರಿಯುತ್ತಿದ್ದ ಚಿಮೂ ಚೈತನ್ಯವನ್ನು ಮೈಸೂರಿನ ಕನ್ನಡ ಪಂಡಿತರು ಒಡ್ಡು ಕಟ್ಟಿ, ಹತ್ತು ಮಂದಿಗೆ ಉಪಯೋಗವಾಗುವ ರೀತಿಯಲ್ಲಿ ನಿಲ್ಲಿಸಿದರು. ಸ್ವರ್ಣಪದಕದೊಂದಿಗೆ ಪದವಿ ಪಡೆದು ಹೊರಬಂದ ಹುಡುಗನಿಗೆ ಉಪನ್ಯಾಸಕನ ಹುದ್ದೆ ಆಯಾಚಿತವಾಗಿ ದಕ್ಕಿತು. ಪಂಡಿತನಾದರೂ ನಿಂತಲ್ಲಿ ನಿಲ್ಲದ ಪ್ರತಿಭೆ. ಐದೂಕಾಲಡಿಯ ಹುಡುಗ ಶಿಕ್ಷಕ, ಆಟದ ಮೈದಾನದಲ್ಲಿ ಚಿಗರೆ ಮರಿಯಂತೆ ಎಗರಿ ಟೆನ್ನಿಸ್‌ ಆಡುವುದನ್ನು ನೋಡಲು ವಿದ್ಯಾರ್ಥಿಗಳು ಬಂದು ನಿಲ್ಲುತ್ತಿದ್ದರಂತೆ! “ವಿದ್ಯಾರ್ಥಿಯಂತೇ ಇದ್ದೀಯ, ಎಂ.ಎ. ಕಟ್ಟಿಬಿಡು’ ಎಂದು ಗುರುಗಳು ಪ್ರಚೋದಿಸಿದ್ದೇ ತಡ, ಚಿದಾನಂದಮೂರ್ತಿಗಳು ಮರುವರ್ಷವೇ ಮಾನಸ ಗಂಗೋತ್ರಿಯಲ್ಲಿ ವಿದ್ಯಾರ್ಥಿಯಾಗಿ ಸೇರ್ಪಡೆ ಯಾಗಿದ್ದರು!

ವಿದ್ವಜ್ಜನರಿಂದ ಮೆಚ್ಚುಗೆ
ಮೈಸೂರು ವಿಶ್ವವಿದ್ಯಾಲಯದ ಹೊಚ್ಚಹೊಸ ಕಟ್ಟಡದಲ್ಲಿ ಮೊದಲ ಬ್ಯಾಚಿನ ವಿದ್ಯಾರ್ಥಿಗಳಾಗಿ ಕನ್ನಡ ವಿಭಾಗದಲ್ಲಿ ಕಾಣಿಸಿಕೊಂಡವರು ಎಂ.ಎಸ್‌. ವೃಷಭೇಂದ್ರಯ್ಯ, ಟಿ.ವಿ. ವೆಂಕಟಾಚಲಶಾಸ್ತ್ರಿ, ಸುಜನಾ ಮತ್ತು ಚಿದಾನಂದ ಮೂರ್ತಿ. ತೀ.ನಂ.ಶ್ರೀ ಅವರ ಪ್ರಾಧ್ಯಾಪನ. ಪಂಪನನ್ನು ಕನಸು-ಎಚ್ಚರಗಳಲ್ಲಿ ಧೇನಿಸುತ್ತಿದ್ದ ಗುರುಗಳಿಂದ ಶಿಷ್ಯನಿಗೆ ಮಾರ್ಗದರ್ಶನ. ಪಂಪ ಮತ್ತು ಜೀವನಮೌಲ್ಯ ಎಂಬ ವಿಚಾರದಲ್ಲೇ ಪ್ರಬಂಧಮಂಡನ; ವಿದ್ವಜ್ಜನರಿಂದ ಮೆಚ್ಚುಗೆ ಮತ್ತು ಸ್ವೀಕೃತಿಯ ಕರತಾಡನ. ವಿದ್ವಜ್ಜಗತ್ತಿಗೆ ಹೀಗೆ ಅಧಿಕೃತವಾಗಿ ಸೇರ್ಪಡೆಗೊಂಡರು ಚಿಮೂ. ಈ ಪ್ರಬಂಧ ಮಂಡನೆ, ಒಂದು ರೀತಿಯಲ್ಲಿ ಚಿಮೂ ಅವರ ಬದುಕಿನ ದಿಕ್ಕನ್ನೇ ಬದಲಿಸಿಬಿಟ್ಟಿತು ಎಂದರೂ ತಪ್ಪಲ್ಲ. ಯಾಕೆಂದರೆ ಪಂಪನ ಕುರಿತಾಗಿ ಸಂಶೋಧನೆಗಿಳಿದ ಚಿಮೂ ಅವರಿಗೆ, ಶಾಸನಶಾಸ್ತ್ರಕ್ಕೆ ಪ್ರವೇಶ ಸಿಕ್ಕಿ, ಪ್ರಾಚೀನರು ಬರೆದಿಟ್ಟ ಶಾಸನಗಳಲ್ಲಿ ಎಷ್ಟೆಷ್ಟೊಂದು ವಿಷಯಗಳ ಚಿನ್ನದ ಗಣಿಯಿದೆ ಎಂಬುದು ಅರ್ಥವಾಯಿತು. ಹಾಗಾಗಿ ಕುವೆಂಪು ಅವರಂತೆ ಕವಿಯಾಗುವ, ತೀನಂಶ್ರೀ ಅವರಂತೆ ವಿಮರ್ಶಕರಾಗುವ ಮಾರ್ಗಗಳನ್ನು ಬಿಟ್ಟು ಸಂಶೋಧಕನಾಗುವ ಹೊಸ ಮಾರ್ಗಕ್ಕಿಳಿದರು. ಕಲ್ಲುಮುಳ್ಳಿನ ಹಾದಿ ಅದು. ಹಾದಿಯೇನಿದೆ ಅಲ್ಲಿ! ತಾವೇ ಹಾದಿ ನಿರ್ಮಿಸಿಕೊಂಡು ಮುಂದುವರಿಯ ಬೇಕಾದ ಅನಿವಾರ್ಯತೆ. ಆದರೆ, ಅವರೇ ಹೇಳಿ ಕೊಂಡಂತೆ: ನನ್ನ ಶಕ್ತಿಮೀರಿದ ಕೆಲಸಗಳಿಗೆ ಧುಮುಕು ವುದು ನನ್ನ ಸ್ವಭಾವಕ್ಕೆ ಅಂಟಿಕೊಂಡ ಗುಣ. ಸಂಶೋಧನೆಯು ಒಬ್ಬ ವ್ಯಕ್ತಿಯನ್ನು, ಅವನು ಗಂಭೀರವಾಗಿ ತೆಗೆದುಕೊಂಡರೆ, ಪ್ರಾಮಾಣಿಕನನ್ನಾಗಿ ರೂಪಿಸುತ್ತದೆ. ಬೌದ್ಧಿಕ ಕ್ರಿಯೆಯನ್ನಾಗಿ ಸಂಶೋಧನೆ ಯನ್ನು ಆರಿಸಿ ಕೊಂಡ ವ್ಯಕ್ತಿ ಅಲ್ಲಿ ಸತ್ಯವನ್ನೇ ಹೇಳಬೇಕೆನ್ನುವ ತತ್ತÌವನ್ನು ತನ್ನ ಜೀವನಕ್ಕೂ ಅನ್ವಯಿಸಿಕೊಳ್ಳಲು ಪ್ರಚೋದಿಸುತ್ತದೆ – ಇದು ಚಿಮೂ ಅವರು ತನ್ನ ಅಖಂಡ ಅರ್ಧಶತಮಾನದ ಸಂಶೋಧನಾ ಜೀವನದಲ್ಲಿ ಕಂಡುಕೊಂಡ ಸತ್ಯ, ಬಾಳ ಸಂದೇಶ.

ಚಿಮೂ ಎಂದರೆ ನೂರಾರು ಚಿತ್ರ
ಚಿಮೂ ಎಂದರೇನು ಎಂದು ಯೋಚಿಸಿದರೆ ಕಣ್ಮುಂದೆ ಬರುವ ಚಿತ್ರಗಳು ನೂರಾರು. ಸರಕಾರವು ಟಿಪ್ಪುಜಯಂತಿ ಮಾಡುತ್ತೇನೆಂದು ಹೊರಟಾಗ ದೇಹಾರ್ಪಣ ಮಾಡಿ ಯಾದರೂ ಅದನ್ನು ತಡೆಯುತ್ತೇನೆ ಎಂಬ ಕೆಚ್ಚೆದೆ ತೋರಿ ಸಿದ ಹುಲಿ ಚಿಮೂ. ಗೋಕಾಕ್‌ ವರದಿ ಜಾರಿಗೊಳಿಸ ಬೇಕೆಂದು ಆಗ್ರಹಿಸಿ ನಾಡಿನಾದ್ಯಂತ ಹೋರಾಟ ರೂಪಿ ಸಿದ; ಕವಿಕಲಾವಿದರೆಲ್ಲರನ್ನೂ ಬೀದಿಗಿಳಿಸಿ ಹೋರಾಡಿ ಸಿದ ಕೆಚ್ಚೆದೆಯ ಕನ್ನಡಿಗ ಚಿಮೂ. ಪರಭಾಷಿಕರ ದಬ್ಟಾಳಿಕೆಯನ್ನು ವಿರೋಧಿಸಲು ಕಿಂಚಿತ್‌ ನಾಲಗೆಯೂ ಏಳದ ಕನ್ನಡಿಗರ ನಿರಭಿಮಾನಕ್ಕೆ ಕುದಿದು ಸಿಡಿದೆದ್ದು ಹಂಪೆಯಲ್ಲಿ ಹೊಳೆಹಾರಲು ಹೊರಟ ಧೀಮಂತ ಚಿಮೂ. ಕನ್ನಡಿಗರ ಅಭಿಮಾನವನ್ನು ಬಡಿದೆಬ್ಬಿಸಲು ಶಕ್ತಿಕೇಂದ್ರಗಳನ್ನು ಸ್ಥಾಪಿಸಿ ಹೋರಾಟವನ್ನು ಉಸಿರಾಡಿದ ದಣಿವರಿಯದ ಗಟ್ಟಿಗ ಚಿಮೂ. ಚಿಮೂ ಮಾತಾಡು ತ್ತಾರೆಂದರೆ ಒಂದು ಹೊಡೆತ, ಎರಡು ತುಂಡು ಎಂಬಂತೆ. ಅವರು ಬರೆಯುತ್ತಾರೆಂದರೆ ಅಲ್ಲಿ ಸತ್ಯವಲ್ಲದೆ ಯಾವ ನಯನಾಜೂಕಿಗೂ ಜಾಗವಿಲ್ಲ. ಅನ್ನಿಸಿದ್ದನ್ನು ಸ್ಪಷ್ಟವಾಗಿ ಹೇಳುತ್ತೇನೆ. ಆದರೆ, ಆ ಅನ್ನಿಸಿಕೆ ಒಂದೇ ಕ್ಷಣಕ್ಕೆ ಅನ್ನಿಸಿದ್ದಲ್ಲ. ಅದರ ಹಿಂದೆ ಕಠೊರ ವಸ್ತುನಿಷ್ಠ ಚಿಂತನೆ ಇರುತ್ತದೆ. ನಾನು ಅಳುಕುವುದು ಅಸತ್ಯ, ಅಪ್ರಾಮಾಣಿಕತೆ ನನ್ನ ಬರಹಗಳಲ್ಲಿ ಅಂತೆಯೇ ಬದುಕಿನಲ್ಲಿ ಕಾಣಿಸಿ ಕೊಳ್ಳುವ ಸಾಧ್ಯತೆಯ ಬಗ್ಗೆ ಎಂದ ವಜ್ರಕಠೊರ ಸತ್ಯ ನಿಷ್ಠರು ಚಿಮೂ. ಬರೆದ 40 ಕೃತಿಗಳಲ್ಲಿ, 400 ಲೇಖನ ಗಳಲ್ಲಿ ಅಲ್ಲಿಲ್ಲಿ ಹುಡುಕಿದರೆ ಈಗ ಸಾಬೀತಾಗಿರುವ ಒಂದೋ ಎರಡೋ ತಪ್ಪು ಗೋಚರಿಸಿಯಾವು- ಗುಲಗಂಜಿಯ ಚುಕ್ಕೆಯಂತೆ. ಆದರೆ ಅಪ್ರಾಮಾಣಿಕತೆ? ಅದಕ್ಕಲ್ಲಿ ಯಾವಜ್ಜೀವ ಅವಕಾಶವೇ ಇಲ್ಲ.

ಚಿದಾನಂದಮೂರ್ತಿಗಳನ್ನು ಇಂದು ಕನ್ನಡನಾಡು ಅಪ್ರತಿಮ ಇತಿಹಾಸಜ್ಞ, ಚರಿತ್ರಕಾರ ಎಂದು ಗುರುತಿಸುತ್ತದೆ. ತಪ್ಪಲ್ಲ. ಆದರೆ, ಭಾಷಾ ಪ್ರಾಧ್ಯಾಪಕರಾಗಿ ಅವರು ಮಾಡಿದ ಸಾಧನೆ ಅದಕ್ಕಿಂತ ಒಂದು ತೂಕ ಘನವಾದದ್ದೇ. ಉದಾಹರಣೆಗೆ ಅವರು 1965ರಲ್ಲಿ ಬರೆದ ಭಾಷಾವಿಜ್ಞಾನದ ಮೂಲತತ್ತÌಗಳು, ಆ ಕ್ಷೇತ್ರದಲ್ಲಿ ಇಂದಿಗೂ ಆಚಾರ್ಯಕೃತಿ. ಅಂಥ ಇನ್ನೊಂದು ಹೊತ್ತಗೆ ಬಂದಿಲ್ಲ. ಪಾಣಿನಿ, ಪತಂಜಲಿ, ಕಾತ್ಯಾಯನರಂಥ ಭಾರತೀಯ ಭಾಷಾವಿಜ್ಞಾನಿಗಳ ಜೊತೆ ಗ್ರೀಕ್‌-ಲ್ಯಾಟಿನ್‌ ವೈಯಾಕರಣಿಗಳನ್ನೂ ಆಧುನಿಕ ಭಾಷಾಶಾಸ್ತ್ರಿಗಳಾದ ರಾಸ್ಯ, ಡಿ. ಸಸ್ಸೂರ್‌, ಸಫೀರ್‌, ಬ್ಲೂಮ್‌ ಫಿಲ್ಡ್‌ ಮೊದಲಾ ದವರನ್ನೂ ಏಕನಿಷ್ಠೆಯಿಂದ ಅಭ್ಯಸಿಸಿ ಬರೆದ ಉದ್ಗಥ ಅದು. ಅನುಕರಣವಾದ, ಉದ್ಗಾರವಾದ, ಅನುಸರಣ ವಾದ ಮುಂತಾದ ಹಲವು ವಾದಗಳನ್ನು ಹಲಸಿನ ಹಣ್ಣು ಬಿಡಿಸಿ ತೊಳೆಗಳನ್ನು ಬೇರ್ಪಡಿಸಿದಂತೆ ನಮ್ಮ ಮುಂದೆ ಅನಾವರಣ ಮಾಡುವ ಅನನ್ಯ ಕೃತಿ ಅದು.

ಸ್ಥಳ ನಾಮ ಶೋಧ
ಸ್ಥಳನಾಮಗಳ ವಿಶೇಷಗಳ ಬಗ್ಗೆ ಶಂಬಾ ಜೋಶಿ ಮತ್ತು ಸೇಡಿಯಾಪು ಬಳಿಕ ಪಾತಾಳಗರಡಿ ಹಿಡಿದು ಸಂಶೋಧನೆ ಮಾಡಿದ ಮೂರನೇ (ಮತ್ತು ಕೊನೆಯ?) ವಿದ್ವಾಂಸ ರಿದ್ದರೆ ಅದು ಚಿಮೂ ಒಬ್ಬರೇ. ಕರ್ನಾಟಕದಲ್ಲಿ ಲಂಬಾಣಿ ಸಮುದಾಯದ ಹಲವು ವೈಶಿಷ್ಟ್ಯಗಳ ಬಗ್ಗೆ ಹೆಚ್ಚು ಬರೆದ ಭಾಷಾವಿಜ್ಞಾನಿ ಅವರೇ. ಲಂಬಾಣಿಗಳಲ್ಲಿ ಒಂದೇ ಊರಿಗೆ ಎರಡು ಹೆಸರಿಡುವ ವಿಚಿತ್ರ ಕ್ರಮವಿದೆ ಎಂಬ ಕುತೂಹಲಕರ ಸಂಗತಿಯನ್ನು ತಿಳಿಸಿದ್ದು ಮಾತ್ರವಲ್ಲ; ಅದೇಕೆ ಹಾಗೆ ಎಂಬ ಪ್ರಶ್ನೆಗೆ ಸಮಾಜಶಾಸ್ತ್ರಜ್ಞನಾಗಿ ಉತ್ತರ ತೆಗೆವ ಕೆಲಸವನ್ನೂ ಮಾಡಿದ್ದಾರೆ. 12ನೇ ಶತಮಾನಕ್ಕಿಂತ ಹಿಂದೆ (ಹಳೆ)ಕನ್ನಡದಲ್ಲಿ ತಂದೆ-ತಾಯಿ ಎಂಬುದಕ್ಕೆ ಕ್ರಮವಾಗಿ ಅಮ್ಮ, ಅಬ್ಬೆ ಎಂಬ ಪದಗಳಿದ್ದುವೆಂಬುದನ್ನು ನಿಖರವಾಗಿ ಉದಾಹರಣೆಗಳ ಸಹಿತ ಮಂಡಿಸುವ ಕೆಲಸವನ್ನು ಚಿಮೂ ಮಾಡಿದರು (ತುಳುವಿನಲ್ಲಿ ಈ ರೂಪಗಳು ಇನ್ನೂ ಉಳಿದಿವೆ). ಅಲ್ಲಮ ಎಂಬ ಪದದಲ್ಲಿ ಅಂತ್ಯದ ಮಕಾರ, ಅಮ್ಮ ಎಂಬುದರ ಪಳೆಯುಳಿಕೆ ಎಂದೂ ಉತ್ತರ ಕರ್ನಾಟಕದಲ್ಲಿ ಈಗ ಉಳಿದಿರುವ ಬೇ ಎಂಬ ಪದ (ಯವ್ವಾಬೇ) ಅಬ್ಬೆ ಎಂಬ ಪದದ ಸವಕಲು ಅಂಶ ಎಂದೂ ಗುರುತಿಸಿದವರು ಅವರೇ. ಭಾಷೆ ಆಧುನಿಕವಾಗುತ್ತ ಹೇಗೆ, ಯಾವೆಲ್ಲ ಪ್ರಭಾವಕ್ಕೊಳಗಾಗಿ ಬದಲಾಗುತ್ತದೆ ಮತ್ತು ಭಾಷೆಯ ಸವಕಳಿ ಹೇಗಾಗುತ್ತದೆ ಎಂಬುದನ್ನು ವೈಜ್ಞಾನಿಕ ಪದ್ಧತಿಗಳಿಂದ ಅಧ್ಯಯನ ಮಾಡಿದ ಮೊದಲ ಭಾಷಾಶಾಸ್ತ್ರಿಗಳು ಚಿಮೂ. ತನ್ನನ್ನು ತಾನು ಕನ್ನಡ ಗರುಡ ಎಂದು ಉದ್ಘೋಷಿಸಿಕೊಂಡಿದ್ದ ಚಿಮೂ, ಸಂಶೋಧನೆಯ ದಾರಿಯಲ್ಲಿ ಗುಬ್ಬಚ್ಚಿಯನ್ನೂ ಬಿಟ್ಟವರಲ್ಲ! ಆ ಹಕ್ಕಿಯ ಹೆಸರಲ್ಲಿರುವ ಅಚ್ಚಿ ಎಂಬ ಪದ, ವಾತ್ಸಲ್ಯಸೂಚಕ ಎಂದು ಕಂಡುಹಿಡಿದವರೂ ಅವರೇ! ಹಳೆಯ, ಮರೆತುಹೋಗಿರುವ ಶಬ್ದಗಳನ್ನು ಭಾಷೆಯ ಗಣಿಯಿಂದ ಬಗೆದು ಹೊರತೆಗೆದು ಸೋಸಿ ಅಪರಂಜಿ ಚಿನ್ನವಾಗಿಸುವ ಸಂಶೋಧನಾ ಕೆಲಸದ ಜೊತೆಗೇ ಚಿಮೂ, ಹಲವು ಹೊಸಗನ್ನಡ ಪದಗಳನ್ನು ಟಂಕಿಸಿ ಶಬ್ದ ಕೋಶಕ್ಕೆ ಜಮೆ ಮಾಡಿದರು. ಉದಾಹರಣೆಗೆ, ಪುರಾ ವಸ್ತುಶಾಸ್ತ್ರ, ಜಾನಪದಶಾಸ್ತ್ರ, ಅಭಿಜ್ಞೆ, ಸಂಪ್ರಬಂಧ, ಪ್ರ ಹೇಳಿಕೆ, ನಿರ್ದಿಷ್ಟ, ಕುಲನಾಮ, ಸಮಾಜೋ- ಸಾಂಸ್ಕೃತಿಕ ಅಧ್ಯಯನ, ವಾರ್ಗಿಕ ಮುಂತಾದ ಪಾರಿ ಭಾಷಿಕ ಪದಗಳನ್ನು, ಅವುಗಳಿಗೆ ಈಗಿರುವ ಅರ್ಥದಲ್ಲಿ ಮೊದಲ ಬಾರಿ ಬಳಸಿದವರು ಚಿದಾನಂದಮೂರ್ತಿಗಳು.

ಚಿಮೂ ಇನ್ನಿಲ್ಲ, ನಿಜ. ಆದರೆ, ಅವರು ಮಾಡಿ ತೋರಿಸಿದ ಕೆಲಸವೂ, ಮಾಡಲೆಂದು ಬಿಟ್ಟು ಹೋಗಿರುವ ದಾರಿಯೂ ನಮ್ಮ ಮುಂದಿದೆ. ಅವರ ಬಹುತೇಕ ಸಂಶೋಧನೆಗಳ ಅಂತರ್ವಾಹಿನಿಯಾಗಿದ್ದ ಧಾಟಿ: ನಾನಿಷ್ಟು ದೂರ ನಡೆದಿದ್ದೇನೆ, ಉಳಿದವರು ಇದನ್ನು ಮುಂದುವರಿಸಬೇಕು – ಎಂಬುದೇ ಆಗಿತ್ತು. ಚಿದಾ ನಂದಮೂರ್ತಿಗಳು ಇಹದ ವ್ಯವಹಾರ ಮುಗಿಸಿಹೊರಟಿ ರಬಹುದು. ಆದರೆ, ಅಲ್ಲಿ ಕೈಲಾಸದ ಸ್ಥಳನಾಮದ ಸಂಶೋಧನೆ ಕೈಗೆತ್ತಿಕೊಂಡಿರಬಹುದು ಎಂಬುದೇ ಸತ್ಯಕ್ಕೆ ಹತ್ತಿರದ ಕಲ್ಪನೆ!

– ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

Visa Extended: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಿಸಿದ ಭಾರತ

6-gangolli

Gangolli: ಮರದ ದಿಮ್ಮಿಗೆ ಡಿಕ್ಕಿ ಹೊಡೆದ ಮೀನುಗಾರಿಕಾ ದೋಣಿ

BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್‌

BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್‌

1-kadkona

Mudigere; ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೃ*ತ್ಯು

1-H-R

Bollywood ನಲ್ಲಿ ಹೃತಿಕ್ ರೋಷನ್ 25 ವರ್ಷ; ಸಂಕೋಚ, ಆತಂಕ ಈಗಲೂ ಇದೆ!

Arrested: ಪೈಂಟ್‌ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ

Arrested: ಪೈಂಟ್‌ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ

v-narayanan

ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

EC-Comm-sangreshi1

ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Explainer; ಭಾರತದ ಪರಮಾಣು ಯುಗದ ರೂವಾರಿಗಳು: ಡಾ. ಆರ್ ಚಿದಂಬರಂ & ಡಾ. ರಾಜಾ ರಾಮಣ್ಣ

Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…

Trump-Maga

Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

Visa Extended: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಿಸಿದ ಭಾರತ

6-gangolli

Gangolli: ಮರದ ದಿಮ್ಮಿಗೆ ಡಿಕ್ಕಿ ಹೊಡೆದ ಮೀನುಗಾರಿಕಾ ದೋಣಿ

BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್‌

BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್‌

1-kadkona

Mudigere; ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೃ*ತ್ಯು

5

Bajpe: ಕೆಂಜಾರು ಹಾಸ್ಟೆಲ್‌  ಕೊಳಚೆ ನೀರು ಖಾಸಗಿ ಜಾಗಕ್ಕೆ; ಸುತ್ತಮುತ್ತ ದುರ್ವಾಸನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.