ಊಟಕ್ಕಿಲ್ಲದ ಉಪ್ಪಿನಕಾಯಿಯಂತಾದ ಸ್ಲಿಪ್‌ವೇ
4 ವರ್ಷಗಳು ಕಳೆದರೂ ಬಗೆಹರಿಯದ ಸಮಸ್ಯೆ; ತುಕ್ಕು ಹಿಡಿದ ಯಂತ್ರಗಳು
Team Udayavani, Jan 13, 2020, 5:35 AM IST
ಮೀನುಗಾರರಿಗೆ ನೆರವಾಗಲಿ ಎಂಬ ಕಾರಣಕ್ಕೆ ಕೋಟಿಗಟ್ಟಲೆ ರೂ. ಖರ್ಚು ಮಾಡಿ ನಿರ್ಮಿಸಲಾದ ಸ್ಲಿಪ್‌ವೇ ಇದೀಗ ಪ್ರಯೋಜನಕ್ಕಿಲ್ಲವಾಗಿದೆ. ನಿರ್ವಹಣೆ ಸಮಸ್ಯೆ, ಇದರ ಬಗ್ಗೆ ಇಚ್ಛಾಶಕ್ತಿ ಕೊರತೆಯಿಂದ ಸ್ಲಿಪ್‌ವೇ ಹಾಳು ಬೀಳುತ್ತಿದೆ.
ಮಲ್ಪೆ: ಮೀನುಗಾರರ ಬಹುಕಾಲದ ಬೇಡಿಕೆಯಾಗಿದ್ದ ಸ್ಲಿಪ್‌ವೇ ನಿರ್ವಹಣೆ ವಿಚಾರದಲ್ಲಿ ತಲೆದೋರಿದ್ದ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಸ್ಲಿಪ್‌ವೇ ನಿರ್ಮಾಣಗೊಂಡು ನಾಲ್ಕು ವರ್ಷಗಳು ಕಳೆದರೂ ಇನ್ನೂ ಮೀನುಗಾರರ ಉಪಯೋಗಕ್ಕೆ ಲಭ್ಯವಾಗದೇ ಗಗನ ಕುಸುಮವಾಗಿದೆ. ಅಳವಡಿಸಿದ ತಾಂತ್ರಿಕ ಪರಿಕರಗಳು ತುಕ್ಕು ಹಿಡಿದು ಶಿಥಿಲಾವಸ್ಥೆಗೊಂಡು ಪೊದೆಯೊಳಗೆ ಮುಚ್ಚಿಹೋಗಿದೆ.
ವ್ಯರ್ಥವಾದ ಪರಿಕರಗಳು
ಮಲ್ಪೆ ಮೀನುಗಾರಿಕಾ ಬಂದರಿನ ಬಾಪುತೋಟದ ಬಳಿಯ 3ನೇ ಹಂತದ ಕಾಮಗಾರಿಯೊಂದಿಗೆ ಅದೇ ಪ್ರದೇಶದಲ್ಲಿ ಹೊಂದಿಕೊಂಡು ಸ್ಲಿಪ್‌ವೇ (ಬೋಟ್‌ಗಳನ್ನು ಮೇಲೆಳೆದು ಇಳಿಸುವ ಕೇಂದ್ರ) ಅನ್ನು 2016ರಲ್ಲಿ ನಿರ್ಮಿಸಲಾಗಿತ್ತು. ಆತ್ಯಾಧುನಿಕ ತಾಂತ್ರಿಕ ಪರಿಕರಗಳನ್ನು ಅಳವಡಿಸಲಾಗಿದ್ದು, 13ಬೋಟ್‌ಗಳನ್ನು ಪಾರ್ಕಿಂಗ್ ಮಾಡಲು ಮತ್ತು 60 ಟನ್ ಸಾಮರ್ಥ್ಯದ ವರೆಗಿನ ಬೋಟ್‌ಗಳನ್ನು ಮೇಲೆತ್ತ ಬಹುದಾಗಿತ್ತು. ಇದೀಗ ಅತ್ಯಾಧುನಿಕ ಕಬ್ಬಿಣದ ಬೃಹತ್ ಟ್ರಾಲರ್ ಸಿಸ್ಟಂ, ಟ್ರಾಲರ್ ಟ್ರ್ಯಾÅಕ್‌ಗಳು, ಬೇರಿಂಗ್ ಗೇರ್ ವೀಲ್‌ಗಳು ಸಂಪೂರ್ಣ ತುಕ್ಕು ಹಿಡಿದಿದೆ.
ಮೀನುಗಾರರ ಸಂಘ ಹೇಳುವುದೇನು?
ಸುಮಾರು 50 ಸೆಂಟ್ಸ್ ವಿಶಾಲ ಜಾಗದಲ್ಲಿ 2.35 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲಾಗಿದೆ. ಮಲ್ಪೆ ಟೆಬಾ¾ ಶಿಪ್‌ಯಾರ್ಡ್ ಸಂಸ್ಥೆ ಮೆಕ್ಯಾನಿಕಲ್ ಕಾಮಗಾರಿಗೆ 77 ಲಕ್ಷ ರೂ. ಮತ್ತು ಸಿವಿಲ್ ಕಾಮಗಾರಿಗೆ 75 ಲಕ್ಷ ರೂ. ಗಳನ್ನು ಸಿಎಎಸ್‌ಆರ್ ನಿಧಿಯಿಂದ ನೀಡಿದೆ. ಉಳಿದ ಮೊತ್ತವನ್ನು ಸರಕಾರದಿಂದ ಭರಿಸಲಾಗಿತ್ತು. ಇದೆಲ್ಲ ಮಲ್ಪೆ ಮೀನುಗಾರ ಸಂಘದ ನೇತೃತ್ವ ಮತ್ತು ಹೋರಾಟದಿಂದ ಆಗಿದ್ದು ಹಾಗಾಗಿ ಆದರ ನಿರ್ವಹಣೆ ಮೀನುಗಾರರ ಸಂಘಕ್ಕೆ ನೀಡಬೇಕು ಎಂಬುದು ಸಂಘದ ವಾದವಾಗಿತ್ತು.
ಮಾತ್ರವಲ್ಲದೆ ಖಾಸಗಿಯವರಿಗೆ ನೀಡಿದರೆ ಮೀನುಗಾರರಲ್ಲಿ ಹೆಚ್ಚಿನ ಶುಲ್ಕವನ್ನು ಭರಿಸುವ ಸಾಧ್ಯತೆ ಇದೆ. ಹಾಗಾಗಿ ಸರಕಾರದ ನಿಯಮ, ಷರತ್ತುಗಳೊಂದಿಗೆ ಮೀನುಗಾರರ ಸಂಘಕ್ಕೆ ವಹಿಸಿಕೊಟ್ಟರೆ ಮೀನುಗಾರರಿಗೆ ಅನುಕೂಲವಾಗುವಂತೆ ಕಾರ್ಯ ನಿರ್ವಹಿಸಿಕೊಂಡು ಹೋಗಬಹುದು ಮತ್ತು ಕಡಿಮೆ ದರದಲ್ಲಿ ಸೇವೆ ನೀಡಬಹುದಾಗಿದೆ ಎನ್ನುವ ಅಭಿಪ್ರಾಯ ಮೀನುಗಾರ ಸಂಘದ್ದಾಗಿದೆ.
ಭರವಸೆ ಈಡೇರಬಹುದೇ?
ಕಳೆದ 2018ರ ಜುಲೈಯಲ್ಲಿ ಆಗಿನ ಮೀನುಗಾರಿಕೆ ಸಚಿವ ವೆಂಕಟರಮಣ ನಾಡಗೌಡ ಅವರು ಮಲ್ಪೆ ಬಂದರಿಗೆ ಭೇಟಿ ನೀಡಿದ ವೇಳೆ ಮೀನುಗಾರರು ಈ ಬಗ್ಗೆ ಮನವಿ ಮಾಡಿದಾಗ, ಕಡತ ಪರಿಶೀಲಿಸಿ ಸಂಘಕ್ಕೆ ನೀಡುವುದಾಗಿ ಭರವಸೆಯನ್ನು ನೀಡಿದ್ದರು. ಅನಂತರ ಸರಕಾರ ಬದಲಾಯಿತು. ಈಗಿನ ಮೀನುಗಾರಿಕೆ ಮತ್ತು ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಳೆದ ನ. 16ರಂದು ಮಲ್ಪೆ ಬಂದರಿಗೆ ಅಧಿಕಾರಿಗಳ ಜತೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಲಿಪ್‌ವೇ ನಿರ್ವಹಣೆ ಸಂಘಕ್ಕೆ ನೀಡುವ ಕುರಿತು ಇರುವ ಕಾನೂನು ವಿಚಾರದ ಬಗ್ಗೆ ಪರಿಶೀಲಿಸಿ ಸರಕಾರಿ ಹಂತದಲ್ಲಿ ಗರಿಷ್ಠ ಪ್ರಯತ್ನ ಮಾಡುವ ಭರವಸೆಯಿತ್ತಿದ್ದರು.
ಮೀನುಗಾರಿಕೆ ಪ್ರಮುಖ ಉದ್ಯಮವಾಗಿರುವ ಮಲ್ಪೆ ಪ್ರದೇಶದಲ್ಲಿ ಮೀನುಗಾರಿಕೆಗೆ ಬೇಕಾಗಿರುವ ಮೂಲಸೌಕರ್ಯಗಳ ಬೇಡಿಕೆಗೆ ಅಧಿಕಾರಿಗಳ ಸ್ಪಂದನೆ ಅಗತ್ಯವಾಗಿ ಬೇಕಾಗಿದೆ. ಸ್ಲಿಪ್‌ವೇ ಇನ್ನಾದರೂ ಉಪಯೋಗಕ್ಕೆ ಲಭ್ಯವಾಗಲಿ.
ಮೀನುಗಾರಿಕೆ
ಸರಕಾರ ಸ್ಲಿಪ್‌ವೇ ನಿರ್ವಹಣೆಗೆ ಸೂಕ್ತ ಅನುಕೂಲ ಕಲ್ಪಿಸಿ ಪ್ರಯೋಜನಕಾರಿಯಾದ ಕ್ರಮ ಕೈಗೊಳ್ಳಬೇಕೆನ್ನುವುದು ಆಶಯ.
ಸಿಗುವ ಭರವಸೆ ಇದೆ
ಎರಡು ವಾರಗಳ ಹಿಂದೆ ಜಿಲ್ಲಾಧಿಕಾರಿಗಳು ಸಭೆ ಕರೆದು ಇಲಾಖಾ ಅಧಿಕಾರಿಗಳು ಮತ್ತು ಮೀನುಗಾರ ಸಂಘದ ಜತೆಯಲ್ಲಿ ಚರ್ಚಿಸಿ, ನಿರ್ವಹಣೆಯನ್ನು ಮೀನುಗಾರ ಸಂಘಕ್ಕೆ ನೀಡುವ ಬಗ್ಗೆ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಅತೀ ಶೀಘ್ರದಲ್ಲಿ ನಿರ್ವಹಣೆ ಮೀನುಗಾರ ಸಂಘಕ್ಕೆ ಸಿಗುವ ಭರವಸೆ ಇದೆ.
-ಕೃಷ್ಣ ಎಸ್. ಸುವರ್ಣ,ಅಧ್ಯಕ್ಷರು, ಮಲ್ಪೆ ಮೀನುಗಾರರ ಸಂಘ
ವರದಿ ಕಳುಹಿಸಲಾಗಿದೆ
ಜಿಲ್ಲಾಧಿಕಾರಿಗಳ ಮುಖೇನ ಸಂಬಂಧಪಟ್ಟವರನ್ನು ಸೇರಿಸಿ ಸಭೆ ನಡೆಸಿ ಒಂದು ನಿರ್ಣಯವನ್ನು ಕೈಗೊಳ್ಳಲಾಗಿದೆ. ವರದಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಇಲಾಖೆಯ ಮುಖ್ಯ ಕಾರ್ಯದರ್ಶಿ ಅವರಿಗೆ ಕಳುಹಿಸಿಕೊಡಲಾಗಿದೆ.
-ಕೆ. ಗಣೇಶ್,
ಉಪನಿರ್ದೇಶಕರು,ಮೀನುಗಾರಿಕೆ ಇಲಾಖೆ
ವರದಿ ಸಲ್ಲಿಕೆ
ಸ್ಲಿಪ್‌ವೇ ಬಗ್ಗೆ ಮೀನುಗಾರಿಕೆ ಇಲಾಖೆಯ ಮುಖ್ಯ ಕಾರ್ಯದರ್ಶಿ ಅವರು ಜಿಲ್ಲಾಧಿಕಾರಿ ಮುಖೇನ ಸ್ಥಳೀಯ ಮೀನುಗಾರರ ಜತೆ ಸಭೆ ನಡೆಸಿ ಅಭಿಪ್ರಾಯ ತೆಗೆದುಕೊಳ್ಳುವಂತೆ ಮೀನುಗಾರಿಕೆ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ. ಅದರಂತೆ ಜಿಲ್ಲಾಧಿಕಾರಿಗಳು, ಇಲಾಖಾ ಅಧಿಕಾರಗಳು, ಮೀನುಗಾರರ ಸಭೆ ಕರೆದು ಸ್ಲಿಪ್ ವೇ ನಿರ್ವಹಣೆಯ ಕುರಿತು ಅದರ ಸಾಧಕ ಬಾಧಕಗಳ ಬಗ್ಗೆ ಮೀನುಗಾರ ಮುಖಂಡರುಗಳ ಜತೆ ಚರ್ಚಿಸಿ, ಮುಖ್ಯ ಕಾರ್ಯದರ್ಶಿ ಅವರಿಗೆ ವರದಿಯನ್ನು ಸಲ್ಲಿಸಿದ್ದಾರೆ.
-ನಟರಾಜ್ ಮಲ್ಪೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.