![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Jan 14, 2020, 3:07 AM IST
ಬೆಂಗಳೂರು: ಮಳೆಗಾಲದಲ್ಲಿ ಅಂಡರ್‌ಪಾಸ್‌ಗಳಲ್ಲಿ ಉಂಟಾಗುತ್ತಿರುವ ಪ್ರವಾಹ ಪರಿಸ್ಥಿತಿ ತಡೆಯುವ ನಿಟ್ಟಿನಲ್ಲಿ ಬಿಬಿಎಂಪಿ ವಿಶೇಷ ವಿನ್ಯಾಸದ ಇಂಗುಗುಂಡಿ ನಿರ್ಮಾಣಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಮಳೆಗಾಲದಲ್ಲಿ ಜಲಾವೃತಗೊಳ್ಳುವ ಒಂಭತ್ತು ಅಂಡರ್ ಪಾಸ್ ಹಾಗೂ ಒಂದು ಸರ್ವಿಸ್ ರಸ್ತೆಯಲ್ಲಿ ಇಂಗು ಗುಂಡಿ ನಿರ್ಮಿಸುವುದಕ್ಕೆ ಬಿಬಿಎಂಪಿ 55 ಲಕ್ಷ ರೂ. ಮೊತ್ತದಲ್ಲಿ ಯೋಜನೆ ರೂಪಿಸಿದೆ.
ಪಾಲಿಕೆ ಈಗಾಗಲೇ ಪ್ರಾಯೋಗಿಕವಾಗಿ ಬೆಂಗಳೂರು ಗಾಲ್ಫ್ ಕ್ಲಬ್ ಸಮೀಪದ ಲಿ ಮೆರಿಡಿಯನ್ ಅಂಡರ್ ಪಾಸ್‌ನಲ್ಲಿ ನಿರ್ಮಿಸಲಾಗಿದ್ದು, ಉಳಿದ ಒಂಭತ್ತು ಕಡೆಯೂ ಇಂಗು ಗುಂಡಿ ರಚನೆ ಮಾಡುವುದಕ್ಕೆ ಕೆಆರ್‌ಐಡಿಎಲ್ ಗುತ್ತಿಗೆ ನೀಡಿದೆ.
ವಿನ್ಯಾಸ ಬದಲಾವಣೆ: ಅಂಡರ್ ಪಾಸ್‌ಗಳಲ್ಲಿ ಮಳೆ ನೀರುಗಾಲುವೆಯ ವಿನ್ಯಾಸ ಬದಲಾವಣೆ ಮಾಡಲಾಗುತ್ತಿದೆ. ಅಂಡರ್ ಪಾಸ್‌ನ ವ್ಯಾಪ್ತಿಯಲ್ಲಿ ಬೀಳುವ ಮಳೆ ನೀರು ಮಾತ್ರ ಇಂಗುಗುಂಡಿ ಸೇರುವುದಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಉಳಿದಂತೆ ರಸ್ತೆ, ಸರ್ವಿಸ್ ರಸ್ತೆ ಕಡೆಯಿಂದ ಅಂಡರ್ ಪಾಸ್‌ಗೆ ಹರಿದು ಬರುವ ಮಳೆ ನೀರನ್ನು ತಡೆದು ಬೇರೆ ಕಡೆ ಹರಿದು ಹೋಗುವುದಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.
ಇದರಿಂದ ಅಂಡರ್ ಪಾಸ್‌ಗೆ ಹೆಚ್ಚಿನ ಪ್ರಮಾಣದ ಮಳೆ ನೀರು ಬರುವುದಿಲ್ಲ. ಬಂದ ನೀರು ಇಂಗು ಗುಂಡಿ ಸೇರಲಿದೆ ಎಂದು ರಸ್ತೆ ಮೂಲ ಸೌಕರ್ಯ ವಿಭಾಗದ ಅಧೀಕ್ಷಕ ಎಂಜಿನಿಯರ್ ಬಸವರಾಜ್ ಕಬಾಡೆ ತಿಳಿಸಿದ್ದಾರೆ. ಅಂಡರ್ ಪಾಸ್‌ನಲ್ಲಿ ಎರಡು ನೀರು ಶೇಖರಣೆ ತೊಟ್ಟಿ ನಿರ್ಮಿಸಲಾಗುತ್ತದೆ. ಒಂದು ತೊಟ್ಟಿ ಒಂದು ಮೀಟರ್ ಸುತ್ತಳತೆ ಹಾಗೂ 1.5 ಮೀಟರ್ ಅಳದ ತೊಟ್ಟಿ ನಿರ್ಮಿಸಲಾಗಿರುತ್ತದೆ.
ಐದು ಸಾವಿರ ಲೀಟರ್ ನೀರು ಶೇಖರಣೆ ಸಾಮರ್ಥ್ಯದ ಮತ್ತೂಂದು ಬೃಹತ್ ತೊಟ್ಟಿ ನಿರ್ಮಿಸಲಾಗಿರುತ್ತದೆ. ಸಣ್ಣ ತೊಟ್ಟಿಗೆ ಮಳೆ ನೀರು ಬಂದ ಸೇರುವುದಕ್ಕೆ ವ್ಯವಸ್ಥೆ ಮಾಡಲಾಗಿರುತ್ತದೆ. ಮಳೆ ನೀರಿನಲ್ಲಿ ತೇಲಿ ಬರುವ ಹೂಳು ತುಂಬಿ ಕೊಳ್ಳುವುದಕ್ಕೆ ಸಣ್ಣ ತೊಟ್ಟಿ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ನೀರು ದೊಡ್ಡ ತೊಟ್ಟಿಗೆ ನೀರು ಹರಿಯುವಂತೆ ಕೊಳವೆ ಅಳವಡಿಸಲಾಗಿರುತ್ತದೆ ಇನ್ನು ದೊಡ್ಡ ತೊಟ್ಟಿಯಲ್ಲಿ 80 ಅಡಿ ಕೊಳವೆ ಕೊರೆಯಲಾಗಿರುತ್ತದೆ.
ಅದರ ಮೇಲ್ಭಾಗದಲ್ಲಿ ದೊಡ್ಡ ಜಲ್ಲಿ ಕಲ್ಲು, ಸಣ್ಣ ಜಲ್ಲಿ ಕಲ್ಲು, ಮರಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗಿರುತ್ತದೆ. ದೊಡ್ಡ ತೊಟ್ಟಿಗೆ ಬಂದು ಸೇರುವ ನೀರು ನಿಧಾನವಾಗಿ ಕೆಳಭಾಗಕ್ಕೆ ಇಳಿದು ಕೊಳವೆ ಬಾವಿ ಮೂಲಕ ಅಂತರ್ಜಲ ಸೇರುವ ವ್ಯವಸ್ಥೆ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎಲ್ಲೆಲ್ಲಿ ಇಂಗು ಗುಂಡಿ: ದೊಡ್ಡನೆಕುಂದಿ ರೈಲ್ವೆ ಅಂಡರ್ ಪಾಸ್, ಪುಟ್ಟೇನಹಳ್ಳಿ ಅಂಡರ್ ಪಾಸ್, ಕದಿರೇನಹಳ್ಳಿ ಅಂಡರ್ ಪಾಸ್. ಬಸವಗುಡಿ ಪೊಲೀಸ್ ಠಾಣೆ ಬಳಿಕ ಟ್ಯಾಗೂರ್ ಅಂಡರ್ ಪಾಸ್, ಕೆ.ಆರ್. ವೃತ್ತ ಅಂಡರ್ ಪಾಸ್, ಮಹಾರಾಣಿ ಕಾಲೇಜು ಬಳಿಕ ಅರಮನೆ ರಸ್ತೆಯ ಅಂಡರ್‌ಪಾಸ್, ಕೆಂಪೇಗೌಡ ಅಂಡರ್ ಪಾಸ್, ಕಾಡುಬಿಸನಹಳ್ಳಿ ಅಂಡರ್ ಪಾಸ್ ಹಾಗೂ ಹೆಬ್ಬಾಳ ಗ್ರೇಡ್ ಸಪರೇಟರ್ ಸರ್ವೀಸ್ ರಸ್ತೆಯಲ್ಲಿ ಇಂಗು ಗುಂಡಿ ನಿರ್ಮಾಣಕ್ಕೆ ಬಿಬಿಎಂಪಿ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ.
You seem to have an Ad Blocker on.
To continue reading, please turn it off or whitelist Udayavani.