ಶೈಕ್ಷಣಿಕ ಕ್ರಾಂತಿಯ ಶ್ರೀವಿಬುಧೇಶತೀರ್ಥರು
Team Udayavani, Jan 14, 2020, 4:45 AM IST
ಉಡುಪಿ: ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿ ಮೂಲಕ ಅನೇಕ ಗುಣಮಟ್ಟದ ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಿದ ಕೀರ್ತಿ ಶ್ರೀಮಠದ 31ನೆಯ ಪೀಠಾಧಿಪತಿ ಶ್ರೀ ವಿಬುಧೇಶತೀರ್ಥರಿಗೆ ಸಲ್ಲುತ್ತದೆ. ಮೂಲ ವಿಜ್ಞಾನದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಶ್ರೀಪಾದರು, ಇದಕ್ಕಾಗಿಯೇ ಬೆಂಗಳೂರಿನಲ್ಲಿ ವಿಜ್ಞಾನ ಸಂಶೋಧನ ಕೇಂದ್ರವನ್ನು ತೆರೆದಿದ್ದರು. ಈಗ ಅನೇಕ ಪಿಎಚ್.ಡಿ. ಪದವೀಧರರು ಈ ಸಂಸ್ಥೆಯಿಂದ ಹೊರಬರುತ್ತಿದ್ದಾರೆ.
1928ರ ಡಿಸೆಂಬರ್ 29ರಂದು ಮೂಲ್ಕಿ ಸಮೀಪದ ಪಾವಂಜೆಯಲ್ಲಿ ಜನಿಸಿದ ರಮೇಶರು (ಪೂರ್ವಾಶ್ರಮದ ಹೆಸರು) ಕಡಿಯಾಳಿ ಹಿ.ಪ್ರಾ. ಶಾಲೆ, ಮೂಲ್ಕಿ, ಉಡುಪಿ ಬೋರ್ಡ್ ಹೈಸ್ಕೂಲ್‌ನಲ್ಲಿ ಓದಿದರು. ಬೋರ್ಡ್ ಹೈಸ್ಕೂಲ್‌ನಲ್ಲಿ ಮುಖ್ಯೋಪಾಧ್ಯಾಯರಾಗಿದ್ದ ರಾಕಿ ಫೆರ್ನಾಂಡಿಸ್ ಅವರು ರಮೇಶರಿಗೆ ಪಾಠ ಹೇಳಿದ್ದರು. ಪ್ರಾಯಃ ಇವರ ಇಂಗ್ಲಿಷ್ ಪಾಠದ ಬುನಾದಿಯೇ ರಮೇಶರಿಗೆ ಇಂಗ್ಲಿಷ್ ಪ್ರಭುತ್ವವನ್ನು ಸಾಧಿಸಿತೆನ್ನಬಹುದು.
1945ರಲ್ಲಿ ಶ್ರೀ ಅದಮಾರು ಮಠದ ಶ್ರೀವಿಬುಧಮಾನ್ಯತೀರ್ಥರು ಕಾಲವಾದಾಗ ಅದಮಾರು ಮಠಕ್ಕೆ ಪೀಠಾ ಪತಿ ನೇಮಿಸುವ ಹೊಣೆಗಾರಿಕೆ ದ್ವಂದ್ವ ಮಠವಾದ ಶ್ರೀಪಲಿಮಾರು ಮಠದ ಶ್ರೀರಘುಮಾನ್ಯತೀರ್ಥ ಶ್ರೀಪಾದರ ಮೇಲೆ ಬಿತ್ತು. 1945ರಲ್ಲಿ 17 ಪ್ರಾಯದ ರಮೇಶನಿಗೆ ಶ್ರೀ ರಘುಮಾನ್ಯತೀರ್ಥ ಶ್ರೀಪಾದರು ಸನ್ಯಾಸಾಶ್ರಮ ನೀಡಿ ಶ್ರೀವಿಬುಧೇಶತೀರ್ಥರೆಂದು ಅಭಿಧಾನಗೈದು ಪೀಠಾ ಧಿಪತಿಯಾಗಿ ನೇಮಿಸಿದರು.
ಎರಡು ಪರ್ಯಾಯ ವೈಭವ
ಶ್ರೀ ವಿಬುಧೇಶತೀರ್ಥರು ಎರಡು ಪರ್ಯಾಯ ಪೂಜೆಗಳನ್ನು 1956-57, 1972-73ರಲ್ಲಿ ನೆರವೇರಿಸಿ ಮೂರನೆಯ ಪೂಜಾ ಅವಕಾಶವನ್ನು ಶಿಷ್ಯ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರಿಗೆ ಬಿಟ್ಟುಕೊಟ್ಟರು. ಶ್ರೀ ವಿಬುಧೇಶತೀರ್ಥರು ತಮ್ಮ ಪರ್ಯಾಯ ಕಾಲದಲ್ಲಿ ಅನೇಕ ಸುಧಾರಣೆಗಳನ್ನು ತಂದವರು. ಶ್ರೀಪುತ್ತಿಗೆ ಮಠದ ಶತಾಯುಷಿ ಶ್ರೀ ಸು ಧೀಂದ್ರತೀರ್ಥರಲ್ಲಿ ವಿಶೇಷ ಗೌರವವನ್ನು ಹೊಂದಿದ ಶ್ರೀವಿಬುಧೇಶತೀರ್ಥರು ಅವರ ಶತಮಾನೋತ್ಸವದ ಸವಿನೆನಪಿಗಾಗಿ ಶ್ರೀಕೃಷ್ಣನಿಗೆ 85,000 ತೊಲೆ ಬೆಳ್ಳಿಯಿಂದ ರಥವನ್ನು ಸಮರ್ಪಿಸಿದರು. ಗುರು ಶ್ರೀರಘುಮಾನ್ಯತೀರ್ಥರ ಕನಸಾದ ಉಡುಪಿ ಸಂಸ್ಕೃತ ಕಾಲೇಜಿನ ಕಟ್ಟಡವನ್ನು ಪೀಠಾಧಿಪತಿಯಾಗಿ ಆರೇ ವರ್ಷಗಳಲ್ಲಿ ಪೂರ್ತಿಗೊಳಿಸಿ 1951ರಲ್ಲಿ ಉದ್ಘಾಟನೆಗೊಳಿಸಿದರು. ಶ್ರೀಕೃಷ್ಣನಿಗೆ ರಾತ್ರಿ ಏಕಾಂತ ಸೇವೆಗೆ 155 ತೊಲೆಯ ಚಿನ್ನದ ತೊಟ್ಟಿಲು ಸಮರ್ಪಿಸಿದರು.
ಶಿಕ್ಷಣ ಸಂಸ್ಥೆಗಳು
ಅದಮಾರು ಮಠ ಶಿಕ್ಷಣ ಸಂಸ್ಥೆ ಈಗ 35 ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ಇವುಗಳಲ್ಲಿ 26 ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದವರು ಶ್ರೀವಿಬುಧೇಶತೀರ್ಥ ಶ್ರೀಪಾದರು. ಭಕ್ತರು ಮಠಕ್ಕೆ ನೀಡಿದ ಹಣ ವಿನಿಯೋಗಿಸಿ ಕಟ್ಟಿ ಬೆಳೆಸಿದ ಸಂಸ್ಥೆಗಳಿವು. ಇವರು ಸ್ಥಾಪಿಸಿದ ಪ್ರಥಮ ಸಂಸ್ಥೆ ಅದಮಾರಿನ ಪ್ರೌಢ ಶಾಲೆ, ಇದಕ್ಕೂ ಮುನ್ನ ಉಡುಪಿ ಸಂಸ್ಕೃತ ಕಾಲೇಜಿನ ಕಟ್ಟಡವನ್ನು ನಿರ್ಮಿಸಿದ್ದರು.
ವಿದ್ಯಾರ್ಥಿಗಳೇ ಆಸ್ತಿ!
“ಹಿಂದೆ ಅದಮಾರು ಮಠಕ್ಕೆ 16,000 ಮುಡಿ ಹುಟ್ಟುವಳಿ ಇತ್ತು. ಭೂಮಸೂದೆ ಕಾಯ್ದೆ ಬಂದಾಗ ಆಕ್ಷೇಪಣೆ ಸಲ್ಲಿಸಲಿಲ್ಲ. ಈಗ 17,000 ವಿದ್ಯಾರ್ಥಿಗಳು ನಮ್ಮ ಸಂಸ್ಥೆಗಳಲ್ಲಿ ಓದುತ್ತಿದ್ದಾರೆ. ಇವರೇ ನಮ್ಮ ಆಸ್ತಿ. ಇವರು ದೇಶದ ಆಸ್ತಿಯಾಗಬೇಕು’ ಎಂದು ಶ್ರೀಪಾದರು ಭಾಷಣಗಳಲ್ಲಿ ಹೇಳುತ್ತಿದ್ದರು. ಬೆಂಗಳೂರಿನಲ್ಲಿರುವ ವಿಜ್ಞಾನ ಸಂಶೋಧನ ಕೇಂದ್ರವನ್ನು ತೆರೆಯಲು ಮುಖ್ಯ ಕಾರಣ ಪ್ರತಿಭಾ ಪಲಾಯನ ತಡೆಗಟ್ಟಲೆಂದು. ಇವರಿಗೆ ಭೌತ ವಿಜ್ಞಾನದ ಮೇಲೆ ವಿಶೇಷ ಆಸಕ್ತಿ ಇತ್ತು. ಡಾ| ಸಿ.ಎನ್. ಆರ್.ರಾವ್, ಡಾ| ರಾಜಾರಾಮಣ್ಣ, ಡಾ| ಯು.ಆರ್.ರಾವ್ ಅವರಂತಹ ದಿಗ್ಗಜರು ಶ್ರೀಪಾದರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು.
ಜಾಗತಿಕ ಸಮ್ಮೇಳನಗಳಲ್ಲಿ
1995ರ ಎ.29ರಿಂದ ಮೇ 3ರವರೆಗೆ ಯುನೈಟೆಡ್ ಕಿಂಗ್‌ಡಮ್‌ನ ವಿಂಡ್ಸರ್‌ಕ್ಯಾಸಲ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ “ಧರ್ಮ ಮತ್ತು ನೈಸರ್ಗಿಕ ಸಂರಕ್ಷಣೆ’ ಕುರಿತು, 1998ರ ಫೆ.18-19ರಂದು ಲಂಡನ್‌ನಲ್ಲಿ ನಡೆದ ಸಮ್ಮೇಳನದಲ್ಲಿ “ಕರ್ಮದಿಂದ ಸರ್ವಸಾಧ್ಯತೆ ಮತ್ತು ಕೃಷಿ ಸಿದ್ಧಾಂತ’ ಕುರಿತು ಪ್ರಬಂಧ ಮಂಡಿಸಿದ್ದರು. ಮೊದಲ ಸಮ್ಮೇಳನದಲ್ಲಿ ಭಾರತದಿಂದ ಪಾಲ್ಗೊಂಡವರಲ್ಲಿ ಇವರೂ ಒಬ್ಬರಾಗಿದ್ದರು. 2ನೇ ಸಮ್ಮೇಳನದಲ್ಲಿ ವಿಶ್ವಸಂಸ್ಥೆ ಅಧ್ಯಕ್ಷರ ಕೋರಿಕೆ ಮೇರೆಗೆ ಭಾರತದಿಂದ ಪಾಲ್ಗೊಂಡ ಏಕೈಕ ಸಂತರಾಗಿದ್ದರು.
ಬಡವರಿಗೆ ಮನೆ ನಿರ್ಮಾಣ
ಸಂಗಮೇಶ್ವರಪೇಟೆ, ಬೆಂಗಳೂರಿನ ಬೈರತಿ ಬಂಡೆ, ಮಾಕೆಕಿಡ್ಡಿಪಲ್ಲಿಯಲ್ಲಿ ಬಡವರಿಗೆ ಒಟ್ಟು 131 ಮನೆ ನಿರ್ಮಾಣ, ಬಡಜನರಿಗೆ ವೈದ್ಯಕೀಯ ಚಿಕಿತ್ಸೆಗೆ ಏಳು ಚಿಕಿತ್ಸಾಲಯ, ಬರ ಬಂದ ಸಂದರ್ಭ ಆಂಧ್ರಪ್ರದೇಶ ಮತ್ತು ಕರ್ನಾಟಕದ ಗಡಿಭಾಗ ಬಾಗೇಪಲ್ಲಿಯಲ್ಲಿ ಎರಡು ಗ್ರಾಮಗಳನ್ನು ದತ್ತು ಸ್ವೀಕರಿಸಿ ನೀರು, ಆಹಾರ, ವಸತಿ ವ್ಯವಸ್ಥೆಯನ್ನು ನಿರ್ಮಿಸಿದ್ದು, ಕೃಷ್ಣಾನಗರದಲ್ಲಿ (ಬೈರತಿಬಂಡೆ) ದಲಿತರಿಗಾಗಿ ಇಂಗ್ಲೀಷ್ ಮೀಡಿಯಂ ಶಾಲೆ, ದೇವಸ್ಥಾನ ನಿರ್ಮಾಣ ಮಾಡಿದ್ದರು. 1945ರ ಜೂನ್ 28ರಂದು ಸನ್ಯಾಸಾಶ್ರಮ ಸ್ವೀಕರಿಸಿದ್ದ ಶ್ರೀವಿಬುಧೇಶತೀರ್ಥರು 2009ರ ಸೆಪ್ಟೆಂಬರ್ 15ರಂದು 81ನೆಯ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು.
ಬ್ರಿಟಿಷರಿಗೆ “ಥೂ’ ಎಂದಿದ್ದ ಹೋರಾಟಗಾರ
1942ರ ಆಗಸ್ಟ್ 9ರಂದು ಕ್ವಿಟ್ ಇಂಡಿಯಾ ಚಳವಳಿ ನಡೆಯುವಾಗ ದೇಶಾದ್ಯಂತ ಚಳವಳಿ ನಡೆಸಲು ನಿರ್ಧರಿಸಲಾಗಿತ್ತು. ಮೂಲ್ಕಿ ವೃತ್ತದಲ್ಲಿ ಸಭೆ ಏರ್ಪಟ್ಟಿತ್ತು. ಭಾಷಣ ಮಾಡಿದ ಪ್ರಮುಖರನ್ನು ಪೊಲೀಸರು ಬಂಧಿಸುವುದಿತ್ತು. ಮಕ್ಕಳು ಭಾಷಣ ಮಾಡಿದರೆ ಬಂಧಿಸಲು ಕಾನೂನಿನ ತೊಡಕು ಆಗುತ್ತಿತ್ತು. ಹೀಗೆ ರಮೇಶರಿಗೆ (ವಿಬುಧೇಶತೀರ್ಥರು) ಭಾಷಣದ ಪಟ್ಟವನ್ನು ಕಾಂಗ್ರೆಸ್ ನಾಯಕರು ಕಟ್ಟಿದರು. ಮೂಲ್ಕಿ ಕಡವಿನಬಾಗಿಲು ಶಾಂಭವಿ ಗಾರ್ಡನ್‌ನಿಂದ ಗಾಂಧಿ ಮೈದಾನದವರೆಗೆ 1.5 ಕಿ.ಮೀ. ಉದ್ದದ ಪ್ರತಿಭಟನ ಮೆರವಣಿಗೆ ನಡೆಯಿತು. ಇದೊಂದು ಅಭೂತಪೂರ್ವ ಮೆರವಣಿಗೆಯಾಗಿತ್ತು.
“ಭಾರತೀಯರನ್ನು ಶೋಷಣೆ ಮಾಡಿ, ರಾಜ್ಯಗಳ ವಾರಸುದಾರಿಕೆಗೆ ದತ್ತಕ್ಕೆ ಪಡೆದ ಮಕ್ಕಳು ಅರ್ಹರಲ್ಲ ಎಂಬ ಕಾನೂನು ತಂದು ನಮ್ಮೊಳಗೆ ಕಚ್ಚಾಟ ಏರ್ಪಡಿಸಿ ಅಧಿಕಾರವನ್ನು ಕಬಳಿಸಿದವರು ಬ್ರಿಟಿಷರು. ಭಾರತದ 30 ಕೋಟಿ ಜನರು (ಆಗಿನ ಜನಸಂಖ್ಯೆ) ಹಿಮಾಲಯದ ತುತ್ತತುದಿಗೇರಿ “ಥೂ’ ಎಂದು ಉಗುಳಿದರೆ ಕೊಚ್ಚಿ ಹೋಗುವಷ್ಟು ಇರುವ ಜನರು ನಮ್ಮನ್ನು ಆಳುತ್ತಿದ್ದಾರೆ’ ಎಂದು ರಮೇಶ ಘರ್ಜಿಸಿ ಭಾಷಣ ಮಾಡಿದಾಗ ಪ್ರಚಂಡ ಕರತಾಡನ ಕೇಳಿಬಂತು. ಇದನ್ನು ಸ್ವಾತಂತ್ರ್ಯ ಹೋರಾಟಗಾರ ಶಂಭು ಶೆಟ್ಟಿಯವರು ಆಗಾಗ ನೆನಪಿಸಿಕೊಳ್ಳುತ್ತಿದ್ದರು.
ಮುಂಡಾಸಿನ ಗುಟ್ಟು ಪಾತ್ರಿಯಿಂದ ರಟ್ಟು!
ಕಳೆದ ಶತಮಾನದ ಆದಿ ಭಾಗದಲ್ಲಿ ಅದಮಾರು ಮಠದ 29ನೆಯ ಪೀಠಾಧಿಪತಿಯಾಗಿದ್ದ ಶ್ರೀವಿಬುಧಪ್ರಿಯತೀರ್ಥರ ಒಂದು ಕಣ್ಣಿನ ರೆಪ್ಪೆ ಮುಚ್ಚಿಕೊಂಡಿರುತ್ತಿತ್ತು. ಅದಕ್ಕಾಗಿ ಅವರು ರೆಪ್ಪೆಯನ್ನು ಮೇಲಕ್ಕೆತ್ತಿ ಮುಂಡಾಸು ಸುತ್ತಿಕೊಳ್ಳುತ್ತಿದ್ದರು. ಮುದ್ರಾಡಿ ಬೆಳಗುಂಡಿ ಶ್ರೀಮಹಾಲಿಂಗೇಶ್ವರ ದೇವಸ್ಥಾನ ಆಗ ಅದಮಾರು ಮಠದ ಆಡಳಿತದಲ್ಲಿತ್ತು. ಅಲ್ಲಿನ ಉತ್ಸವದ ಸಮಯದಲ್ಲಿ ಶ್ರೀಪಾದರು ದೇವಸ್ಥಾನಕ್ಕೆ ಹೋದರು. ಅಲ್ಲಿ ದರ್ಶನ ಸೇವೆ ನಡೆಯುತ್ತಿತ್ತು. ದರ್ಶನ ಪಾತ್ರಿಗಳು ಥಟ್ಟನೆ ಮುಂಡಾಸನ್ನು ಎತ್ತಿದರು. ಆಗ ಕಣ್ಣಿನ ರೆಪ್ಪೆ ಮುಚ್ಚಿಕೊಳ್ಳಲಿಲ್ಲ. ಮತ್ತೆ ಸರಿಯಾಯಿತು.
ಎಂಥ ದೊಡ್ಡ ಮನಸ್ಸು?
ಬೆಂಗಳೂರಿನ ದೊಡ್ಡಗುಬ್ಬಿಯಲ್ಲಿ ದಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅವರೆಲ್ಲ ಬಡವರಾಗಿದ್ದರು. ಶ್ರೀವಿಬುಧೇಶತೀರ್ಥರು ಜಾಗವನ್ನು ಖರೀದಿಸಿ ಅಲ್ಲಿ ಶಾಲೆ, ದೇವಸ್ಥಾನಗಳನ್ನು ನಿರ್ಮಿಸಿದರು. ಮಕ್ಕಳ ಪೋಷಕರಿಗೆ ತೋಟದಲ್ಲಿ ಕೆಲಸ ಕೊಟ್ಟು, ಮಕ್ಕಳಿಗೆ ಶಾಲೆಗಳನ್ನು ತೆರೆದರು. ತೋಟದಲ್ಲಿ ಮಠಕ್ಕೆ ಬೇಕಾದ ಎಲ್ಲ ಬೇಳೆಕಾಳುಗಳನ್ನು ಅಲ್ಲಿಯೇ ಬೆಳೆಸಿ ಸ್ವಾವಲಂಬಿತನವನ್ನು ತೋರಿಸಿದ್ದರು. ಅತ್ಯುತ್ತಮ ಕಸಿ ಮಾವಿನ ಗಿಡಗಳನ್ನು ಖರೀದಿಸಿ “ಸಿರಿವಂತರು ತಿನ್ನುವ ಮಾವಿನ ಹಣ್ಣುಗಳನ್ನು ನೀವು ತಿನ್ನಬೇಕು’ ಎಂದು ದಲಿತರ ಕಾಲನಿಯಲ್ಲಿ ವಿತರಿಸಿದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಇದೆಂತಹ ದೊಡ್ಡ ಮನಸ್ಸು? ಒಬ್ಬ ಹುಡುಗ ಶಾಲೆಗೆ ಹೋಗಿರಲಿಲ್ಲ. ಸ್ವಾಮಿಗಳು ವಿಚಾರಿಸಿ “ನೀನು ದೊಡ್ಡವನಾದ ಬಳಿಕ ಮದುವೆಯಾಗುತ್ತಿ. ಹೆಂಡತಿ ಪತ್ರ ಬರೆದರೆ ಓದಲು ಬರಬೇಕಲ್ಲ’ ಎಂದು ಹೇಳಿ ಶಾಲೆಗೆ ಹೋಗಲು ಪ್ರೋತ್ಸಾಹಿದನ್ನು ಕಂಡಿದ್ದೇನೆ. ಇಂತಹ ಅವರ ಸಾಮಾಜಿಕ ಕಾರ್ಯಕ್ಕೆ ಪ್ರಚಾರ ಸಿಕ್ಕಿರಲಿಲ್ಲ.
-ಡಾ|ಬನ್ನಂಜೆ ಗೋವಿಂದಾಚಾರ್ಯ, ವಿದ್ವಾಂಸರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.