ವಸತಿ ಯೋಜನೆ ಅಕ್ರಮ ತಡೆಗೆ ಜಾಗೃತ ದಳ: ವಿ.ಸೋಮಣ್ಣ
Team Udayavani, Jan 14, 2020, 9:45 AM IST
ಬೆಂಗಳೂರು: ವಸತಿ ಯೋಜನೆಗಳಲ್ಲಿ ಅಕ್ರಮ, ಅನರ್ಹರಿಗೆ ಸೌಲಭ್ಯ, ಇತರೆ ದುರ್ಬಳಕೆ ತಡೆಗೆ ರಾಜ್ಯ ಮಟ್ಟದ ಜಾಗೃತ ದಳ ರಚಿಸಲಾಗುವುದು. ರಾಜೀವ್‌ಗಾಂಧಿ ವಸತಿ ನಿಗಮದಿಂದ ಮುಂದಿನ ಮೂರು ವರ್ಷಗಳಲ್ಲಿ ಆರು ಲಕ್ಷ ಮನೆ ನಿರ್ಮಿಸುವ ಗುರಿ ಇದೆ ಎಂದು ವಸತಿ, ತೋಟಗಾರಿಕೆ ಮತ್ತು ರೇಷ್ಮೆ ಸಚಿವ ವಿ.ಸೋಮಣ್ಣ ಹೇಳಿದರು.
ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಸತಿ ಯೋಜನೆಗಳಲ್ಲಿ ಸಾಕಷ್ಟು ಅಕ್ರಮ, ಸೌಲಭ್ಯ ದುರ್ಬಳಕೆಯಾಗುತ್ತಿರುವ ಆರೋಪಗಳಿವೆ. ಹೀಗೆ ಮುಂದುವರಿದರೆ ಇನ್ನೂ 50 ವರ್ಷ ಕಳೆದರೂ ಮನೆಗಳನ್ನು ಕೇಳುತ್ತಲೇ ಇರುತ್ತಾರೆ. ಮನೆಗಳನ್ನು ಪಡೆದವರೇ ಕೊಳ್ಳುತ್ತಿರುತ್ತಾರೆ. ರಾಮ, ಕೃಷ್ಣನ ಲೆಕ್ಕದಲ್ಲಿ ಮನೆಗಳನ್ನು ಪಡೆಯುವುದು ನಡೆದೇ ಇರುತ್ತದೆ. 20 ಹಾಗೂ 40 ಚದರಡಿ ನಿವೇಶನದಲ್ಲಿ ನಾಲ್ಕು ದಿಕ್ಕಿಗೂ ನಾಲ್ಕು ಬಾಗಿಲು ಇಟ್ಟು ಮನೆ ನಿರ್ಮಿಸುತ್ತಿರುವುದಾಗಿ ಫೋಟೋ ಕಳುಹಿಸಿ ವಂಚಿಸಿರುವುದು ಕಂಡುಬಂದಿದೆ. ಸರ್ಕಾರ ವೆಚ್ಚ ಮಾಡುವ ತೆರಿಗೆದಾರರ ಹಣಕ್ಕೆ ಲೆಕ್ಕವಿಲ್ಲವೆ. ಹಾಗಾಗಿ ಅಕ್ರಮಗಳ ತಡೆಗೆ ಬೆಸ್ಕಾಂ, ಕೆಎಸ್‌ಆರ್‌ಟಿಸಿ ಮಾದರಿಯಲ್ಲಿ ರಾಜೀವ್‌ಗಾಂಧಿ ವಸತಿ ನಿಗಮದಲ್ಲಿ ರಾಜ್ಯ ಮಟ್ಟದ ಜಾಗೃತ ದಳ ರಚಿಸುವ ಬಗ್ಗೆ ಚಿಂತಿಸಲಾಗಿದೆ. ಇದರ ಸಾಧಕ- ಬಾಧಕ ಪರಿಶೀಲಿಸಿ ಜಿಲ್ಲಾ ಮಟ್ಟದಲ್ಲೂ ಜಾಗೃತ ದಳ ರಚನೆಗೆ ಚಿಂತಿಸಲಾಗುವುದು ಎಂದು ತಿಳಿಸಿದರು.
ಈವರೆಗೆ 40,690 ಮನೆಗಳಿಗೆ ಜಿಪಿಎಸ್ ಅಳವಡಿಸಲಾಗಿದ್ದು, 27,489 ಮನೆಗಳ ಪರಿಶೀಲನಾ ವರದಿ ಸಲ್ಲಿಕೆಯಾಗಿದೆ. ಇದರಲ್ಲಿ 26,193 ಅರ್ಹ ಹಾಗೂ 1296 ಅನರ್ಹ ಎಂದು ಗುರುತಿಸಲಾಗಿದೆ. ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಈವರೆಗೆ ಅನುಮೋದಿಸಿದ 8154 ಫಲಾನುಭವಿಗಳಿಗೆ 40 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ವಸತಿ ಇಲಾಖೆಯಡಿ ಮನೆಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗುತ್ತಿಲ್ಲ ಎಂದು ಆರೋಪಿಸಲಾಗುತ್ತಿದೆ. 14 ಲಕ್ಷ ಮನೆಗಳು ಪೂರ್ಣಗೊಂಡಿದ್ದು, 5 ಲಕ್ಷ ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಉಳಿಕೆ 9 ಲಕ್ಷ ಮನೆಗಳಿಗೆ ಇನ್ನೂ ಹಣ ಬಿಡುಗಡೆ ಮಾಡಿಲ್ಲ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಕೂಡ ಆರೋಪ ಮಾಡಿದ್ದಾರೆ. ಇನ್ನು 10 ದಿನದಲ್ಲಿ ಅವರು ಪ್ರತಿನಿಧಿಸುವ ಭಾಲ್ಕಿ ಕ್ಷೇತ್ರದ ವಿವರ ನೀಡಲಾಗುವುದು. ಏನೆಲ್ಲಾ ಅಕ್ರಮಗಳಾಗಿದ್ದು, ಯಾರ್ಯಾರು ಎಷ್ಟು ಹೊಣೆಯಾಗಲಿದ್ದಾರೆ ಎಂಬುದನ್ನು ತಿಳಿಸಲಾಗುವುದು ಎಂದು ಮಾರ್ಮಿಕವಾಗಿ ನುಡಿದರು.
ಸದ್ಯ ಪ್ರಗತಿಯಲ್ಲಿರುವ ಹಾಗೂ ಇನ್ನು ಮುಂದೆ ಆಯ್ಕೆಯಾಗುವ ಫಲಾನುಭವಿಗಳ ಕುಟುಂಬದ ಎಲ್ಲ ಸದಸ್ಯರ ಆಧಾರ್ ಜತೆಗೆ ಪಡಿತರ ಚೀಟಿಯನ್ನು ಕಡ್ಡಾಯವಾಗಿ ಜೋಡಣೆ ಮಾಡಲಾಗುವುದು. ಆ ಮೂಲಕ ಒಂದೇ ಕುಟುಂಬದವರು ನಾನಾ ಸದಸ್ಯರ ಹೆಸರಿನಲ್ಲಿ ಸೌಲಭ್ಯ ಪಡೆದು ದುರುಪಯೋಗವಾಗುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಜೂನ್‌ನೊಳಗೆ ಪೂರ್ಣಗೊಳಿಸಲು ಸೂಚನೆ
ನಾನಾ ವಸತಿ ಯೋಜನೆಯಡಿ ರಾಜ್ಯಾದ್ಯಂತ 4.37 ಲಕ್ಷ ಮನೆಗಳ ನಿರ್ಮಾಣ ಕಾರ್ಯ ನಾನಾ ಹಂತಗಳಲ್ಲಿ ಪ್ರಗತಿಯಲ್ಲಿದ್ದು, ಜೂ. 30ರೊಳಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ 3,500 ಕೋಟಿ ರೂ. ವೆಚ್ಚವಾಗಲಿದ್ದು, ಮುಖ್ಯಮಂತ್ರಿಗಳು ಸಂಪನ್ಮೂಲ ಬಿಡುಗಡೆ ನಿಲ್ಲಬಾರದು ಎಂದು ಸೂಚಿಸಿದ್ದಾರೆ.ಜೂ. 30ರೊಳಗೆ ಪೂರ್ಣಗೊಳ್ಳುವ ಮನೆಗಳಿಗೆ ಅನುದಾನ ಬಿಡುಗಡೆ ಮಾಡಲಾಗುವುದು. ಒಂದೇ ಬಾರಿಗೆ ಸದ್ಯ ಪ್ರಗತಿಯಲ್ಲಿರುವ ಮನೆಗಳ ನಿರ್ಮಾಣ ಪೂರ್ಣಗೊಳಿಸಿದರೆ ಆನಂತರ ವ್ಯವಸ್ಥಿತವಾಗಿ ಮುಂದಿನ ಯೋಜನೆಗಳನ್ನು ಕೈಗೊಳ್ಳಲು ಅನುಕೂಲವಾಗಲಿದೆೆ ಎಂದು ತಿಳಿಸಿದರು.
ಆರು ಲಕ್ಷ ಮನೆ ನಿರ್ಮಾಣ ಗುರಿ
ರಾಜೀವ್‌ಗಾಂಧಿ ವಸತಿ ನಿಗಮದ ವತಿಯಿಂದ ಮುಂದಿನ ಮೂರು ವರ್ಷಗಳಲ್ಲಿ 6 ಲಕ್ಷ ಮನೆ ನಿರ್ಮಾಣ ಗುರಿ ಹೊಂದಲಾಗಿದೆ. ಬೆಂಗಳೂರು ಹೊರತುಪಡಿಸಿ ರಾಜ್ಯದ ಉಳಿದೆಡೆ 4551 ಎಕರೆ ಭೂಮಿ ಗುರುತಿಸಲಾಗಿದೆ. ವಸತಿ ಯೋಜನೆಗಳಿಗೆ ಅಗತ್ಯವಿರುವ ಜಮೀನು ಮಂಜೂರು, ಖರೀದಿ, ಭೂಸ್ವಾಧೀನ ವಿಷಯಗಳಿಗೆ ಸಂಬಂಧಪಟ್ಟಂತೆ ನಿಗಮದ ಹಂತದಲ್ಲಿ ಭೂ ಅಭಿವೃದ್ಧಿ “ಕಂದಾಯ ಕೋಶ’ ಸ್ಥಾಪಿಸುವ ಬಗ್ಗೆಯೂ ಚಿಂತಿಸಲಾಗಿದೆ ಎಂದು ಹೇಳಿದರು.
ಒಂದೇ ವ್ಯಾಪ್ತಿಗೆ ತರಲು ಚಿಂತನೆ
ಸದ್ಯ ಡಾ.ಬಿ.ಆರ್.ಅಂಬೇಡ್ಕರ್ ನಿವಾಸ್ ಗ್ರಾಮೀಣ ಯೋಜನೆ, ಡಾ.ಬಿ.ಆರ್.ಅಂಬೇಡ್ಕರ್ ನಿವಾಸ್ ನಗರ ಯೋಜನೆ ಹಾಗೂ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ದೇವರಾಜ ಅರಸು ವಸತಿ ಯೋಜನೆ, ಬಸವ ವಸತಿ ಯೋಜನೆ, ವಾಜಪೇಯಿ ನಗರ ವಸತಿ ಯೋಜನೆಗಳಿವೆ. ಜತೆಗೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆವಾಸ್ ಯೋಜನಾ ಜಾರಿಯಲ್ಲಿದೆ. ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿರುವ ಮೂರು ಯೋಜನೆಗಳನ್ನು ಒಂದೇ ರೂಪದಲ್ಲಿ ತರಲು ಚಿಂತಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ 2800 ಕೊಳೆಗೇರಿ ಪ್ರದೇಶವಿದ್ದು, 7.46 ಲಕ್ಷ ಕುಟುಂಬಗಳಡಿ 40 ಲಕ್ಷ ಮಂದಿ ನೆಲೆಸಿದ್ದಾರೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ ಇತರ ನಗರಗಳಲ್ಲೂ ವಸತಿಗಳನ್ನು ನಿರ್ಮಿಸಿ ಹಂಚಿಕೆ ಮಾಡಿ ಗುಡಿಸಲುರಹಿತ ನಗರವನ್ನಾಗಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು. ವಸತಿ ಇಲಾಖೆ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ ಇತರರು ಉಪಸ್ಥಿತರಿದ್ದರು.
ತನಿಖೆಗೆ ಸೂಚನೆ
ಕೊಳೆಗೇರಿ ಜನರಲ್ಲಿ ಜಾಗೃತಿ, ಮನವರ್ತನೆ ಹೆಸರಿನಲ್ಲಿ ಕೆಲ ಸ್ವಯಂ ಸೇವಾ ಸಂಸ್ಥೆಗಳು ಕೋಟ್ಯಂತರ ರೂ. ಪಡೆಯುವುದನ್ನು ತಡೆಹಿಡಿಯಲಾಗಿದ್ದು, ಅಕ್ರಮದ ಬಗ್ಗೆ ತನಿಖೆಗೆ ಸೂಚನೆ ನೀಡಲಾಗಿದೆ ಎಂದು ಸಚಿವ ವಿ.ಸೋಮಣ್ಣ ಹೇಳಿದರು.
ಕೇಂದ್ರ ಸರ್ಕಾರದಿಂದ ಕೊಳೆಗೇರಿ ಜನರಿಗೆ “ಐಇಸಿ’ (ಮಾಹಿತಿ, ಶಿಕ್ಷಣ, ಸಂವಹನ) ಕಾರ್ಯಕ್ರಮದಡಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಆರ್ಥಿಕ ನೆರವು ನೀಡಲಾಗುತ್ತಿದೆ. ಆದರೆ ಇದರಲ್ಲಿ ಭಾರೀ ಅವ್ಯವಹಾರ ನಡೆದಿರುವಂತಿದೆ. ಯಾವುದೇ ಕೊಳೆಗೇರಿಗಳಲ್ಲಿ ಜಾಗೃತಿ, ಮನಪರಿವರ್ತನೆ ಕಾರ್ಯ ಕೈಗೊಂಡ ಉದಾಹರಣೆಯೂ ಕಾಣುತ್ತಿಲ್ಲ. ಹಾಗಾಗಿ ಪ್ರಸ್ತುತ ಸ್ವಯಂ ಸೇವಾ ಸಂಸ್ಥೆಗಳಿಗೆ ಅನುದಾನ ನೀಡುವುದನ್ನು ತಡೆಹಿಡಿಯಲಾಗಿದೆ. 2016-17, 2017-18ನೇ ಸಾಲಿಗೆ ಸಂಬಂಧಪಟ್ಟಂತೆ 2.50 ಕೋಟಿ ರೂ. ಅನುದಾನ ಈ ಹಿಂದೆಯೇ ಬಿಡುಗಡೆಯಾಗಿದೆ. ಆದರೆ 2018-19ನೇ ಸಾಲಿನಲ್ಲಿ 2 ಕೋಟಿ ರೂ., 2019-20ನೇ ಸಾಲಿನಲ್ಲಿ 1.5 ಕೋಟಿ ರೂ. ಅನುದಾನ ಬಿಡುಗಡೆಯನ್ನು ತಡೆಹಿಡಿಯಲಾಗಿದೆ ಎಂದು ಹೇಳಿದರು.
ಕೆಲ ಸ್ವಯಂ ಸೇವಾ ಸಂಸ್ಥೆಗಳು ಕೊಳೆಗೇರಿ ಯುವಜನತೆಗೆ ಐಎಎಸ್, ಕೆಎಎಸ್ ಪರೀಕ್ಷೆಗೆ ತರಬೇತಿ ಕೊಡಿಸಲಾಗುತ್ತಿದೆ ಎಂಬ ಮಾಹಿತಿ ನೀಡಿವೆ. ಇದರಲ್ಲಿ ಸಾಕಷ್ಟು ಅಕ್ರಮಗಳಾಗಿರುವ ಸಾಧ್ಯತೆ ಇದ್ದು, ತನಿಖೆಗೆ ಸೂಚಿಸಲಾಗಿದೆ. ಈ ಅನುದಾನವನ್ನು ಇತರೆ ಚಟುವಟಿಕೆಗಳಿಗೆ ಬಳಸಲು ಚಿಂತಿಸಲಾಗಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್?
Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?
BJP: ಇಂದು ಅಶೋಕ್ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್ ಕಮಿಟಿ ಸಭೆ
ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ
Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್ ವಿಚಾರವಾಗಿ ವಾಗ್ವಾದ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.