ಸುಡುವ ಸೂರ್ಯ ಈ ಜಗದ ಕಣ್ಣು
Team Udayavani, Jan 16, 2020, 5:42 AM IST
ಇಸ್ರೋ 2020ರ ಅಂತ್ಯ ದಲ್ಲಿ ಆದಿತ್ಯ ಎಲ್1 ಎಂಬ ಸೂರ್ಯಾನ್ವೇಷಕ ಯೋಜನೆ ಹಾಕಿಕೊಂಡು ಅದನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುತ್ತಿದೆ. ಭೂಮಿಯ ಮೇಲಿನ ಬಹುತೇಕ ಚಟುವಟಿಕೆಗಳಿಗೆ ಕಾರಣೀಭೂತನಾದ ಈ ಬೃಹತ್ ಆಕಾಶ ಕಾಯವನ್ನು ಕಂಡು ಮಾನವ ಅನಾದಿಕಾಲದಿಂದಲೂ ಬೆರಗಾಗಿದ್ದಾನೆ.
ಈಗ ಷ್ಟೇ ಮಕರ ಸಂಕ್ರಾಂತಿ ಬಂದು ಹೋಗಿದೆ. ವಿಶೇಷ ವೆಂದರೆ, ಈ ಹಬ್ಬ ಕ್ಕೂ ಸೂರ್ಯನಿಗೂ ಸಂಬಂಧವುಂಟು. ಸೂರ್ಯನು ಒಂದು ರಾಶಿಯಿಂದ ಮತ್ತೂಂದು ರಾಶಿಗೆ ಸಂಚರಿಸುವುದೇ ಸಂಕ್ರಾತಿ. ಸೂರ್ಯನನ್ನು ಆದಿತ್ಯ, ಭಾಸ್ಕ ರ ಎಂದು ಸಹ ಕರೆಯಲಾಗುತ್ತದೆ. ಪ್ರಪಂಚದ ಅನಾದಿ ಕಾಲದ ಸಂಸ್ಕೃತಿಗಳಲ್ಲಿ ಸೂರ್ಯನ ಹಿರಿಮೆ ಗಣನೀಯವಾಗಿದೆ.ವೇದಗಳಲ್ಲಿ ವರ್ಣಿತವಾಗಿರುವ ಪ್ರಧಾನ ದೇವತೆಗಳ ಕೂಟದಲ್ಲಿ ಸೂರ್ಯನೂ ಒಬ್ಬನಾಗಿರುವುದರಿಂದ ಈ ಜಗತ್ತಿನ ಕಣ್ಣು ಎಂದು ಆತ ನನ್ನು ಆರಾಧಿಸಲಾಗಿದೆ ಹಾಗೂ ಜ್ಞಾನಸ್ವರೂಪಕ್ಕೆ ಪ್ರತೀಕ ಎಂದು ಹೇಳಲಾಗುತ್ತದೆ. ವಿಶ್ವದ ಸಮಸ್ತವನ್ನು ಕಾಣಬಲ್ಲವನು, ಬೆಳಕು ನೀಡುವವನೂ ಆದ ಸೂರ್ಯನು ಸಮಸ್ತ ವಿಶ್ವವನ್ನು ಅವನ ಪ್ರಕಾಶದಿಂದ ಬೆಳಗಿಸುತ್ತಾನೆ.
ಸೂರ್ಯನು ಹುಟ್ಟಿದ ಕೂಡಲೇ ಕತ್ತಲು ಸರಿಯುತ್ತದೆ. ಅವನ ಈ ಹುಟ್ಟಿನಿಂದ ಜಗತ್ತಿನ ಆಗುಹೋಗುಗಳಿಗೆ ನೇರ ಸಂಬಂಧವಿದೆ. ಇವೆಲ್ಲವುಗಳು ಸೂರ್ಯನ ಭೌತಿಕ ವಿವರಗಳಾಗಿದ್ದು ಈ ಒಂದೊಂದು ವಿವರದ ಜಾಡನ್ನು ಹಿಡಿದು ಸೂರ್ಯತತ್ವವನ್ನು ನಮ್ಮ ಆದಿ ದೈವಿಕ, ಆದಿ ಭೌತಿಕ ಹಾಗೂ ಆಧ್ಯಾತ್ಮಿಕ ಸ್ತರಗಳಲ್ಲಿ ವಿವರಿಸಿರುವುದನ್ನು ಭಾರತೀಯ ಸಂಸ್ಕೃತಿಯ ಉದ್ದಗಲಕ್ಕೂ ಕಾಣಬಹುದಾಗಿದೆ. ಈ ಜಗತ್ತಿನ ಎಲ್ಲಾ ಸ್ಥಾವರಾತ್ಮಕ, ಜಂಗಮಾತ್ಮಕ ವಿವರಗಳಿಗೂ ಆತ್ಮ ಎಂದರೆ ಸೂರ್ಯನಾಗಿರುವುದರಿಂದ ಕಿರಣಗಳ ಸಮೂಹ ಅವನಾಗಿದ್ದಾನೆ. ಮಿತ್ರಾ-ವರುಣರ ಕಣ್ಣು, ಭೂಲೋಕ, ದ್ಯುಲೋಕ ಮತ್ತು ಅಂತರಿಕ್ಷಲೋಕವನ್ನು ಉದ್ಧರಿಸುತ್ತ ಉದಯಿಸುತ್ತಿದ್ದು ಅವನು ಸಮಸ್ತ ಲೋಕಗಳಲ್ಲಿನ ಜೀವಿಗಳನ್ನು ಕಾಪಾಡಬಲ್ಲ ಪ್ರತ್ಯಕ್ಷ ಶಕ್ತಿಯಾಗಿದ್ದಾನೆ. ಒಟ್ಟಾರೆ, ಭಾರತೀಯ ಸಾಹಿತ್ಯವನ್ನೂ, ವೈಚಾರಿಕತೆಯನ್ನೂ, ಕಲಾಲೋಕವನ್ನೂ ಮತ್ತು ನಮ್ಮ ಜೀವನವನ್ನು ಶ್ರೀಮಂತಗೊಳಿಸಿರುವ ಮಹಾ ತತ್ವಗಳಲ್ಲಿ ಪ್ರಧಾನ ತತ್ವವೇ ಸೂರ್ಯ ಆರಾಧನೆಯ ತತ್ವ.
ಮಾನವನ ಜೀವಪೋಷಣೆಯೂ ಸೇರಿದಂತೆ ಭೂಮಿಯ ಮೇಲಿನ ಬಹುತೇಕ ಚಟುವಟಿಕೆಗಳಿಗೆ ಕಾರಣೀಭೂತನಾದ ಈ ಬೃಹತ್ ಆಕಾಶ ಕಾಯವನ್ನು ಕಂಡು ಮಾನವ ಅನಾದಿಕಾಲದಿಂದಲೂ ಬೆರಗಾಗಿದ್ದಾನೆ, ಭೀತನಾಗಿದ್ದಾನೆ, ಅನೇಕ ಬಗೆಗಳಲ್ಲಿ ಆರಾಧಿಸುತ್ತಲೇ ಇದ್ದಾನೆ. ಕಾಲಗಣನೆಗೆ ಸಂಬಂಧಿಸಿದಂತೆ ಭಾರತದ ಪಂಚಾಂಗಗಳು ಸೂರ್ಯಚಂದ್ರರ ಚಲನೆಯನ್ನು ಆಧರಿಸಿವೆ. ಸೂರ್ಯನ ಕುರಿತ ಹೆಚ್ಚಿನ ಸಂಶೋಧನೆಗಳಾಗಿದ್ದು ಇಪ್ಪತ್ತನೆಯ ಶತಮಾನದಲ್ಲಿ. ತಾಂತ್ರಿಕ ಜ್ಞಾನ ಬೆಳೆದಂತೆಲ್ಲಾ ರಾಕೆಟ್ ಯುಗದ ವಿಜ್ಞಾನಿಗಳು ಸೂರ್ಯನೆಂಬ ನಕ್ಷತ್ರವನ್ನೂ ಕೂಲಂಕಶವಾಗಿ ಅರ್ಥಮಾಡಿಕೊಳ್ಳಲು ಇಂದಿಗೂ ಶ್ರಮಿಸುತ್ತಲೇ ಇದ್ದಾರೆ. ಭೂಮಿಯನ್ನು ಸುತ್ತುತ್ತಿರುವ ಉಪಗ್ರಹಗಳು ಹಾಗೂ ಭೂಮಿಯಿಂದ ಹೊರಹೊರಟ ರೋಬೊ ಅಂತರಿಕ್ಷ ನೌಕೆಗಳು ಸೂರ್ಯನನ್ನು ಕುರಿತ ಈ ಮೊದಲಿನ ಕೆಲವು ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ನಡೆಸುತ್ತಲೇ ಇವೆ.
ಸೌರಮಂಡಲದ ಅಧ್ಯಯನಕ್ಕಾಗಿ ಬಾಹ್ಯಾಕಾಶ ನೌಕೆಗಳನ್ನು ಹಾರಿಬಿಡುವ ಕಾರ್ಯ ನಿರಾತಂಕವಾಗಿ ಸಾಗಿದೆ. ಈ ನಿಟ್ಟಿನಲ್ಲಿ ಇಸ್ರೋ 2020ರ ಅಂತ್ಯದಲ್ಲಿ ಆದಿತ್ಯ ಎಲ್1 ಎಂಬ ಸೂರ್ಯ ನ್ವೇಷಕ ಯೋಜನೆ ಹಾಕಿಕೊಂಡು ಅದನ್ನು ಕಾರ್ಯಗತಗೊಳಿಸಲು ಶತಾಯಗತಾಯ ಪ್ರಯತ್ನ ಮಾಡುತ್ತಿದೆ. ನಮ್ಮ ದೇಶದಲ್ಲಿ 1957ರಲ್ಲಿ ಬಾಹ್ಯಾ ಕಾಶ ಯೋಜನೆಗಳ ಯುಗಾರಂಭವಾದ ನಂತರದಿಂದ ಗಗನ ನೌಕೆಗಳು ಆಕಾಶದ ಉದ್ದಗಲಕ್ಕೂ ಸಂಚಾರ ಆರಂಭಿಸಿವೆ. ಇನ್ನು ಪ್ರಪಂಚದಾದ್ಯಂತ ಬಾಹ್ಯಾ ಕಾಶ ಸಂಶೋ ಧನಾ ಸಂಸ್ಥೆಗಳು ರೊಬೋ ಪ್ರತಿನಿಧಿಗಳನ್ನು ಭೂಮಿಗೆ ಹತ್ತಿರದಲ್ಲಿರುವ ಆಕಾಶಕಾಯವಾದ ಚಂದ್ರನತ್ತ ಹಾಗೂ ಅಲ್ಲಿನ ಉಪಗ್ರಹಗಳ, ಧೂಮಕೇತುಗಳ, ಕ್ಷುದ್ರಗ್ರಹಗಳತ್ತ ಕಳು ಹಿಸಿ ಅಲ್ಲಿರುವ ಸಂಪನ್ಮೂಲಗಳ ಕುತೂಹಲಕರ ಮಾಹಿತಿಯನ್ನು ನಮಗೆ ಕಳುಹಿಸಿಕೊಡುತ್ತಿವೆ. ಭೂಮಿಯಿಂದ ಸೂರ್ಯನಿರುವ ಸರಾಸರಿ ದೂರ ಸುಮಾರು 15 ಕೋಟಿ ಕಿಲೋಮೀಟರ್ ಹಾಗೂ ಸೂರ್ಯನಿಗೆ ಅತಿ ಸಮೀಪದಲ್ಲಿರುವ ಗ್ರಹವಾದ ಬುಧ ಸುಮಾರು 6 ಕೋಟಿ ಕಿಲೋ ಮೀಟರ್ ದೂರದಲ್ಲಿದೆ. ಸೂರ್ಯನ ಅಪಾರವಾದ ಶಾಖ ಮತ್ತು ಬೆಳಕುಗಳಿಂದಾಗಿಯೇ ಭೂಮಿಯ ಮೇಲಿನ ಬಹುತೇಕ ಚಟುವಟಿಕೆಗಳು ನಡೆಯುತ್ತಿದ್ದು, ಇವುಗಳಿಂದಲೇ ಜೀವರಾಶಿಗಳು ಉಳಿದಿವೆ. ಪ್ರತಿ 11 ವರ್ಷಗಳಿಗೊಮ್ಮೆ ಸೂರ್ಯನ ಚಟುವಟಿಕೆಗಳು ಹೆಚ್ಚಿ ಸೂರ್ಯ ಹೆಚ್ಚು ಪ್ರಖರವಾಗುತ್ತಾನೆ. ಈ ಪ್ರಖರತೆಯ ಪರಿಣಾಮವಾಗಿ ಪರಮಾಣು ಕಣಗಳನ್ನು ಹಾಗೂ ಶಕ್ತಿಯುತವಾದ ವಿಕಿರಣಗಳನ್ನು ಯಥೇತ್ಛ ಪ್ರಮಾಣದಲ್ಲಿ ಹೊರಚೆಲ್ಲುತ್ತಾನೆ.
ನಮ್ಮಲ್ಲೀಗ ನೂರಾರು ಕೃತಕ ಉಪಗ್ರಹಗಳು ಭೂಮಿಯನ್ನು ವಿವಿಧ ಕಕ್ಷೆಯಲ್ಲಿ ಸುತ್ತು ಹಾಕುವುದರಿಂದ ಅನೇಕ ಉಪಯುಕ್ತವಾದ ಮಾಹಿತಿ ದೊರೆಯುತ್ತದೆ. ಈ ಆಧುನಿಕ ಸಾಧನಗಳಿಂದ ದಿನನಿತ್ಯದ ಅಗತ್ಯಗಳನ್ನು ಪೂರೈಸುವ ಸಂಪರ್ಕ, ಮನರಂಜನೆ, ಹವಾಮಾನ ಕುರಿತ ಅರಿವು ಹೆಚ್ಚಾಗುತ್ತಿದೆ. ಒಂದು ವೇಳೆ ಈ ಸೇವೆ ಹಠಾತ್ತನೆ ನಿಲುಗಡೆಗೊಂಡರೆ ಜಾಗತಿಕ ಆರ್ಥಿಕತೆಯಲ್ಲಿ, ಜನ ಜೀವನ ದಲ್ಲಿ ಉಂಟಾಗುವ ಗೊಂದಲ ಊಹಿಸಲು ಅಸಾಧ್ಯ. ಆದ್ದರಿಂದ ಸೂರ್ಯನು ಹೊರಸೂಸುವ ಶಕ್ತಿಯುತ ಕಣ-ವಿಕಿರಣ ಪ್ರವಾಹವೇನಾದರೂ ಭೂಮಿಯಿರುವ ದಿಕ್ಕಿಗೆ ಅವರಿಸಿ ಅದರ ಕಾಂತಕ್ಷೇತ್ರವನ್ನು ರಾಚಿದರೆ ಅಂತರಿಕ್ಷದಲ್ಲಿರುವ ಉಪಗ್ರಹಗಳ ಕಾರ್ಯನಿರ್ವಹಣೆಗೆ ತೊಡಕಾದರೂ ಅಚ್ಚರಿಪಡಬೇಕಾಗಿಲ್ಲ. ಅದೇ ರೀತಿ ಸೂರ್ಯನಿಂದ ಪ್ರಬಲ ಕಣ ಪ್ರವಾಹವು ಭೂಮಿಯ ಕಾಂತಕ್ಷೇತ್ರಕ್ಕೆ ಅಪ್ಪಳಿಸುವುದರಿಂದ ಉಂಟಾಗುವ ಭೂಕಾಂತ ಬಿರುಗಾಳಿ ಭೂಮಿಯ ಮೇಲಿನ, ಅದರಲ್ಲೂ ಧ್ರುವ ಪ್ರದೇಶಗಳಿಗೆ ಸಮೀಪದಲ್ಲಿರುವ ಸ್ಥಳಗಳಲ್ಲಿನ ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಏರುಪೇರು ಮಾಡಬಲ್ಲದು!
1989ರಲ್ಲಿ ಇಂತಹ ಒಂದು ಘಟನೆ ಕೆನಡಾದಲ್ಲಿ ನಡೆದು ಅಲ್ಲಿನ ಜನ ತತ್ತರಿಸಿಹೋಗಿದ್ದನ್ನು ನೆನಪು ಮಾಡಿಕೊಳ್ಳಬಹುದು.ಸೂರ್ಯನನ್ನು ಆಧುನಿಕ ವೈಜ್ಞಾನಿಕ ಉಪಕರಣಗಳ ಮೂಲಕ ಅಧ್ಯಯನ ಮಾಡುವ ಪರಿ ಪಾ ಠ 19ನೆಯ ಶತಮಾನದಲ್ಲಿ ಪ್ರಾರಂಭವಾಯಿತು. ಸೂರ್ಯನ ಅಂಗಳದಲ್ಲಿ ಲಭ್ಯವಿರುವ ಹೀಲಿಯಂ ಧಾತುವನ್ನು 1868ರಲ್ಲಿ ಆಂಧ್ರದ ಗುಂಟೂರಿನಲ್ಲಿ ಮೊದಲ ಬಾರಿಗೆ ಸಂಪೂರ್ಣ ಸೂರ್ಯಗ್ರಹಣ ವೀಕ್ಷಣೆಯ ಸಮಯದಲ್ಲಿ ಗುರುತಿಸಿದವರು ಪಿಯರ್ ಜಾನ್ಸನ್ ಎಂಬ ಫ್ರೆಂಚ್ ವಿಜ್ಞಾನಿ. ನಮ್ಮ ದೇಶದಲ್ಲಿ ಸೂರ್ಯನನ್ನು ಕುರಿತು ನಿರಂತರ ಅಧ್ಯಯನಗಳು ನಡೆಯುತ್ತಲೇ ಇವೆ. ಮರುಭೂಮಿ ರಾಜ್ಯವಾದ ರಾಜಸ್ಥಾನದ ಉದಯಪುರದಲ್ಲಿ ಸೌರ ವೀಕ್ಷಣಾಲಯವಿದೆ.
ಸೂರ್ಯನ ಶಾಖದಿಂದ ಭೂಮಿಯು ಸಹಜವಾಗಿ ಎಷ್ಟೋ ಕಾಯಬೇಕಾಗಿತ್ತೋ ಅದಕ್ಕಿಂತ ಹೆಚ್ಚು ಕಾಯುತ್ತಿರುವುದರಿಂದ ಈಗ ವಿಶ್ವದೆಲ್ಲಡೆ ಚಳಿ ಹಾಗೂ ಬಿಸಿಲು ಅಗತ್ಯಕ್ಕಿಂತಲೂ ಅತಿಯಾಗಿ ಹೆಚ್ಚು ಅಥವಾ ವಿಪರೀತ ಕಡಿಮೆಯಾಗಲು ಇದೇ ಕಾರಣವಾಗಿದೆ. ಅಂಟಾರ್ಟಿಕಾದಲ್ಲಿ ಹಿಮ ಕರಗುವುದು ಹೆಚ್ಚಾಗಿರುವುದರಿಂದ ಸಮುದ್ರದ ಮಟ್ಟದಲ್ಲಿ ಏರಿಕೆ ಉಂಟಾಗುತ್ತಿದೆ. ಸೂರ್ಯನ ಅತಿಯಾದ ತಾಪಮಾನದಿಂದ ಅರ್ಕ್‌ಟೆಕ್ ಹಿಮವು ಸಂಪೂರ್ಣ ಕರಗಿ, 2100ರ ವೇಳೆಗೆ ಮಾಯವಾಗಲಿದೆ ಎಂಬ ಅಭಿಪ್ರಾಯವಿದೆ. ಆಗ ಸೂರ್ಯನ ಅತಿಯಾದ ಶಾಖದಿಂದಾದ ಹವಮಾನದ ವೈಪರೀತ್ಯದ ಬಿಸಿ ಇನ್ನಷ್ಟು ತಟ್ಟಲಿದೆ. ಸಮುದ್ರಮಟ್ಟದಿಂದ ಕೆಳಗಿರುವ ಹಲವು ಭೂ-ಪ್ರದೇಶಗಳು ಹಾಗೂ ದ್ವೀಪಗಳು ಮುಳುಗಲಿವೆ. ನಮಗೆ ಹೊಂದಿಕೊಂಡ ಬಾಂಗ್ಲಾ ದೇಶದಿಂದ ಹಿಡಿದು ನೆದರ್‌ಲ್ಯಾಂಡ್‌ವರೆಗೆ ಹಲವು ದೇಶಗಳು ಮುಳುಗಡೆಯಾದರೆ ಅಚ್ಚರಿಪಡಬೇಕಾಗಿಲ್ಲ. ಇಂಥ ಸಂದರ್ಭದಲ್ಲಿ ಜಾಗತಿಕ ತಾಪ ಮಾನ ಏರಿಕೆಗೂ ನಾವು ತುಪ್ಪ ಸುರಿಯುತ್ತಿದ್ದೇವೆ. ಸೂರ್ಯನ ಸುಡುವ ಸಿಟ್ಟಿಂದ ಬಚಾವಾಗಲು ಪರಿಹಾರ ಹುಡುಕದೇ ಇದ್ದರೆ ಭವಿಷ್ಯ ಆತಂಕಕಾರಿಯಾಗಲಿದೆ.
-ಪ್ರೊ.ಮಂಜುನಾಥ ಉಲವತ್ತಿ ಶೆಟ್ಟರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.