ಅನುಭವದ ಜೋಳಿಗೆ
Team Udayavani, Jan 17, 2020, 4:04 AM IST
ಹಾಲಕ್ಕಿ, ಸಿದ್ಧಿ ಮತ್ತು ಕುಡುಬಿ ಸಮುದಾಯದವರನ್ನು ಭೇಟಿಯಾಗುವ ಹಾಗೂ ಕಾಡಿನ ಪರಿಶುದ್ಧ ಸೌಂದರ್ಯವನ್ನು ಸವಿಯುವ ನಿಟ್ಟಿನಲ್ಲಿ ನಡೆದ ಪ್ರವಾಸವು ವಿದ್ಯಾರ್ಥಿಗಳ ದೃಷ್ಟಿಕೋನವನ್ನೇ ಬದಲಾಯಿಸಿತು.
ನಗರ ಜೀವನದ ನಂಟೇ ಇಲ್ಲದೆ, ತಮ್ಮ ಪಾಡಿಗೆ ತಾವು ಇದ್ದು ತಮ್ಮದೇ ಆದ ಸಂಸ್ಕೃತಿ, ಆಚಾರ-ವಿಚಾರಗಳನ್ನು ಬೆಳೆಸುತ್ತ, ಜೀವನ ಸಾಗಿಸುತ್ತಿರುವ ಬುಡಕಟ್ಟು ಸಮುದಾಯಗಳ ಸಂದರ್ಶಿಸುವಿಕೆ ವಿದ್ಯಾರ್ಥಿಗಳಿಗೆ ವಿಶಿಷ್ಟ ಅನುಭವ. ಹಳೆಯಂಗಡಿಯ ನಾರಾಯಣ ಸನಿಲ್ ಪದವಿಪೂರ್ವ ಕಾಲೇಜಿನಿಂದ ನಾವು ಸ್ನೇಹಿತರೊಂದಿಗೆ ಬುಡಕಟ್ಟು ಜನರ ಜೀವನ ಶೈಲಿಯ ಅಧ್ಯಯನ ಮತ್ತು ಚಾರಣವನ್ನು ಇತ್ತೀಚೆಗೆ ಹಮ್ಮಿಕೊಂಡಿದ್ದೆವು.
ರೈಲಿನಲ್ಲಿ, ಟೆಂಪೋಗಳಲ್ಲಿ ಹತ್ತಿ ಇಳಿಯುತ್ತ ಮಾಡಿದ ಪ್ರಯಾಣ ಮಜವಾಗಿತ್ತು. ಅಂಕೋಲಾದ ಹಾಲಕ್ಕಿ ಸುಕ್ರಿ ಬೊಮ್ಮಗೌಡ ಅವರನ್ನು ಮೊದಲು ಭೇಟಿಯಾದೆವು. “ಪದ್ಮಶ್ರಿ ಪ್ರಶಸ್ತಿ’ ಪುರಸ್ಕೃತರಾದ ಅವರ ಸರಳತೆ ನೋಡಿ ನಮಗೆಲ್ಲಾ ಅಚ್ಚರಿ. ಅವರಿಗೆ ನಾಲ್ಕು ಸಾವಿರಕ್ಕಿಂತ ಹೆಚ್ಚು ಹಾಡುಗಳು ತಿಳಿದಿವೆ. ಆದರೆ, ಅವುಗಳಾವುವೂ ದಾಖಲೀಕರಣವಾಗಿಲ್ಲ. ಅವುಗಳೆಲ್ಲ ಇವರ ನೆನಪು ಎಂಬ ಮೆಮೊರಿಕಾರ್ಡಿನಲ್ಲಿ ಅಚ್ಚಳಿಯದೇ ಉಳಿದಿವೆ. ವಿದ್ಯಾರ್ಥಿಗಳನ್ನು ನೋಡಿ ಸುಕ್ರಿ ಅಜ್ಜಿಗೂ, ಅವರ ಸ್ನೇಹಿತೆಯರಾದ ಇತರರ ಅಜ್ಜಿಯರಿಗೂ ತುಂಬ ಖುಷಿಯಾಯಿತು. ಅವರೆಲ್ಲ ನಮಗಾಗಿ ಹತ್ತಾರು ಹಾಡುಗಳನ್ನು ಹಾಡಿದರು.
ಚಂದಾದ ಹೂದೋಟ
ಚಂದಾಗೆ ಇರುತೈತಿ…
ತೋಟಕ್ಕೆ ಹೋದಾವ
ಹೂವಾ ಕೊಯ್ನಾ ಬೇಡ…
ಕೊಯ್ದ ಹೂವಾ ಮತ್ತೆ ಜೋಡಿಸಾಕೆ
ಆಗದಾ ಮ್ಯಾಲೆ ನೀ
ತೋಟದ ಚಂದಾ ಕೆಡಿಸಬ್ಯಾಡ
ಈ ಹಾಡಿನಲ್ಲಿ ಅವರು ಹೆಣ್ಣನ್ನು ಹೂವಿಗೆ ಹೋಲಿಸಿದ್ದಾರೆ. ಹೆಣ್ಣು ಮಕ್ಕಳ ಬಾಳಿನಲ್ಲಿ ಚಕ್ಕಂದವಾಡಿ, ಮೋಸ ಮಾಡಿ ಪರಾರಿಯಾಗುವ ಹುಡುಗರಿಗೆ ಬುದ್ಧಿ ಹೇಳುವ ಹಾಡು ಇದು. ಇಂತಹ ಎಷ್ಟೋ ಒಳ್ಳೆಯ ಹಾಡುಗಳು ಅಜ್ಜಿಗೆ ಗೊತ್ತಿದೆ. ಶಾಲೆಯ ಮೆಟ್ಟಿಲನ್ನೇರದ ಈ ಸುಕ್ರಜ್ಜಿ ಕರ್ನಾಟಕ ವಿಶ್ವವಿದ್ಯಾನಿಲಯದ ಧಾರವಾಡ ಜಾನಪದ ವಿಭಾಗಕ್ಕೆ ವಿಶೇಷ ಉಪನ್ಯಾಸಕಿಯಾಗಿದ್ದರು. ಸಾಮಾಜಿಕ ಹೋರಾಟ, ಪರಿಸರ ಹೋರಾಟ, ಮದ್ಯಪಾನ ವಿರುದ್ಧ ಹೋರಾಟ, ಸ್ತ್ರೀ ಶೋಷಣೆ ವಿರುದ್ಧ ಹೋರಾಟಗಳನ್ನು ಮಾಡಿದ್ದಾರೆ ಎನ್ನುವುದು ಸ್ಫೂರ್ತಿಯ ವಿಷಯ.
ಮರುದಿನ ಅನುಭವದ ಜೋಳಿಗೆಯನ್ನು ಹಿಡಿದುಕೊಂಡು ಮಾಗೋಡು ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತ ಸಿದ್ಧಿ ಸಮುದಾಯದ ಸಂದರ್ಶನಕ್ಕೆ ಮುಂದಾದೆವು. ಸಿದ್ಧಿ ಸಮುದಾಯದವರ ಬಗ್ಗೆ ಹೇಳಿದಷ್ಟು ಮುಗಿಯದು. ಸಿದ್ಧಿಗಳು ದಕ್ಷಿಣ ಆಫ್ರಿಕಾದ ಜಾಂಬೇಷಿಯಾದ ಕಾಡಿನಲ್ಲಿ ತಮ್ಮ ಸುಂದರವಾದ ಬದುಕನ್ನು ಸಾಗಿಸುತ್ತಿದ್ದರು. ವಸಹಾತುಶಾಹಿ ಆಡಳಿತವಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಿರುಗಾಳಿಯಂತೆ ಆಗಮಿಸಿದ ಅರಬ್ಬರು ಮತ್ತು ಯುರೋಪಿಯನ್ನರು ಇವರನ್ನು ಗುಲಾಮರನ್ನಾಗಿಸಲು ಮುಂದಾದರು.
ಸಿದ್ಧಿಗಳನ್ನು ಕುದುರೆಗಳಿಗೆ ಕಟ್ಟಿ , ಕುದುರೆ ಎಷ್ಟು ದೂರ ಓಡುತ್ತದೆಯೋ ಅಷ್ಟು ದೂರ ಓಡಿ, ಯಾರು ಅದರಲ್ಲಿ ಬದುಕಿ ಉಳಿಯುತ್ತಾರೆಯೋ, ಅವರನ್ನು ಗುಲಾಮರಾಗಿ ಮಾರಾಟ ಮಾಡುತ್ತಿದ್ದರು. ಹೀಗೆ ಮಾರಾಟ ಪ್ರಕ್ರಿಯೆಗಳು ನಡೆದಾಗ, ಒಂದೇ ಕುಟುಂಬದವರು ಬೇರೆ ಬೇರೆ ರಾಷ್ಟ್ರಗಳಿಗೆ ಮಾರಾಟವಾಗಿ ಹೋದ ಕತೆಗಳಿವೆ. ಭಾರತದಲ್ಲಿ ಬ್ರಿಟಿಷರ ಆಡಳಿತವಿದ್ದ ಕಾಲದಲ್ಲಿ ಸಿದ್ಧಿ ಸಮುದಾಯದವರನ್ನು ಬ್ರಿಟಿಷರೇ ಭಾರತಕ್ಕೆ ಕರೆತಂದರು.
ಈ ಕತೆಗಳನ್ನು ಹೇಳುತ್ತಿದ್ದ ಸಿದ್ಧಿ ಸಮುದಾಯದ ಪ್ರಮುಖ ಹೋರಾಟಗಾರ, ಕರ್ನಾಟಕ ನೆಲ್ಸನ್ ಮಂಡೇಲಾ ಎಂದು ಪ್ರಖ್ಯಾತಿ ಪಡೆದ ದಿಯಾಗೋ ಬಸ್ಯಾವ್ ಸಿದ್ಧಿ ಅವರ ಅನುಭವದ ಮಾತುಗಳನ್ನು ಕೇಳುವಾಗ ಮೈ ಝುಂ ಅನ್ನುತ್ತಿತ್ತು. ದಟ್ಟವಾದ ಕಾಡಿನ ಮಧ್ಯದಲ್ಲಿ ,ಡಾಂಬರು ರಸ್ತೆಯಲ್ಲಿ, ಟಾರ್ಚ್ ನ ಬೆಳಕಿನಲ್ಲಿ ಜೋಯಿಡಾದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಬಂದೆವು. ಆ ರಾತ್ರಿ ರವಿ ರೇಡ್ಕರ್‌ರವರ ನೇತೃತ್ವದ ಕಾಳಿನದಿ ಸಂರಕ್ಷಣಾ ಸಮಿತಿಯ ಸದಸ್ಯರ ಜೊತೆಗೆ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಕಾಳಿನದಿಗೆ ಐದು ಕಡೆಗಳಲ್ಲಿ ಅಣೆಕಟ್ಟುಗಳನ್ನು ಕಟ್ಟಿದರು. ಇದರಿಂದ ಆದ ತೊಂದರೆಗಳು ಹಲವಾರು. ತಾವು ನೆಲೆಯೂರಿದ್ದ ಜಾಗವನ್ನು ಬಿಟ್ಟು, ಮನೆಯನ್ನೂ ಬಿಟ್ಟು ಹೊಸದೊಂದು ಜಾಗಕ್ಕೆ ತೆರಳುವುದು ಎಂದರೆ ಬುಡಕಟ್ಟು ಜನಾಂಗದವರಿಗೆ ಕಷ್ಟವೇ. ಯಾಕೆಂದರೆ ನಗರವಾಸಿಗಳಿಗೆ ಹೋಲಿಸಿದರೆ, ಬುಡಕಟ್ಟು ಸಮುದಾಯವರು ಅರಣ್ಯವನ್ನೇ ಅವಲಂಬಿಸಿ ಜೀವನ ಮಾಡುವವರು.
ಹುಲಿ ಸಂರಕ್ಷಣೆಯ ಯೋಜನೆ ಜಾರಿಯಾದ ನಂತರ ಅರಣ್ಯವಾಸಿಗಳಿಗೆ ಹಲವು ರೀತಿಯಲ್ಲಿ ತೊಂದರೆಗಳಾದವು. ಆ ಎಲ್ಲ ತೊಂದರೆಗಳ ಬಗ್ಗೆಯೂ ದೀರ್ಘ ಚರ್ಚೆ ನಡೆಯಿತು.
ಜೋಯಿಡಾ ಎಂಬ ಊರಿನಲ್ಲಿ ಪ್ರಕೃತಿ ಸೌಂದರ್ಯವನ್ನು ಸವಿಯುತ್ತ, ಕುಡುಬಿ ಸಮುದಾಯದವರೊಡೊನೆ ಮಾತನಾಡಲು ಹೆಜ್ಜೆ ಹಾಕಿದೆವು. ಅವರ ಮನೆಗಳ ಸೌಂದರ್ಯ, ಅಲ್ಲಿನ ಹಳೆಯ ಕಾಲದ ವಸ್ತುಗಳು, ಚರ್ಮವಾದ್ಯಗಳೆಲ್ಲ ಕಂಡು. ಶಾಲೆಯಲ್ಲಿ ನಾವು ಕಲಿತ ಸಿಂಧೂ ನಾಗರಿಕತೆಯ ಪಾಠ ನೆನಪಾಯಿತು.
ಕುಡುಬಿ ಸಮುದಾಯದಲ್ಲಿ ಒಂದಾದ “ಭಾಂದೊಳ್ಕರ್’ ಪಂಗಡದ ಮುಖಂಡರೊಡನೆ ಸ್ವಲ್ಪ ಹೊತ್ತು ಮಾತುಕತೆ ನಡೆಸುವ ಅವಕಾಶ ಸಿಕ್ಕಿತು. ನಮಗೆ ಅರಿವಿಲ್ಲದ ಅನೇಕ ಮಾಹಿತಿಯನ್ನು ಸಂಗ್ರಹಿಸಿದೆವು. ಅವರಲ್ಲಿ “ಮಿರಾಸಿ’ ಎಂದು ಕರೆಯಲ್ಪಡುವ ನಂದರಾಜು ಭಾಂದೋಳ್ಕರ್‌ರವರ ಜೊತೆ ಮಾತನಾಡಿದೆವು. ಮಿರಾಸಿ ಎಂದರೆ ಗುರಿಕಾರ ಎಂದರ್ಥ.
ಕುಡುಬಿ ಸಮುದಾಯದಲ್ಲಿ ಇಂದಿಗೂ ವಿನಿಮಯ ಪದ್ಧತಿಯೇ ಚಾಲ್ತಿಯಲ್ಲಿದೆ. ಎತ್ತರವಾದ ಗೋಡೆಗಳು, ದೊಡ್ಡ ಮನೆ ಮತ್ತು ಸೆಗಣಿ ಸಾರಿಸಿದ ತಂಪಾದ ನೆಲವನ್ನು ನೋಡಿ ಬಹಳ “ಹಾಯ್’ ಅನಿಸಿತು. ಅವರಲ್ಲೊಬ್ಬರು ಮಲಗಲು ಚಾಪೆಯನ್ನು ಕೈಯಲ್ಲಿಯೇ ಹೆಣೆಯುತ್ತಿದ್ದರು.
ಈ ಪ್ರಯಾಣದ ನಡುವೆಯೇ ನಾವು “ದೊಹೊಳೆ’ ಎಂಬ ನದಿಯನ್ನು, ವಜ್ರ ಜಲಪಾತವನ್ನೂ ನೋಡಿದೆವು. ಹೊಸ ಜಾಗ, ಅಚ್ಚ ಹಸಿರಿನ ಪರಿಸರದಲ್ಲಿ ಸ್ನೇಹಿತರು ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳುತ್ತ ಮುಂದೆ ಸಾಗುತ್ತಿದ್ದೆವು. ಒಟ್ಟಿನಲ್ಲಿ ಪ್ರವಾಸ ಮುಗಿಸಿ ಬರುವಾಗ ನಮ್ಮೊಳಗೆ ನೂರಾರು ಹೊಸ ವಿಚಾರಗಳ ಪ್ರವಾಹವೇ ಸೇರಿಕೊಂಡಿತ್ತು.
ಕಾರ್ತಿಕ್
ದ್ವಿತೀಯ ಪಿಯುಸಿ,
ಶ್ರೀ ನಾರಾಯಣ ಸನಿಲ್ ಸರಕಾರಿ ಪದವಿಪೂರ್ವ ಕಾಲೇಜು, ಹಳೆಯಂಗಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?
Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು
Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ
VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ
Subrahmanya: ಕುಕ್ಕೆ ಜಾತ್ರೆ ನೋಡಲು ಬರುತ್ತವೆ ದೇವರ ಮೀನುಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.