ಬಾಡಿಗೆ ಸ್ಕೂಟರ್ ನಿಂತಲ್ಲೇ ಪಂಕ್ಚರ್!
Team Udayavani, Jan 18, 2020, 11:39 AM IST
ಸಾಂಧರ್ಬಿಕ ಚಿತ್ರ
ಬೆಂಗಳೂರು: ಖಾಸಗಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುವ ಸುರೇಶ್, ಮೈಸೂರು ರಸ್ತೆಗೆ ಬಂದಿಳಿದಾಗ ರಾತ್ರಿ 12 ಗಂಟೆ. ಅಲ್ಲಿಂದ ಆರ್.ಆರ್. ನಗರದಲ್ಲಿರುವ ಮನೆಗೆ ತೆರಳಲು ಮೊಬೈಲ್ ತೆಗೆದು ಬೈಕ್ ಕಾಯ್ದಿರಿಸಿದರು. ಅಣತಿ ದೂರದಲ್ಲೇ ಇದ್ದ ಬೈಕ್ ಕೂಡ ಕೆಲವೇ ಕ್ಷಣಗಳಲ್ಲಿ ಸಿಕ್ಕಿತು. ಆದರೆ, ಅದನ್ನು ಏರುವಂತಿರಲಿಲ್ಲ. ಯಾಕೆಂದರೆ ಅದು ಪಂಕ್ಚರ್ ಆಗಿತ್ತು. ಪಕ್ಕದಲ್ಲೇ ಇನ್ನೂ ಎರಡು-ಮೂರು ಬೈಕ್‌ಗಳಿದ್ದವು. ಅವುಗಳ ಟೈರ್‌ಗಳಲ್ಲೂ ಗಾಳಿ ಇರಲಿಲ್ಲ!
ಇದು ಸುರೇಶ್ ಅವರೊಬ್ಬರ ಸಮಸ್ಯೆ ಅಲ್ಲ. ಮೆಟ್ರೋ ನಿಲ್ದಾಣಗಳು, ಬಸ್ ನಿಲ್ದಾಣಗಳ ಆಸುಪಾಸು ನಿಲುಗಡೆ ಆಗುವ ಬಹುತೇಕ ಬಾಡಿಗೆ ದ್ವಿಚಕ್ರ ವಾಹನಗಳ ಸ್ಥಿತಿ ಇದೇ ಆಗಿರುತ್ತದೆ. ನಿಲ್ದಾಣಗಳಿಂದ ಮನೆ ಅಥವಾ ಕಚೇರಿಗಳ ನಡುವೆ ಸಂಪರ್ಕ ಕೊಂಡಿ ಅಂದರೆ, “ಲಾಸ್ಟ್ ಮೈಲ್ ಕನೆಕ್ಟಿವಿಟಿ’ಗೆ ಇದು ಇತ್ತೀಚಿಗೆ ತಲೆನೋವಾಗಿ ಪರಿಣಮಿಸಿದೆ.
ನಗರದ ಬಹುತೇಕ ಕಡೆಗಳಿಂದಲೇ ಸೇವೆ ಒದಗಿಸುತ್ತಿರುವ ವಾಹನಗಳ ಬಿಡಿ ಭಾಗ ಕದಿಯುವುದು, ಬೆಂಕಿ ಹಚ್ಚುವುದು, ಟೈಯರ್ ಪಂಕ್ಚರ್ ಮಾಡುವುದು ಹೀಗೆ ನಾನಾ ರೀತಿಯಲ್ಲಿ ಅವುಗಳ ಸೇವೆಗಳಿಗೆ ತೊಡಕು ಉಂಟುಮಾಡುವ ಪ್ರಕರಣಗಳು ಇತ್ತೀಚೆಗೆ ಕಂಡುಬರುತ್ತಿವೆ. ಇದರಿಂದ ಸಮೂಹ ಸಾರಿಗೆ ಪ್ರಯಾಣಿಕರಿಗೆ ಕಿರಿಕಿರಿ ಆಗುತ್ತಿದೆ. ತಡರಾತ್ರಿಯೆಲ್ಲ ಈ ಸಮಸ್ಯೆಗಳು ಎದುರಾದಾಗ, ಅನಿವಾರ್ಯವಾಗಿ ಹೆಚ್ಚು ಬೆಲೆ ತೆತ್ತು ಕ್ಯಾಬ್, ಆಟೋದಂತಹ ವಾಹನಗಳ ಮೊರೆಹೋಗಬೇಕಾಗಿದೆ. ಹೀಗೆ ಲಾಸ್ಟ್ ಮೈಲ್ ಕನೆಕ್ಟಿವಿಟಿ ಕಲ್ಪಿಸುವ ಕಂಪನಿಗಳು ಎಂಟಕ್ಕೂ ಅಧಿಕವಾಗಿವೆ. ಇದರಲ್ಲಿ ಹೆಚ್ಚು ಜನ ಬಳಕೆ ಮಾಡುವುದು ಬೌನ್ಸ್ ಬೈಕ್‌ಗಳನ್ನು. ಅವುಗಳಲ್ಲಿ ಈ ಸಮಸ್ಯೆ ಅಧಿಕವಾಗಿ ಕಂಡುಬರುತ್ತಿದೆ ಎಂದು ಪ್ರಯಾಣಿಕರು ತಿಳಿಸುತ್ತಾರೆ.
“ನಿತ್ಯ ರಾತ್ರಿ 11 ಗಂಟೆ ನಂತರ ಟ್ರಿನಿಟಿಯಿಂದ ನಾಗಸಂದ್ರದವರಿಗೆ ಮೆಟ್ರೋದಲ್ಲಿ ಪ್ರಯಾಣಿಸಿ ಅಲ್ಲಿಂದ ಬೌನ್ಸ್ ವಾಹನದಲ್ಲಿ ಮನೆಗೆ ಹೋಗುತ್ತೇನೆ. ಆದರೆ, ಸಾಕಷ್ಟು ಬಾರಿ ನಿಲ್ದಾಣ ಸಮೀಪದಲ್ಲಿ ನಿಲ್ಲಿಸುವ ಒಂದೆರಡು ಬೌನ್ಸ್ ವಾಹನಗಳು ಪಂಕ್ಚರ್ ಆಗಿರುತ್ತವೆ. ಮುಖ್ಯವಾಗಿ ತಡರಾತ್ರಿ ಸಂದರ್ಭದಲ್ಲೇ ಅಂತಹ ಘಟನೆಗಳು ಸಂಭವಿಸುತ್ತವೆ. ಅಲ್ಲದೆ, ಕೆಲವರು ಉದ್ದೇಶಪೂರಕವಾಗಿಯೇ ಮೆಟ್ರೋ ನಿಲ್ದಾಣದಿಂದ ಸುಮಾರು100-200 ಮೀಟರ್ ದೂರದಲ್ಲಿ ಈ ವಾಹನವನ್ನು ಕೊಂಡೊಯ್ದು ಬಿಡುತ್ತಿದ್ದಾರೆ. ಅದರಿಂದ ಈ ಮಾರ್ಗದಲ್ಲಿ ಒಂಟಿಯಾಗಿ ಹೋಗುವಾಗ ಹಲ್ಲೆ, ದರೋಡೆಗೆ ಯತ್ನಿಸಿರುವ ಘಟನೆಗಳನ್ನು ನಾನು ಕೇಳಿದ್ದೇನೆ ಎಂದು ಮೆಟ್ರೋ ಪ್ರಯಾಣಿಕ ಮಂಜುನಾಥ್ ಅಲವತ್ತುಕೊಂಡರು.
ಮೆಟ್ರೋ ನಿಲ್ದಾಣಗಳಲ್ಲಿ ಕೃತ್ಯ: ರಾತ್ರಿ 10 ಅಥವಾ 11 ಗಂಟೆ ನಂತರ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವ ಬಹುತೇಕರು ತಮ್ಮ ನಿಲ್ದಾಣ ದಿಂದ ಮನೆ ತಲುಪಲು ಬೌನ್ಸ್ ವಾಹನಗಳನ್ನು ಅವಲಂಭಿಸುತ್ತಾರೆ. ಆ್ಯಪ್ ಮೂಲಕ ವಾಹನವನ್ನು ಕಾಯ್ದಿರಿಸಿಕೊಳ್ಳುತ್ತಾರೆ. ನಿಲ್ದಾಣ ಅಥವಾ ಕೂಗಳತೆ ದೂರದಲ್ಲಿ ವಾಹನಗಳು ಇರುತ್ತವೆ. ಆದರೆ, ಅವುಗಳನ್ನು ಕೊಂಡೊಯ್ಯುವ ಸ್ಥಿತಿಯಲ್ಲಿರುವುದಿಲ್ಲ. ಕಾರಣ ಅವುಗಳ ಟೈರ್ ಪಂಕ್ಚರ್ ಮಾಡಿರುತ್ತಾರೆ. ಆಗ, ಗ್ರಾಹಕರು ಅನಿವಾರ್ಯವಾಗಿ ಸಮೀಪದ ಆಟೋ ಮತ್ತಿತರ ಸೇವೆ ಪಡೆಯಲು ಮುಂದಾಗುತ್ತಾರೆ. ಅದನ್ನು ಇತರರು ದುರುಪಯೋಗಪಡಿಸಿಕೊಳ್ಳುತ್ತಿರುವುದು ಕಂಡುಬಂದಿದೆ. ಅಂತಹ ಘಟನೆಗಳು ಮೆಟ್ರೋ ಕೊನೆ ನಿಲ್ದಾಣಗಳಲ್ಲೇ ಆಗುತ್ತಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಉದಾಹರಣೆಗೆ, ಯಲಚೇನಹಳ್ಳಿ, ನಾಗಸಂದ್ರ ಹಾಗೂ ಕೆ.ಆರ್.ಮಾರುಕಟ್ಟೆ, ನ್ಯಾಷನಲ್ ಕಾಲೇಜು, ಜಯನಗರ ಹೀಗೆ ನಾನಾ ಕಡೆ ನಡೆಯುತ್ತಿವೆ ಎನ್ನುತ್ತಾರೆ ಬೌನ್ಸ್ ವಾಹನ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದರು.
ಗಟ್ಟಿ ರಬ್ಬರ್ ಟೈಯರ್: ಪಾರ್ಕಿಂಗ್ ಸ್ಥಳದಲ್ಲೇ ಇಂತಹ ಕೃತ್ಯ ಎಸಗುತ್ತಿದ್ದಾರೆ. ಈಗಾಗಲೇ ವಾಹನಗಳನ್ನು ಸುಟ್ಟು ಹಾಕುವವರು, ಬ್ಯಾಟರಿ ಕದಿಯುವವರನ್ನು ಪೊಲೀಸರ ಸಹಾಯದೊಂದಿಗೆ ಪತ್ತೆ ಹಚ್ಚಿದ್ದೇವೆ. ಹೀಗಾಗಿ ಸಂಸ್ಥೆಯು ಎಲೆಕ್ಟ್ರಿಕ್ ವಾಹನ ಸಿದ್ಧಪಡಿಸುತ್ತಿದ್ದು, ಅದರಲ್ಲಿ ಯಾವುದೇ ಬಿಡಿ ಭಾಗಗಳನ್ನು ಕದಿಯಲು ಸಾಧ್ಯವಿಲ್ಲ. ಈ ವಾಹನಗಳಿಗೆ ಸಾಲಿಡ್ ರಬ್ಬರ್ ಟೈಯರ್ ಅಳವಡಿಸುತ್ತಿರುವುದರಿಂದ ಪಂಕ್ಚರ್ ಮಾಡಲು ಸಾಧ್ಯವಿಲ್ಲ. ಅಲ್ಲದೆ, ಈ ರೀತಿ ಪಂಕ್ಚರ್ ಮಾಡುತ್ತಿರುವುದು ಗಮನಕ್ಕೆ ಬಂದರೆ ಆ್ಯಪ್ ಮೂಲಕವೇ ದೂರು ನೀಡುವಂತೆ ಗ್ರಾಹಕರಲ್ಲಿ ಮನವಿ ಮಾಡುತ್ತಿದ್ದೇವೆ ಎಂದೂ ವಿವೇಕಾನಂದ ಹೇಳಿದರು.
ದಿನವೊಂದಕ್ಕೆ ಒಂದು ಲಕ್ಷ ರೈಡ್ : ನಗರದಲ್ಲಿ 13 ಸಾವಿರ ಬೌನ್ಸ್ ವಾಹನಗಳು ಕಾರ್ಯನಿರ್ವಹಿಸುತ್ತಿದ್ದು, ನಿತ್ಯ 1.10 ಲಕ್ಷ ರೈಡ್ ಇದೆ. ಶೇ. 42ರಷ್ಟು ವಾಹನಗಳು ಮೆಟ್ರೋ ನಿಲ್ದಾಣಗಳಿಂದ ಸೇವೆ ಒದಗಿಸುತ್ತಿವೆ. ಅಂದರೆ 50 ಸಾವಿರ ರೈಡರ್ಸ್ ಇಲ್ಲಿಂದಲೇ ನಡೆಯುತ್ತಿದೆ. ಈ ಮೊದಲು 100ರಲ್ಲಿ ಆರು ವಾಹನಗಳನ್ನು ಹಾನಿಗೊಳಿಸುತ್ತಿದ್ದರು. ಸಾಕಷ್ಟು ಕಾನೂನಾತ್ಮಕ ಕ್ರಮಕೈಗೊಂಡ ರಿಂದ ಇದೀಗ ಎರಡಕ್ಕೆ ಇಳಿಕೆಯಾಗಿದೆ ಎನ್ನುತ್ತಾರೆ ಸಂಸ್ಥೆಯ ಅಧಿಕಾರಿಗಳು.
ಕೃತ್ಯದ ಬಗ್ಗೆ ಮಾಹಿತಿಯಿದೆ: ಸಿಇಒ : ಮೆಟ್ರೋ ನಿಲ್ದಾಣ ಕೆಳಗಡೆ ಹಾಗೂ ಸಮೀಪದಲ್ಲಿ ನಿಂತಿರುವ ಸಂಸ್ಥೆಯವಾಹನಗಳನ್ನು ಪಂಕ್ಚರ್ ಮಾಡುತ್ತಿರುವ ಘಟನೆಗಳ ಬಗ್ಗೆ ಮಾಹಿತಿಯಿದೆ. ಆದರೆ,ಯಾರು ಯಾವ ಉದ್ದೇಶಕ್ಕಾಗಿ ಮಾಡುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಸ್ಪರ್ಧೆಯೊಡ್ಡಲು ಈ ರೀತಿ ಮಾಡುತ್ತಿದ್ದಾರಾ ಎಂಬುದು ಅರ್ಥವಾಗುತ್ತಿಲ್ಲ ಎನ್ನುತ್ತಾರೆ ಬೌನ್ಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್. ಆರ್. ವಿವೇಕಾನಂದ.
-ಮೋಹನ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.