ಶಾಂತಿನಿಕೇತನದ ನೆನಪು


Team Udayavani, Jan 19, 2020, 5:28 AM IST

meg-6

ಚಿಕ್ಕಂದಿನಿಂದ ನನಗೆ ಬಂಗಾಲವೆಂದರೆ ಒಂದು ರೀತಿಯ ಹುಚ್ಚು ಒಲವು. ಅಲ್ಲಿಯ ಭಾಷೆ, ಸಾಹಿತ್ಯ, ಸಂಗೀತ, ಚಲನಚಿತ್ರ, ಜನ- ಏನೇ ಬಂಗಾಲಿ ಇದ್ದರೂ ಅವೆಲ್ಲವೂ. ಮೂಲಕಾರಣ, ಶಾಲೆಯಲ್ಲಿದ್ದಾಗಲೇ, ಆಗ ಜನಪ್ರಿಯವಾಗಿದ್ದ ಬಂಗಾಲಿ ಕಾದಂಬರಿಗಳ ಕನ್ನಡ ಅನುವಾದಗಳನ್ನು ಓದುವ ಗೀಳು ಹಿಡಿದದ್ದು. ಟಾಗೋರ್‌, ಶರಶ್ಚಂದ್ರರಂಥವರ ಕಾದಂಬರಿ ಹಿಡಿದು ಕುಳಿತರೆ, ನನ್ನ ಅಮ್ಮ ಹೇಳುತ್ತಿದ್ದಂತೆ ಈ ಲೋಕದ ಪರಿವೆ ಇಲ್ಲವಾಗುತ್ತಿತ್ತು. ಅಮ್ಮನೇನಾದರೂ ಕೆಲಸ ಹೇಳಲು ಬಂದರೆ, ಪುಸ್ತಕದಲ್ಲಿ ಮುಳುಗಿದ ಈ ಹೆಣ್ಣಿಗೆ ಹೇಳಿ ಪ್ರಯೋಜನವಿಲ್ಲ, ಎಂದು ಗೊಣಗಿಕೊಂಡು ನನ್ನ ತಂಗಿಯಂದಿರನ್ನು ಕರೆಯುತ್ತಿದ್ದಳು.

ಮುಂದೆ ದಶಕಗಳೇ ಕಳೆದರೂ ಬಂಗಾಲದ ಮೇಲಿನ ವಿಚಿತ್ರ ಪ್ರೀತಿ ಕುಗ್ಗಿರಲಿಲ್ಲ. ಅಂತೆಯೇ ಬಂಗಾಲಕ್ಕೆ, ಅದೂ ಮುಖ್ಯತಃ ಕೊಲ್ಕತಾ ಮತ್ತು ಶಾಂತಿನಿಕೇತನಕ್ಕೆ ಹೋಗಬೇಕೆಂಬ ಆಸೆ ಕೂಡ. ಅಂತೂ ಇತ್ತೀಚೆಗೆ ಆ ಹಂಬಲ ಪೂರೈಸಿತ್ತು. ಕೊಲ್ಕತಾದ ವಿಮಾನ ನಿಲ್ದಾಣದಲ್ಲಿ ಕೆಳಗಿಳಿಯುತ್ತಿದ್ದಂತೆ, ನಗರದ ಹೊಲವಲಯದಲ್ಲಿ ಬಂಕಿಮ್‌ ಚಂದ್ರರ ಸಸ್ಯ ಶ್ಯಾಮಲಾಂ ಸಾಲು ನೆನಪಿಗೆ ತರುವ ಮರ-ಗಿಡ-ಹೊಲಗಳ ಹಚ್ಚಹಸಿರು ದಟ್ಟವಾಗಿ ಹಾಸಿತ್ತು. ಅಲ್ಲಲ್ಲಿ ಕಾಣುವ ಕೊಳಗಳು- ಬಂಗಾಲಿ ಕಾದಂಬರಿಗಳಲ್ಲಿ ಹೇಗೆ ಮನೆಯ ಕೊಳಗಳ ಸುತ್ತ ನಿತ್ಯ ಜೀವನದ ತುಣುಕುಗಳನ್ನು, ಸಣ್ಣಪುಟ್ಟ ಘಟನೆಗಳನ್ನು ಹೆಣೆಯಲಾಗುತ್ತಿತ್ತು- ಎಂಬುದನ್ನು ನೆನಪಿಗೆ ತಂದವು.

ವಿಮಾನ ನಿಲ್ದಾಣದಿಂದ ನಗರದೊಳಗೆ ಪ್ರವೇಶಿಸುತ್ತಲೇ, ಕೊಲ್ಕತಾವು ಬೊಂಬಾಯಿಗಿಂತ ಬೇರೆಯಾಗಿದೆ ಎಂದನಿಸಿದರೆ, ಮತ್ತೆ ಕೊಲ್ಕತಾದ ವಿವಿಧ ಭಾಗಗಳನ್ನು ನೋಡುತ್ತ ಅದು ಸ್ಪಷ್ಟವಾಯಿತು. ಎರಡೂ ಜನನಿಬಿಡ ನಗರಗಳಾದರೂ, ಕೊಲ್ಕತಾ ತನ್ನ ಉಕ್ಕಿಹರಿಯುವ ಜನಸಮೂಹವನ್ನು ನಿಯಂತ್ರಣ ದಲ್ಲಿಡಲಾಗದೆ ಕೈಬಿಟ್ಟು ಕುಳಿತಂತೆ ಭಾಸವಾಗುತ್ತಿತ್ತು. ಕೆಲವು ಜಾಗಗಳನ್ನು ಬಿಟ್ಟರೆ, ಅಲ್ಲಿ ಎಲ್ಲವೂ ಹಳೆಯವು, ಗತವೈಭವದ ಪಳೆಯುಳಿಕೆಗಳು ಎನ್ನುವಂತಿದ್ದುವು. ಅಲ್ಲಲ್ಲಿ, ಬಣ್ಣ ಅಳಿದ, ಬಿದ್ದ ಗಾರೆಯ ಗಾಯಗಳನ್ನು ಹೊತ್ತ, ನೂರು ವರ್ಷಕ್ಕೂ ಮಿಕ್ಕಿದ ಬ್ರಿಟಿಷ್‌ ಕಾಲದ ಭಗ್ನ ಮನೆಗಳು ಏನೋ ಕತೆ ಹೇಳಹೊರಟಂತಿದ್ದವು. ಸದಾ ಅರೆಗತ್ತಲಿನಲ್ಲಿರುವ ಬೀದಿಗಳಲ್ಲಿ, ಪೈಂಟ್‌ ಸುಲಿದು ತುಕ್ಕು ಹಿಡಿದ, ಅಲ್ಲಲ್ಲಿ ನಜ್ಜಾದ ಟ್ರಾಮ್‌ಗಳು ಇದ್ದಕ್ಕಿದ್ದಂತೆ ಧಡ‌-ಭಡ ಸದ್ದುಮಾಡುತ್ತ ಹಾದು ಹೋಗುವಾಗ, ಯಾವುದೋ ಪುರಾತನ ಯುಗದಿಂದ ಅವು ಆಗಷ್ಟೆ ಹೊರಬಂದವೇನೋ ಎಂದನಿಸುತ್ತಿತ್ತು.

ವಿಶೇಷವೆಂದರೆ, ಹಾಳುಬಿದ್ದಂತಿರುವ ಇಂದಿನ ಕೊಲ್ಕೊತ್ತದ ಭಾಗಗಳೂ ನಮ್ಮ ಮನಸ್ಸನ್ನು ತಟ್ಟುತ್ತವೆ; ಶರಶ್ಚಂದ್ರ ಚಟರ್ಜಿಯವರ ಕಾದಂಬರಿಗಳ ದೇವದಾಸ, ಶ್ರೀಕಾಂತರಂಥ ಕಥಾನಾಯಕರು ಏನನ್ನೂ ಸಾಧಿಸದೆ, ಬರೇ ತಮ್ಮ ಅವನತಿಯ ದುಃಖಾಂತದಲ್ಲಿ ಓದುಗರ ಮನಸ್ಸನ್ನು ಗೆಲ್ಲುವುದರಲ್ಲಿ ಸಮರ್ಥರಾಗುವಂತೆ. ಆದರೆ, ಕೊಲ್ಕತಾದಲ್ಲಿ ಇಂದಿಗೂ ನೋಡುವಂಥ ಸ್ಥಳಗಳು ಬಹಳಷ್ಟಿವೆ- ರಬೀಂದ್ರನಾಥ ಟಾಗೋರರ, ಸುಭಾಸ್‌ ಚಂದ್ರರ ಭವ್ಯ ಮನೆಗಳು, ವಿವೇಕಾನಂದರು ಸ್ಥಾಪಿಸಿದ ಬೇಲೂರು ಮಠ, ರಾಮಕೃಷ್ಣರು ಆರಾಧಿಸುತ್ತಿದ್ದ ದಕ್ಷಿಣೇಶ್ವರ ದೇವಾಲಯ, ಕೊಲ್ಕತ್ತಾಕ್ಕೆ ಹೆಸರು ಕೊಟ್ಟ ಕಾಲಿಕಾ ದೇವಾಲಯ, ಹೌರಾ ಸೇತುವೆ, ಬೊಟೇನಿಕಲ್‌ ಗಾರ್ಡನ್‌, ಚೌರಂ , ತನ್ನ ಬ್ರಿಟಿಷ್‌ ಕಾಲದ ಬೆಡಗನ್ನು ಇನ್ನೂ ಉಳಿಸಿಕೊಂಡಿರುವ ಪಾರ್ಕ್‌ಸ್ಟ್ರೀಟ್‌ ಪೇಟೆ, ದಂಗುಗೊಳಿಸುವಷ್ಟು ವಿಸ್ತಾರ-ಚೆಲುವುಗಳನ್ನು ಹೊಂದಿರುವ ಮೈದಾನ್‌ ಎಂದೇ ಪ್ರಸಿದ್ಧಿಗೊಂಡ ನಗರಮಧ್ಯದ ಉದ್ಯಾನ, ಅದರ ನಡುಭಾಗದಲ್ಲಿ ತಮ್ಮ ಆಳ್ವಿಕೆಯ ಭವ್ಯತೆಯನ್ನು ಸಾರಲು ಬ್ರಿಟಿಷರು ಕಟ್ಟಿದ ತಾಜ್‌ಮಹಲ್‌ ಎನ್ನಬಹುದಾದ ಚಂದ್ರಕಾಂತ ಶಿಲೆಯ ವಿಕ್ಟೋರಿಯ ಮೆಮೋರಿಯಲ್‌ಮ್ಯೂಸಿಯಮ್‌ ಮುಂತಾದವು.

ಇವೆಲ್ಲವೂ ಬಂಗಾಲವು ತನ್ನ ಉಚ್ಛಾ†ಯ ಸ್ಥಿತಿಯಲ್ಲಿ, ಪಾಶ್ಚಾತ್ಯ ವಿಚಾರಧಾರೆಗಳಿಂದ ಪ್ರೇರಿತಗೊಂಡು, ನಮ್ಮ ದೇಶವು ಆಧುನಿಕ ಜಗತ್ತಿಗೆ ಹೊಂದಿಕೊಳ್ಳುವ ಒಂದು ಮಹತ್ವದ ಘಟ್ಟದಲ್ಲಿ ವಹಿಸಿದ ಬಹುದೊಡ್ಡ ಪಾತ್ರವನ್ನು ನೆನಪಿಗೆ ತರುತ್ತವೆ. ರಾಜರಾಮಮೋಹನ ರಾಯ್‌, ವಿವೇಕಾನಂದ, ಈಶ್ವರಚಂದ್ರ, ಅಬನೀಂದ್ರನಾಥ ಮತ್ತು ರಬೀಂದ್ರನಾಥ ಟಾಗೋರರು, ಸತೀಶ್ಚಂದ್ರ ಬೋಸ್‌, ಬಂಕಿಮ್‌ಚಂದ್ರ-ಶರಶ್ಚಂದ್ರ ಚಟರ್ಜಿಯವರು ಮತ್ತು ಕೊನೆಯದಾಗಿ ಎಂಬಂತೆ ಬಂದ ಸತ್ಯಜಿತ್‌ ರೇ- ಹೀಗೆ ಅನೇಕ ಪ್ರತಿಭಾವಂತರು ಸಮಾಜ ಸುಧಾರಣೆ, ಸಾಹಿತ್ಯ, ವಿಜ್ಞಾನ, ಕಲೆ, ವಿದ್ಯಾದಾನ- ಹೀಗೆ ವಿವಿಧ ಕ್ಷೇತ್ರಗಳಲ್ಲಿ ದೇಶಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದರು. ವ್ಯಾಪಾರ-ಉದ್ಯಮಗಳಲ್ಲೂ ಬಂಗಾಲವು ದೇಶದ ಮುಂದಾಳಾಗಿತ್ತು. ಇಂದಿನ ಬಂಗಾಲದ, ಅದೂ ಕೊಲ್ಕತಾದ ಸ್ಥಿತಿಯನ್ನು ನೋಡುವಾಗ ಇದು ಆ ಮಹಾನುಭಾವರ ಕರ್ಮ ಭೂಮಿಯಾಗಿತ್ತೇ? ಆ ಕಣ್ಣುಕುಕ್ಕುವ ಪ್ರತಿಭೆ, ಆ ಕ್ರಿಯಾಶೀಲತೆ ಹೇಗೆ ಮಾಯವಾಯ್ತು? ಎಂಬ ದನಿಗಳೇಳುತ್ತವೆ. ಇಂದಿನ ಬಂಗಾಳದಲ್ಲೂ ಚೈತನ್ಯವಿದೆ; ಅದರೆ,ಅದು ಬೀದಿ ಮಟ್ಟದ ರಾಜಕೀಯ ಮತ್ತು ಮುಗಿಯದ ಪ್ರತಿಭಟನೆಗಳಲ್ಲಿ ಮುಕ್ತಾಯವಾಗುತ್ತದೆ. ಬಂಗಾಳದ ಕ್ರಿಯಾಶೀಲ ಜನರು ಹೆಚ್ಚಾಗಿ ಹೊರಗೆ ವಲಸೆ ಹೋಗುತ್ತಿದ್ದಾರೆ. ಅಚ್ಚರಿ ಹಾಗೂ ಖೇದವೆನಿಸುವ ಈ ಸ್ಥಿತಿಯ ರೂಪಕವೆಂಬಂತಿತ್ತು ನಾವು ಗೊತ್ತುಮಾಡಿದ ಅಲ್ಲಿನ ಡ್ರೈವರನ ಅಪಾರ ಅಜ್ಞಾನ. ಆ ಪುಣ್ಯಾತ್ಮನು ರಬೀಂದ್ರನಾಥರ ಅಥವಾ ಸುಭಾಸ್‌ಚಂದ್ರರ ಹೆಸರನ್ನೇ ಕೇಳಿರಲಿಲ್ಲವಂತೆ. ಹಾಗಿರುವಾಗ, ಬೇರೆಯವರ ಬಗ್ಗೆ ಮಾತೆತ್ತುವುದೂ ಹುಚ್ಚುತನವಾದೀತೆಂದು ನಮಗನಿಸಿತ್ತು.

ಶಾಂತಿನಿಕೇತನದ ಪ್ರವಾಸವು, ಬಂಗಾಲದಲ್ಲಿ ಮೂಲ ಮೌಲ್ಯಗಳು ಇನ್ನೂ ಸುಪ್ತಾವಸ್ಥೆಯಲ್ಲಿ ಉಳಿದಿವೆ ಎಂದು ತೋರಿಸಿಕೊಟ್ಟಿತು. ನಾವು ಭೇಟಿಕೊಟ್ಟ ಸಮಯ ಹೋಳಿ ಹಬ್ಬದ ಅಂಗವಾಗಿ “ವಸಂತೋತ್ಸವ’ ನಡೆಯುತ್ತಿತ್ತು. ದಾರಿಯುದ್ದಕ್ಕೂ ಅಲ್ಲಲ್ಲಿ ಚಾಪೆ ಹಾಸಿ ಕುಳಿತು ಏಕ್‌ತಾರಾ ನುಡಿಸುತ್ತಿದ್ದ ಬೌಲ್‌ ಹಾಡುಗಾರರು ಹೃದಯವನ್ನೇ ಮೀಟಿದಂತೆ ಹಾಡುತ್ತಿದ್ದರು. ಹಸುರು ತುಂಬಿದ ಶಾಂತಿನಿಕೇತನ ವಿಶ್ವವಿದ್ಯಾಲಯದ ಪರಿಸರದ ಮರಗಳಲ್ಲಿ ಕಡುಹಳದಿ ಬಣ್ಣದ ಕೃಷ್ಣಚೂಡ ಹೂಗಳು ಎಲ್ಲೆಲ್ಲೂ ಅರಳಿದ್ದವು. ಪೃಕೃತಿಯೊಡನೆ ಸಮನ್ವಯ ಸಾಧಿಸಲೆಂಬಂತೆ, ಕಡು ಹಳದಿ ಬಣ್ಣದ ಸೀರೆ, ಹಸುರು ಕುಪ್ಪಸಗಳನ್ನು ತೊಟ್ಟ ವಿದ್ಯಾರ್ಥಿನಿಯರು, ಕಡುಹಳದಿಯ ಜುಬ್ಬ ತೊಟ್ಟ ವಿದ್ಯಾರ್ಥಿಗಳು ಅಲ್ಲಲ್ಲಿ ಗುಂಪುಗುಂಪಾಗಿ ಮರದ ಕೆಳಗೆ ವಿವಿಧ ರೀತಿಯ ನೃತ್ಯ ಗಾಯನಗಳಲ್ಲಿ ನಿರಾಳ-ನಿರ್ಬಂಧರಾಗಿ ನಿರತರಾಗಿದ್ದು, ಇಡೀ ಪರಿಸರವು ಕಲ್ಪನೆಯ ಗಂಧರ್ವರ ನಾಡಿನ ಸದೃಶವಾಗಿತ್ತು. ಹೆಚ್ಚಿನ ಹಾಡುಗಳು, ನೃತ್ಯಗಳು, ರಬೀಂದ್ರರ ರಚನೆಗಳೇ.

ಓರೆ ಭಾಯಿ ಫಾಗುನ್‌ ಲೆಗೆಚೇ ಬೊನೆಬೊನೆ…..
ಓ ಅಣ್ಣ ಹಚ್ಚಿದೆ ವಸಂತದ ಬಣ್ಣ ವನವನಕೆ
ಗೆಲ್ಲು, ಎಲೆ, ಹೂಹಣ್ಣು
ಮೂಲೆಮೂಲೆ, ಎಡೆ ಎಡೆಯಲಿ…
ಕಲಾನಿರತರಿಗೂ, ಸುತ್ತುವರಿದ ಪ್ರೇಕ್ಷಕರಿಗೂ ಹಾಡಿನ ಸೊಲ್ಲುಗಳೂ, ನೃತ್ಯದ ಹೆಜ್ಜೆಗಳೂ ಕರಗತವಾದಂತಿದ್ದುವು. ಪ್ರೇಕ್ಷಕರು ಹಾಡಿಗೆ ದನಿಗೂಡಿಸುತ್ತಿದ್ದು, ಆಗಾಗ್ಗೆ ಸಾಮೂಹಿಕ ನರ್ತನದಲ್ಲಿ ಸೇರ್ಪಡೆಗೊಂಡರೆ, ನೃತ್ಯನಿರತರಾಗಿದ್ದವರು ಪ್ರೇಕ್ಷಕರಾಗುತ್ತಿದ್ದರು. ಈ ರೀತಿಯಾಗಿ ಕಲಾಕಾರರೂ, ಪ್ರೇಕ್ಷಕರೂ ಕಲಾಭಿನಯದಲ್ಲಿ ಸಮಪಾಲ್ಗೊಂಡದ್ದನ್ನು ನೋಡುವುದು ಹೊಸ ಅನುಭವವಾಯಿತು. ಅದೇ ಸಂಜೆ ದೊಡ್ಡ ವೇದಿಕೆಯಲ್ಲಿ ಏರ್ಪಡಿಸಿದ ಹಾಡು-ಕುಣಿತದ ವಿವಿಧ ರೀತಿಯ ಸಂಯೋಜನೆಗಳಲ್ಲಿ ಬಂಗಾಳದ ವಿವಿಧೆಡೆಗಳ ಯುವಜನರು ತಮ್ಮ ಪ್ರತಿಭೆಯನ್ನು ಪರಿಚಯಿಸಿದರು. ಮರುದಿನ ಶಾಂತಿನಿಕೇತನದ ವಿಶಾಲವಾದ ಪ್ರಶಾಂತ ಪರಿಸರವನ್ನು ಸೈಕಲ್‌ ರಿಕ್ಷಾದಲ್ಲಿ (ವಾಹನಗಳು ಅಲ್ಲಿ ನಿಷೇಧ‌) ಸುತ್ತಿದೆವು. ವಿಶ್ವವಿದ್ಯಾಲಯವು ನೀಡುವ ಜ್ಞಾನದ ವೈವಿಧ್ಯತೆಯನ್ನು ಪ್ರತಿನಿಧಿಸುವ ವಿವಿಧ ಶಾಖೆಗಳ ಭವನಗಳನ್ನು ನೋಡಿ ಮನಸ್ಸಿಗೆ ಹಾಯೆನಿಸಿತು.

ಇಲ್ಲಿ ಯಾವಾಗಲಾದರೊಮ್ಮೆ ಬಂದು ಕೆಲ ತಿಂಗಳಾದರೂ ನೆಲಸಿ ಏನನ್ನಾದರೂ ಕಲಿಯಬೇಕೆಂಬ ಹುಚ್ಚು ಹಂಬಲ ನನ್ನದಾಯಿತು.

ಮಿತ್ರಾ ವೆಂಕಟ್ರಾಜ್‌

ಟಾಪ್ ನ್ಯೂಸ್

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!

snehamayi krishna

Snehamayi Krishna ವಿರುದ್ಧ ಕಾಂಗ್ರೆಸ್‌ನಿಂದ ಪೊಲೀಸರಿಗೆ ಮತ್ತೊಂದು ದೂರು

bsy

Covid ವೇಳೆ ಜೀವ ಉಳಿಸುವ ಕೆಲಸ ಮಾಡಿದ್ದೇವೆ: ಬಿಎಸ್‌ವೈ

Parameshwar

Waqf issue; ಬಿಜೆಪಿಯಿಂದ ಕೋಮು ಗಲಭೆಗೆ ಯತ್ನ: ಕಾಂಗ್ರೆಸ್‌

Chaluvarayaswamy

Kumaraswamy ಅವರಿಗೆ ಜತೆಗಿರುವಾಗ ಕೊಚ್ಚೆ ವಾಸನೆ ಬರಲಿಲ್ಲವೇ?: ಚಲುವರಾಯಸ್ವಾಮಿ ತಿರುಗೇಟು

Mangaluru-Sahakara

Mangaluru: ಸಹಕಾರ ಆಂದೋಲನ ಜನರ ಆಂದೋಲನವಾಗಲಿ: ಸಚಿವ ಕೆ.ಎನ್‌.ರಾಜಣ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

11

Kannada Rajyotsava: ನಿಂತ ನೆಲವೇ ಕರ್ನಾಟಕ!

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

vidhana-soudha

CM office ನವೀಕರಣ: ಮತ್ತೊಂದು ವಿವಾದ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!

snehamayi krishna

Snehamayi Krishna ವಿರುದ್ಧ ಕಾಂಗ್ರೆಸ್‌ನಿಂದ ಪೊಲೀಸರಿಗೆ ಮತ್ತೊಂದು ದೂರು

bsy

Covid ವೇಳೆ ಜೀವ ಉಳಿಸುವ ಕೆಲಸ ಮಾಡಿದ್ದೇವೆ: ಬಿಎಸ್‌ವೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.