ನಡೆದಾಡುವ ದೇವರ ಪ್ರಥಮ ಪುಣ್ಯ ಸಂಸ್ಮರಣೋತ್ಸವ
Team Udayavani, Jan 20, 2020, 3:00 AM IST
ತುಮಕೂರು: ಸಿದ್ಧಗಂಗೆಯ ಸಿದ್ಧಿ ಪುರುಷ ನಡೆದಾಡುವ ದೇವರ ಪ್ರಥಮ ಪುಣ್ಯ ಸಂಸ್ಮರಣೋತ್ಸವಕ್ಕೆ ನಾಡಿನ ವಿವಿಧ ಮಠಾಧೀಶರು, ಹರಗುರು ಚರಮೂರ್ತಿಗಳು, ಲಕ್ಷಾಂತರ ಭಕ್ತ ಸಮೂಹ ಹಾಗೂ ಅನೇಕ ಗಣ್ಯರು ಸಾಕ್ಷಿಯಾದರು. ನಾಡಿನ ವಿವಿಧ ಭಾಗಗಳಿಂದ ಬಂದಿದ್ದ ಭಕ್ತ ಸಮೂಹ ಕಂಡು ಹರ್ಷ ವ್ಯಕ್ತಪಡಿಸಿದ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ, ಶ್ರೀಗಳ ಅನನ್ಯ ಸೇವೆ ನೆನೆದು ಶ್ರೀಗಳು ನಮ್ಮೊಂದಿಗೆ ಇಂದಿಗೂ ಇದ್ದು, ಮಠಕ್ಕೆ ಬರುವ ಭಕ್ತರಿಗೆ ಆಶಿರ್ವದಿಸುತ್ತಿದ್ದಾರೆ ಎಂದು ಹೇಳಿದರು.
ನಾಡಿನ ಉದ್ದಗಲಕ್ಕೂ ಪ್ರಸಿದ್ದರಾಗಿ 111 ವರ್ಷ ಸಾರ್ಥಕ ಬದುಕು ನಡೆಸಿ, ಕಾಯಕ ದಾಸೋಹದ ಮೂಲಕ ಹೆಸರಾಗಿದ್ದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಶಿವೈಕ್ಯರಾಗಿ ಜ.21ಕ್ಕೆ ಒಂದು ವರ್ಷ ಪೂರೈಸುತ್ತಿದ್ದು, ಭಾನುವಾರ ನಡೆದ ಲಿಂಗೈಕ್ಯ ಡಾ. ಶಿವಕುಮಾರ ಶ್ರೀಗಳ ಪ್ರಥಮ ಪುಣ್ಯಸಂಸ್ಮರಣೋತ್ಸವ ಹಿನ್ನೆಲೆಯಲ್ಲಿ ಸ್ವಾಮೀಜಿ ಐಕ್ಯರಾಗಿರುವ ಶಿವಯೋಗಿ ಮಂದಿರದ ಗದ್ದುಗೆಯಲ್ಲಿ ಮುಂಜಾನೆಯಿಂದಲೇ ಧಾರ್ಮಿಕ ವಿಧಿ ವಿಧಾನಗಳು, ಅಭಿಷೇಕ, ಅಷ್ಟೋತ್ತರ, ಮಹಾಮಂಗಳಾರತಿ, ಭಜನಾ ಮಂತ್ರ ಘೋಷಗಳು ಮೊಳಗಿದವು.
ಹಿರಿಯ ಶ್ರೀಗಳ ಅಪೇಕ್ಷೆಯಂತೆ ನಸುಕಿನಲ್ಲೇ ಇಷ್ಟಲಿಂಗ ಪೂಜೆ ನೆರವೇರಿಸಿದ ಶ್ರೀ ಸಿದ್ಧಲಿಂಗ ಸ್ವಾಮೀಜಿ ನಂತರ ಉದ್ಧಾನ ಶಿವಯೋಗಿಗಳ ಗದ್ದುಗೆಗೆ ಪೂಜೆ ಸಲ್ಲಿಸಿದರು. ಬೆಳಗ್ಗೆ 5.30ಕ್ಕೆ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರ ನೇತೃತ್ವದಲ್ಲಿ ಗದ್ದುಗೆಗೆ ಪೂಜಾ ಕೈಂಕರ್ಯಗಳು ನೆರವೇರಿದವು. ವಿವಿಧ ಮಠಾಧೀಶರು, ಹರಗುರು ಚರಮೂರ್ತಿಗಳು ಭಕ್ತಿ ಸಮರ್ಪಿಸಿದರು. ಬಳಿಕ ನಾಡಿನ ಮೂಲೆ ಮೂಲೆಗಳಿಂದ ಹರಿದು ಬರುತ್ತಿದ್ದ ಲಕ್ಷಾಂತರ ಭಕ್ತರಿಗೆ ಗದ್ದುಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.
ರುದ್ರಾಕ್ಷಿ ರಥದಲ್ಲಿ ಮೆರವಣಿಗೆ: ವಿವಿಧ ಪುಷ್ಪಗಳಿಂದ ಭವ್ಯವಾಗಿ ಅಲಂಕರಿಸಲಾಗಿದ್ದ ರುದ್ರಾಕ್ಷಿ ರಥದಲ್ಲಿ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಪೂರ್ಣಕುಂಭ ಹೊತ್ತ ಸುಮಂಗಲಿಯರು ಹೆಜ್ಜೆ ಹಾಕಿದರು. ಶ್ರೀ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಶಿವಯೋಗಿ ಮಂದಿರದ ಮುಂಭಾಗದಿಂದ ಆರಂಭವಾದ ಮೆರವಣಿಗೆಯು ಶ್ರೀಮಠದ ಆವರಣದಲ್ಲಿ ಸಾಗಿತು. ಮೆರವಣಿಗೆಯುದ್ದಕ್ಕೂ ನಡೆದ ವಿವಿಧ ಜಾನಪದ ಸಾಂಸ್ಕೃತಿಕ ಕಲಾ ತಂಡಗಳ ಪ್ರದರ್ಶನ ಭಕ್ತರನ್ನು ಆಕರ್ಷಿಸಿತು.
ಎದುರಿಗೆ ನಿಂತ ಸಿದ್ಧಗಂಗೆ ಬೆಟ್ಟ, ಶಿವಯೋಗಿ ಮಂದಿರದ ಬಳಿ ತಂಪೆರೆಯುತ್ತ ನಿಂತಿದ್ದ ಮರ-ಗಿಡ, ಕಷಾಯಕ್ಕಾಗಿ ನಿತ್ಯ ತೊಗಟೆ ಕೊಡುತ್ತಿದ್ದ ಬೇವಿನ ಮರ, ಪ್ರತಿದಿನ ಓಡಾಡುತ್ತಿದ್ದ ದಾರಿ, ವಾಸ್ತವ್ಯದ ತಾಣವಾಗಿದ್ದ ಹಳೇ ಮಠ, ಭಕ್ತರಿಗೆ ದರ್ಶನ ನೀಡಲು ಬಳಸುತ್ತಿದ್ದ ಪ್ರಸಾದ ನಿಲಯದ ಪಕ್ಕದ ಮಂಚದ ಪೀಠದ ಬಳಿ ಭಕ್ತರು ನಮಿಸುತ್ತಿದ್ದರು. ಉತ್ತರ ಕರ್ನಾಟಕ ಭಾಗದ ಬಾಗಲಕೋಟೆ, ವಿಜಯಪುರ, ಬಳ್ಳಾರಿ, ಯಾದಗಿರಿ ಸೇರಿ ರಾಜ್ಯದ ಮೂಲೆ ಮೂಲೆಗಳ ಭಕ್ತರು ಕಳೆದ ರಾತ್ರಿಯೇ ಶ್ರೀಮಠಕ್ಕೆ ಧಾವಿಸಿ ವಾಸ್ತವ್ಯ ಹೂಡಿ, ಇಡೀ ರಾತ್ರಿ ಶಿವನಾಮ ಸ್ಮರಣೆ, ಭಜನೆ ಮಾಡಿದರು.
ಭಕ್ತರು ಬರಲು ವ್ಯವಸ್ಥೆ: ಪುಣ್ಯಸಂಸ್ಮರಣೋತ್ಸದವದಲ್ಲಿ ಭಕ್ತರು ಭಾಗವಹಿಸಲು ಅನುವಾಗುವಂತೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ನಗರ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿಸಿತ್ತು. ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿತ್ತು. ಶ್ರೀಮಠದ ಭಕ್ತರು, ವಿದ್ಯಾರ್ಥಿಗಳು, ಹಳೇ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿಯೇ ಕೆಲಸ ಕಾರ್ಯಗಳಲ್ಲಿ ಟೊಂಕಕಟ್ಟಿ ನಿಂತಿದ್ದರು. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ವಂಶಿಕೃಷ್ಣ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ವಿಶೇಷ ಹೂವಿನ ಅಲಂಕಾರ: ಶ್ರೀಗಳ ಪುಣ್ಯ ಸ್ಮರಣೋತ್ಸವ ಹಿನ್ನೆಲೆಯಲ್ಲಿ ಶನಿವಾರ ರಾತ್ರಿಯೇ ಮಠವನ್ನು ವಿದ್ಯಾರ್ಥಿಗಳು ಸ್ವತ್ಛಗೊಳಿಸಿ ವಿವಿಧ ಹೂವುಗಳಿಂದ ಅಲಂಕರಿಸಿದ್ದರು. ಲಿಂ.ಶ್ರೀಗಳ ಗದ್ದುಗೆ ಮತ್ತು ಶಿವಲಿಂಗವನ್ನು ವಿವಿಧ ಹೂವುಗಳಿಂದ ಅಲಂಕರಿಸಿ, ಶ್ರೀಗಳ ಪಾದುಕೆ ಗದ್ದುಗೆ ಮುಂದೆ ಇಡಲಾಗಿತ್ತು. ಅಲ್ಲದೇ ಗದ್ದುಗೆ ಮುಂದೆ ಹಸಿರು ಚಪ್ಪರ ಮತ್ತು ಗದ್ದುಗೆ ಸುತ್ತಲೂ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಉಳಿದಂತೆ ಧ್ಯಾನ ಮಂದಿರ, ಅಟವೀ ಶ್ರೀಗಳ ಗದ್ದುಗೆ, ಉದ್ಧಾನ ಶಿವಯೋಗಿಗಳ ಗದ್ದುಗೆ, ಹಳೆ ಮಠ ಮತ್ತು ಶ್ರೀಗಳು ಕುಳಿತು ಸಾರ್ವಜನಿಕರಿಗೆ ದರ್ಶನ ನೀಡುತ್ತಿದ್ದ ಸ್ಥಳ ಸಿಂಗರಿಸಲಾಗಿತ್ತು.
ಕೃತಿ ಬಿಡುಗಡೆ: ಸಮಾರಂಭದಲ್ಲಿ ಬೆಂಗಳೂರಿನ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅನ್ನದಾನ ಸೇವಾ ಟ್ರಸ್ಟ್‌ನಿಂದ ಕಾರ್ಯಸೂಚಿ ಕೈಪಿಡಿ ಮತ್ತು ವೆಬ್‌ಸೈಟ್ ಬಿಡುಗಡೆ ಮಾಡಲಾಯಿತು. ಸಿ.ಎನ್.ಸದಾಶಿವಯ್ಯ ವಿರಚಿತ ಶ್ರೀಗುರು ಕರುಣೆ ಮತ್ತು ನಿಷ್ಠೆ ಕೃತಿ, ಬ್ಯಾಲಕೆರೆ ಶಿವಣ್ಣ ವಿರಚಿತ ಯೋಗಾಂಗ ತ್ರಿವಿಧಿ ಮತ್ತು ಮುದ್ದೇನಹಳ್ಳಿ ನಂಜಯ್ಯ ವಿರಚಿತ ಶ್ರೀ ಶಿವಕುಮಾರ ಚರಿತೆ ಪುಸ್ತಕ ಶ್ರೀಗಳು ಬಿಡುಗಡೆಗೊಳಿಸಿದರು. ಸ್ವಾಮೀಜಿ 50 ಕೆಜಿಯ ಬೆಳ್ಳಿ ಪುತ್ಥಳಿ ಮಾಡಿಸಿರುವ ಕೈಗಾರಿಕಾದ್ಯೋಮಿ ಮುಖೇಶ್ ಗರ್ಗ್, ದೆಹಲಿ ಉಗ್ರ ನಿಗ್ರಹ ದಳದ ಅಧ್ಯಕ್ಷರಾದ ಮಣೀಂದರ್‌ಜೀತ್‌ಸಿಂಗ್ ಬಿಟ್ಟ, ಅಂಗಾಂಗ ಕಸಿ ತಜ್ಞರಾದ ಡಾ. ರವೀಂದ್ರನಾಥ್ ಅವರನ್ನು ಸನ್ಮಾನಿಸಲಾಯಿತು.
ಶ್ರೀಗಳ 50 ಕೆ.ಜಿ ಬೆಳ್ಳಿಪುತ್ಥಳಿ: ಡಾ.ಶ್ರೀ ಶಿವಕುಮಾರ ಮಹಾ ಸ್ವಾಮೀಜಿಯವರ 50 ಕೆಜಿ ಬೆಳ್ಳಿ ಪುತ್ಥಳಿ ಸಿದ್ಧವಾಗಿದೆ. ದೆಹಲಿ ಮೂಲದ ಕೈಗಾರಿಕೋದ್ಯಮಿ ಹಾಗೂ ಶ್ರೀಮಠದ ಅಭಿಮಾನಿ ಮುಖೇಶ್ ಗರ್ಗ್ 50 ಕೆಜಿ, 3 ಅಡಿ ಎತ್ತರದ ಶ್ರೀಗಳ ಬೆಳ್ಳಿ ಪುತ್ಥಳಿ ಬಾಂಬೆಯಲ್ಲಿ ಮಾಡಿಸಿದ್ದು, ಶೀಘ್ರದಲ್ಲೇ ಮಠಕ್ಕೆ ಬರಲಿದೆ.
ಕಂಚಿನ ಪುತ್ಥಳಿ ನಿರ್ಮಾಣ: ಶತಮಾನ ಕಂಡಿರುವ ಮಹಾ ಶಿವಯೋಗಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಧರ್ಮನಿಷ್ಠೆ ಬಿಡದೇ ಕಾಯಕ ದಾಸೋಹಕ್ಕೆ ಮಹತ್ವ ನೀಡಿ, ಜಾತ್ಯತೀತವಾಗಿ ಶ್ರೀಮಠ ಬೆಳೆಸಿದ್ದಾರೆ. ಅವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ನೀಡಬೇಕು ಎನ್ನುವ ಒತ್ತಾಯ ಭಕ್ತರದ್ದಾಗಿದೆ. ಮತ್ತು ಬೆಂಗಳೂರಿನಲ್ಲಿ 16 ಕೋಟಿ ರೂ. ವೆಚ್ಚದಲ್ಲಿ ಶ್ರೀಗಳ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಮುಂದಿನ ತಿಂಗಳು ಚಾಲನೆ ನೀಡಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಶ್ರೀಗಳ ಸ್ಮರಣೋತ್ಸವದಲ್ಲಿ ಭರವಸೆ ನೀಡಿದರು.
7 ಕಡೆ ಮಹಾಪ್ರಸಾದ ವಿನಿಯೋಗ: 7 ಕಡೆ ಮಹಾಪ್ರಸಾದ ವಿನಿಯೋಗ ನಡೆಯುತಿತ್ತು. ಬೆಳಗಿನ ಉಪಾಹಾರಕ್ಕೆ ಉಪ್ಪಿಟ್ಟು, ಕೇಸರಿ ಬಾತ್, ಮಧ್ಯಾಹ್ನ ಊಟಕ್ಕೆ ಮೈಸೂರು ಪಾಕ್, ಸಿಹಿ ಬೂಂದಿ, ಖಾರ ಬೂಂದಿ, ಚಿತ್ರಾನ್ನ, ಪಲ್ಯ, ಕೋಸಂಬರಿ, ಅನ್ನ ಸಾಂಬರು, ಪಾಯಸ, ಮಜ್ಜಿಗೆ ಸೇರಿ ವಿವಿಧ ಬಗೆಯ ಖಾದ್ಯ ಭಕ್ತಾದಿಗಳಿಗೆ ಉಣ ಬಡಿಸಲಾಯಿತು. ರಾತ್ರಿ ಊಟಕ್ಕೂ ವಿವಿಧ ಬಗೆಯ ಖಾದ್ಯ ತಯಾರಿಸಲಾಗಿದ್ದು, ಬೆಳಗ್ಗೆಯಿಂದ ರಾತ್ರಿವರೆಗೆ ಸುಮಾರು 1 ಲಕ್ಷಕ್ಕೂ ಅಧಿಕ ಭಕ್ತರು ದರ್ಶನ ಪಡೆದಿದ್ದು, ಅವರಿಗೆ ದಾಸೋಹದ ವ್ಯವಸ್ಥೆ ಮಾಡಲಾಯಿತು.
ಶ್ರೀಮಠದಲ್ಲಿ ಶ್ರೀಗಳು ಇಂದಿಗೂ ಇದ್ದಾರೆ ಎನ್ನುವ ಭಾವನೆ ನಮ್ಮೆಲ್ಲರಲ್ಲಿದೆ. ಶೂನ್ಯಭಾವನೆ, ಅನಾಥ ಪ್ರಜ್ಞೆ ಯಾರಿಗೂ ಕಾಡುತ್ತಿಲ್ಲ. ಶ್ರೀಗಳ ಅನುಗ್ರಹ ಅವರ ತಪಸ್ಸಿನ ಶಕ್ತಿ ನಮ್ಮೆಲ್ಲರಿಗೆ ಸ್ಫೂರ್ತಿಯಾಗಿದೆ. ಅವರ ಆಶೀರ್ವಾದ ಎಲ್ಲಾ ಭಕ್ತರಿಗೆ ಲಭಿಸುತ್ತದೆ. ತೆರೆದ ಪುಸ್ತಕದಂತೆ ಜೀವನ ನಡೆಸಿರುವ ಅವರ ಜೀವನವೇ ನಮಗೆ ಸಂದೇಶ.
-ಶ್ರೀ ಸಿದ್ಧಲಿಂಗ ಸ್ವಾಮೀಜಿ, ಸಿದ್ಧಗಂಗಾ ಮಠಾಧ್ಯಕ್ಷ
ಗಡಿಯಾರದ ರೀತಿ 24 ಗಂಟೆ ಸವೆಸಿದಂತ ಅಪರೂಪದ ಶ್ರೇಷ್ಠಸಂತ ಶಿವಕುಮಾರ ಶ್ರೀ. ಆಧುನಿಕ ಜಗತ್ತು ಕಟ್ಟುವ ಆಶಯ ಹೊಂದಿದ್ದರು. ಶ್ರೀಗಳ ಕೊಡುಗೆ ಅಪಾರ. ನಾಡಿನಾದ್ಯಂತ ಅವರನ್ನ ಸ್ಮರಣೆ ಮಾಡ್ತಿದ್ದಾರೆ.
-ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ
* ಚಿ. ನಿ. ಪುರುಷೋತ್ತಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.