ಫ್ರೀ ಕಾಶ್ಮೀರ್ ಪ್ಲೇ ಕಾರ್ಡ್ ಪ್ರದರ್ಶನ ಪ್ರಕರಣ
Team Udayavani, Jan 21, 2020, 3:00 AM IST
ಮೈಸೂರು: ಫ್ರೀ ಕಾಶ್ಮೀರ್ ಪ್ಲೇ ಕಾರ್ಡ್ ಪ್ರದರ್ಶನ ಸಂಬಂಧ ಆರೋಪಿ ನಳಿನಿ ಹಾಗೂ ಪ್ರತಿಭಟನೆ ಆಯೋಜಕ ಮರಿದೇವಯ್ಯ ಮತ್ತು ಇತರರ ಪರ ಸೋಮವಾರ ನಿರೀಕ್ಷಣೆ ಜಾಮೀನು ಅರ್ಜಿ ಸಲ್ಲಿಕೆಯಾಗಿದ್ದು, 2ನೇ ಹೆಚ್ಚುವರಿ ಜಿಲ್ಲಾ ಮತ್ತ ಸತ್ರ ನ್ಯಾಯಾಲಯ ವಿಚಾರಣೆಯನ್ನು ಜ.24ಕ್ಕೆ ಮುಂದೂಡಿದೆ.
ಮೈಸೂರು ವಿವಿ ಮಾನಸಗಂಗೋತ್ರಿ ಆವರಣದಲ್ಲಿ ಜ.8ರಂದು ಜೆಎನ್‌ಯು ವಿದ್ಯಾರ್ಥಿಗಳ ಮೇಲಿನ ದಾಳಿ ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಫ್ರೀ ಕಾಶ್ಮೀರ್ ಪೋಸ್ಟರ್ ಪ್ರದರ್ಶಿಸಿದ್ದ ನಳಿನಿ ಮತ್ತು ಪ್ರತಿಭಟನೆಯನ್ನು ಸಂಘಟಿಸಿದ್ದ ಮರಿದೇವಯ್ಯ ಪರ ವಕಾಲತ್ತು ವಹಿಸದಂತೆ ಮೈಸೂರು ವಕೀಲರ ಸಂಘ ನಿರ್ಧರಿಸಿತ್ತು.
ವಿಚಾರಣೆ ಜ.24ಕ್ಕೆ ಮುಂದೂಡಿಕೆ: ಸೋಮವಾರ ನಿರೀಕ್ಷಣೆ ಜಾಮೀನು ಅರ್ಜಿ ಸಲ್ಲಿಸಲು ಆರೋಪಿಗಳ ಪರ ವಕಾಲತ್ತು ವಹಿಸಿ ಬೆಂಗಳೂರು, ಮಂಡ್ಯ, ದಾವಣಗೆರೆ, ಹಾಸನ ಹಾಗೂ ಮೈಸೂರಿನಿಂದ ಬಂದಿದ್ದ 165 ಮಂದಿ, ತಮ್ಮ ಸಹಿಯಿರುವ ವಕಾಲತ್ತು ಅರ್ಜಿಯನ್ನು ಕೋರ್ಟ್‌ಗೆ ನೀಡಿ, ಸೋಮವಾರ ಬೆಳಗ್ಗೆ 11.30ಕ್ಕೆ ಜಾಮೀನಿಗೆ ಅರ್ಜಿ ಸಲ್ಲಿಸಿದರು. ಅರ್ಜಿ ಸ್ವೀಕರಿಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತ ಸತ್ರ ನ್ಯಾಯಾಲಯ ಮಧ್ಯಾಹ್ನ 3ಕ್ಕೆ ವಿಚಾರಣೆ ಮುಂದೂಡಿತು.
ಬಳಿಕ ಮಧ್ಯಾಹ್ನ 3ಕ್ಕೆ ಆರಂಭವಾದ ವಿಚಾರಣೆಯಲ್ಲಿ ನಳಿನಿ ಪರವಾಗಿ ಜಗದೀಶ್, ಅನಿಸ್ ಪಾಷ, ವಿಶ್ವನಾಥ್ ಮತ್ತು ಮರಿದೇವಯ್ಯ ರಘುನಾಥ್ ವಾದ ಮಂಡಿಸಿದರು. ಸರ್ಕಾರದ ಪರವಾಗಿ ವಾದ ಮಂಡಿಸಿದ ಸರ್ಕಾರಿ ಅಭಿಯೋಜಕ ಆನಂದ ಕುಮಾರ್, ಪ್ರಕರಣದ ಕುರಿತಂತೆ ಅಧ್ಯಯನ ಮಾಡಿ, ವಾದ ಮಂಡಿಸಲು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ 2ನೇ ಹೆಚ್ಚುವರಿ ಜಿಲ್ಲಾ ಮತ್ತ ಸತ್ರ ನ್ಯಾಯಾಲಯದ ನ್ಯಾಯಾಧೀಶರು ವಿಚಾರಣೆಯನ್ನು ಜ.24ಕ್ಕೆ ಮುಂದೂಡಿದರು.
ಹಿರಿಯ ವಕೀಲ ಸಿ.ಎಸ್.ದ್ವಾರಕನಾಥ್ ಟೀಮ್‌ನಲ್ಲಿ ಇರುವ ವಕೀಲ ಜಗದೀಶ್ ನೇತೃತ್ವದಲ್ಲಿ ವಕೀಲರಾದ ಹರಿರಾಮ್, ಮಹೇಶ್‌ದಾಸ್, ತ್ರಿಮೂರ್ತಿ, ಮಂಜುನಾಥ್, ಶಿವಶಂಕರಪ್ಪ, ಮನೋರಂಜನಿ ನ್ಯಾಯಾಲಯಕ್ಕೆ ಆಗಮಿಸಿದ್ದರು.
ಪರಿಶೀಲನೆ ಮಾಡಿ ತೀರ್ಮಾನ ಕೈಗೊಳ್ಳಲಿ: ಸುದ್ದಿಗಾರರೊಂದಿಗೆ ಮಾತನಾಡಿದ ವಕೀಲ ಜಗದೀಶ್, ಯಾವುದೇ ಪ್ರಕರಣವಾದರೂ ಪರಿಶೀಲನೆ ಮಾಡಿ ತೀರ್ಮಾನ ತೆಗೆದುಕೊಳ್ಳಬೇಕು. ನೋಡಿದ್ದು, ಕೇಳಿದ್ದು ಸುಳ್ಳಾಗಬಹುದು. ಪ್ರಕರಣವನ್ನು ಪರಿಶೀಲನೆ ಮಾಡಿದ ಬಳಿಕ ಸತ್ಯ ತಿಳಿಯಲಿದೆ. ಈ ಪ್ರಕರಣ ಸಂಬಂಧ ವಕಾಲತ್ತು ವಹಿಸದಿದ್ದರೇ, ಪ್ರಕರಣ ಇಲ್ಲಿಗೆ ನಿಲ್ಲುತ್ತದೆ. ಪ್ರಕರಣ ನ್ಯಾಯಾಲಯದಲ್ಲಿ ತೀರ್ಮಾನವಾಗಲಿ.
ನಂತರ ಸತ್ಯಾಸತ್ಯತೆ ತಿಳಿಯಲಿದೆ. ತಪ್ಪಿತಸ್ಥರಾದರೆ ಅವರಿಗೆ ಶಿಕ್ಷೆಯಾಗಲಿ. ತಪ್ಪಿತಸ್ಥರಲ್ಲದಿದ್ದರೆ ಅವರಿಗೆ ನ್ಯಾಯ ಸಿಗಲಿ. ಈ ವಿಚಾರದಲ್ಲಿ ಮೈಸೂರು ವಕೀಲರ ಸಂಘದ ನಿರ್ಧಾರ ಅವರಿಗೆ ಬಿಟ್ಟದ್ದು. ಮೈಸೂರು ವಕೀಲರು ಮತ್ತು ನಮ್ಮ ನಡುವೆ ಭಿನ್ನಾಭಿಪ್ರಾಯವಿಲ್ಲ. ನಮ್ಮ ಕರ್ತವ್ಯ ನಾವು ನಿರ್ವಹಿಸುತ್ತಿದ್ದೇವೆ ಎಂದರು.
ಪದದ ಅರ್ಥ, ಹಿನ್ನೆಲೆ ತಿಳಿದುಕೊಳ್ಳಲಿ: ನಳಿನಿ ಪರ ವಕೀಲ ದಾವಣಗೆರೆ ಪಾಷ ಮಾತನಾಡಿ, ನಳಿನಿಗೆ ಈಗಾಗಲೇ ಮಧ್ಯಂತರ ಜಾಮೀನು ಸಿಕ್ಕಿದೆ. ನಿರೀಕ್ಷಣೆ ಜಾಮೀನು ನೀಡುವಂತೆ ವಾದ ಮಂಡಿಸಿದ್ದೇವೆ. ಸರ್ಕಾರಿ ವಕೀಲರು ತಮ್ಮ ವಾದ ಮಂಡಿಸಲು ಕಾಲಾವಕಾಶ ಕೇಳಿದ ಹಿನ್ನೆಲೆ ಜ.24 ವಿಚಾರಣೆ ಮುಂದೂಡಲಾಗಿದೆ. ಕೇವಲ ಫ್ರೀ ಕಾಶ್ಮೀರ ಎಂದು ಫಲಕ ಹಿಡಿದರೆ ಅದು ದೇಶದ್ರೋಹವಾಗದು.
ಪದದ ಉದ್ದೇಶ, ಹಿನ್ನೆಲೆಯನ್ನು ಮೊದಲು ತಿಳಿದುಕೊಳ್ಳಬೇಕು ಎಂದು ವಾದ ಮಂಡಿಸಿದ್ದೇವೆ. ಅಲ್ಲದೇ, ಆ ಯುವತಿ ಈಗಾಗಲೇ ತನ್ನ ಉದ್ದೇಶ ಏನಾಗಿತ್ತು ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ. ಈ ಪ್ರಕರಣ ನಿಲ್ಲುವ ಸಾಧ್ಯತೆ ಕಡಿಮೆಯಿದೆ. ಎಫ್ಐಆರ್ ಮಾಡಿದ ಪೊಲೀಸರ ಮೇಲೂ ಕಾನೂನು ಕ್ರಮ ಆಗುವ ಸಾಧ್ಯತೆ ಇರಬಹುದು ಎಂದರು.
ವಕೀಲರ ಸಂಘದಿಂದ ವಕಾಲತ್ತಿಲ್ಲ: ಈ ನಡುವೆ ಮತ್ತೆ ಸಭೆ ನಡೆಸಿರುವ ಮೈಸೂರು ವಕೀಲರ ಸಂಘ ನಳಿನಿ ಪರ ವಕಾಲತ್ತು ವಹಿಸದಂತೆ ಕೈಗೊಂಡಿದ್ದ ನಿರ್ಧಾರಕ್ಕೆ ಬದ್ಧವಾಗಿದೆ. ಸೋಮವಾರ ಮತ್ತೆ ಸರ್ವ ಸದಸ್ಯರ ಸಭೆ ನಡೆಸಿದ ಸಂಘ ವಕಾಲತ್ತು ವಹಿಸದಿರುವ ಸಂಘದ ತೀರ್ಮಾನಕ್ಕೆ ಬದ್ಧವಾಗಿರುವುದಾಗಿ ತಿಳಿಸಿತು.
ಎಲ್ಲಾ ಹಿತಾಸಕ್ತಿಗಿಂತ ದೇಶದ ಭದ್ರತೆ ಮುಖ್ಯ. ದೇಶದ್ರೋಹದ ಆರೋಪದ ಪರ ವಕಾಲತ್ತು ವಹಿಸುವುದು ಸಂಘದ ಗೌರವಕ್ಕೆ ತರವಲ್ಲ. ಸಂಘದ ಗೌರವ, ಘನತೆಯ ದೃಷ್ಟಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಹೊರಗಿನಿಂದ ಬಂದ ವಕೀಲರಿಗೂ ಈ ಬಗ್ಗೆ ಮನವಿ ಮಾಡಲು ಮೈಸೂರು ಜಿಲ್ಲಾ ವಕೀಲರ ಸರ್ವ ಸದಸ್ಯರ ಸಭೆಯಲ್ಲಿ ತೀರ್ಮಾನಿಸಲಾಯಿತು.
ಮೈಸೂರು ವಕೀಲರಿಂದಲೂ ವಕಾಲತ್ತು: ಒಂದೆಡೆ ನಳಿನಿ ಪರ ಬೆಂಗಳೂರಿನ ವಕೀಲರು ವಕಾಲತ್ತು ವಹಿಸಿದ್ದರೆ ಮತ್ತೂಂದೆಡೆ ಮೈಸೂರಿನ ಕೆಲವು ವಕೀಲರು ವಕಾಲತ್ತು ವಹಿಸಿದ್ದಾರೆ. ಸಂಘದ ನಿರ್ಣಯದ ವಿರುದ್ಧವೇ ನಿಂತಿರುವ ಸುಮಾರು 150 ವಕೀಲರು ನಳಿನಿ ಪರ ವಕಾಲತ್ತಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ನಿರ್ಣಯ ಮರುಪರಿಶೀಲನೆ ಮಾಡುವಂತೆ ಮೈಸೂರಿನ ವಕೀಲರು ಅರ್ಜಿ ಸಲ್ಲಿಸಿದ್ದಾರೆ.
ಈ ಕುರಿತು ವಕೀಲೆ ಮಂಜುಳಾ ಮಾನಸ ಮಾತನಾಡಿ, ಸಂಘದ ನಿರ್ಣಯ ಉಲ್ಲಂಘಿಸಿದರೆ ಏನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿಲ್ಲ. ವೃತ್ತಿ ಧರ್ಮದ ದೃಷ್ಟಿಯಿಂದ ವಕಾಲತ್ತು ವಹಿಸಲು ನಿರ್ಧರಿಸಿದ್ದೇವೆ. ನಮ್ಮ ವಿರುದ್ಧ ಕ್ರಮ ಕೈಗೊಂಡರೆ, ಅದು ಏಕಪಕ್ಷಿಯ ನಿರ್ಧಾರವಾಗುತ್ತದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
Congress: ಜಮೀರ್ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.