ಸ್ತ್ರೀ ಅಂದರೆ ಅಷ್ಟೇ ಸಾಕೇ?
ಅವಳು ಚೈತನ್ಯಶೀಲೆ...
Team Udayavani, Jan 22, 2020, 5:46 AM IST
ಅಬ್ಟಾ, ಆಫೀಸಲ್ಲಿ ತುಂಬಾ ಕೆಲಸ ಇತ್ತು ಅಂತ ಮನೆಗೆ ಬಂದು ಮೈ ಚಾಚುವ ಅನುಕೂಲ ಬಹುತೇಕ ಉದ್ಯೋಗಸ್ಥೆಯರಿಗೆ ಇಲ್ಲ. ಆಫೀಸಿಂದ ಅವರು ಸೀದಾ ಬರುವುದೇ ಅಡುಗೆಮನೆಗೆ. ಅಲ್ಲಿ ಕೆಲಸ ಮುಗೀತು ಅನ್ನುವಷ್ಟರಲ್ಲಿ, ಅಮ್ಮಾ ಎಂಬ ಮಕ್ಕಳ ಕೂಗಿಗೆ ಕಿವಿಯಾಗಬೇಕು. ಇಷ್ಟಾದರೂ ವರ್ಕ್-ಲೈಫ್ ಬ್ಯಾಲೆನ್ಸ್ ಮಾಡೋಕೆ ಆಗ್ತಿಲ್ಲ ಎಂದಾಕೆ ದೂರುವುದೇ ಇಲ್ಲ….
“ರೋಹನ್ ಬಾತ್‌ರೂಮಿನಿಂದ ಆಚೆ ಬಾ. ಸಾಕು…’ ರಚನಾಳ ಧ್ವನಿ ಕೇಳಿ ಹಾಸಿಗೆಯಿಂದ ಎದ್ದ ಅವಿನಾಶ್. ಮಲಗುವ ಕೋಣೆಯಿಂದ ಆಚೆ ಬರುವಷ್ಟರಲ್ಲಿ ರಚನಾ ಅಡುಗೆ ಮನೆಯಲ್ಲಿ ಹಿಟ್ಟು ಕಲಸುತ್ತಿದ್ದಳು. ನಾಲ್ಕು ಬರ್ನರಿನ ಗ್ಯಾಸ್ ಒಲೆಯ ಮೇಲೆ ಪಲ್ಯ, ಕುಕ್ಕರ್ ಏರಿದ್ದವು. ಒಂದರ ಮೇಲೆ ಪರಾಠಾ ಸ್ಟಫ್ ರೆಡಿಯಾಗುತ್ತಿತ್ತು. ಐದು ವರ್ಷದ ಮಗ ರೋಹನನಿಗೆ ಟವೆಲ್ ಸುತ್ತಿ ಎಳೆದೊಯ್ದು, ದೇವರ ಮುಂದೆ ನಿಲ್ಲಿಸಿದಳು. “ಬಿಡೆ ಹೋಗಲಿ. ಚಳಿ..’ ಎನ್ನುತ್ತಿದ್ದ ಗಂಡನತ್ತ ಉರಿನೋಟ ಬೀರಿ, ರೋಹನ್‌ನ ಡಬ್ಬಕ್ಕೆ ಅಣಿ ಮಾಡತೊಡಗಿದಳು. ಶಾರ್ಟ್ ಬ್ರೇಕಿಗೆ ಪುಟ್ಟ ಡಬ್ಬದಲ್ಲಿ ಹಣ್ಣು, ಬಿಸ್ಕತ್ತು. ಮಧ್ಯಾಹ್ನದ ಊಟಕ್ಕೆ ಆಲೂ ಪರಾಠಾ, ಮೊಸರು, ಸಾಸ್.. ಹಾಕುತ್ತಲೇ ಗಂಡನ ಕೈಗೆ ಕಾಫಿಯಿತ್ತು, ದೇವರ ಮಂತ್ರ ಜಪಿಸಿ ಬಂದ ರೋಹನನಿಗೆ ಯೂನಿಫಾರ್ಮ್ ಹಾಕಿ ಹಾಲಿನ ಲೋಟ ಕೈಗಿತ್ತಳು. ಅವನ ಲೋಟದ ಹಾಲು ಮುಗಿಯುವಷ್ಟರಲ್ಲಿ ರಚನಾ ತನ್ನ ಮತ್ತು ಅವಿನಾಶನ ಡಬ್ಬಕ್ಕೂ ಪರಾಠಾ, ಪುಳಿಯೋಗರೆ ಹಾಕಿಯಾಗಿತ್ತು. “ಅವಿ, ಇವತ್ತು ನೀನೇ ರೋಹನ್‌ನ ಸ್ಕೂಲಿಗೆ ಬಿಟ್ಟು ಬಾರೋ. ಅವನು ಪ್ರಾಜೆಕr… ಎಲ್ಲಾ ಹೊತ್ಕೊಂಡು ಸ್ಕೂಲ್ ವ್ಯಾನಿನಲ್ಲಿ ಹೋಗೋದು ಕಷ್ಟ…’ ಎಂದು ಗಂಡನಿಗೆ ಹೇಳಿದಳು. ಹಿಂದಿನ ರಾತ್ರಿ ಹನ್ನೆರಡು ಗಂಟೆಯವರೆಗೆ ಕುಳಿತು ಹೆಂಡತಿ, ರೋಹನ್‌ನ ಡ್ಯಾಂ ಪ್ರಾಜೆಕ್ಟಿನ ಮಾಡೆಲ್ ಮಾಡಿದ್ದು ನೆನಪಾಯಿತು ಅವಿನಾಶನಿಗೆ.
“ಹೋಗಮ್ಮಾ ಸುಸ್ತು, ನಂಗಾಗಲ್ಲ…’ ಅವಿನಾಶನ ಮಾತು ಮುಗಿಯುವಷ್ಟರಲ್ಲಿ, “ಸರಿ. ನಾನು ಕಾರ್ ತಗೊಂಡು ಹೋಗ್ತೀನೆ. ನೀನು ಟೂ ವೀಲರ್‌ನಲ್ಲಿ ಆಫೀಸಿಗೆ ಹೋಗು…’ ಗಂಡನ ಉತ್ತರಕ್ಕೂ ಕಾಯದೆ, ಮಗನ ಕೈ ಎಳೆದುಕೊಂಡು ತನ್ನ, ಅವನ ಬ್ಯಾಗುಗಳು, ರೋಹನನ ಪ್ರಾಜೆಕr… ಎಲ್ಲಾ ಹೊತ್ತು “ನಾಳೆ ಶನಿವಾರ ನನ್ನ ಪೇಂಟಿಂಗ್ ಕ್ಲಾಸ್…’ ಎನ್ನುತ್ತಾ ಹೊರಗೆ ನಡೆದಳು. ಅವಳನ್ನು ಹಿಂದಿನಿಂದ ನೋಡುತ್ತಿದ್ದ ಅವಿನಾಶನಿಗೆ, ಆಕೆ ಒಂದು ರೋಬಾಟ್‌ನಂತೆ ಕಾಣಿಸಿದಾಗ, “ಎಲ್ಲಿಂದ ಈಕೆ ಇಷ್ಟು ಶಕ್ತಿ ತರ್ತಾಳ್ಳೋ…’ ಎಂದು ಮನಸ್ಸಿನಲ್ಲಿಯೇ ಅಂದುಕೊಂಡ.
ಅವಿನಾಶ್ ಮತ್ತು ರಚನಾ ಇಬ್ಬರೂ ಸಾಫ್ಟ್ವೇರ್ ಎಂಜಿನಿಯರ್‌ಗಳು. ಮದುವೆಯಾಗಿ 7 ವರ್ಷ ಆಗಿದೆ. ಮದುವೆಯಾಗಿ ಎರಡು ವರ್ಷಕ್ಕೆ ರೋಹನ್ ಹುಟ್ಟಿದ. ಮೊದಮೊದಲು ಅವಿನಾಶ್ ಮನೆಕೆಲಸದಲ್ಲಿ ರಚನಾಳಿಗೆ ಎಲ್ಲಾ ರೀತಿಯಲ್ಲೂ ಸಹಾಯ ಮಾಡುತ್ತಿದ್ದ. ಆದರೆ, ಯಾಕೋ ಅದೀಗ ಆಗುತ್ತಿಲ್ಲ. ಆಫೀಸಿನ ಕೆಲಸದ ಒತ್ತಡವೋ, ರಚನಾ ಎಲ್ಲವನ್ನೂ ಮಾಡಬಲ್ಲಳು ಎಂಬ ನಂಬಿಕೆಯೋ ಅಥವಾ ಆಲಸ್ಯವೋ ಗೊತ್ತಿಲ್ಲ.
ಇದು ಒಬ್ಬ ಅವಿನಾಶ್ ಅಥವಾ ಒಬ್ಬ ರಚನಾಳ ಕಥೆಯಲ್ಲ. ಬಹುತೇಕ ಎಲ್ಲ ಮನೆಮನೆಯ ಕಥೆ. ಇತ್ತೀಚೆಗೆ ಖಾಸಗಿ ಸಂಸ್ಥೆಯೊಂದು ನಡೆಸಿದ “”work-life balance men V/s women” ಸಮೀಕ್ಷೆಯ ಪ್ರಕಾರ, ಮಹಿಳೆಯರು ಅತ್ಯಂತ ಸಹಜವಾಗಿ ತಮ್ಮ ಉದ್ಯೋಗ ಮತ್ತು ಜೀವನದ ಸಮತೋಲನವನ್ನು ಕಾಯ್ದುಕೊಳ್ಳುತ್ತಾರಂತೆ. ಆದರೆ, ಗಂಡಸರಿಗೆ ಇದು ಕಷ್ಟಸಾಧ್ಯ.
ಯಾಕೆ ಹೀಗಾಗುತ್ತೆ?
ಇತ್ತೀಚೆಗೆ ಮಹಿಳೆಯರ ಜೀವನಶೈಲಿ ಬದಲಾಗಿದೆ. ಇಪ್ಪತ್ತೈದು, ಮೂವತ್ತು ವರ್ಷಗಳ ಹಿಂದೆ ಇದ್ದಂತೆ, ಈಗಿನ ಸ್ತ್ರೀ “ಹತ್ತರಿಂದ ಐದು ಗಂಟೆ’ ಎಂಬಂಥ ಉದ್ಯೋಗಗಳನ್ನು ಆಯ್ಕೆ ಮಾಡಿಕೊಳ್ಳುತ್ತಿಲ್ಲ. ಗಂಡಸರ ವಲಯಗಳೇ ಎಂಬಂತಿದ್ದ ಕಂಡಕ್ಟರ್, ಪೊಲೀಸ್, ಸಿವಿಲ್, ಮೆಕ್ಯಾನಿಕಲ್ ಎಂಜಿನಿಯರಿಂಗ್, ವಿಮಾನಯಾನದಂಥ ಕಷ್ಟದ ವಿಭಾಗಗಳನ್ನೂ ಪ್ರವೇಶಿಸಿದ್ದಾರೆ. ಆದರೂ, ಆಕೆಯ ನಿರ್ವಹಣಾ ಸಾಮರ್ಥ್ಯ ಕಡಿಮೆಯಾಗಿಲ್ಲ. ಎಂದಿನಂತೆ ಉದ್ಯೋಗ, ಮನೆ, ಸಂಬಂಧಗಳು ಎಲ್ಲವನ್ನೂ ಸಮರ್ಪಕವಾಗಿ ನಿರ್ವಹಿಸುತ್ತಾಳೆ. ಇದು ಗಂಡಸಿಗೇಕೆ ಅಸಾಧ್ಯ ಎಂಬ ನಿಟ್ಟಿನಲ್ಲಿ ವಿಚಾರ ಮಾಡಿದರೆ, ಭಾರತೀಯ ಸಮಾಜದಲ್ಲಿ ಇವತ್ತಿಗೂ ಗಂಡಸು ಕೆಲವೊಂದು ವಿಷಯಗಳನ್ನು ತನ್ನ ಜವಾಬ್ದಾರಿ ಎಂದು ಒಪ್ಪಿಕೊಂಡೇ ಇಲ್ಲ. ಆತನ ಪ್ರಕಾರ ಅಡುಗೆ, ಮಕ್ಕಳ ಜವಾಬ್ದಾರಿ ಹೆಣ್ಣಿನದೇ ಜವಾಬ್ದಾರಿ. ತಾನು ಚೂರು ಪಾರು ಸಹಾಯ ಮಾಡಬಹುದೇ ವಿನಃ ಪೂರ್ತಿ ಜವಾಬ್ದಾರಿ ತನ್ನದೇ ಎಂದು ಅವನೆಂದೂ ಒಪ್ಪಿಕೊಂಡಂತಿಲ್ಲ. ಬಹುಶಃ ಅನಿವಾರ್ಯ ಎಂದುಕೊಳ್ಳದ ಕಾರಣ ಆತನ ಶಕ್ತಿ ಕುಂದಬಹುದು.
ಯಾವುದೇ ಕೆಲಸ ಮಾಡಬೇಕಾದರೆ-“ಇಚ್ಛೆ, ಜ್ಞಾನ ಮತ್ತು ಕ್ರಿಯಾಶೀಲತೆ’ ಅತ್ಯಂತ ಮುಖ್ಯ. ತಾನು ಈ ಕೆಲಸ ಮಾಡಬೇಕೆಂದು ಇಚ್ಛೆಯಿದ್ದರೆ ಮಾತ್ರ ಕೆಲಸ ಶುರು ಮಾಡಲು ಸಾಧ್ಯ. ನಂತರ, ಅದಕ್ಕೆ ಬೇಕಾದ ತಿಳಿವಳಿಕೆ ಇರಬೇಕು. ಹೊಸದನ್ನು ಕಲಿಯುವ ಉತ್ಸಾಹವೂ ಜೊತೆಯಾಗಬೇಕು. ಮತ್ತು ಕೊನೆಯದಾಗಿ ಅದನ್ನು ಕ್ರಿಯಾರೂಪಕ್ಕೆ ತರುವ ಚೈತನ್ಯ ಇರಬೇಕು. ಹೆಣ್ಣಿನಲ್ಲಿ ಈ ಮೂರೂ ಗುಣಗಳು ಇರುವುದರಿಂದಲೇ ಆಕೆ ತನ್ನ ಉದ್ಯೋಗ ಮತ್ತು ಜೀವನದ ಸಮತೋಲನವನ್ನು ಕಾಯ್ದುಕೊಳ್ಳಲು ಸಾಧ್ಯವಾಗಿದೆ. ಅದರೊಂದಿಗೆ ಜನ್ಮಜಾತವಾಗಿ ಬಂದಂಥ ಸಹನೆ, ಕಾಳಜಿ, ಸಂವಹನ ಶಕ್ತಿ, ಜೀವನಪ್ರೀತಿ ಅವಳ ಚೈತನ್ಯಕ್ಕೆ ಪೂರಕ ಶಕ್ತಿಗಳು.
ಬದುಕೊಂದು ಆಟ…
ನಮ್ಮ ಜೀವನವನ್ನು ಒಂದು ಚೆಂಡಿನಾಟ ಎಂದು ಭಾವಿಸೋಣ. ಐದು ಚೆಂಡುಗಳನ್ನು ಏಕಕಾಲದಲ್ಲಿ ತೂರುತ್ತಾ ಕ್ಯಾಚ್ ಹಿಡಿಯುವ ಆಟ. ಒಂದು ಚೆಂಡು ಉದ್ಯೋಗ, ಮತ್ತೂಂದು ಕುಟುಂಬ, ಮಗದೊಂದು ಸ್ನೇಹಿತರು, ಇನ್ನೊಂದು ಹವ್ಯಾಸಗಳು, ಕೊನೆಯದು ಚೈತನ್ಯ. ಈ ಚೆಂಡುಗಳಲ್ಲಿ ಉದ್ಯೋಗ ಎಂಬುದು ಕಬ್ಬಿಣದ ಚೆಂಡಾದರೆ, ಉಳಿದ ಎಲ್ಲವೂ ಗಾಜಿನ ಚೆಂಡುಗಳು. ಉದ್ಯೋಗ ಎಂಬ ಚೆಂಡು ಪುಟಿಯಲಾರದು. ಅದನ್ನು ಕ್ಯಾಚ್ ಹಿಡಿಯಲೇ ಬೇಕು. ಒಂದು ವೇಳೆ ಅದೇನಾದರೂ ಬೇರೆ ಯಾವ ಚೆಂಡುಗಳ ಮೇಲೆ ಬಿದ್ದರೂ ಅವುಗಳು ಮತ್ತೆ ಜೋಡಿಸಲಾರದಂತೆ ಪುಡಿಯಾಗುವುದು ನಿಶ್ಚಿತ. ಮಹಿಳೆಗೆ ಈ ಸತ್ಯ ಗೊತ್ತಿದೆ. ಭಾವನಾಜೀವಿಯಾದ ಆಕೆಗೆ ಜೀವನದ ಎಲ್ಲ ಮಜಲುಗಳ, ಮುಖಗಳ ಮಹತ್ವದ ಅರಿವಿದೆ. ಆದ್ದರಿಂದಲೇ ಆಕೆ ತಾನು ಮಾಡುವ ಉದ್ಯೋಗವನ್ನು ಪ್ರೀತಿಸುತ್ತಾಳೆ. ಅದನ್ನೆಂದೂ ಹೊರೆಯಾಗಿ ಕಾಣುವುದಿಲ್ಲ. ಸಹಿಸಲಾರದ ಹೊರೆಯಾದಾಗ ಅದನ್ನು ಕೆಳಗಿಳಿಸಿ ಬೇರೆ ಉದ್ಯೋಗಕ್ಕೆ ಸಿದ್ಧಳಾಗುವ ಛಾತಿಯೂ ಆವಳಿಗಿದೆ. ಗಂಡಸು, ಇಂದಿಗೂ ಸಾಮಾನ್ಯವಾಗಿ ಪರಿವಾರದ ಪ್ರಮುಖ ಆದಾಯದ ಮೂಲವಾಗಿರುವುದರಿಂದ ಆತನಿಗೆ ಈ ಬದಲಾವಣೆಯ ಧೈರ್ಯ ಇರುವುದಿಲ್ಲ. ಬಹುಶಃ ಉದ್ಯೋಗದ ಅನಿವಾರ್ಯತೆ ಹಾಗೂ ಏಕತಾನತೆ ಆತನ ಚೈತನ್ಯವನ್ನು ಕಸಿಯಬಹುದು. ಇದು ಎಲ್ಲ ಪುರುಷರಿಗೂ ಅನ್ವಯವಾಗಲಿಕ್ಕಿಲ್ಲ. ಆದರೆ ಬಹುತೇಕ ಗಂಡಸರ ಸವಾಲು ಇದು.
ಸಮತೋಲನ ಸಾಧ್ಯವಿಲ್ಲ
ಉದ್ಯೋಗವು ಬರೀ ಹಣ ಗಳಿಕೆಯ ಸಾಧನವಾಗಿದ್ದಾಗ ಅನಾಸಕ್ತಿ ಹುಟ್ಟುತ್ತದೆ. ಉದ್ಯೋಗದೊಂದಿಗೆ ಅಭಿರುಚಿಯೂ ಮೇಳೈಸಿದಾಗ ಭಾರವೆನಿಸದು. ವಿರೋಧಾಭಾಸಗಳಿಂದ ಕೂಡಿದ ಜೀವನ ಸಹಜವಾಗಿಯೇ ಚೈತನ್ಯವನ್ನು ಕುಂದಿಸುತ್ತದೆ. ಆಗ ಉದ್ಯೋಗ ಮತ್ತು ಜೀವನದ ಸಮತೋಲನವೆಂಬುದು ಮರೀಚಿಕೆ. ಸಮಾಜಮುಖೀ ಕಾರ್ಯಗಳು, ಮನೆ ಮಂದಿಯ ಬಗ್ಗೆ ಸಹಜವಾದ ಕಾಳಜಿ, ತುಸು ಬದಲಾದ ಪುರುಷ ಪ್ರವೃತ್ತಿ, ಹವ್ಯಾಸಗಳಲ್ಲಿ ತೊಡಗಿಕೊಳ್ಳುವಿಕೆ ಈ ಎಲ್ಲವೂ ಮಹಿಳೆಯಂತೆ ಪುರುಷನನ್ನೂ ಉದ್ಯೋಗ ಮತ್ತು ಜೀವನದ ಸಮತೋಲನವನ್ನು ಕಾಯ್ದುಕೊಳ್ಳಲು ಸಿದ್ಧಗೊಳಿಸುವವು. ನಮ್ಮ ಸಮಾಜ, ಕುಟುಂಬ ಹಾಗೂ ಔದ್ಯೋಗಿಕತೆಯ ಪರಿವರ್ತನೆಯ ಪರ್ವವಾದ ಇಂದಿನ ಕಾಲದಲ್ಲಿ ಈ ಸಮತೋಲನವು ಆರೋಗ್ಯಕರ ಕುಟುಂಬಗಳನ್ನೂ ಹುಟ್ಟು ಹಾಕಿ, ತನ್ಮೂಲಕ ಸದೃಢ ಭಾರತಕ್ಕೆ ಬುನಾದಿಯಾಗಲಿ ಎಂದು ಆಶಿಸೋಣ.
-ದೀಪಾ ಜೋಷಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy; ಅಭಿನವ್ ಮನೋಹರ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
Udupi: ದೊಡ್ಡಣ್ಣ ಗುಡ್ಡೆ ದೇವಸ್ಥಾನ; ಕಲ್ಕುಡ-ಕಲ್ಲುರ್ಟಿ ದೈವಗಳ ನೂತನ ಗುಡಿಗೆ ಶಿಲಾನ್ಯಾಸ
Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು
Mangaluru: ‘ಹೆಲಿಟೂರಿಸಂ’ಗೆ ಮುನ್ನುಡಿ ಬರೆದ ‘ಕುಡ್ಲ ಹೈ’ದರ್ಶನ
Mulki: ಉಗುಳಿದರೆ ದಂಡ; ಹಾಕುವವರು ಯಾರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.