ರಾಜ್ಯದಲ್ಲಿ ಜೀವಂತ ಸರ್ಕಾರ ಇಲ್ಲ: ಸಿದ್ದರಾಮಯ್ಯ
Team Udayavani, Jan 22, 2020, 3:00 AM IST
ಮಂಡ್ಯ: ರಾಜ್ಯದಲ್ಲಿ ಜೀವಂತ ಸರ್ಕಾರವಿಲ್ಲ. ಗೌರ್ನಮೆಂಟ್ ಈಸ್ ಡೆಡ್ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದರು. ಮಂಗಳವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕರ್ನಾಟಕದಲ್ಲಿ ಜೀವಂತ ಸರ್ಕಾರ ಇಲ್ಲ ಕಳೆದ ಆರು ತಿಂಗಳಿಂದ 18 ಇಲಾಖೆಗಳಿಗೆ ಮಂತ್ರಿಗಳೇ ಇಲ್ಲ. ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಟೀಕಿಸಿದರು.
ಹತ್ತು ನಿಮಿಷಕ್ಕೆ ಸಹಿ ಮಾಡಿದ್ರು: ಯಡಿಯೂರಪ್ಪ ಒಬ್ಬರೇ ಎಲ್ಲಾ ಇಲಾಖೆ ನೋಡಿಕೊಳ್ಳೋಕಾಗುತ್ತಾ..? ಕೆಲ ಮಂತ್ರಿಗಳಿಗೆ ಹೆಚ್ಚುವರಿ ಖಾತೆ ಕೊಟ್ಟಿದ್ದಾರೆ. ಅವರೂ ಕೆಲಸ ಮಾಡುತ್ತಿಲ್ಲ. ನಮ್ಮ ಪಕ್ಷ ಬಿಟ್ಟು ಬಿಜೆಪಿಗೆ ಹೋಗಿ ಗೆದ್ದಿರೋರ ಕಥೆ ಅವರನ್ನೇ ಕೇಳಬೇಕು. ಗೆದ್ದ 24 ಗಂಟೆಯಲ್ಲಿ ಮಂತ್ರಿ ಮಾಡುವುದಾಗಿ ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದರು. ಇದುವರೆಗೂ ಮಂತ್ರಿ ಮಾಡಲು ಸಾಧ್ಯವಾಗಿಲ್ಲ. ಯಡಿಯೂರಪ್ಪ ಅವರಿಗೆ ಬಿಜೆಪಿ ವರಿಷ್ಠರು ಸಂಪುಟ ವಿಸ್ತರಣೆಗೆ ಅವಕಾಶವನ್ನೇ ನೀಡುತ್ತಿಲ್ಲ. ನಾನು ಸಿಎಂ ಆಗಿದ್ದಾಗ ಸಂಪುಟ ವಿಸ್ತರಣೆಗೆ ಮೇಡಂ (ಸೋನಿಯಾಗಾಂಧಿ), ರಾಹುಲ್ ಹತ್ತು ನಿಮಿಷಕ್ಕೆ ಸಹಿ ಮಾಡಿ ಕೊಟ್ಟಿದ್ದರು ಎಂದರು.
ರಾಜೀನಾಮೆ ಕೊಟ್ಟು ಬರುತ್ತಿದ್ದೆ: ಅಮಿತ್ ಶಾ ಯಡಿಯೂರಪ್ಪ ಅವರಿಗೆ ಮಂತ್ರಿ ಮಂಡಲ ರಚನೆ ಮಾಡಲು ಅವಕಾಶ ಮಾಡಿಕೊಟ್ಟಿಲ್ಲ. ಇದರಿಂದ ರಾಜ್ಯದಲ್ಲಿ ಪ್ರಜಾಪ್ರಭುತ್ವ ಇಲ್ಲದಂತಾಗಿದೆ. ಸ್ವತಂತ್ರವಿಲ್ಲದ ಮುಖ್ಯಮಂತ್ರಿಯಾಗಿದ್ದಾರೆ. ಯಡಿಯೂರಪ್ಪ ಆಗಿದ್ದಕ್ಕೆ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದಾರೆ. ನಾನಾಗಿದ್ದರೆ ರಾಜೀನಾಮೆ ಕೊಟ್ಟು ಬರುತ್ತಿದ್ದೆ. ಮಂತ್ರಿಯಾಗಿ ದುಡ್ಡು ಮಾಡಲು ಹೊರಟವರು ಅತಂತ್ರರಾಗಿದ್ದಾರೆ. ಅವರಿಗೆ ಕಾಂಗ್ರೆಸ್-ಜೆಡಿಎಸ್ ಪಕ್ಷ ಬಿಟ್ಟಿದ್ದು ಈಗ ಅರಿವಾಗಿದೆ ಎಂದು ಹೇಳಿದರು.
ರಾಜ್ಯಕ್ಕೆ ಪ್ರಯೋಜನವಿಲ್ಲ: ಯಡಿಯೂರಪ್ಪ ದಾವೋಸ್ ಪ್ರವಾಸ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯನವರು, ಸಿಎಂ ವಿದೇಶ ಪ್ರವಾಸದಿಂದ ರಾಜ್ಯಕ್ಕೆ ಯಾವುದೇ ಅನುಕೂಲ ಆಗುವುದಿಲ್ಲ. ದೇಶದಲ್ಲೇ ಯಾರೂ ಬಂಡವಾಳ ಹೂಡಿಕೆ ಮಾಡಲು ಮುಂದಾಗುತ್ತಿಲ್ಲ. ಇನ್ನು ದಾವೋಸ್‌ಗೆ ಹೋದರೆ ಹೂಡಿಕೆ ಆಗುತ್ತದೆಯೇ ಎಂದು ಪ್ರಶ್ನಿಸಿದರು. ದೇಶದಲ್ಲಿ ಆರ್ಥಿಕ ಹಿಂಜರಿತ ಹೆಚ್ಚಾಗುತ್ತಿದ್ದರೂ ಪ್ರಧಾನಿ ಮೋದಿ ಒಂದು ದಿನವೂ ಆರ್ಥಿಕ ಪರಿಸ್ಥಿತಿ ಬಗ್ಗೆ ಮಾತನಾಡಿಲ್ಲ.
ದಿನದಿಂದ ದಿನಕ್ಕೆ ಜಿಡಿಪಿ ಕುಸಿಯುತ್ತಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವಧಿಯಲ್ಲಿ ಜಿಡಿಪಿ ಶೇ.8ರಿಂದ 9ರಷ್ಟಿತ್ತು. ಆದರೆ ಇಂದು ಶೇ.2.5ರಷ್ಟಿಗೆ ಇಳಿದಿದೆ. ಬೆಲೆ ಏರಿಕೆ, ನಿರುದ್ಯೋಗ ಹೆಚ್ಚಾಗುತ್ತಿದೆ. ಆದರೆ ಬಿಜೆಪಿಯವರು ಇಂದಿನ ಸರ್ಕಾರ ಕಾರಣ ಎಂದು ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಒಂದು ಅವಧಿಯನ್ನು ಮೋದಿ ಮುಗಿಸಿದ್ದರೂ ಆರ್ಥಿಕತೆ ಕುಸಿಯಲು ಕಾಂಗ್ರೆಸ್ ಹೇಗೆ ಕಾರಣವಾಗುತ್ತೆ ಎಂದು ಪ್ರಶ್ನಿಸಿದರಲ್ಲದೆ, ಮೋದಿ ಅಧಿಕಾರ ಬಿಟ್ಟು ತೊಲಗಲಿ. ದೇಶದ ಆರ್ಥಿಕ ಪರಿಸ್ಥಿತಿಯನ್ನು ನಾವು ಸರಿ ಮಾಡುತ್ತೇವೆ ಎಂದರು.
ನಾಲ್ಕು ಕಾರ್ಯಾಧ್ಯಕ್ಷರ ಸೃಷ್ಟಿ ನನ್ನದಲ್ಲ: ಕೆಪಿಸಿಸಿ ಕಾರ್ಯಾಧ್ಯಕ್ಷರ ನೇಮಕಾತಿಗೆ ಪರ- ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿ, ಕೆಪಿಸಿಸಿ ಅಧ್ಯಕ್ಷರ ನೇಮಕಾತಿಯಲ್ಲಿ ನಾಲ್ಕು ಕಾರ್ಯಾಧ್ಯಕ್ಷರ ನೇಮಕ ಮಾಡುವಂತೆ ನಾನು ಒತ್ತಡ ಹಾಕಿದ್ದೇನೆ ಎಂಬುದು ಮಾಧ್ಯಮಗಳ ಸೃಷ್ಟಿ. ನೀವೇ ಇದನ್ನು ಸೃಷ್ಟಿ ಮಾಡಿಕೊಂಡಿದ್ದೀರಾ. ನೀವೇ ಉತ್ತರ ಕೊಡಿ ಎಂದು ಮಾಧ್ಯಮದವರ ವಿರುದ್ಧ ಗರಂ ಆದರು.
ನಾನು ಎಲ್ಲಿಯೂ ನಾಲ್ಕು ಕಾರ್ಯಾಧ್ಯಕ್ಷರ ಹುದ್ದೆ ನೀಡುವಂತೆ ಹೇಳಿಲ್ಲ. ಸದ್ಯ ರಾಜ್ಯದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರು ಇಲ್ವಾ. ಹಿಂದೆ ದೇಶಪಾಂಡೆ ಕಾಲದಲ್ಲಿ ಕಾರ್ಯಾಧ್ಯಕ್ಷರು ಇರಲಿಲ್ವಾ, ಡಿ.ಕೆ.ಶಿವಕುಮಾರ್ ಅವರೇ ಕಾರ್ಯಾಧ್ಯಕ್ಷರಾಗಿದ್ದರು. ಈಗಲೂ ಈಶ್ವರ್ ಖಂಡ್ರೆ ಇದ್ದಾರೆ. ನಾಲ್ಕು ಮಂದಿ ಕಾರ್ಯಾಧ್ಯಕ್ಷರು ಬೇಕೆಂದು ಹೈಕಮಾಂಡ್‌ಗೆ ನಾನೇ ಒತ್ತಡ ಹಾಕ್ತಿದ್ದೇನೆ ಅಂತ ಸೃಷ್ಟಿ ಮಾಡಲಾಗುತ್ತಿದೆ. ಡಾ.ಜಿ.ಪರಮೇಶ್ವರ್ ಕಾರ್ಯಾಧ್ಯಕ್ಷರು ಬೇಡ ಅಂತಿದ್ದಾರೆ. ಅದು ಅವರ ಅಭಿಪ್ರಾಯ. ಪ್ರಜಾಪ್ರಭುತ್ವದಲ್ಲಿ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ ಎಂದು ಹೇಳಿದರು.
ರೈತರ ಆಸ್ತಿ ಜಪ್ತಿ: ರಾಜ್ಯದಲ್ಲಿ ಸಾಲ ಮಾಡಿದ ರೈತರ ಆಸ್ತಿಯನ್ನು ಬ್ಯಾಂಕ್‌ಗಳು ಜಪ್ತಿ ಮಾಡಲಾಗುತ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಯಡಿಯೂರಪ್ಪ ರೈತನ ಮಗ ಹಾಗೂ ಸರ್ಕಾರ ರೈತಪರವಾಗಿರುವುದರಿಂದ ರೈತರ ಆಸ್ತಿಯನ್ನು ಜಪ್ತಿ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ನನ್ನ ಕಾಲದಲ್ಲಿ ಮುಚ್ಚಿಲ್ಲ: ಮೈಷುಗರ್ ಸಕ್ಕರೆ ಕಾರ್ಖಾನೆ ನಾನು ಸಿಎಂ ಆಗಿದ್ದಾಗ ಮುಚ್ಚಿಲ್ಲ. ನನ್ನ ಕಾಲದಲ್ಲಿ ಸರಿ ಇತ್ತು. ಸಮ್ಮಿಶ್ರ ಸರ್ಕಾರದಲ್ಲಿ ಪುನಶ್ಚೇತನ ಆಗಿಲ್ಲ. ಮೈಷುಗರ್ ಮುಚ್ಚಲು ಸಮ್ಮಿಶ್ರ ಸರ್ಕಾರ ಕಾರಣ ಎಂದು ಹೇಳುವ ಮೂಲಕ ಜೆಡಿಎಸ್‌ಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು. ಗೋಷ್ಠಿಯಲ್ಲಿ ಮಾಜಿ ಸಚಿವರಾದ ಚಲುವರಾಯಸ್ವಾಮಿ, ನರೇಂದ್ರಸ್ವಾಮಿ ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ರಮೇಶ್ ಬಂಡಿಸಿದ್ದೇಗೌಡ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ ಮತ್ತಿತರರಿದ್ದರು.
ಸರ್ಕಾರದ ಗುಪ್ತಚರ ಇಲಾಖೆ ವಿಫಲ: ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದ ಬಾಂಬ್ ಪತ್ತೆ ಪ್ರಕರಣ ಭಯ ಹುಟ್ಟಿಸುವ ಘಟನೆಯಾಗಿದೆ. ಇದರಲ್ಲಿ ರಾಜ್ಯದ ಗುಪ್ತಚರ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದರು. ಇಂತ ಘಟನೆಗಳು ನಡೆಯಬಾರದು. ಇಷ್ಟೆಲ್ಲ ನಡೆಯುತ್ತಿದ್ದರೂ ಸರ್ಕಾರದ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು. ಮಂಗಳೂರಿನಲ್ಲಿ ಘಟನೆ ಮೇಲೆ ಘಟನೆಗಳು ಜರುಗುತ್ತಲೇ ಇವೆ. ಗೋಲಿಬಾರ್ ಪ್ರಕರಣ ನಡೆಯಿತು. ಇದರಿಂದ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿತ್ತು. ಆದರೆ ಆ ಕೆಲಸ ಮಾಡಲಿಲ್ಲ.
ಬಾಂಬ್ ಪತ್ತೆ ಪ್ರಕರಣದ ಹಿಂದೆ ಯಾರಿದ್ದಾರೆ, ಯಾರ ಕೈವಾಡ ಎಂಬುದರ ಬಗ್ಗೆ ಸಂಪೂರ್ಣ ಕೂಲಂಕುಷ ತನಿಖೆ ನಡೆಯಬೇಕು ಎಂದು ಹೇಳಿದರು. ಎಸ್‌ಡಿಪಿಐ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆದಿದ್ದಕ್ಕೆ ಇಂಥ ಘಟನೆಗಳು ನಡೆಯುತ್ತಿವೆ ಎಂದು ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಮೈಸೂರಿನಲ್ಲಿ ಗಲಾಟೆ ನಡೆದಾಗ ವಿದ್ಯಾರ್ಥಿಗಳ ಮೇಲೂ ಪ್ರಕರಣ ದಾಖಲಿಸಿದ್ದರು. ಆ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲಿನ ಪ್ರಕರಣ ಮಾತ್ರ ವಾಪಸ್ ಪಡೆದಿದ್ದೆ. ಆದರೆ ಬಿಜೆಪಿಯವರು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.