ಅಡ್ಡಾದಿಡ್ಡಿಗೆ ತಡೆ: ಕೃಷಿ ಭೂಮಿ ಖರೀದಿ, ನೋಂದಣಿಗೆ ಕಡಿವಾಣ
ಕೊಡಗು, ಕರಾವಳಿಯಲ್ಲಿ ಕನಿಷ್ಠ 3 ಗುಂಟೆ ಖರೀದಿ
Team Udayavani, Jan 22, 2020, 6:45 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ತುಂಡು ಕೃಷಿ ಭೂಮಿ ಖರೀದಿಸಿ ನೋಂದಣಿ ಮಾಡಿಕೊಂಡು ಮನೆ, ಇತರ ಕಟ್ಟಡ ನಿರ್ಮಿಸಿಕೊಳ್ಳುವ ಮೂಲಕ ಹೆಚ್ಚಾಗುತ್ತಿರುವ ಅಡ್ಡಾದಿಡ್ಡಿ ನಗರೀಕರಣಕ್ಕೆ ತಡೆ ಹಾಕಲು ಮುಂದಾಗಿರುವ ರಾಜ್ಯ ಸರಕಾರವು ಕೃಷಿ ಭೂಮಿ ಖರೀದಿ/ ಮಾರಾಟ ನೋಂದಣಿಗೆ ಕನಿಷ್ಠ ಮಿತಿ ನಿಗದಿಪಡಿಸಲು ಸಿದ್ಧತೆ ನಡೆಸಿದೆ.
ರಾಜ್ಯದ ಎಲ್ಲೆಡೆ ಕನಿಷ್ಠ ಐದು ಗುಂಟೆ ಹಾಗೂ ಕೊಡಗು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಕನಿಷ್ಠ ಮೂರು ಗುಂಟೆ (7.5 ಸೆಂಟ್ಸ್) ಭೂಮಿಗಿಂತ ಕಡಿಮೆ ಅಳತೆಯ ಕೃಷಿ ಭೂಮಿ ಮಾರಾಟ- ಖರೀದಿ ಸಂಬಂಧ 11ಇ ನಕ್ಷೆ, ಪೋಡಿ, ಆರ್‌ಟಿಸಿ ನೀಡುವುದನ್ನು ನಿಷೇಧಿಸಲು ಕಂದಾಯ ಇಲಾಖೆ ರಾಜ್ಯ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಸರಕಾರ ಈ ಕನಿಷ್ಠ ಮಿತಿಯನ್ನು ಕ್ರಮವಾಗಿ 10 ಮತ್ತು ಆರು ಗುಂಟೆಗೆ ನಿಗದಿಪಡಿಸಲು ಚಿಂತಿಸಿದ್ದು, ಸದ್ಯದಲ್ಲೇ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ.
ರಾಜ್ಯ ಸರಕಾರ ಪ್ರಸ್ತಾವವನ್ನು ಜಾರಿಗೊಳಿಸಿದರೆ ಮುಂದಿನ ದಿನಗಳಲ್ಲಿ ಕನಿಷ್ಠ ಮಿತಿಗಿಂತ ಕಡಿಮೆ ಅಳತೆಯ ಕೃಷಿ ಭೂಮಿಗೆ 11ಇ ಕಂದಾಯ ನಕ್ಷೆ, ಪೋಡಿ, ಆರ್‌ಟಿಸಿ ಪಡೆದು ಮನೆ ಇಲ್ಲವೇ ಇತರ ಕೃಷಿಯೇತರ ಚಟುವಟಿಕೆಗೆ ಬಳಸಲಾಗದು. ಆದರೆ ಕನಿಷ್ಠ ಮಿತಿಗಿಂತ ಹೆಚ್ಚು ವಿಸ್ತೀರ್ಣದ ಭೂಮಿ ಮತ್ತು ಭೂಪರಿವರ್ತನೆಯಾದ ಭೂಮಿಯನ್ನು ಈಗಿರು ವಂತೆಯೇ ಯಾವುದೇ ಅಳತೆಯಲ್ಲಿ ಮಾರಾಟ, ಖರೀದಿಗೆ ನೋಂದಣಿ ಮಾಡಬಹುದು.
ರಿಯಲ್ ಎಸ್ಟೇಟ್ ದಂಧೆ
ನಗರೀಕರಣ ಹೆಚ್ಚಾಗುತ್ತಿದ್ದಂತೆ ಕೃಷಿ ಭೂಮಿ ಯನ್ನು ಅಕ್ರಮವಾಗಿ ಕೃಷಿಯೇತರ ಚಟುವಟಿಕೆಗೆ ಬಳಸಲಾಗುತ್ತಿದೆ. ಒಂದೆರಡು ಗುಂಟೆ ಕೃಷಿ ಭೂಮಿ ಖರೀದಿಸಿ ಮನೆಗಳನ್ನು ನಿರ್ಮಿಸಿಕೊಳ್ಳಲಾಗುತ್ತಿದೆ.ಇದು ರಿಯಲ್ ಎಸ್ಟೇಟ್ ದಂಧೆಗೂ ಕಾರಣವಾಗಿದೆ. ಜತೆಗೆ ಎಲ್ಲೆಂದರಲ್ಲಿ ಮನೆಗಳು, ಗುಂಪು ಮನೆಗಳು ನಿರ್ಮಾಣವಾಗುತ್ತಿರುವುದರಿಂದ ಒಳಚರಂಡಿ ವ್ಯವಸ್ಥೆ, ತ್ಯಾಜ್ಯ ವಿಲೇವಾರಿ ಸಮಸ್ಯೆ ತಲೆದೋರುತ್ತಿದ್ದು, ನೈರ್ಮಲ್ಯ ಕೆಡುವ ಆತಂಕ ಎದುರಾಗಿದೆ.
ಸದ್ಯ ತುಂಡು ಅಳತೆಯ ಕೃಷಿ ಭೂಮಿ ಖರೀದಿಸಿ ಅದಕ್ಕೆ ಪ್ರತ್ಯೇಕ 11ಇ ನಕ್ಷೆ ಪಡೆದು ಬಳಿಕ ಪೋಡಿ ಮಾಡಿಸಿ ಆರ್‌ಟಿಸಿ ಪಡೆಯಲು ಅವಕಾಶವಿದೆ. ಇದರಿಂದ ಕೃಷಿ ಭೂಮಿ ನೆಪದಲ್ಲಿ ಭೂಮಿ ಖರೀದಿಸಿ ರೆವೆನ್ಯೂ ನಿವೇಶನಗಳಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಇದರಿಂದ ಒಂದೆಡೆ ಕೃಷಿ ಭೂಮಿ ಪ್ರಮಾಣಇಳಿಕೆಯಾದರೆ ಇನ್ನೊಂದೆಡೆ ಅವ್ಯವಸ್ಥಿತ ರೀತಿಯಲ್ಲಿ ಬೆಳವಣಿಗೆಯಾಗಿ ಭವಿಷ್ಯದಲ್ಲಿ ಇನ್ನಷ್ಟು ಸಮಸ್ಯೆಗಳು ತಲೆದೋರುವ ಭೀತಿ ಕಾಡುತ್ತಿದೆ.
ನೋಂದಣಿಗೆ ಕನಿಷ್ಠ ಮಿತಿ
ಕೃಷಿ ಭೂಮಿ ಮಾರಾಟ, ಖರೀದಿ ನೋಂದಣಿಗೆ ಕನಿಷ್ಠ ಮಿತಿ ನಿಗದಿಪಡಿಸುವ ಬಗ್ಗೆ ಕಂದಾಯ ಇಲಾಖೆ ಹಿಂದಿನಿಂದಲೂ ಚಿಂತನೆ ನಡೆಸಿತ್ತು. ಅದರಂತೆ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ 3 ಗುಂಟೆ (7.5 ಸೆಂಟ್ಸ್) ಹಾಗೂ ಕರಾವಳಿಯೇತರ ಜಿಲ್ಲೆಗಳಲ್ಲಿ 5 ಗುಂಟೆ ಮಿತಿ ನಿಗದಿಪಡಿಸಲು ಕಂದಾಯ ಇಲಾಖೆ ಈಗಾಗಲೇ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.
ಕೃಷಿ ಚಟುವಟಿಕೆ ಅಸಾಧ್ಯ
ಅರ್ಧ ಗುಂಟೆ, ಒಂದೆರಡು ಗುಂಟೆಯಷ್ಟು ಚಿಕ್ಕ ಜಾಗದಲ್ಲಿ ಕೃಷಿ ಚಟುವಟಿಕೆ ನಡೆಸುವುದು ಅಸಾಧ್ಯ ಎಂಬುದು ಎಲ್ಲರಿಗೂ ಗೊತ್ತಿದೆ. ಹಾಗಿದ್ದರೂ ಕಾನೂನಿನಲ್ಲಿ ಅವಕಾಶವಿರುವ ಕಾರಣ ನೋಂದಣಿ ನಡೆಯುತ್ತಿದೆ. ಹಾಗಾಗಿ ಕೃಷಿ ಭೂಮಿ ಪ್ರಮಾಣ ಕಡಿಮೆಯಾಗುತ್ತಿದ್ದು, ನಗರೀಕರಣಕ್ಕೆ ಇನ್ನಷ್ಟು ಉತ್ತೇಜನ ನೀಡಿದಂತಾಗಿದೆ. ಸರಕಾರ ಕನಿಷ್ಠ ಮಿತಿ ನಿಗದಿಪಡಿಸಿ ಕಟ್ಟು ನಿಟ್ಟಾಗಿ ಜಾರಿಗೆ ತಂದರೆ ಇದಕ್ಕೆ ನಿಯಂತ್ರಣ ಹಾಕಲು ನೆರವಾಗಲಿದೆ ಎನ್ನುತ್ತವೆ ಮೂಲಗಳು.
ಮಿತಿ ಹೆಚ್ಚಳಕ್ಕೆ ಚಿಂತನೆ
ಕರಾವಳಿ ಜಿಲ್ಲೆಗಳು ಮತ್ತು ಕರಾವಳಿಯೇತರ ಜಿಲ್ಲೆಗಳಲ್ಲಿ ಕನಿಷ್ಠ ಮಿತಿ ನಿಗದಿಪಡಿಸಿ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ ಸರಕಾರ ಪ್ರಸ್ತಾವಿತ ಕನಿಷ್ಠ ಮಿತಿಯನ್ನು ಮಾರ್ಪಡಿಸಲು ಚಿಂತನೆ ನಡೆಸಿದೆ. ಕೊಡಗು ಸೇರಿದಂತೆ ಕರಾವಳಿಯಲ್ಲಿ 3ರ ಬದಲಿಗೆ 6 ಗುಂಟೆ (15 ಸೆಂಟ್ಸ್) ಮತ್ತು ಇತರ ಜಿಲ್ಲೆಗಳಲ್ಲಿ 5 ಗುಂಟೆಗೆ ಬದಲಾಗಿ 10 ಗುಂಟೆ ಮಿತಿ ನಿಗದಿಪಡಿಸುವ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳು ಹೇಳಿವೆ.
ಬೇಕಾಬಿಟ್ಟಿ ನಗರೀಕರಣಕ್ಕೆ ತಡೆ
ಕಡಿಮೆ ಅಳತೆಯ ಕೃಷಿ ಭೂಮಿ ಪಡೆದು ಅದನ್ನು ಕೃಷಿಯೇತರ ಚಟುವಟಿಕೆಗೆ ಬಳಸುವುದು ಹೆಚ್ಚಾಗಿದೆ. ಇದರಿಂದ ಅವ್ಯವಸ್ಥಿತ ನಗರೀಕರಣಕ್ಕೆ ಅವಕಾಶ ಕೊಟ್ಟಂತಾಗುತ್ತದೆ. ಆ ಹಿನ್ನೆಲೆಯಲ್ಲಿ ಕನಿಷ್ಠ ಭೂಮಿ ಮಿತಿ ನಿಗದಿಪಡಿಸುವ ಸಂಬಂಧ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸರಕಾರದ ನಿರ್ಧಾರ ಆಧರಿಸಿ ಕ್ರಮ ಕೈಗೊಳ್ಳಲಾಗುವುದು.
– ಎನ್. ಮಂಜುನಾಥ ಪ್ರಸಾದ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಕೇಸ್: ಪಿಐ ಸೆರೆ
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
MUST WATCH
ಹೊಸ ಸೇರ್ಪಡೆ
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.