ಸಾಂಪ್ರದಾಯಿಕ ಶೈಲಿಯ ಕಟ್ಟ: ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ
Team Udayavani, Jan 23, 2020, 4:34 AM IST
ವೇಣೂರು: ಮಂಗಳೂರು ವಿಶ್ವವಿದ್ಯಾನಿಲಯ, ರಾಷ್ಟ್ರೀಯ ಸೇವಾ ಯೋಜನೆ-ಮಾನವಿಕಾ ವಿಭಾಗ ಆಳ್ವಾಸ್ ಕಾಲೇಜು ಮೂಡುಬಿದಿರೆ ಮತ್ತು ಗ್ರಾ.ಪಂ. ಮರೋಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಮರೋಡಿ ಗ್ರಾ.ಪಂ. ವ್ಯಾಪ್ತಿಯ ಮರೋಡಿ ಮತ್ತು ಪೆರಾಡಿ ಗ್ರಾಮದ ಒಟ್ಟು 14 ವಿವಿಧ ಸ್ಥಳಗಳಲ್ಲಿ ಸಾಂಪ್ರದಾಯಿಕ ಶೈಲಿಯ ಕಟ್ಟಗಳನ್ನು ನಿರ್ಮಿಸುವ ಮೂಲಕ ಜಲ ಸಾಕ್ಷರತೆಯ ಅರಿವು ಮೂಡಿಸಿದರು.
ಒಂದೇ ದಿನ 3 ಕಟ್ಟ !
ಮರೋಡಿ ಗ್ರಾಮದ ಕಲ್ಲೊಟ್ಟುಬೈಲು, ಗುಂಡಾವುಬೈಲು, ನಡ್ಯಾರುಬೈಲು, ಕಲ್ಲಟ್ಟ, ಬಳ್ಳಿದಡ್ಡ, ಹಾಂತ್ಯಾರು, ಮತ್ತೂಟ್ಟು, ಪಿಜತ್ತಾರು, ಬೋವುರಿ, ಹೊಯಿಗೆದಿಡ್ಡು, ಪೆರಾಡಿ ಗ್ರಾಮದ ಹಾರ್ದೊಟ್ಟು, ಹಲೆಕ್ಕಿ ಬೈಲು, ಕಾಂತ್ಯೊಟ್ಟು, ಬಾಂತೊಟ್ಟು, ಪಂಬುದೊಟ್ಟು ಸ್ಥಳಗಳಲ್ಲಿ ಗೋಣಿ ಚೀಲಗಳಿಗೆ ಮಣ್ಣು-ಮರಳು ಮಿಶ್ರಣವನ್ನು ತುಂಬಿಸಿ ಮತ್ತು ಹಲಗೆಗಳನ್ನು ಬಳಸಿ ಕಟ್ಟಗಳನ್ನು ನಿರ್ಮಿಸಲಾಗಿದೆ. ಈ ಎಲ್ಲ ಕಟ್ಟ ಗಳಲ್ಲಿ ನೀರು ಸಂಗ್ರಹಿಸಿ ಕೃಷಿ ಜಮೀನಿಗೆ ಒದಗಿಸುವ ಮೂಲಕ ಅಂತರ್ಜಲ ವೃದ್ಧಿಗೆ ಒತ್ತು ನೀಡಲಾಗಿದೆ. ಅದರಲ್ಲೂ ಒಂದೇ ದಿನ ಮೂರು ಕಟ್ಟಗಳನ್ನು ನಿರ್ಮಿಸಿರುವುದು ಜಲ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳಲ್ಲಿ ಇರುವ ಆಸಕ್ತಿಯನ್ನು ತೋರಿಸುತ್ತದೆ.
ಮರೋಡಿ ಗ್ರಾ.ಪಂ. ಅಧ್ಯಕ್ಷ ಸದಾನಂದ ಶೆಟ್ಟಿ, ಸದಸ್ಯರಾದ ಉಮೇಶ್ ಸಾಲ್ಯಾನ್, ಪದ್ಮಶ್ರೀ, ಗ್ರಾ.ಪಂ. ಸಿಬಂದಿ, ಸ್ಥಳೀಯ ಕೃಷಿಕರಾದ ವಿನೋಧರ ಸಾಲ್ಯಾನ್ ಕಲ್ಲಟ್ಟ, ಚೆರಿಯಾ ಅತ್ತಸ, ಬಾಲಕೃಷ್ಣ ಬಂಗೇರ ಗಾಂದ್ಯೊಟ್ಟ, ವೀರೇಂದ್ರ ಬಲ್ಲಾಳ್, ರಾಜೇಂದ್ರ ಬಲ್ಲಾಳ್, ಬಾಬು ಸಾಲ್ಯಾನ್ ಸಂಭ್ರಮ, ರಾಜು ಸಾಲ್ಯಾನ್ ಹೆಟೊಟ್ಟು, ಜೀವಂಧರ ಪೂಜಾರಿ, ಚಂದಪ್ಪ ಪೂಜಾರಿ ಹೊಸಮನೆ, ಜೀವಂಧರ ಸಾಲ್ಯಾನ್ ನಡ್ಯಾರು, ಜಯಾನಂದ ಗುಂಡಾವು ಮತ್ತಿತರರು ಕಟ್ಟ ನಿರ್ಮಾಣ ಕಾರ್ಯದಲ್ಲಿ ಸಹಕರಿಸಿದರು.
117 ಮಂದಿ ವಿದ್ಯಾರ್ಥಿಗಳು ಭಾಗಿ
ಕಟ್ಟ ನಿರ್ಮಾಣದಲ್ಲಿ ಮೂಡುಬಿದಿರೆ ಅಳ್ವಾಸ್ ಕಾಲೇಜಿನ ಎನ್ನೆಸ್ಸೆಸ್‌ನ 47 ಮಂದಿ, ಮಾನವಿಕಾ ವಿಭಾಗದ 70 ಮಂದಿ ವಿದ್ಯಾರ್ಥಿಗಳೊಂದಿಗೆ ಸ್ಥಳೀಯರೂ ಕೈ ಜೋಡಿಸಿದ್ದಾರೆ. ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ ಎನ್ನೆಸ್ಸೆಸ್ ಪ್ರಾಧ್ಯಾಪಕ ವಸಂತ ಎನ್., ಉಪನ್ಯಾಸಕಿ ದೀಕ್ಷಿತಾ, ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸಂಧ್ಯಾ, ಹರಿಣಾಕ್ಷಿ ನೇತೃತ್ವ ವಹಿಸಿದ್ದರು.
3,000ಕ್ಕೂ ಹೆಚ್ಚು ಗೋಣಿಚೀಲ ಬಳಕೆ
ಮರೋಡಿ ಗ್ರಾಮಸ್ಥರು ಜಲಸಂರಕ್ಷಣೆ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದು, 11 ಕಟ್ಟ ನಿರ್ಮಿಸುವುದಾಗಿ ತಿಳಿಸಿದ್ದರು. ಇದೀಗ ವಿವಿಧೆಡೆಗಳಲ್ಲಿ 14 ಕಟ್ಟಗಳನ್ನು ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳ ಸಹಕಾರದಲ್ಲಿ ನಿರ್ಮಿಸಿದ್ದಾರೆ. ಎಲ್ಲ ಕಟ್ಟಗಳ ನಿರ್ಮಾಣಕ್ಕೆ ಪೆರಿಂಜೆಯ ಇಂಟರ್‌ಲಾಕ್ಸ್ ಮಾಲಕರು 3,000ಕ್ಕೂ ಹೆಚ್ಚು ಗೋಣಿಚೀಲ ಒದಗಿಸಿದ್ದಾರೆ.
– ಪಿ. ಧರಣೇಂದ್ರ ಕುಮಾರ್, ಜಿ.ಪಂ. ಸದಸ್ಯರು
ಜಲಸಂರಕ್ಷಣೆ ಉತ್ತಮ ಕಾರ್ಯ
ಸಂಸ್ಥೆಯ ಅಧ್ಯಕ್ಷ ಡಾ| ಮೋಹನ ಆಳ್ವ ಅವರ ಸೂಚನೆಯಂತೆ ಮೂಡುಬಿದಿರೆ ಸುತ್ತಮುತ್ತಲಿನ ಪ್ರದೇಶದಲ್ಲಿ ಜಲಸಂರಕ್ಷಣೆ ಮಾಡುವ ಉದ್ದೇಶದಿಂದ ವಿವಿಧ ಗ್ರಾ.ಪಂ.ಗಳಲ್ಲಿ ಎನ್ನೆಸ್ಸೆಸ್ ವಿದ್ಯಾರ್ಥಿಗಳಿಂದ ಕಟ್ಟ ನಿರ್ಮಿಸಲಾಗಿದೆ. ಅದರಲ್ಲಿ ನಾರಾವಿ ಜಿ.ಪಂ. ವ್ಯಾಪ್ತಿಯಲ್ಲಿ ನೀರಿನ ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯ ನಡೆಸಲು ಹೆಚ್ಚಿನ ಪ್ರೋತ್ಸಾಹ ಲಭಿಸಿದೆ. ಜಲಸಂರಕ್ಷಣೆ ಉತ್ತಮ ಕಾರ್ಯ.
– ಪ್ರೊ| ವಸಂತ್, ಎನ್ನೆಸ್ಸೆಸ್ ಘಟಕದ ಶಿಬಿರಾಧಿಕಾರಿ, ಮೂಡುಬಿದಿರೆ ಆಳ್ವಾಸ್ ಕಾಲೇಜು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.