ಮಾಡಾವು ಸಬ್‌ಸ್ಟೇಷನ್ ಫೆಬ್ರವರಿಗೆ ಆರಂಭ?
ದಶಕದಿಂದ ಆಮೆಗತಿಯಲ್ಲೇ ಸಾಗುತ್ತಿರುವ ಕಾಮಗಾರಿ, ಈ ಬಾರಿ ಪೂರ್ಣಗೊಳ್ಳುವ ವಿಶ್ವಾಸ
Team Udayavani, Jan 23, 2020, 12:22 AM IST
ಪುತ್ತೂರು: ಸುಮಾರು 12 ವರ್ಷಗಳಿಂದ ಕುಂಟುತ್ತಾ ಸಾಗುತ್ತಿರುವ ಮಾಡಾವು 110/11 ಕೆ.ವಿ. ವಿದ್ಯುತ್ ಸಬ್ ಸ್ಟೇಷನ್ ಫೆಬ್ರವರಿ ತಿಂಗಳಲ್ಲಿ ಕಾರ್ಯಾ ರಂಭಿಸಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ಜನರು ಮಾತ್ರ ಇದನ್ನು ನಂಬಲು ಸಿದ್ಧರಿಲ್ಲ.
ಮೆಸ್ಕಾಂ ಪುತ್ತೂರು ವಿಭಾಗದ ಪುತ್ತೂರು, ಸುಳ್ಯ, ಕಡಬ ತಾಲೂಕುಗಳಲ್ಲಿನ ವಿದ್ಯುತ್ ಪೂರೈಕೆ ಸಂಬಂಧಿ ಒತ್ತಡ ನಿವಾರಣೆ ಮಾಡಿ ಸಮಸ್ಯೆಗಳನ್ನು ದೂರ ಮಾಡುವ ನಿರೀಕ್ಷೆ ಈ ಸಬ್‌ಸ್ಟೇಷನ್ ಮೇಲಿದೆ. ದಶಕಗಳ ಹಿಂದಿನ ನಿರೀಕ್ಷೆ ಇದಾದರೂ ನಿರ್ಮಾಣಕ್ಕೆ ಸಂಬಂಧಿಸಿದಂತೆ ಉಂಟಾದ ಸುದೀರ್ಘ ವಿಳಂಬ ಜನರು ನಂಬದಂತೆ ಮಾಡಿದೆ.
ವಿಳಂಬ ಏಕೆ?
ವಿದ್ಯುತ್ ಟವರ್ ಮತ್ತು ತಂತಿ ಹಾದು ಹೋಗುವಲ್ಲಿ ಪಟ್ಟಾ ಭೂಮಿ, ಅರಣ್ಯ ಪ್ರದೇಶಗಳು ಒಳಪಟ್ಟಿತ್ತು. ಈ ಕಾರಣದಿಂದ ಪರಿಹಾರದ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿತ್ತು. ಹಲವು ಮಂದಿ ಪರಿಹಾರದ ದೃಷ್ಟಿಯಿಂದ ಹಾಗೂ ಅಪಾಯದ ಕಾರಣಕ್ಕೆ ನ್ಯಾಯಾಲಯದ ಮೊರೆ ಹೋಗಿದ್ದರು. ಇತ್ತೀಚೆಗಷ್ಟೇ ಉಳಿಕೆಯಾಗಿದ್ದ ಕೊನೆಯ ವ್ಯಾಜ್ಯ ಉಚ್ಚ ನ್ಯಾಯಾಲಯದಲ್ಲಿ ಇತ್ಯರ್ಥಗೊಂಡಿದೆ.
ಅಂತಿಮ ಹಂತ
ಮಾಡಾವು ಸಬ್‌ಸ್ಟೇಷನ್ ಸುಮಾರು 4 ಎಕ್ರೆಯಲ್ಲಿ ನಿರ್ಮಾಣಗೊಂಡಿದೆ. ನೆಟ್ಲಮುಟ್ನೂರಿನಿಂದ ಮಾಡಾವಿಗೆ 110 ಕೆ.ವಿ. ವಿದ್ಯುತ್ ಸರಬರಾಜು ಮಾಡುವ 27 ಕಿ.ಮೀ. ವಿದ್ಯುತ್ ಲೈನ್‌ನಲ್ಲಿ ಇನ್ನು 2.50 ಕಿ.ಮೀ. ಬಾಕಿ ಇದೆ. ಒಟ್ಟು 115 ಟವರ್‌ಗಳಲ್ಲಿ 1 ಟವರ್ ನಿರ್ಮಾಣಕ್ಕೆ ಬಾಕಿ ಇದೆ. ಇದರ ಫೌಂಡೇಶನ್ ಕೆಲಸ ಆಗಿದೆ. ಸ್ಟೇಷನ್ ನಿರ್ಮಾಣ ಕೆಲಸ ಪೂರ್ಣಗೊಂಡಿದ್ದು, ಪರೀಕ್ಷಾ ಕೆಲಸ ನಡೆಯುತ್ತಿದೆ.
2.5 ಕೋಟಿ ರೂ. ಪರಿಹಾರ ಬಾಕಿ
ವಿದ್ಯುತ್ ಲೈನ್ ಮತ್ತು ಟವರ್ ನಿರ್ಮಾಣಕ್ಕಾಗಿ ಸ್ಥಳೀಯ ರೈತರ ಭೂಮಿಗೆ ಸಂಬಂಧಿಸಿ ಒಟ್ಟು 5.8 ಕೋಟಿ ರೂ. ಪರಿಹಾರ ನಿಗದಿಪಡಿಸಲಾಗಿದ್ದು, 110 ಮಂದಿಗೆ 2.5 ಕೋಟಿ ರೂ. ಪರಿಹಾರ ನೀಡಲು ಬಾಕಿ ಇದೆ. ಇದರಲ್ಲಿ 1 ಕೋಟಿ ರೂ. ಪರಿಹಾರಕ್ಕೆ ಸಂಬಂಧಿಸಿದ ಜಾಗದ ದಾಖಲೆಗಳನ್ನು ಪಡೆದುಕೊಳ್ಳಲಾಗಿದೆ. ಉಳಿದ 1.5 ಕೋಟಿ ರೂ. ಪರಿಹಾರದ ದಾಖಲೆಗಳನ್ನು ಸಂಬಂಧಪಟ್ಟ ಜನರಿಂದ ಪಡೆಯುವ ಕಾರ್ಯ ನಡೆಯುತ್ತಿದೆ. ಈ ಎಲ್ಲ ದಾಖಲೆಗಳನ್ನು ಕೆಪಿಟಿಸಿಎಲ್ ಕಾರ್ಪೊರೆಟ್ ಕಚೇರಿಗೆ ನೀಡಿ ಅಲ್ಲಿಂದ ನೇರವಾಗಿ ಫಲಾನುಭವಿಗಳ ಹೆಸರಿಗೆ ಡಿಡಿ ಮಾಡಲಾಗುತ್ತದೆ ಎಂದು ಕೆಪಿಟಿಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಮಾಡಾವು ಸಬ್‌ಸ್ಟೇಷನ್ ಕುರಿತು ಸಚಿವರು ಪರಿಶೀಲಿಸಿದ್ದಾರೆ. ಪರಿಹಾರ ಸಂದಾಯವಾದ ಬಳಿಕ 2.5 ಕಿ.ಮೀ. ದೂರದ ಲೈನ್ ಎಳೆಯುವ ಕಾರ್ಯ ಮತ್ತು 1 ಟವರ್ ನಿರ್ಮಾಣವನ್ನೂ ತತ್‌ಕ್ಷಣವೇ ಆರಂಭ ಮಾಡಲಿದ್ದು, ಫೆಬ್ರವರಿ ತಿಂಗಳ ಅಂತ್ಯದಲ್ಲಿ ಮಾಡಾವು ವಿದ್ಯುತ್ ಸಬ್‌ಸ್ಟೇಷನ್ ಲೋಕಾರ್ಪಣೆಗೆ ಸಿದ್ಧಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದರೂ ಈ ಪರಿಹಾರ ಸಂದಾಯ ಪೂರ್ಣಗೊಳ್ಳುವುದು ಯಾವಾಗ ಎನ್ನುವ ಪ್ರಶ್ನೆಯೂ ಇದೆ.
ಮಾಡಾವು ವಿದ್ಯುತ್ ಸಬ್‌ಸ್ಟೇಷನ್ ಲೋಕಾರ್ಪಣೆಯೊಂದಿಗೆ ಸುಳ್ಯ, ಕಡಬ ತಾಲೂಕು ಮತ್ತು ಕುಂಬ್ರ, ಪಾಣಾಜೆ, ಬೆಟ್ಟಂಪಾಡಿ ಸಹಿತ ಪುತ್ತೂರು ತಾಲೂಕಿನ ಕೆಲ ಭಾಗಗಳ ವಿದ್ಯುತ್ ಒತ್ತಡದ ಸಮಸ್ಯೆ ಸಂಪೂರ್ಣ ಪರಿಹಾರವಾಗುವ ಆಶಾವಾದ ಈ ಭಾಗದ ರೈತರದ್ದಾಗಿದೆ.
ರಾಜೇಶ್ ಪಟ್ಟೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.