ಅಗತ್ಯವಿರುವೆಡೆ ಸ್ಕೈವಾಕ್ ನಿರ್ಮಾಣ
Team Udayavani, Jan 23, 2020, 3:05 AM IST
ಬೆಂಗಳೂರು: ಸಾರ್ವಜನಿಕರು ಖಾಸಗಿ ವಾಹನ ಗಳನ್ನು ಬಳಸುವ ಬದಲು ಸಾರ್ವಜನಿಕ ಸಾರಿಗೆ ಬಳಸಿದರೆ ಸಂಚಾರ ದಟ್ಟಣೆ ಕಡಿಮೆ ಯಾಗಲಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು. ಬಿಬಿಎಂಪಿ ಹಾಗೂ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಹೊಸೂರು ಮುಖ್ಯ ರಸ್ತೆಯ ಚೆಕ್ ಪೋಸ್ಟ್ ಬಳಿ (ಸರ್ಜಾಪುರ ಜಂಕ್ಷನ್ ಹತ್ತಿರ) ನೂತನವಾಗಿ ನಿರ್ಮಿಸಿರುವ ಪಾದಚಾರಿ ಮೇಲ್ಸೇತುವೆಯನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿ ಮಾತನಾಡಿದರು.
ಪಾದಚಾರಿ ಮೇಲ್ಸೇತುವೆಗಳು ನಿರ್ಮಾಣದಿಂದ ಹಿರಿಯ ನಾಗರಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ಅಗತ್ಯವಿರುವ ಸ್ಥಳಗಳಲ್ಲಿ ಸ್ಕೈವಾಕ್‌ಗಳನ್ನು ನಿರ್ಮಿಸಿದರೆ ಪಾದಚಾರಿಗಳಿಗೆ ಹೆಚ್ಚು ಸಹಕಾರಿಗಲಿದೆ ಎಂದು ಹೇಳಿದರು. ಶಾಸಕ ರಾಮಲಿಂಗರೆಡ್ಡಿ ಮಾತನಾಡಿ, ಪಾದಚಾರಿಗಳ ಸುಗಮ ಸಂಚಾರಕ್ಕಾಗಿ ನಗರದಲ್ಲಿ ಈಗಾಗಲೇ ಸಾಕಷ್ಟು ಸ್ಕೈವಾಕ್ ನಿರ್ಮಾಣ ಮಾಡಲಾಗಿದೆ.
ನಿರ್ಮಾಣ ಮಾಡುವಷ್ಟೇ ಇದರ ನಿರ್ವಹಣೆಯೂ ಮುಖ್ಯವಾಗಿದೆ. ಬೇಡಿಕೆ ಇರುವ ಕಡೆ ಸ್ಕೈವಾಕ್ ನಿರ್ಮಿಸಬೇಕು ಎಂದರು. ಬಿಬಿಎಂಪಿ ಮೇಯರ್ ಗೌತಮ್‌ಕುಮಾರ್ ಮಾತನಾಡಿ, ಸ್ಕೈವಾಕ್ ನಿರ್ಮಾಣಕ್ಕೆ ಸುಮಾರು 2.50 ಕೋಟಿ ರೂ. ವೆಚ್ಚ ಮಾಡಲಾಗಿದೆ. ಹೊಸೂರು ರಸ್ತೆ-ಸರ್ಜಾಪುರ ರಸ್ತೆ ಕೂಡುವ ಸ್ಥಳದಲ್ಲಿ ಪಾದಚಾರಿ ಮೇಲ್ಸೇತುವೆ ನಿರ್ಮಿಸಲಾಗಿದೆ.
ಪಾದಚಾರಿ ಮೇಲ್ಸೇತುವೆಯು ಉದ್ದ 73 ಮೀಟರ್, ಅಗಲ 3.60 ಮೀಟರ್ ವಿದೆ. ಮೇಲ್ಸೇತುವೆಯು ರಸ್ತೆಯಿಂದ 5.50 ಮೀಟರ್ ಎತ್ತರವಿದೆ ಎಂದರು. ವಿನೂತನ ರೀತಿಯಲ್ಲಿ ಸ್ಕೈವಾಕ್ ಅನ್ನು ನಿರ್ಮಿಸಿದ್ದು, ಸಿಸಿ ಕ್ಯಾಮರಾ, ಎರಡೂ ಬದಿಯಲ್ಲಿ ಲಿಫ್ಟ್, ಸಾರ್ವಜನಿಕರು ರಾತ್ರಿ ವೇಳೆ ಸುರಕ್ಷಿತವಾಗಿ ತೆರಳಲು ಎಲ್‌ಇಡಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ.
ಇದೇ ಮಾದರಿಯಲ್ಲಿ ನಗರದ ವಿವಿಧ ಸ್ಥಳಗಳಲ್ಲಿ ಸ್ಕೈವಾಕ್ ಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು. ಈ ವೇಳೆ 150 ಪೌರಕಾರ್ಮಿಕರಿಗೆ ಹೈಜಿನಿಕ್ ಕಿಟ್ ವಿತರಣೆ ಮಾಡಲಾಯಿತು. ಉಪ ಮೇಯರ್ ರಾಮಮೋಹನ ರಾಜು, ಅಬ್ದುಲ್‌ವಾಜಿದ್, ಮಾಜಿ ಮೇಯರ್ ಮಂಜುನಾಥ ರೆಡ್ಡಿ,ಮುಖ್ಯಅಭಿಯಂತ ಸೋಮಶೇಖರ್, ಬಸವರಾಜ್ ಕಬಾಡೆ ಮತ್ತಿತರರು ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.