ಜೆಫ್ ಬೆಜೋಸ್‌ಗೆ ಅವಮಾನ ಮಾಡಿದ್ದು ಸರಿಯೇ?
Team Udayavani, Jan 23, 2020, 6:15 AM IST
ಭಾರತದಲ್ಲಿ 10 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಇರಾದೆ ವ್ಯಕ್ತಪಡಿಸಿರುವ ವ್ಯಕ್ತಿಯನ್ನು ಅವಮಾನ ಮಾಡುವ ಬದಲು, ಕೈ ಚಾಚಿ ಸ್ವಾಗತಿಸಬೇಕಿತ್ತಲ್ಲವೇ? ಭಾರತಕ್ಕೆ ಒಬ್ಬರಲ್ಲ, ಸಾವಿರಾರು ಬೆಜೋಸ್‌ಗಳ ಅಗತ್ಯವಿದೆ. ದೇಶದ ಟಿವಿ ಚರ್ಚೆಗಳೆಲ್ಲ ರಾಷ್ಟ್ರವಾದಿ ವಿಚಾರಗಳ ಮೇಲೆಯೇ ಆಗುತ್ತಿವೆಯೇ ಹೊರತು, ಆರ್ಥಿಕ ವಿಚಾರದಲ್ಲಿ ಆಗುತ್ತಿಲ್ಲ.
ಮೊದಲು ಮೇಘನಾಳ ಕಥೆಯನ್ನು ಕೇಳಿಸಿಕೊಳ್ಳಿ. ಮೇಘನಾ ಜನಿಸಿದ್ದು, ಮುಂಬೈನ ಒಂದು ಫುಟ್‌ಪಾತ್‌ನ ಮೇಲೆ. ಮೇಘನಾ 8 ವರ್ಷದವಳಿದ್ದಾಗ ಅವಳನ್ನು ಮತ್ತವಳ ತಂಗಿ ರಾಜಲಕ್ಷ್ಮೀಯನ್ನು ನಾನು ಮೊದಲ ಬಾರಿ ನೋಡಿದ್ದೆ. ಇವರ ಅಮ್ಮ ದಿನವಿಡೀ ಕಸ ಎತ್ತುವ ಕೆಲಸ ಮಾಡುತ್ತಿದ್ದಳು ಮತ್ತು ರಾತ್ರಿ ಕುಡಿತದ ನಶೆಯಲ್ಲೇ ಇರುತ್ತಿದ್ದಳು. ನಶೆ ಇಳಿದು, ಪ್ರಜ್ಞೆ ಬಂದಾಗಲೆಲ್ಲ “”ನನ್ನ ಮಕ್ಕಳನ್ನು ರಕ್ಷಿಸಿ, ಅವರಿಗೆ ಆಸರೆಯಾಗಿ” ಎಂದು ನಮಗೆ ವಿನಂತಿಸಿಕೊಳ್ಳುತ್ತಿದ್ದಳು. ಹೀಗಾಗಿ, ಒಂದು ದಿನ ನಾನು ಪಾರ್ಸಿ ಗೆಳೆಯರ ಸಹಾಯದೊಂದಿಗೆ, ಈ ಇಬ್ಬರೂ ಹೆಣ್ಣುಮಕ್ಕಳನ್ನು ಒಂದು ಒಳ್ಳೆಯ ಖಾಸಗಿ ಬಾಲಭವನಕ್ಕೆ ಸೇರಿಸಿದೆ. ಈಗ ಮೇಘನಾ 18 ವರ್ಷದ ಯುವತಿ. ಒಂದು ಸರ್ಕಾರಿ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದಾಳೆ. ಕಳೆದ ವಾರ ನನಗೆ ಫೋನ್ ಮಾಡಿದ್ದ ಅವಳು, ತನಗೆ ಎಲ್ಲಾದರೂ ಒಂದು ನೌಕರಿ ಕೊಡಿಸುವುದಕ್ಕೆ ಸಾಧ್ಯವಿದೆಯೇ ಎಂದು ಸಹಾಯ ಕೇಳಿದಳು. ಯಾವ ರೀತಿಯ ಕೆಲಸ ಹುಡುಕುತ್ತಿದ್ದೀ? ಎಂದು ಪ್ರಶ್ನಿಸಿದಾಗ ಅವಳು, “ನಾನು ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮಾಡಿರುವುದರಿಂದ, ಫ್ಯಾಶನ್ ಲೈನ್‌ನಲ್ಲೇ ಹೋಗಬೇಕೆಂದು ಬಯಸಿದ್ದೇನೆ. ಯಾವುದಾದರೂ ಬೂಟಿಕ್‌ನಲ್ಲಿ ನೌಕರಿ ಕೊಡಿಸಬಲ್ಲಿರಾ?’ ಎಂದಳು. ದೇಶದಲ್ಲಿ ಎಷ್ಟು ಆರ್ಥಿಕ ಹಿಂಜರಿತ ಎದುರಾಗಿದೆ ಎಂದರೆ, ಈಗ ನೌಕರಿ ಸಿಗುವುದು ಬಹಳ ಕಷ್ಟ ಎಂದು ಅವಳಿಗೆ ಬಹಳ ದುಃಖದಿಂದ ಹೇಳಬೇಕಾಯಿತು.
ಇತ್ತೀಚಿನ ದಿನಗಳಲ್ಲಿ ನಾನು ಎಲ್ಲಿಯೇ ಹೋಗಲಿ, ತಮಗೆ ನೌಕರಿ ಹುಡುಕಿಕೊಡುವಂತೆ ವಿನಂತಿಸುವ ಮೇಘನಾಳಂಥ ಯುವ ಭಾರತೀಯರೇ ಸಿಗುತ್ತಾರೆ. ಈ ನವಯುವಕರು ಸುಶಿಕ್ಷಿತರು. ಇವರ ಬಳಿ ಸೆಲ್‌ಫೋನ್‌ಗಳಿವೆ, ಇವರ ವೇಷಭೂಷಣ ಪಾಶ್ಚಿಮಾತ್ಯರಂತಿರುತ್ತದೆ. ಇವರ ತಂದೆ ತಾಯಿಯರಿಗೆ ಈ ವಯಸ್ಸಿನಲ್ಲಿದ್ದಾಗ ಹೆಚ್ಚೇನೂ ಆಪೇಕ್ಷೆಗಳಿರಲಿಲ್ಲ. ಯಾರಾದರೂ ಶ್ರೀಮಂತರ ಮನೆಯಲ್ಲಿ ಅಡುಗೆಯ ಕೆಲಸ ಗಿಟ್ಟಿಸಿಕೊಳ್ಳುವುದೂ ಅವರಿಗೆ ದೊಡ್ಡ ವಿಷಯವಾಗಿತ್ತು. ಆದರೆ ಅವರ ಮಕ್ಕಳ ಕನಸುಗಳು ಮತ್ತು ಆಕಾಂಕ್ಷೆಗಳು ಬೇರೆಯದ್ದೇ ರೀತಿಯಲ್ಲಿವೆ. ಈ ಕಾರಣಕ್ಕಾಗಿಯೇ ಕಳೆದ ವಾರ, ಪ್ರಪಂಚದ ಅತ್ಯಂತ ಶ್ರೀಮಂತ ವ್ಯಕ್ತಿ ಜೆಫ್ ಬೆಜೋಸ್ ಬಂದಾಗ ನಮ್ಮ ವಾಣಿಜ್ಯ ಸಚಿವರು ಮತ್ತು ಅಧಿಕಾರಿಯೊಬ್ಬರು ಅವರನ್ನು ಸ್ವಾಗತಿಸುವ ಬದಲು ಅವಮಾನ ಮಾಡಿದ್ದನ್ನು ನೋಡಿ ನನಗೆ ಆಶ್ಚರ್ಯವಾಯಿತು.
ಅಮೆಜಾನ್ ಕಂಪನಿಯ ಮಾಲೀಕ ಜೆಫ್ ಬೆಜೋಸ್, ತಮಗೆ ಭಾರತದಲ್ಲಿ ಈ ವರ್ಷ ನೂರು ಶತಕೋಟಿ ಡಾಲರ್ ಹೂಡಿಕೆ ಮಾಡುವ ಇರಾದೆ ಇದೆ ಎಂದು ಹೇಳಿದರು. ಪಿಯೂಷ್ ಗೋಯಲ್ ಅವರು ಇದಕ್ಕೆ ಪ್ರತಿಕ್ರಿಯೆಯೆಂಬಂತೆ ಜೆಫ್ ಬೆಜೋಸ್ ಭಾರತದ ಮೇಲೇನೂ “ಉಪಕಾರ’ ಮಾಡುತ್ತಿಲ್ಲ ಎಂದರು. ಬೆಜೋಸ್ ಭಾರತವನ್ನು ಪ್ರಶಂಸಿಸುವುದಕ್ಕೂ ಪ್ರಯತ್ನಿಸಿದರು. 21ನೇ ಶತಮಾನವು
ಭಾರತದ ಶತಮಾನವಾಗಲಿದೆ ಎಂದು ಅವರು ಹೇಳಿದಾಗ, ಬಿಜೆಪಿಯ ಅಧಿಕಾರಿಯೊಬ್ಬರು “”ಮೋದಿ ಸರ್ಕಾರದ ಬಗ್ಗೆ ತಪ್ಪು ಸುದ್ದಿ ಪ್ರಕಟಿಸುವ ನಿಮ್ಮ ನೌಕರರಿಗೆ ಈ ಮಾತನ್ನು ಹೇಳಿ” ಎಂದು ಟ್ವೀಟ್ ಮಾಡಿದರು. ಜೆಫ್ ಬೆಜೋಸ್ ವಾಶಿಂಗ್‌ಟನ್ ಪೋಸ್ಟ್ ಪತ್ರಿಕೆಯ ಮಾಲೀಕರೂ ಹೌದು. ಬಹುಶಃ ಮೋದಿ ಸರ್ಕಾರಕ್ಕೆ ಭಾರತೀಯ ಪತ್ರಕರ್ತರಿಂದ ಹೊಗಳಿಸಿಕೊಳ್ಳುವ ಅಭ್ಯಾಸವಾಗಿಬಿಟ್ಟಿದೆ ಎನ್ನಿಸುತ್ತದೆ. ಸತ್ಯವೇನೆಂದರೆ, ನನ್ನ ಅನೇಕ ಪತ್ರಕರ್ತ ಮಿತ್ರರೂ ಕೂಡ ಮೋದಿ ಸರ್ಕಾರದ ಗುಣಗಾನ ಮಾಡಲು ದಣಿಯುವುದಿಲ್ಲ. ಈ ಕಾರಣಕ್ಕಾಗಿಯೇ, ದೇಶದ ಟಿವಿ ಚರ್ಚೆಗಳೆಲ್ಲ ಬಹುತೇಕ ರಾಜಕೀಯ ಮತ್ತು ರಾಷ್ಟ್ರವಾದಿ ವಿಚಾರಗಳ ಮೇಲೆಯೇ ಆಗುತ್ತಿವೆಯೇ ಹೊರತು, ಆರ್ಥಿಕ ವಿಚಾರದಲ್ಲಿ ಅಷ್ಟಾಗಿ ಆಗುತ್ತಿಲ್ಲ.
ದೇಶದ ಆರ್ಥಿಕ ಸ್ಥಿತಿ ಹೇಗಾಗಿದೆ ಎಂದರೆ, ದೇಶದ ವಿತ್ತ ವ್ಯವಸ್ಥೆ ಈಗ ಐಸಿಯು ತಲುಪಿದೆ ಎಂದು ಕೆಲ ಅರ್ಥಶಾಸ್ತ್ರಜ್ಞರು ಹೇಳುತ್ತಿದ್ದಾರೆ. ಎರಡನೇ ಬಾರಿ ಪ್ರಧಾನಮಂತ್ರಿ ಆದ ಮೇಲೆ ಮೋದಿಯವರ ಗಮನ ರಾಜಕೀಯ ಸ್ತರದಲ್ಲೇ ಇದೆ. ಈ ಕಾರಣಕ್ಕಾಗಿಯೇ ರಾಜಕೀಯ ಸ್ತರದಲ್ಲಿ ಬೃಹತ್ ಹೆಜ್ಜೆಗಳನ್ನು ಇಟ್ಟಿದ್ದಾರೆ. ಜಮ್ಮು- ಕಾಶ್ಮೀರದಿಂದ ಆರ್ಟಿಕಲ್ 370 ಹಿಂಪಡೆಯಲಾಗಿದೆ. ಸಿಎಎ ತರಲಾಗಿದೆ. ಸಿಎಎಗೆ ವಿರೋಧವು ವಿಶ್ವವಿದ್ಯಾಲಯಗಳಿಂದ ಶುರುವಾಯಿತು. ಗಮನಿಸಬೇಕಾದ ಸಂಗತಿಯೆಂದರೆ, ಆರಂಭದಲ್ಲಿ ಕೇವಲ ಈ ಕಾಯ್ದೆಗಷ್ಟೇ ವಿರೋಧ ವ್ಯಕ್ತಪಡಿಸಲಾಯಿತು. ಆದರೆ ಈಗ ಪ್ರಧಾನಮಂತ್ರಿಗಳೇನಾದರೂ ಗಮನವಿಟ್ಟು ನೋಡಿದರೆ, ಈ ವಿರೋಧಗಳಲ್ಲಿ ದೇಶದ ಯುವಕರ ಭ್ರಮನಿರಸನ ಗೋಚರಿಸುತ್ತದೆ. ಯುವಕರಲ್ಲಿನ ಈ ಭ್ರಮನಿರಸನ/ಬೇಸರವನ್ನು ದೂರಗೊಳಿಸುವ ಮಾರ್ಗವಿದೆ. ಅರ್ಥವ್ಯವಸ್ಥೆಯನ್ನು ಐಸಿಯುನಿಂದ ಹೊರ ತರುವುದು, ತನ್ಮೂಲಕ ನಿರುದ್ಯೋಗ ಸಮಸ್ಯೆಯು ಕಡಿಮೆಯಾಗುವಂತೆ ಮಾಡುವುದೇ ಈ ಮಾರ್ಗ. ಅಮೆಜಾನ್ ಮೂಲಕ ಭಾರತದಲ್ಲಿ 2025ರ ವೇಳೆಗೆ 10 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಇರಾದೆ ವ್ಯಕ್ತಪಡಿಸಿದ್ದಾರೆ ಬೆಜೋಸ್. ಇಂಥ ವ್ಯಕ್ತಿಯನ್ನು ಅವಮಾನ ಮಾಡುವ ಬದಲು, ಕೈ ಚಾಚಿ ಸ್ವಾಗತಿಸಬೇಕಿತ್ತಲ್ಲವೇ? ಭಾರತಕ್ಕೆ ಒಬ್ಬರಲ್ಲ, ಸಾವಿರಾರು ಬೆಜೋಸ್‌ಗಳ ಅಗತ್ಯವಿದೆ. ಶ್ಯಾವೋ ಪಿಂಗ್ ಅವರು ಚೀನಾದಲ್ಲಿ ವಿದೇಶಿ ಹೂಡಿಕೆದಾರರಿಗೆ ಬಾಗಿಲು ತೆರೆದ ಮೇಲೆಯೇ ಅಲ್ಲವೇ ಆ ದೇಶದಲ್ಲಿ ಆಧುನಿಕ ರಸ್ತೆಗಳು, ರೈಲ್ವೆ ಸೌಲಭ್ಯಗಳು, ನಗರಗಳು ಮತ್ತು ಬಂದರುಗಳ ನಿರ್ಮಾಣ ಆರಂಭವಾಗಿದ್ದು. ಒಂದು ಸಮಯದಲ್ಲಂತೂ ಭಾರತ ವಿಕಾಸದ ಸ್ತರದಲ್ಲಿ ಚೀನಾಕ್ಕಿಂತ ಮುಂದಿತ್ತು.
ಈಗ ಚೀನಾ ನಮಗಿಂತ ಎಷ್ಟೊಂದು ಮುಂದೆ ಸಾಗಿಬಿಟ್ಟಿದೆಯೆಂದರೆ, ಅದೀಗ ಅಮೆರಿಕದೊಂದಿಗೆ ಪೈಪೋಟಿ ನಡೆಸುತ್ತಿದೆ. ಇತ್ತ ಪೌರತ್ವದಂಥ ವಿಷಯದಲ್ಲೇ ಸಿಲುಕಿರುವ ನಾವು, ಬಾಂಗ್ಲಾದೇಶದಿಂದ ಭಾರತಕ್ಕೆ ಬರುವ ನುಸುಳುಕೋರರ ಸಂಖ್ಯೆ ಕಡಿಮೆಯಾಗಿಬಿಟ್ಟಿದೆ ಎನ್ನುವುದನ್ನೂ ನೋಡುತ್ತಿಲ್ಲ. ಏಕೆಂದರೆ, ಬಾಂಗ್ಲಾದೇಶವಿಂದು ಉದ್ಯೋಗದ ಹೊಸ ಮಾರ್ಗಗಳನ್ನು ಸೃಷ್ಟಿಸುವಲ್ಲಿ, ಅನ್ಯ ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ನಮಗಿಂತ ಮುಂದೆ ಸಾಗಿದೆ.
ಹಾಗಾಗಿ ಪ್ರಧಾನಮಂತ್ರಿಗಳೇ, ಈಗ ದಯವಿಟ್ಟೂ ದೇಶದ ಆರ್ಥಿಕ ವಿಷಯಗಳಿಗೆ ಆದ್ಯತೆ ಕೊಡುವುದರತ್ತ ಗಮನ ಹರಿಸಿ. ಮಾಡಬೇಕಾದ ಕೆಲಸ ಬಹಳಷ್ಟಿದೆ. ನಷ್ಟದಲ್ಲಿರುವ ಸರ್ಕಾರಿ ಕಂಪನಿಗಳನ್ನೆಲ್ಲ ಖಾಸಗೀಕರಣಗೊಳಿಸಲು ಆರಂಭಿಸಿ. ಸರ್ಕಾರಗಳ ತಪ್ಪು ನೀತಿಗಳು ಮತ್ತು ಹಸ್ತಕ್ಷೇಪದಿಂದಾಗಿ ಕಂಗಾಲಾಗಿರುವ ದೊಡ್ಡ ದೊಡ್ಡ ಖಾಸಗಿ ಕಂಪನಿಗಳಿಗೆ ಸಹಾಯ ಮಾಡಿ. ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಗೆ ಇರುವ ಕಾನೂನಾತ್ಮಕ ನಿಬಂಧನೆಗಳನ್ನು ತೆಗೆದುಹಾಕಿ. ಮತ್ತು ಈಗಲೂ ತಮ್ಮ ತಲೆಯಲ್ಲಿ ಲೈಸೆನ್ಸ್ ರಾಜ್ ಅನ್ನು ಜೀವಂತವಾಗಿಟ್ಟುಕೊಂಡಿರುವ ನಿಮ್ಮ ಅಧಿಕಾರಿಗಳಿಗೆ ಲಗಾಮು ಹಾಕಿ.
ಕಹಿ ಸತ್ಯವೇನೆಂದರೆ, ಈ ಬಡ ದೇಶದಲ್ಲಿ ಸಮಾಜವಾದದ ಹೆಸರಲ್ಲಿ ಯಾರದ್ದಾದರೂ ಅಭಿವೃದ್ಧಿ ಆಗಿದೆಯೆಂದರೆ, ಅದು ಸರ್ಕಾರಿ ಅಧಿಕಾರಗಳದ್ದು, ರಾಜಕಾರಣಿಗಳದ್ದು ಮತ್ತು ಅವರ ನಿಕಟವರ್ತಿ ಉದ್ಯಮಪತಿಗಳದ್ದು ಮಾತ್ರ. ಮೋದಿಯವರು ಯಾವುದಾದರೂ ರೀತಿಯಲ್ಲಿ ತಪ್ಪು ಸಮಾಜವಾದಿ ನೀತಿಗಳನ್ನು ಕಸದಬುಟ್ಟಿಗೆ ಎಸೆದು, ನವ ಆರ್ಥಿಕ ಮಾರ್ಗಗಳನ್ನು ಹುಡುಕುತ್ತಾರೆ ಎಂದು ನಮ್ಮಂಥವರು ನಿರೀಕ್ಷೆ ಇಟ್ಟುಕೊಂಡಿದ್ದೆವು. ಈಗಲೂ ಸಮಯವಿದೆ. ಮೋದೀಜಿ..ನೀವು ತೋರಿಸಿದ ಆ ನವ ಕನಸಿನ ಹಾದಿಯಲ್ಲಿ ಮುನ್ನಡೆಯಿರಿ…
(ಮೂಲ: ಜನಸತ್ತಾ)
ತವಲಿನ್ ಸಿಂಗ್ , ಹಿರಿಯ ಪತ್ರಕರ್ತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.