ಟಾಟಾ ನೆಕ್ಸಾನ್ ವೆಲ್‌ಕಮ್ EV
Team Udayavani, Jan 27, 2020, 6:07 AM IST
ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಪೆಟ್ರೋಲ್- ಡೀಸೆಲ್ ಆವೃತ್ತಿಯ ನೆಕ್ಸಾನ್ ಕಾರು ಈಗ ಎಲೆಕ್ಟ್ರಿಕ್ ಅವತಾರದಲ್ಲಿ ಮಾರುಕಟ್ಟೆಗೆ ಬರುತ್ತಿದೆ.
ವಾಯು ಮಾಲಿನ್ಯ ಹೆಚ್ಚುತ್ತಿದೆ… ಹೀಗಾಗಿ ಬಹುಬೇಗನೇ ವಾಹನಗಳ ಎಲೆಕ್ಟ್ರಿಕ್ ಯುಗಕ್ಕೆ ಕಾಲಿಡಬೇಕು ಎಂಬ ಮಾತುಗಳು ಕೇಳಿಬರುತ್ತಿರುವ ಹೊತ್ತಿನಲ್ಲೇ, ಟಾಟಾ ಕಂಪನಿ ನೆಕ್ಸಾನ್‌ನ ಇವಿ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಿದೆ. ಈಗಾಗಲೇ ನೆಕ್ಸಾನ್‌ನ ಪೆಟ್ರೋಲ್ ಮತ್ತು ಡೀಸೆಲ್ ವರ್ಷನ್ ಎಸ್‌ಯುವಿ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಈಗ ಅದೇ ಗಾಡಿಯನ್ನು ಒಂದಷ್ಟು ಬದಲಾವಣೆ ಮಾಡಿ, ಒಳಾಂಗಣ ಮತ್ತು ಹೊರಾಂಗಣ ವಿನ್ಯಾಸಗಳಲ್ಲಿ ಮಾರ್ಪಾಡು ಮಾಡಿ ಬಿಡುಗಡೆ ಮಾಡಿದೆ.
ಅಂದ ಹಾಗೆ, ಎಲೆಕ್ಟ್ರಿಕ್ ಕಾರು ಎಂದರೆ ಸಾಕು; ಅವುಗಳ ಬೆಲೆ ಜಾಸ್ತಿ ಎನ್ನುತ್ತಾ ಜನ ದೂರವೇ ಓಡಿ ಹೋಗುತ್ತಾರೆ. ಆದರೆ, ಈ ಕಾರು ಎಸ್‌ಯುವಿಗಳ ಲೆಕ್ಕಾಚಾರದಲ್ಲಿ ಅಷ್ಟೇನೂ ದುಬಾರಿಯೇನಲ್ಲ. ವಿಚಾರವೆಂದರೆ, ಟಾಟಾ ಕಂಪನಿ ಎಲೆಕ್ಟ್ರಿಕ್ ಕಾರನ್ನೇನೋ ಬಿಡುಗಡೆ ಮಾಡಿತು. ಆದರೆ, ಅದಕ್ಕೆ ತಕ್ಕನಾಗಿ ಚಾರ್ಜಿಂಗ್ ಸ್ಟೇಷನ್‌ಗಳು ನಿರ್ಮಾಣವಾಗುವುದು ಯಾವಾಗ ಎಂಬ ಪ್ರಶ್ನೆಗಳೂ ಮೂಡಿವೆ.
ಸ್ಟೈಲಿಷ್ ವಿನ್ಯಾಸ: ಮೊದಲೇ ಹೇಳಿದ ಹಾಗೆ, ಇದು ಹಳೆಯ ನೆಕ್ಸಾನ್ ಕಾರಿನ ಫೇಸ್ ಲಿಫ್ಟ್ (ಸುಧಾರಿತ) ಆವೃತ್ತಿ. ಹೊಸ ಹೆಡ್ ಲ್ಯಾಂಪ್ಸ್, ನವೀನ ಗ್ರಿಲ್ ವಿನ್ಯಾಸ ಮತ್ತು ನೈಜ ನೀಲಿ ಬಣ್ಣದಿಂದ ಕಂಗೊಳಿಸುತ್ತಿದೆ ಈ ಕಾರು. ಎಲೆಕ್ಟ್ರಿಕ್ ವೆಹಿಕಲ್ ಎಂಬ ಕಾರಣಕ್ಕಾಗಿಯೇ ಸಾಂಕೇತಿಕವಾಗಿ ನೀಲಿ ಬಣ್ಣದ ಮಿಶ್ರಣವನ್ನು ಎಲ್ಲಾ ಆವೃತ್ತಿಗಳಲ್ಲೂ ಇರಿಸಿಕೊಳ್ಳಲಾಗಿದೆ. ವಿಶೇಷವಾಗಿ ಬದಲಾಗಿರುವುದು ಕಾರಿನ ಬಾನೆಟ್. ಬ್ಯಾಟರಿ ಸಲುವಾಗಿಯೇ ಇದನ್ನು ಕೊಂಚ ಉಬ್ಬಿಸಲಾಗಿದೆ. ಅಷ್ಟೇ ಅಲ್ಲ, ಇದೇ ಬ್ಯಾಟರಿಯಿಂದಾಗಿ ಈ ಕಾರಿನ ತೂಕ ಸರಿ ಸುಮಾರು 100 ಕೆ.ಜಿ.ಯಷ್ಟು ಹೆಚ್ಚಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ನ ನೆಕ್ಸಾನ್ ಕಾರಿನ ತೂಕ ಕ್ರಮವಾಗಿ 1,188 ಕೆ.ಜಿ. ಮತ್ತು 1,305 ಕೆ.ಜಿ. ಆದರೆ, ನೆಕ್ಸಾನ್ ಇವಿ ತೂಕ 1,400 ಕೆ.ಜಿ.
ಇನ್ಫೋಟೈನ್‌ಮೆಂಟ್ ಸಿಸ್ಟಮ್: ಇನ್ನು ಒಳಾಂಗಣಕ್ಕೆ ಬಂದರೆ ಹಳೇ ನೆಕ್ಸಾನ್ ರೀತಿಯಲ್ಲೇ ಇದ್ದರೂ ಕೊಂಚ ಬದಲಾವಣೆಯೊಂದಿಗೆ ಬಂದಿದೆ. ಹೊಸ ರೀತಿಯ ಸ್ಟೀರಿಂಗ್ ವೀಲ್ ಅನ್ನು ಅಲ್ಟ್ರಾಜ್‌ನಿಂದ ಎರವಲು ಪಡೆದು ರೂಪಿಸಲಾಗಿದೆ. ಏಳು ಇಂಚಿನ ಇನ್ಫೋಟೈನ್‌ಮೆಂಟ್ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋಗೆ ಸಪೋರ್ಟ್ ಮಾಡಲಿದೆ. ಇದರಿಂದಾಗಿ ಸ್ಮಾರ್ಟ್‌ಫೋನ್ ಸಂಪರ್ಕ ಹೊಂದುವುದು ಸುಲಭವಾಗಿದೆ. ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಕೂಡ ಲಭ್ಯವಿದೆ. ಆದರೆ, ಇದರಲ್ಲಿ ಬಹಳಷ್ಟು ಫೀಚರ್ ಸಿಗುವುದು ಟಾಪ್ ಎಂಡ್ ಕಾರಿನಲ್ಲಿ ಮಾತ್ರ.
ಬ್ಯಾಟರಿಯನ್ನು ಕಾರಿನ ಕೆಳಭಾಗದಲ್ಲಿ ಅಳವಡಿಸಿರುವುದರಿಂದ ಎಲ್ಲಿ ಒಳಗಿನ ಜಾಗ ಕಿತ್ತುಕೊಳ್ಳುವುದೋ ಎಂಬ ಆತಂಕವಿತ್ತು. ಆದರೆ, ಆ ರೀತಿಯೇನೂ ಆಗಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಯ ಕಾರಿನಲ್ಲಿ ಇರುವಷ್ಟೇ ಜಾಗ ಈಗಲೂ ಇದೆ. ಹೆಡ್‌ಲೂಮ್ಸ್ ಕೂಡ ಚೆನ್ನಾಗಿಯೇ ಇದೆ. ಸುರಕ್ಷತೆ, ರಿಮೋಟ್ ಆ್ಯಕ್ಸಸ್ ಸೇರಿದಂತೆ ಒಟ್ಟಾರೆ 35 ಫೀಚರ್‌ಗಳನ್ನು ಈ ಕಾರಿನಲ್ಲಿ ನೀಡಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಇನ್ನು, ಕಾರಿನ ಸಾಮರ್ಥ್ಯದ ವಿಚಾರಕ್ಕೆ ಬಂದರೆ ಪೆಟ್ರೋಲ್ ಮತ್ತು ಡೀಸೆಲ್ ಕಾರಿಗಿಂತ ಏನೂ ಕಮ್ಮಿಯಿಲ್ಲ ಎಂಬಂತೆಯೇ ಇದೆ. 127 ಹಾರ್ಸ್ ಪವರ್ ಮತ್ತು 245 ಎನ್‌ಎಂ ಟಾರ್ಕ್ ಶಕ್ತಿ ನೀಡಲಾಗಿದೆ. ಇದರಿಂದಾಗಿ ನ್ಪೋರ್ಟ್ಸ್ ಮೋಡ್‌ನಲ್ಲಿ ಕಾರು ಚಿರತೆಯಂತೆ ಸಾಗಲಿದೆ.
312 ಕಿ.ಮೀ. ಮೈಲೇಜ್: ಎಆರ್‌ಎಐ ಪ್ರಮಾಣೀಕರಿಸಿರುವಂತೆ ಒಮ್ಮೆ ಚಾರ್ಜ್ ಮಾಡಿದರೆ 312 ಕಿ.ಮೀ. ಮೈಲೇಜ್ ಬರಲಿದೆ. ಆದರೂ, ಯಾವ ಯಾವ ಮೋಡ್‌ಗಳಲ್ಲಿ ಹೇಗೆ ಮೈಲೇಜ್ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ. ಉಳಿದಂತೆ, ಮನೆಯಲ್ಲೇ ಚಾರ್ಜ್ ಮಾಡಿಕೊಳ್ಳಬಹುದು ಅಥವಾ ಫಾಸ್ಟ್ ಚಾರ್ಜಿಂಗ್ ಕೂಡ ಮಾಡಿಕೊಳ್ಳಬಹುದು. ಮನೆಯಲ್ಲಿ ಫುಲ್ ಚಾರ್ಜ್ ಮಾಡಲು ಸುಮಾರು 8 ಗಂಟೆಗಳ ಕಾಲ ತಗುಲುತ್ತದೆ. ಫಾಸ್ಟ್ ಚಾರ್ಜಿಂಗ್‌ನಲ್ಲಾದರೆ ಕೇವಲ 1 ಗಂಟೆಯಲ್ಲೇ ಶೇ.80ರಷ್ಟು ಚಾರ್ಜ್ ಆಗಿಬಿಡುತ್ತದೆ. ಬ್ಯಾಟರಿ ಮತ್ತು ಎಂಜಿನ್‌ಗೆ 8 ವರ್ಷಗಳ ವಾರೆಂಟಿಯೂ ಇದೆ. ಬೆಲೆಯನ್ನು, ಇತರೆ ಸಮಕಾಲೀನ ಎಲೆಕ್ಟ್ರಿಕ್ ಕಾರುಗಳಿಗೆ ಹೋಲಿಸಿದರೆ ಕಡಿಮೆ ನಿಗದಿ ಪಡಿಸುತ್ತಾರೆ ಎಂಬುದು ಮಾರ್ಕೆಟ್ ಪಂಡಿತರ ಅಭಿಪ್ರಾಯ. ಸುಮಾರು 15ರಿಂದ 17 ಲಕ್ಷ ರೂ. ಗಳವರೆಗೆ ಬೆಲೆ ಇಡಬಹುದು ಎಂದು ಅಂದಾಜಿಸಲಾಗಿದೆ.
ಹುಂಡೈ ಔರಾ, ಟಾಟಾ ಆಲ್ಟ್ರಾಝ್ ಬಿಡುಗಡೆ: ಕೆಲವೇ ದಿನಗಳ ಅಂತರದಲ್ಲಿ ಎರಡು ಕಾರುಗಳು ಮಾರುಕಟ್ಟೆಯನ್ನು ಪ್ರವೇಶಿಸಿವೆ. ಒಂದು ಹುಂಡೈ ಕಂಪನಿಯ ಔರಾ, ಟಾಟಾ ಆಲ್ಟ್ರಾಝ್ ಇನ್ನೊಂದು. ಓರಾ ಕಾರು ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಅನಾವರಣಗೊಂಡಿತ್ತು. ಈಗಾಗಲೇ ಈ ಕಾರಿನ ಬುಕ್ಕಿಂಗ್ ಆರಂಭವಾಗಿದ್ದು, ಸದ್ಯದಲ್ಲೇ ಮಾರುಕಟ್ಟೆಗೆ ಪ್ರವೇಶ ಮಾಡಲಿದೆ. ಉಳಿದಂತೆ ಟಾಟಾ ಕಂಪನಿಯ ಹೊಸ ಕಾರು ಆಲ್ಟ್ರಾಝ್ ಕೂಡ ಅನಾವರಣಗೊಂಡಿದೆ. ಹೊಸ ಮಾದರಿಯ ಈ ಕಾರು ಈಗಾಗಲೇ ತನ್ನ ಶೈಲಿಯಿಂದಾಗಿ ಸದ್ದು ಮಾಡುತ್ತಿದ್ದು, ಹ್ಯಾಚ್‌ಬ್ಯಾಕ್ ಶ್ರೇಣಿಯಲ್ಲಿ ಹೊಸ ಮಾದರಿಯ ಕಾರುಗಳನ್ನು ಒದಗಿಸುತ್ತಿದೆ.
* ಸೋಮಶೇಖರ ಸಿ. ಜೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.