ಕಲ್ಯಾಣ ಕರ್ನಾಟಕ

ಕುರಿತೋದದೆಯುಂ ಕಾವ್ಯ ಕಟ್ಟಬಲ್ಲ ಪರಿಣತರಿದ್ದ

Team Udayavani, Feb 2, 2020, 6:00 AM IST

kat-35

ಗುಲ್ಬರ್ಗಾದಲ್ಲಿರುವ ಶರಣಬಸವೇಶ್ವರ ಮಂದಿರ

ಫೆಬ್ರವರಿ 5 ರಿಂದ 7ರವರೆಗೆ ಕಲ್ಬುರ್ಗಿಯಲ್ಲಿ ನಡೆಯಲಿರುವ 85ನೆಯ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೊಂದು ಮುನ್ನುಡಿ ಚಿಂತನೆ

ಹೈದರಾಬಾದ್‌ ಕರ್ನಾಟಕ ಎಂಬುದು ಒಂದು ನಿರ್ದಿಷ್ಟ ರಾಜಕೀಯ ವ್ಯಾಪ್ತಿಯುಳ್ಳ ಪ್ರದೇಶ. ಈ ಪ್ರದೇಶವು ಎರಡೂವರೆ ಶತಮಾನಗಳ ಕಾಲ ನಿಜಾಮರ ಆಡಳಿತಕ್ಕೆ ಒಳಪಟ್ಟಿತ್ತು. ನಿಜಾಮರ ಆಡಳಿತದಿಂದ ಈ ಪ್ರದೇಶಕ್ಕೆ ಅವರದೇ ಆದ ಕೆಲವು ಚಹರೆಗಳು ಮೂಡಿದವು. ಬ್ರಿಟಿಷರ ಅಧೀನದಲ್ಲಿದ್ದ ನಿಜಾಮನು ತನ್ನ ಆಡಳಿತಕ್ಕೆ ಒಳಗಾಗಿದ್ದ ಪ್ರದೇಶವನ್ನು “ಹೈದರಾಬಾದ್‌ ಸಂಸ್ಥಾನ’ ಎಂದು ಕರೆದುಕೊಂಡು ಆಳತೊಡಗಿದ. 1724ರಿಂದ 1948 ಸೆಪ್ಟಂಬರ್‌ 17ರವರೆಗೆ ಏಳು ಮಂದಿ ನಿಜಾಮರು ಅಧಿಕಾರಕ್ಕೆ ಬಂದು ಈ ಸಂಸ್ಥಾನವನ್ನು ಆಳಿದರು. ಬೀದರ್‌, ಗುಲ್ಬರ್ಗಾ, ರಾಯಚೂರು- ಈ ಮೂರು ಜಿಲ್ಲಾ ಪ್ರದೇಶವು ಹೈದರಾಬಾದ್‌ ಸಂಸ್ಥಾನಕ್ಕೆ ಸೇರಿತ್ತು. ಈ ಪ್ರದೇಶವನ್ನೇ ಹೈದರಾಬಾದ್‌ ಕರ್ನಾಟಕವೆಂದು ಕರೆಯುತ್ತ ಬರಲಾಗಿದೆ. ಈ ಹೈದರಾಬಾದ್‌ ಕರ್ನಾಟಕ ಪ್ರಾಂತ್ಯವು ವರ್ಷದ ಕೆಳಗೆ ಕಲ್ಯಾಣ ಕರ್ನಾಟಕ ಎಂದು ನಾಮಕರಣಗೊಂಡಿದೆ.

ಹಾಗೆ ನೋಡಿದರೆ, ಪ್ರಾಚೀನ ಕಾಲದಿಂದಲೇ ಸಾಂಸ್ಕೃತಿಕವಾಗಿ ಈ ಪ್ರಾಂತ್ಯ ಅನೇಕ ಕಾರಣಗಳಿಗಾಗಿ ಅನನ್ಯತೆ ಪಡೆಯುತ್ತ ಬಂದಿದೆ. ಈ ಪ್ರಾಂತ್ಯದ ಒಳಗಡೆಯೇ “ಎಡೆದೊರೆ ನಾಡು’, “ಸಗರ ನಾಡು’ ಮುಂತಾದ ಹೆಸರುಳ್ಳ ಕೆಲವು ಪ್ರಾಂತ್ಯಗಳೂ ಇವೆ. ಈ ಹೆಸರುಗಳು ಕೂಡ ಸಾಂಸ್ಕೃತಿಕ-ರಾಜಕೀಯ ಭಾಗವಾಗಿ ರೂಪ ಪಡೆದಿವೆ. ಕರ್ನಾಟಕದಲ್ಲಿ ಅನೇಕ ಪ್ರಾಂತ್ಯಗಳಿವೆ. ಅವು ಪ್ರಕೃತಿ, ಹವಾಮಾನ, ನದಿಗಳು, ಗುಡ್ಡಬೆಟ್ಟಗಳು, ಸಾಗರಗಳು ಮುಂತಾದವುಗಳ ನಿಸರ್ಗ ಗುಣಗಳಿಂದ ಸಂಪತ್ತನ್ನು ಸೃಷ್ಟಿಸುತ್ತವೆ. ಈ ಪ್ರಾಂತ್ಯದಲ್ಲಿರುವ ಜನಸಮುದಾಯಗಳು ಪ್ರಾಕೃತಿಕ ಗುಣಗಳಿಂದ ತಮ್ಮದೇ ಆದ ಚರಿತ್ರೆಯನ್ನು ಸಂಸ್ಕೃತಿಯನ್ನು ಪಡೆದುಕೊಂಡು ಅನನ್ಯ ರೂಪ ತಾಳಿರುತ್ತವೆ. ಈ ಹೊತ್ತಿನ ಜಾಗತೀಕರಣದ ಬೆಳವಣಿಗೆಯಿಂದ ಇರುವ ಪ್ರಾಂತ್ಯಗಳು ರೂಪವನ್ನು ಬದಲಿಸಿಕೊಳ್ಳುತ್ತಿವೆ. ಆದರೂ ಪರಂಪರಾಗತ ನೆನಪುಗಳಿಂದ, ಬದುಕುಗಳಿಂದ ಆಡುವ ನುಡಿಗಳಿಂದ ಅನನ್ಯತೆಯನ್ನು ಉಳಿಸಿಕೊಂಡು ಬಂದಿವೆ.

ಸಂಸ್ಕೃತಿಗೆ ಗಡಿರೇಖೆಗಳಿಲ್ಲ
ರಾಜಕೀಯಕ್ಕೆ ಗಡಿರೇಖೆಗಳಿರುತ್ತವೆ. ಆದರೆ, ಸಂಸ್ಕೃತಿಗೆ ಗಡಿರೇಖೆಗಳಿರುವುದಿಲ್ಲ. ನಿಜಾಮ್‌ ಪ್ರಾಂತ್ಯ ಅಥವಾ ಹೈದರಾಬಾದ್‌ ಕರ್ನಾಟಕ ಅಥವಾ ಈಗ ನಾಮಕರಣಗೊಂಡ ಕಲ್ಯಾಣ ಕರ್ನಾಟಕ ಸರಹದ್ದಿನಲ್ಲಿ ಸಾಹಿತ್ಯ, ಸಂಸ್ಕೃತಿ, ಕಲೆಗಳು ಬೆಳೆದುಬಂದಿವೆ. ಪ್ರಾಚೀನ ಕಾಲದಿಂದ ಈ ಪ್ರದೇಶವೇ ಜನವಸತಿ ಇರುವ ಪ್ರಾಂತ್ಯವಾಗಿತ್ತು. ಕರ್ನಾಟಕದ ದಕ್ಷಿಣ ಭಾಗಕ್ಕಿಂತ ಕರ್ನಾಟಕದ ಉತ್ತರ ಭಾಗದಲ್ಲಿ ಜನಸಮುದಾಯಗಳು, ರಾಜತ್ವಗಳು, ಧರ್ಮಗಳು ಮತ್ತು ಯುದ್ಧಗಳು ಸಂಭವಿಸಿದ್ದು ಇಲ್ಲಿಯೇ. ಇದಕ್ಕೆ ದೀರ್ಘ‌ ಪರಂಪರೆ ಇದೆ, ಚರಿತ್ರೆಯಿದೆ, ಸಂಸ್ಕೃತಿಯಿದೆ.

ಗುಲ್ಬರ್ಗಾದಲ್ಲಿರುವ ಪ್ರಖ್ಯಾತ ಬುದ್ಧವಿಹಾರ

ಭೂರಚನಾಶಾಸ್ತ್ರಜ್ಞರ ಅಭಿಪ್ರಾಯದಂತೆ ದಖನ್‌ ಪ್ರಾಂತ್ಯವೇ ಮನುಷ್ಯನ ಪುರಾತನ ವಾಸಸ್ಥಾನವಾಗಿದೆ. ಈ ಪ್ರಾಂತ್ಯವು ಮಾನವನ ನೆಲೆಗೆ ಅನುಕೂಲಕರವಾಗಿತ್ತು. ನಾಗರೀಕತೆ ಬೆಳೆದಿತ್ತು. ಈ ಪ್ರಾಂತ್ಯದಲ್ಲಿರುವ ಮಸ್ಕಿ, ಸನ್ನತಿ, ಸಂಗನಕಲ್ಲು , ಕೊಡೆಕಲ್ಲು, ಪಿಕ್ಕಿಹಾಳ, ಬ್ರಹ್ಮಗಿರಿ ಮುಂತಾದ ಸ್ಥಳಗಳಲ್ಲಿ ಜನಸಮುದಾಯಗಳು ತಮ್ಮ ಬದುಕನ್ನು ಸಾಗಿಸುತ್ತಿದ್ದವು. ಈ ಪ್ರಾಂತ್ಯವು ಮೌರ್ಯರ ಆಳ್ವಿಕೆಗೆ ಒಳಪಟ್ಟಿತ್ತು. ಅಶೋಕನ ಧರ್ಮ ಶಾಸನಗಳು ರಾಯಚೂರಿನ ಮಸ್ಕಿ, ಪಾಲ್ಕಿಗುಂಡ, ಗವಿಮಠ, ಬಳ್ಳಾರಿಯ ನಿಟ್ಟೂರು, ಉದೆಗೊಳು, ಕಲುºರ್ಗಿಯ ಸನ್ನತಿ ಮುಂತಾದ ಸ್ಥಳಗಳಲ್ಲಿ ದೊರೆತಿವೆ. ಮಸ್ಕಿಯ ಹಳೆಯ ರೂಪ ಮಾಸಂಗಿ ಎಂದಿತ್ತು. ಮೂಲ ಮಹಾಸಂಗ ಎಂಬುದು ಮಾಸಂಗಿಯಾಗಿತ್ತೆಂದು ಬಲ್ಲವರು ಹೇಳುತ್ತಾರೆ. ಮೌರ್ಯರ ನಂತರ ಶಾತ ವಾಹನರು ಆಳ್ವಿಕೆಗೆ ಬಂದು ಕಲುºರ್ಗಿ, ಬಳ್ಳಾರಿ, ಶಿವಮೊಗ್ಗ, ಚಿತ್ರದುರ್ಗ ಮುಂತಾದ ಜಿಲ್ಲೆಗಳಲ್ಲಿ ಇವರ ಅಧಿಕಾರವಿತ್ತೆಂದು ತಿಳಿದುಬರುತ್ತದೆ. ನಂತರ ನಾಲ್ಕನೆಯ ಶತಮಾನದ ಹೊತ್ತಿಗೆ ಕದಂಬರು ಅಧಿಕಾರ ಪಡೆದರು. “ಕನ್ನಡ ಪ್ರಾಂತ್ಯ’ವನ್ನು ರೂಪಿಸಿ ಆಳಿದ “ಕನ್ನಡ ಅರಸ’ರೆಂದು, ಮಯೂರ ವರ್ಮ ಕನ್ನಡಿಗನೆಂದು ಈತನೇ ರಾಜ್ಯವನ್ನು ಕಟ್ಟಿದನೆಂದು ಹೇಳುತ್ತಾರೆ. ನಂತರ ಆರನೆ ಶತಮಾನದಲ್ಲಿ ಬಾದಾಮಿಯ ಚಾಲುಕ್ಯರು ಆಳ್ವಿಕೆಗೆ ಬಂದು “ಕರ್ನಾಟಕ ಬಲ’ ಎಂಬ ಸೈನ್ಯವನ್ನು ಕಟ್ಟಿದರೆಂದು ಸಂಶೋಧನೆಗಳು ತಿಳಿಸುತ್ತವೆ. ಈ ವಂಶದ ಇಮ್ಮಡಿ ಪುಲಕೇಶಿ ಉತ್ತರದ ಹರ್ಷವರ್ಧನನ್ನು ನರ್ಮದಾ ನದಿ ಮೇಲೆ ಸೋಲಿಸಿದ್ದು ಚರಿತ್ರೆಯಲ್ಲಿದೆ. ಗೋದಾವರಿ, ಕೃಷ್ಣ ನದಿಗಳ ನಡುವಣ ಫ‌ಲವತ್ತಾದ ಪ್ರದೇಶವನ್ನು ಪುಲಕೇಶಿ ಆಳಿದನು. ಈ ಪ್ರಾಂತ್ಯದಲ್ಲಿರುವ ಕೃಷ್ಣ ಮತ್ತು ತುಂಗಭದ್ರಾ ನದಿಗಳ ನಡುವಣ ಪ್ರದೇಶವು ಹೆಚ್ಚು ಫ‌ಲವತ್ತಾಗಿತ್ತು. ಇದನ್ನು ವಶಪಡಿಸಿಕೊಳ್ಳುವುದಕ್ಕೆ ಅನೇಕ ರಾಜರುಗಳ ನಡುವೆ ಯುದ್ಧವೇ ಸಂಭವಿಸಿದವು. ಕೃಷ್ಣ ಮತ್ತು ತುಂಗಭದ್ರಾ ನಡುವಿನ ಪ್ರದೇಶವು “ದೊ ಅಬ್‌’ ಎಂದು ಹೆಸರುವಾಸಿಯಾಗಿತ್ತು. ವಿಜಯನಗರದ ಅರಸರಿಗೂ ಮತ್ತು ಬಿಜಾಪುರದ ಸುಲ್ತಾನರಿಗೂ ನಿರಂತರವಾಗಿ ಯುದ್ಧಗಳು ನಡೆದವು.

ಪ್ರಾಚೀನ ಕಾಲದಿಂದ ಈ ಕಲ್ಯಾಣ ಕರ್ನಾಟಕ ಪ್ರಾಂತ್ಯದಲ್ಲಿ ಅನೇಕ ಅರಸು ಮನೆತನಗಳು ಆಳ್ವಿಕೆ ನಡೆಸಿದರಷ್ಟೆ. ರಾಷ್ಟ್ರಕೂಟರ ಕಾಲದಲ್ಲಿ ಶ್ರೀವಿಜಯನ ಕವಿರಾಜ ಮಾರ್ಗ ಎಂಬ ಕೃತಿ ರಚನೆಯಾಯಿತು. ಕವಿ ಮತ್ತು ರಾಜ ಕೂಡಿಕೊಂಡು ಕನ್ನಡ ಪ್ರಾಂತ್ಯ, ಕನ್ನಡ ಜನತೆ, ಕನ್ನಡ ಭಾಷೆಯನ್ನು ರೂಪಿಸಿ ಮುನ್ನೆಲೆಗೆ ತರಲಾಯಿತು. ಕಾವೇರಿಯಿಂದ ಗೋದಾವರಿ ನದಿಗಳ ನಡುವಿನ ವಿಸ್ತಾರ ಪ್ರದೇಶದಲ್ಲಿ ತಿರುಳ್ಗನ್ನಡ ನಾಡು ಇತ್ತೆಂದು ಶ್ರೀವಿಜಯ ಹೇಳುತ್ತಾನೆ. ಕಿಸುವೊಳಲು (ಪಟ್ಟದಕಲ್ಲು ), ಕೊಪಣ ನಗರ (ಕೊಪ್ಪಳ), ಪುಲಿಗೆರೆ (ಲಕ್ಷ್ಮೇಶ್ವರ), ಒಕುಂದ (ಒಕ್ಕುಂದ) ಈ ನಗರಗಳನ್ನೊಳಗೊಂಡ ಪ್ರದೇಶವೇ ತಿರುಳ್ಗನ್ನಡ ನಾಡಾಗಿತ್ತು. ಇಲ್ಲಿಯ ಜನ ಕುರಿತೋದದೆಯುಂ ಕಾವ್ಯ ಕಟ್ಟುವಷ್ಟು ಪ್ರತಿಭಾವಂತರಿದ್ದರೆಂದು ಹೇಳುತ್ತಾರೆ.

ಗುಲ್ಬರ್ಗಾದಲ್ಲಿರುವ ಇತಿಹಾಸ ಪ್ರಸಿದ್ದ ಖ್ವಾಜಾ ಬಂದೇನವಾಜ್‌ ದರ್ಗಾ

ಆದಿಕವಿ ಪಂಪ (902) ಹುಟ್ಟಿ ಬೆಳೆದದ್ದು ವೆಂಗಿಪಳು ಎಂಬ ಸ್ಥಳವು ಕಲ್ಯಾಣಕ್ಕೆ ಹತ್ತಿರವಾಗಿದೆ. ಚಾಲುಕ್ಯ ವಂಶದ ಅರಿಕೇಸರಿ ಆಶ್ರಯ ನೀಡಿದ್ದನು. ಪಂಪನ ಎರಡು ಕಾವ್ಯಗಳು ಈ ಪ್ರಾಂತ್ಯದಲ್ಲಿಯೇ ರಚನೆಯಾಗಿವೆ. ಮೂರನೇ ಕೃಷ್ಣನ ಆಶ್ರಯದಲ್ಲಿದ್ದ ಪೊನ್ನನು (998) ಶಾಂತಿ ಪುರಾಣವನ್ನು ಬರೆದದ್ದು ಮತ್ತು ಮೂರನೆಯ ತೈಲನ ಮಗ ಸತ್ಯಾಶ್ರಯನ ಆಶ್ರಯದಲ್ಲಿದ್ದ ರನ್ನ ಕವಿ (990) ಹುಟ್ಟಿದ್ದು ಮುದುವೊಳಲದಲ್ಲಿ. ರನ್ನನ ಸಾಹಿತ್ಯ ಚಟುವಟಿಕೆಗೆ ನೆಲೆಯಾದದ್ದು ಮಾನ್ಯಖೇಟ. ದುರ್ಗಸಿಂಹ, 1ನೆಯ ನಾಗವರ್ಮ ಮುಂತಾದವರು ಇದೇ ಪ್ರಾಂತ್ಯಕ್ಕೆ ಸೇರಿದವರು. ಶಾಂತಿ ಪುರಾಣ, ಗದಾಯುದ್ಧ, ಪಂಚತಂತ್ರ, ಕರ್ನಾಟಕ ಕಾದಂಬರಿ ಮುಂತಾದ ಕಾವ್ಯಗಳು ರಚನೆಯಾದದ್ದು ಈ ಪ್ರಾಂತ್ಯಲ್ಲೇ. ಶ್ರೀಧರಾಚಾರ್ಯನ ಜಾತಕ ತಿಲಕ, ಚಾವುಂಡರಾಯನ ಲೋಕೋಪಕಾರ ಎಂಬ ಕೃತಿ, ನಯಸೇನನ ಧರ್ಮಾಮೃತ, ಬ್ರಹ್ಮಶಿವನ ಸಮಯ ಪರೀಕ್ಷೆ ಮುಂತಾದವು ಇಲ್ಲಿಯೇ ರಚನೆಗೊಂಡಿವೆ. ಅಂದರೆ ತಿರುಳYನ್ನಡ ಸರಹದ್ದಿನಲ್ಲಿ ಎಂದು ಅರ್ಥ.

ಜೈನಕವಿಗಳು, ವಚನಕಾರರು, ಕೀರ್ತನೆಕಾರರು
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕಾಣುವಂತೆ ಜೈನಕವಿಗಳ ಕಾವ್ಯಕ್ಕೆ ಈ ಪ್ರಾಂತ್ಯವೇ ನೆಲೆಯಾಗಿತ್ತು. ಮುಂದೆ 12ನೆಯ ಶತಮಾನದಲ್ಲಿ ವಚನ ಸಾಹಿತ್ಯ ಚಳುವಳಿ ರೂಪುಗೊಂಡದ್ದು ಇದೇ ಪ್ರಾಂತ್ಯದ ಕಲ್ಯಾಣದಲ್ಲಿ. ಕಲ್ಯಾಣದ ಅನುಭವ ಮಂಟಪ ಎಲ್ಲ ಹೊಸತನದ ಬೆಳವಣಿಗೆಗೆ ಕಾರಣವಾಗಿತ್ತು. ಸಾಮಾಜಿಕ, ಧಾರ್ಮಿಕ, ಆರ್ಥಿಕ, ಶೈಕ್ಷಣಿಕವಾಗಿ ಸಮಾಜದಲ್ಲಿ ಪೂರ್ತಿ ಹೊಸತನ ತಂದದ್ದು ವಚನ ಚಳುವಳಿಯಿಂದ. ಈ ಚಳುವಳಿ ಸಂಭವಿಸಿದ ಅಂದಿನಿಂದ ಇಂದಿನವರೆಗೂ ಸಾಹಿತ್ಯ ಚಳುವಳಿ ಮತ್ತು ಸಂಸ್ಕೃತಿಯ ಮೇಲೆ ಪ್ರಭಾವ ಬೀರುತ್ತಲೇ ಇದೆ. ಸುಮಾರು 300ಕ್ಕೂ ಹೆಚ್ಚು ವಚನಕಾರರು ಏಕಕಾಲದಲ್ಲಿ ವಚನಗಳನ್ನು ಬರೆದರು.

ಪ್ರಥಮ ಬಾರಿಗೆ ಮಹಿಳೆಯರು ವಚನಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರದಲ್ಲಿ ಕಾಣಿಸಿಕೊಂಡರು. ಬಸವಣ್ಣ , ಅಲ್ಲಮಪ್ರಭು, ಅಕ್ಕಮಹಾದೇವಿ, ಚನ್ನಬಸವಣ್ಣ, ಸಿದ್ಧರಾಮ ಮುಂತಾದ ಕೆಲವರನ್ನು ಬಿಟ್ಟರೆ ಉಳಿದ ಎಲ್ಲಾ ವಚನಕಾರರು ಸಮಾಜದ ಕೆಳಸ್ತರದವರೇ ಆಗಿದ್ದರು ಎಂಬುದು ವಿಶೇಷ. ನಂತರ ಈ ವಚನ ಸಾಹಿತ್ಯವನ್ನು ಸಂಗ್ರಹಿಸಿ, ಸಂಪಾದಿಸಿ ಅದಕ್ಕೊಂದು ಸಾಂಸ್ಥಿಕ ರೂಪವನ್ನು ಕೊಟ್ಟದ್ದು ವಿಜಯನಗರದ ಕಾಲದಲ್ಲಿ. ಪ್ರೌಢದೇವರಾಯನೆಂಬ 15ನೆಯ ಶತಮಾನದಲ್ಲಿದ್ದ ಅರಸ ವಚನ ಸಾಹಿತ್ಯಕ್ಕೆ ಮರುಜೀವ ನೀಡಿದವನು. ನೂರೊಂದು ವಿರಕ್ತರು ಇದೇ ಕಾಲಕ್ಕೆ ಸೇರಿದವರು. ಶೂನ್ಯ ಸಂಪಾದನೆಗಳು ರಚನೆಯಾದದ್ದು ಈ ಕಾಲದಲ್ಲಿಯೇ.

ವಚನಕಾರರ ನಂತರ ವಿಜಯನಗರ ಅರಸರ ಕಾಲದಲ್ಲಿ ಹಂಪೆ, ರಾಯಚೂರು ಮುಂತಾದ ಪ್ರದೇಶಗಳಲ್ಲಿ ನೂರಾರು ಜನ ಕೀರ್ತನೆಕಾರರು ಕಾಣಿಸಿಕೊಂಡರು. ಹರಿಯ ನಾಮಸ್ಮರಣೆ ಇವರ ಕೀರ್ತನೆಗಳಲ್ಲಿ ವ್ಯಕ್ತವಾಗಿದೆ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ದಾಸರ ಯುಗ ಎಂದೇ ಖ್ಯಾತಿಗೊಂಡಿದೆ.

ರಾಜಕೀಯ ಸ್ಥಿತ್ಯಂತರಗಳು ನಡೆದು ವಿಜಯನಗರ ಸಾಮ್ರಾಜ್ಯ ಮತ್ತು ಬಹಮನಿ ಆದಿಲ್‌ಶಾಹಿ ಸಾಮ್ರಾಜ್ಯಗಳು ಆಳಿದ ಮೇಲೆ ಈ ಪ್ರಾಂತ್ಯದಲ್ಲಿ ಸುಸ್ಥಿರತೆ ಮಾಯವಾಯಿತು. ಮೊಘಲರು, ನಿಜಾಮರು, ಪೇಶ್ವೆಯರು, ಡಚ್ಚರು, ಬ್ರಿಟಿಷರು ಕಾಣಿಸಿಕೊಂಡರು. 17, 18, 19ನೆಯ ಶತಮಾನದಲ್ಲಿ ಈ ಪ್ರಾಂತ್ಯವು ಅನ್ಯರ ಸ್ವತ್ತಾಗಿ ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡು ಸಂಕರವಾಯಿತು. ಅಂದರೆ, ಹಿಂದೂ-ಮುಸ್ಲಿಂ ಸಂಸ್ಕೃತಿಗಳು ಒಟ್ಟಾಗಿಯೇ ಈ ಪ್ರಾಂತ್ಯದಲ್ಲಿ ಬದುಕುವಂತಾಯಿತು. ಇಸ್ಲಾಂ ಸಂಸ್ಕೃತಿಯ ಪ್ರಭಾವ ಈ ಪ್ರಾಂತ್ಯದಲ್ಲಿ ಹೆಚ್ಚಾಗಿದೆ. ಸೂಫಿಗಳು, ಅನುಭಾವಿಗಳು ಒಟ್ಟಾಗಿ ಆಧ್ಯಾತ್ಮ ಜೀವನ ನಡೆಸಿದರು. ದರ್ಗಾಗಳಿಗೆ ಹಿಂದೂಗಳು ನಡೆದುಕೊಳ್ಳುವಂತೆ ಹಿಂದೂ ಅನುಭಾವಿ ಜಾಗೃತ ಸ್ಥಳಗಳಿಗೆ ಮುಸಲ್ಮಾನರು ನಡೆದುಕೊಂಡರು. ಹೀಗಾಗಿ, ಹಿಂದೂ-ಇಸ್ಲಾಂ ಸಂಸ್ಕೃತಿಗಳು ಒಂದರೊಳಗೊಂದು ಬೆರೆತು ಸಾಮರಸ್ಯದಿಂದ ನಡೆದುಕೊಂಡು ಬಂದಿವೆ. ಈ ಕಲ್ಯಾಣ ಕರ್ನಾಟಕ ಪ್ರಾಂತ್ಯದಲ್ಲಿ ಕೋಮುಗಲಭೆಗಳು ನಡೆದಿಲ್ಲ ಎನ್ನುವುದು ಇಲ್ಲಿಯ ಸಮುದಾಯಗಳ ವಿಶೇಷತೆ. ಆದರೆ, ಕನ್ನಡನುಡಿ, ಕನ್ನಡ ಸಾಹಿತ್ಯ 12ನೆಯ ಶತಮಾನದ ನಂತರ ಇಳಿಮುಖವಾಯಿತು. ಲಿಖೀತ ಸಾಹಿತ್ಯ ಪರಂಪರೆ ನಿಂತುಹೋಯಿತು. ತುಂಗಭದ್ರಾ ನದಿಯಿಂದ ಉತ್ತರದ ಬೀದರ್‌, ಬಿಜಾಪುರ ಜಿಲ್ಲೆಯ ತುದಿಯವರೆಗೆ ಸಾಹಿತ್ಯ ಸೃಷ್ಟಿ ನಡೆಯಲಿಲ್ಲ. ಕನ್ನಡನುಡಿ ಬರಹದಿಂದ ಕಣ್ಮರೆಯಾಯಿತು. ಮೌಖೀಕ ಸಾಹಿತ್ಯ ಬೆಳೆಯಿತು. 17, 18, 19ನೆಯ ಶತಮಾನದಲ್ಲಿ ಸುಮಾರು 400 ತಣ್ತೀಪದಕಾರರು ಈ ಪ್ರಾಂತ್ಯದಲ್ಲಿ ಕಾಣಿಸಿಕೊಂಡು ಹಾಡಿದರು. ಅರಾಜಕತೆ, ಬೇಗುದಿಗಳಿಂದ ತುಂಬಿದ್ದ ಇಲ್ಲಿನ ನಾಡಿಗೆ ಜನಸಮುದಾಯಗಳಿಗೆ ಶಾಂತಿಯನ್ನು, ಸೌಹಾರ್ದತೆಯನ್ನು ಕಲಿಸಿದವರು. ಇವರ ಮೌಖೀಕ ಸಾಹಿತ್ಯವನ್ನು 50 ಸಂಪುಟಗಳಲ್ಲಿ ಕರ್ನಾಟಕ ಸರ್ಕಾರ ಪ್ರಕಟಿಸಿದೆ. ಕನ್ನಡ ಸಾಹಿತ್ಯ ಚರಿತ್ರೆಗಳಲ್ಲಿ ಈ ತಣ್ತೀಪದಕಾರರ ಉಲ್ಲೇಖವೇ ಇಲ್ಲ. ಈಗ ಶೋಧದಿಂದ ಅದರ ಪ್ರಕಟಣೆಯಿಂದ ತಣ್ತೀಪದ ಸಾಹಿತ್ಯ ಒಂದು ಚಳುವಳಿಯಾಗಿ ರೂಪುಗೊಂಡದ್ದು ಇದೇ ಪ್ರಾಂತ್ಯದಲ್ಲಿ.

ಉರ್ದು ಭಾಷೆಯ ಪ್ರಭಾವದಿಂದ, ಮರಾಠಿ ಭಾಷೆಯ ಪ್ರಭಾವದಿಂದ ಕನ್ನಡ ಭಾಷೆ ಮೂಲೆಗುಂಪಾಗಿತ್ತು. ಮಠಮಾನ್ಯಗಳಲ್ಲಿ ಕನ್ನಡ ಭಾಷೆ ಉಳಿದುಕೊಂಡಿತ್ತು. 17, 18, ಮತ್ತು 19ನೆಯ ಶತಮಾನಗಳಲ್ಲಿ ಈ ಪ್ರಾಂತ್ಯದಲ್ಲಿ ಉರ್ದು ಭಾಷೆಯ ಆಡಳಿತದಿಂದ, ಉರ್ದು ಭಾಷೆಯ ಶಿಕ್ಷಣದಿಂದ ಈ ಪ್ರಾಂತ್ಯದ ಜನರು ಕನ್ನಡ ಮರೆತು ಉರ್ದು ಭಾಷೆಗೆ ಒಗ್ಗಿಕೊಂಡರು. ಶೈಕ್ಷಣಿಕ ಭಾಷೆ ಉರ್ದು ಆಗಿದ್ದರಿಂದ ಈ ಪ್ರಾಂತ್ಯದಲ್ಲಿದ್ದ ಸಿದ್ಧಯ್ಯ ಪುರಾಣಿಕರು, ದೇವೇಂದ್ರ ಕುಮಾರ್‌ ಹಕಾರಿ, ಜಯತೀರ್ಥ ರಾಜಪುರೋಹಿತ, ಚಂದ್ರಕಾಂತ ಕುಸನೂರ, ಶಾಂತರಸ, ಶೈಲಜಾ ಉಡಚಣ ಮುಂತಾದ ಬರಹಗಾರರು ತಮ್ಮ ವಿದ್ಯಾಭ್ಯಾಸವನ್ನು ಉರ್ದು ಭಾಷೆಯಲ್ಲಿಯೇ ಆರಂಭಿಸಿ ಪದವೀಧರರಾದರು. ಆಡಳಿತದ ವಲಯದಲ್ಲಿದ್ದ ಅನೇಕರು ಉರ್ದುವಿನಲ್ಲೇ ಬದುಕಿದರು. ಹೀಗಾಗಿ ಕಲ್ಯಾಣ ಕರ್ನಾಟಕ ಪ್ರಾಂತ್ಯದಲ್ಲಿ ಆಧುನಿಕ ಸಾಹಿತ್ಯ ರೂಪುಗೊಳ್ಳಲಿಲ್ಲ , ರಚನೆಯಾಗಲಿಲ್ಲ. ನಿಜಾಮರು ಆಧುನಿಕ ಶಿಕ್ಷಣ ಪದ್ಧತಿಯನ್ನು ಜಾರಿಗೆ ತಂದಿದ್ದರು. ಆದರೆ, ಅದನ್ನು ಉರ್ದು ಭಾಷೆಯಲ್ಲಿ ಕಲಿಸುತ್ತಿದ್ದರು. ಇದರಿಂದ ಇಂಗ್ಲಿಶ್‌ ಭಾಷೆಯಿಂದ ಈ ಪ್ರಾಂತ್ಯದ ವಿದ್ಯಾರ್ಥಿಗಳು ವಂಚಿತರಾದರು. ಆಧುನಿಕತೆ ಈ ಪ್ರಾಂತ್ಯದಲ್ಲಿ ಪ್ರವೇಶಿಸಲಿಲ್ಲ. ಪ್ರಭಾವ ಬೀರಲಿಲ್ಲ. ಮೇಲೆ ಹೆಸರಿಸಿದ ಅನೇಕ ಪದವೀಧರರು ಸ್ವಾತಂತ್ರ್ಯಾ ನಂತರ ಕನ್ನಡವನ್ನು ಕಲಿಯತೊಡಗಿದರು. ಮನೆತನಗಳ ಪ್ರಭಾವದಿಂದ ಕನ್ನಡ ಭಾಷೆಯನ್ನು ದಕ್ಕಿಸಿಕೊಂಡು ಸಾಹಿತ್ಯ ರಚಿಸಿದರು. ಆದರೆ, ಬೇಂದ್ರೆ, ಕುವೆಂಪು, ಮಾಸ್ತಿ, ಡಿವಿಜಿ ಮುಂತಾದ ಕವಿಗಳು ಆಧುನಿಕ ಕನ್ನಡ ಸಾಹಿತ್ಯದ ಪ್ರವಾಹದಲ್ಲಿ ಸೇರಿಕೊಳ್ಳಲು ಸಾಧ್ಯವಾಗಲಿಲ್ಲ. 60ರ ದಶಕದಲ್ಲಿ ಕಾಣಿಸಿಕೊಂಡ ನವ್ಯ ಸಾಹಿತ್ಯದ ಧೋರಣೆ ತಾತ್ವಿಕತೆಯನ್ನು ಗ್ರಹಿಸುವುದಕ್ಕೆ ಇಲ್ಲಿರುವ ಬರಹಗಾರರಿಂದ ಸಾಧ್ಯವಾಗಲಿಲ್ಲ. ಆದರೆ, 80ರ ದಶಕದಲ್ಲಿ ಆರಂಭವಾದ ಬಂಡಾಯ-ದಲಿತ ಸಾಹಿತ್ಯ ಚಳುವಳಿಯಲ್ಲಿ ಈ ಪ್ರಾಂತ್ಯದ ಕವಿಗಳು ಪಾಲ್ಗೊಂಡು ಉತ್ತ‌ಮ ಸಾಹಿತ್ಯ ರಚಿಸಿದರು. ಮತ್ತು ಈ ಚಳುವಳಿಯನ್ನು ಬಲಪಡಿಸಿದರು. ಚನ್ನಣ್ಣ ವಾಲಿಕಾರ, ಜಂಬಣ್ಣ, ಅಮರಚಿಂತ, ಅಲ್ಲಮಪ್ರಭು ಬೆಟ್ಟದೂರು, ಎಂ. ಲಕ್ಷ್ಮಣ ಮುಂತಾದವರು ಕೆಳವರ್ಗದ ಆಶೋತ್ತರಗಳನ್ನು ತಮ್ಮ ಸಾಹಿತ್ಯದಲ್ಲಿ ಬಿಂಬಿಸಿದರು. ಜೊತೆ ಜೊತೆಗೆ ಸಂಘಟನೆಯನ್ನು ಬಲಪಡಿಸಿದರು.

ಈಗ ಕಲಬುರ್ಗಿಯಲ್ಲಿ 85ನೆಯ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಕಲಬುರ್ಗಿಯಲ್ಲಿ 1987ರಲ್ಲಿ 58ನೆಯ ಅಖೀಲ ಭಾರತ ಸಾಹಿತ್ಯ ಸಮ್ಮೇಳನ ನಡೆದಿತ್ತು. ಡಾ. ಸಿದ್ಧಯ್ಯ ಪುರಾಣಿಕರು ಸಮ್ಮೇಳನಾಧ್ಯಕ್ಷರಾಗಿದ್ದರು. ಈ 85ನೆಯ ಸಾಹಿತ್ಯ ಸಮ್ಮೇಳನಕ್ಕೆ ಎಚ್‌.ಎಸ್‌. ವೆಂಕಟೇಶಮೂರ್ತಿ ಸಮ್ಮೇಳನಾಧ್ಯಕ್ಷರಾಗಿದ್ದಾರೆ. ಈ ಭಾಗದಲ್ಲಿ ನಡೆಯುವುದರಿಂದ ಈ ಭಾಗದ ಸಾಹಿತಿಯನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಬೇಕೆಂದು ಈ ಪ್ರಾಂತ್ಯದ ಜನ ಹಂಬಲಿಸುವುದು, ಬಯಸುವುದು ಸಹಜವಾಗಿದೆ. ಬೀದರ್‌ನಲ್ಲಿ ನಡೆದ ಸಮ್ಮೇಳನದಲ್ಲಿ ಶಾಂತರಸರು ಅಧ್ಯಕ್ಷರಾಗಿದ್ದರು. ಆಧುನಿಕ ಕನ್ನಡ ಸಾಹಿತ್ಯಕ್ಕೆ ಬಂದರೆ ಇಲ್ಲಿನ ಸಾಹಿತಿಗಳ ಸಾಧನೆ ಕಡಿಮೆಯೆಂದು ದಕ್ಷಿಣದವರ ಅಭಿಪ್ರಾಯ. ಆದರೆ, ಈ ಪ್ರಾಂತ್ಯದ ರಾಜಕೀಯ ಆಡಳಿತ, ಕನ್ನಡ ಭಾಷೆಯ ಸ್ಥಿತಿ ಮತ್ತು ಸಾಹಿತ್ಯಿಕ ವಾತಾವರಣ ಗಮನಿಸಿದರೆ ಇಲ್ಲಿಯ ಸಾಹಿತಿಗಳು ತಮ್ಮ ಪ್ರತಿಭೆಗೆ ಅನುಸಾರವಾಗಿ ಸಾಹಿತ್ಯ ರಚಿಸಿದ್ದಾರೆ. ಇರಲಿ. ಈ ವಿಷಯ ಚರ್ಚಾಸ್ಪದ ಆಗುತ್ತದೆ. ಸಮ್ಮೇಳನ ನಡೆಯಲಿ. ಪಾಲ್ಗೊಳ್ಳುವವರು ಸಂತೋಷ ಪಡಲಿ.

ಅಮರೇಶ ನುಗಡೋಣಿ

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.