ಮಲಪ್ರಭೆ ಮಕ್ಕಳಿಗೆ ಕೃಷ್ಣೆಯ ನೀರು
Team Udayavani, Feb 1, 2020, 11:55 AM IST
ಬಾಗಲಕೋಟೆ: ಬಾದಾಮಿ ತಾಲೂಕು ತೆಗ್ಗಿಯಲ್ಲಿ ಕುಡಿಯುವ ನೀರಿಗಾಗಿ ನಿತ್ಯ ಕಾಣುವ ದೃಶ್ಯ
ಬಾಗಲಕೋಟೆ: ಮಲಪ್ರಭಾ ನದಿ ಪಾತ್ರದ ಬಾದಾಮಿ, ಗುಳೇದಗುಡ್ಡ ಹಾಗೂ ಹುನಗುಂದ ತಾಲೂಕು ವ್ಯಾಪ್ತಿಯ 18 ಗ್ರಾಮಗಳು ಹಾಗೂ ಎರಡು ಪಟ್ಟಣಗಳು ಹಲವು ವರ್ಷಗಳಿಂದ ಎದುರಿಸುತ್ತಿರುವ ಕುಡಿಯುವ ನೀರಿನ ನಿರಂತರ ಸಮಸ್ಯೆಗೆ ಮುಕ್ತಿ ಕೊಡಲು ಬೃಹತ್ ಯೋಜನೆಯೊಂದು ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿದೆ.
ಹೌದು, ಆಲಮಟ್ಟಿ ಜಲಾಶಯದಿಂದ ಐತಿಹಾಸಿಕ ಬಾದಾಮಿ ಪಟ್ಟಣ, ಕೆರೂರ ಹಾಗೂ ಮಾರ್ಗಮಧ್ಯೆ ಬರುವ ಮೂರು ತಾಲೂಕಿನ 18 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ 227.80 ಕೋಟಿ ಮೊತ್ತದ ಯೋಜನೆ ಇದೇ ಫೆ. 3ರಂದು ಅನುಷ್ಠಾನಗೊಳ್ಳುತ್ತಿದೆ.
ನೀರಿಗಾಗಿ ನಿತ್ಯ ಪರದಾಟ: ಬಾದಾಮಿ, ಕೆರೂರ ಪಟ್ಟಣ ಸಹಿತ 18 ಹಳ್ಳಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಇಂದು-ನಿನ್ನೆಯದಲ್ಲ. ಅದರಲ್ಲೂ ಹುನಗುಂದ ತಾಲೂಕಿನ ಸೂಳೆಬಾವಿ ಗ್ರಾಮದ ಕುಡಿಯುವ ನೀರಿನ ಸಮಸ್ಯೆ, ಕಳೆದ 6 ವರ್ಷಗಳಿಂದ ಜಿ.ಪಂ. ಸಾಮಾನ್ಯ ಸಭೆ, ಕೆಡಿಪಿ ಸಭೆಗಳು ಸಹಿತ ಎಲ್ಲೆಡೆ ಚರ್ಚೆಯಾಗುತ್ತಲೇ ಇದೆ. ವಾಸ್ತವದಲ್ಲಿ ಈ ಗ್ರಾಮಕ್ಕೆ ಐಹೊಳೆ ಮತ್ತು ಇತರೆ ಬಹುಹಳ್ಳಿ ಕುಡಿಯುವ ನೀರು ಪೂರೈಕೆ ಯೋಜನೆಯಡಿ ನೀರು ಕೊಡಬೇಕಿತ್ತು. ಆ ಯೋಜನೆ ಸಫಲವಾಗದ ಕಾರಣ, ಗುಳೇದಗುಡ್ಡ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಆಲಮಟ್ಟಿ ಯೋಜನೆಯಡಿಯೇ ಅಮೀನಗಡ ಪಟ್ಟಣಕ್ಕೆ ನೀರು ಕೊಡುತ್ತಿದ್ದು, ಆ ಯೋಜನೆಯಡಿ ಸೂಳೆಬಾವಿಗೆ ನೀರು ಕೊಡಲು ಚರ್ಚೆಯಾಗಿತ್ತು. ಅದಕ್ಕಾಗಿ ಯೋಜನೆಯೂ ರೂಪಿಸಲಾಗಿತ್ತು.
ಆದರೆ, ಅಮೀನಗಡ-ಗುಳೇದಗುಡ್ಡ ಪಟ್ಟಣಗಳಿಗೆ ನೀರಿನ ಕೊರತೆ ಉಂಟಾಗಲಿದೆ ಎಂಬ ಕಾರಣ, ಅದು ಚಿಂತನೆ ನಿಂತು ಹೋಗಿತ್ತು. ಐಹೊಳೆ, ಸೂಳೆಬಾವಿ ಸಹಿತ ಸದ್ಯ ಯೋಜನೆಯಡಿ ಅಳವಡಿಸಿರುವ ಪ್ರತಿಯೊಂದು ಹಳ್ಳಿಯಲ್ಲೂ ಕುಡಿಯುವ ನೀರಿಗಾಗಿ ನಿತ್ಯವೂ ಪರದಾಡುವ ಪರಿಸ್ಥಿತಿ ಇದೆ. ಅದರಲ್ಲೂ ಕಂಕಣಕೊಪ್ಪ, ತೆಗ್ಗಿ ಗ್ರಾಮದಲ್ಲಂತೂ ಎಷ್ಟೇ ಕೊಳವೆ ಬಾವಿ ಕೊರೆಸಿದರೂ ಸವಳು ನೀರು ದೊರೆಯುತ್ತಿದ್ದು, ಬೇರೆ ಗ್ರಾಮಗಳಿಂದ ಈ ಊರಿಗೆ ನೀರು ಕೊಡಲಾಗುತ್ತಿದೆ. ಈ ಯೋಜನೆ ಸರಿಯಾಗಿ ಅನುಷ್ಠಾನಗೊಂಡಲ್ಲಿ, ನೀರಿನ ಸಮಸ್ಯೆಗೆ ತಿಲಾಂಜಲಿ ಬೀಳಲಿದೆ.
ಬಹು ವರ್ಷಗಳ ಬೇಡಿಕೆ: ಬಾದಾಮಿ ಪಟ್ಟಣಕ್ಕೆ ಗುಳೇದಗುಡ್ಡ ಮಾದರಿ ಆಲಮಟ್ಟಿ ಜಲಾಶಯದಿಂದ, ಕೆರೂರ ಪಟ್ಟಣಕ್ಕೆ ಅನಗವಾಡಿ ಹತ್ತಿರದ ಆಲಮಟ್ಟಿ ಜಲಾಶಯದ ಹಿನ್ನೀರ ಪ್ರದೇಶದಿಂದ ಕುಡಿಯುವ ನೀರು ಪೂರೈಕೆ ಯೋಜನೆ ಕೈಗೊಳ್ಳಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಜಿಲ್ಲೆಯಲ್ಲಿ ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳು ತುಂಬಿ ಹರಿದರೂ, ಆಲಮಟ್ಟಿ ಜಲಾಶಯದ ಬೃಹತ್ ಹಿನ್ನೀರಿದ್ದರೂ ಜಿಲ್ಲೆಯ ಬಹುತೇಕ ಗ್ರಾಮಗಳು, ಕುಡಿಯುವ ನೀರಿನ ಸಮಸ್ಯೆಯಿಂದ ಮುಕ್ತಿಯಾಗಿಲ್ಲ. ಕೆಲವು ಹಳ್ಳಿಗಳಲ್ಲಿ ಮಳೆಗಾಲದಲ್ಲೂ ನೀರಿನ ಸಮಸ್ಯೆಗೆ ಬೇರೆ ಗ್ರಾಮಗಳನ್ನೇ ಅವಲಂಭಿಸಿವೆ. ಹೀಗಾಗಿ ಆಲಮಟ್ಟಿ ಜಲಾಶಯದಿಂದ ಕುಡಿಯುವ ನೀರು ಪೂರೈಸುವ ಈ ಬೃಹತ್ ಯೋಜನೆ, ಮೂರು ತಾಲೂಕಿನ ಎರಡು ಪಟ್ಟಣ, 18 ಹಳ್ಳಿಗಳಿಗೆ ಜಲ ಸಂಜೀವಿನಿಯಾಗಲಿದೆ.
ನಿರಂತರ ನೀರಿಗೆ ಸಿದ್ದು ನಿರಂತರ ಪ್ರಯತ್ನ: ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಬಾದಾಮಿ ಕ್ಷೇತ್ರದಿಂದ ಆಯ್ಕೆಯಾದ ಬಳಿಕ ಬಾದಾಮಿಯಲ್ಲಿ ನಡೆದ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಪಟ್ಟಣದ ನೂರಾರು ಪ್ರಮುಖರು, ಈ ಯೋಜನೆಯ ಬೇಡಿಕೆಯೇ ಮೊದಲ ಮನವಿಯಾಗಿ ಸಲ್ಲಿಸಿದ್ದರು. ಐತಿಹಾಸಿಕ ಬಾದಾಮಿ ಪಟ್ಟಣದ ನೀರಿನ ಸಮಸ್ಯೆ ವಿವರಿಸಿ, ಆಲಮಟ್ಟಿ ಜಲಾಶಯದಿಂದ ನೀರು ಪೂರೈಕೆಗೆ ಕೇಳಿಕೊಂಡಿದ್ದರು. ಕೆರೂರಲ್ಲೂ ಇದೇ ಮನವಿ ಸಿದ್ದರಾಮಯ್ಯ ಅವರಿಗೆ ಬಂದಿತ್ತು. ಇನ್ನು ಗ್ರಾಮೀಣ ಭಾಗದಲ್ಲಿ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಪ್ರವಾಸದ ವೇಳೆಯೂ ಕುಡಿಯುವ ನೀರಿಗಾಗಿಯೇ ಮನವಿ ಬರುತ್ತಿದ್ದವು. ಹೀಗಾಗಿ ಈ ಯೋಜನೆ ಕುರಿತು ಗಂಭೀರವಾಗಿ ಪ್ರಯತ್ನಿಸಿದ ಸಿದ್ದರಾಮಯ್ಯ, ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ, 227.80 ಕೋಟಿ ಮೊತ್ತದ ಬೃಹತ್ ಯೋಜನೆ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದರು.
ಯಾವ ಯಾವ ಹಳ್ಳಿಗೆ ನೀರು: ಈ ಯೋಜನೆಯಿಂದ ಬಾದಾಮಿ ಮತ್ತು ಕೆರೂರ ಪಟ್ಟಣ, ಹುನಗುಂದ ತಾಲೂಕಿನ ಐತಿಹಾಸಿಕ ಪ್ರವಾಸಿ ತಾಣ ಐಹೊಳೆ ಹಾಗೂ ಸೂಳೆಭಾವಿ, ಗುಳೇದಗುಡ್ಡ ಮತ್ತು ಬಾದಾಮಿ ತಾಲೂಕು ವ್ಯಾಪ್ತಿಯ ತೋಗುಣಸಿ, ಲಿಂಗಾಪುರ, ತಿಮ್ಮಸಾಗರ, ಕೆಲೂಡಿ, ತೆಗ್ಗಿ, ಕುಟುಕನಕೇರಿ, ಆಡಗಲ್, ಹಂಸನೂರ, ಹಿರೇಬೂದಿಹಾಳ, ಖಾಜಿಬೂದಿಹಾಳ, ಹನಸಗೇರಿ, ಕಟಗೇರಿ, ಕೊಂಕಣಕೊಪ್ಪ, ಹುಲಸಗೇರಿ, ಲಕ್ಕಸಕೊಪ್ಪ, ಜಮ್ಮನಕಟ್ಟಿ ಗ್ರಾಮಗಳಿಗೆ ಈ ಯೋಜನೆಯಿಂದ ನಿರಂತರ ನೀರು ಪೂರೈಕೆ ಆಗಲಿದೆ. ಈ ಯೋಜನೆಯನ್ನು ಕರ್ನಾಟಕ ನಗರ ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಅನುಷ್ಠಾನಗೊಳ್ಳುತ್ತಿದೆ. ಈ ಮಂಡಳಿಯಿಂದ ಇಳಕಲ್ಲ ನಗರ, ಬಾಗಲಕೋಟೆಯ ಹಳೆಯ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಈಗಾಗಲೇ ಇಂತಹದ್ದೇ ಕುಡಿಯುವ ನೀರಿನ ಯೋಜನೆ ಕೈಗೊಂಡಿದ್ದು, ಕಾಲಮಿತಿ ಮತ್ತು ಸರಿಯಾಗಿ ಅನುಷ್ಠಾನಗೊಳಿಸಿಲ್ಲ ಎಂಬ ಆರೋಪ ಮಂಡಳಿ ಮೇಲಿದೆ. ಹೀಗಾಗಿ ನಿರಂತರ ಕುಡಿಯುವ ಯೋಜನೆಗೆ ನಿರಂತರ ನಿಗಾ ಇಡಬೇಕಾದ ಜವಾಬ್ದಾರಿಯೂ ಸಿದ್ದರಾಮಯ್ಯ ಮೇಲಿದೆ. ಯೋಜನೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ, ಕೃಷ್ಣೆಯಿಂದ ಮಲಪ್ರಭಾ ನದಿ ಭಾಗದ ಜನರಿಗೆ ನಿರಂತರ ನೀರು ದೊರೆಯಲಿ ಎಂಬುದೇ ಜನರ ಬಯಕೆ.
-ಶ್ರೀಶೈಲ ಕೆ. ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudhol: ಎರಡೂ ಬಣಗಳಿಂದ ಪ್ರತಿಭಟನೆ ಬಿಸಿ; ಸ್ಥಳದಲ್ಲೇ ಬೀಡುಬಿಟ್ಟಿರುವ ಎಸ್ಪಿ; ಹೈ ಅಲರ್ಟ್
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ
ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ
MUST WATCH
ಹೊಸ ಸೇರ್ಪಡೆ
Shirva: ಹಿಂದೂ ಜೂನಿಯರ್ ಕಾಲೇಜು ದಶಮಾನೋತ್ಸವ: ಕೊಲ್ಲಿ ರಾಷ್ಟ್ರದಲ್ಲಿ ಸಮಾಲೋಚನಾ ಸಭೆ
Kerala: ಆ್ಯಂಬುಲೆನ್ಸ್ ಓಡಾಟಕ್ಕೆ ಅಡ್ಡಿ: ಕಾರು ಮಾಲೀಕನ ಲೈಸೆನ್ಸ್ ರದ್ದು!
Anmol Bishnoi: ಅಮೆರಿಕದಲ್ಲಿ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ ಬಂಧನ
Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.