ನೀರಾವರಿ ಇಲಾಖೆ ಅಧಿಕಾರಿಗಳಿಗೆ ಕಲ್ಲೆ ಸೋಮನಹಳ್ಳಿ ಗ್ರಾಮಸ್ಥರ ತರಾಟೆ
Team Udayavani, Feb 3, 2020, 3:00 AM IST
ಚನ್ನರಾಯಪಟ್ಟಣ/ಬಾಗೂರು: ಹೆಸರಿಗೆ ಮಾತ್ರ ಕಲ್ಲೆಸೋಮನಹಳ್ಳಿ ಏತನೀರಾವರಿ ಯೋಜನೆ ಎಂಬುದಾಗಿದೆ. ಆದರೆ ಕಲ್ಲೆ ಸೋಮನಹಳ್ಳಿ ಸಿದ್ದರಹಟ್ಟಿ ಕೆರೆಗೆ ನೀರು ಹರಿಸದೇ ಇತರ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ ಎಂದು ಗ್ರಾಮದ ಮುಖಂಡ ಭಾರತೀಶ, ಮುತ್ತಣ್ಣ ಹಾಗೂ ಪಟೇಲ್ ಬೋರೇಗೌಡ ಅವರು ನೀರಾವರಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ತಾಲೂಕಿನ ಬಾಗೂರು ಹೋಬಳಿ ಬಳಿ ಹಾದು ಹೋಗಿರುವ ಹೇಮಾವತಿ ನಾಲೆಯ ಸಮೀಪದಲ್ಲಿ ಕಲ್ಲೆಸೋಮನಹಳ್ಳಿ ಏತನೀರಾವರಿ ಯೋಜನೆ ಕಾಮಗಾರಿ ವೀಕ್ಷಣೆಗೆ ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಆಗಮಿಸಿದ್ದ ವೇಳೆ ಹಾಜರಿದ್ದ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಲ್ಲೆಸೋಮನಹಳ್ಳಿ ಸಿದ್ದರಹಟ್ಟಿ ಗ್ರಾಮದ ಒಂದು ಕರೆ ಹಾಗೂ ನಾಲ್ಕು ಕಟ್ಟೆಯನ್ನು ರಾಜಕೀಯ ದುರುದ್ದೇಶದಿಂದ ಕೈಬಿಡಲಾಗಿದೆ ಎಂದು ಕಿಡಿಕಾರಿದರು.
ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯ: ಒಂದು ವಾರದ ಹಿಂದೆ ಶಾಸಕ ಸಿ.ಎನ್.ಬಾಲಕೃಷ್ಣ ಪೈಪ್‌ಗ್ಳನ್ನು ಪೂಜೆ ಮಾಡಿದ್ದಾರೆ. ಸ್ಥಳೀಯ ಜನಪ್ರತಿನಿಧಿಗೆ ಮಾಹಿತಿ ನೀಡದೇ ಯಾವ ರೀತಿಯಲ್ಲಿ ಪೂಜೆ ನೆರವೇರಿಸಿದರು ಎಂದು ಪ್ರಶ್ನಿಸಿದಲ್ಲದೆ, ಯೋಜನೆಗಾಗಿ ಎರಡು ದಶಕದಿಂದ ಹೋರಾಟ ಮಾಡಿದ್ದರ ಫಲವಾಗಿ ಬಿಜೆಪಿ ಸರ್ಕಾರ ಕಾಮಗಾರಿ ಮಾಡಿಸುತ್ತಿದೆ. ಗ್ರಾಮ ಪಂಚಾಯಿತಿ ಚುನಾವಣೆ ವೇಳೆ ನೀರಿನ ವಿಷಯವಾಗಿ ರಾಜಕೀಯ ಮಾಡಲಾಗುತ್ತಿದೆ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಅಧಿಕಾರಿಗಳ ಭರವಸೆ: ಕಾವೇರಿ ನೀರಾವರಿ ನಿಗಮದ ಎಇಇ ಪುನೀತ್ ಮಾತನಾಡಿ, ಇಲಾಖೆಯಿಂದ ಅಧಿಕೃತ ಕಾರ್ಯಕ್ರಮ ಮಾಡಿಲ್ಲ. ಶಾಸಕರು ಪೂಜೆ ಮಾಡಿರುವುದು ಇಲಾಖೆ ಗಮನಕ್ಕೆ ಬಂದಿಲ್ಲ ಎಂದು ಸ್ಪಷ್ಟನೆ ನೀಡಿದರು. ಕಲ್ಲೆಸೋಮನಹಳ್ಳಿ ಸಿದ್ದರಹಟ್ಟಿ ಕೆರೆಗಳಿಗೆ ನೀರು ಹರಿಸಲು ಗುರುತ್ವಾಕರ್ಷಣೆ ಮೂಲಕ ಅವಕಾಶ ದೊರೆತರೆ ಯೋಜನೆ ಅನುಷ್ಠಾನ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂದು ಉತ್ತರಿಸಿದರು.
32 ಕೋಟಿ ರೂ. ವೆಚ್ಚದ ಯೋಜನೆ: ಈ ಯೋಜನೆಗೆ ಸರ್ಕಾರ 32 ಕೋಟಿ ರೂ. ಮೀಸಲಿಟ್ಟಿದ್ದು, 28.51 ಕೋಟಿ ರೂ.ಗೆ ಟೆಂಡರ್ ಆಗಿದೆ. ಸುಮಾರು 22 ಕ್ಯೂಸೆಕ್ ನೀರನ್ನು 19 ಕೆರೆಗಳಿಗೆ ತುಂಬಿಸಲಾಗುವುದು. 580 ಎಚ್‌ಪಿ ಸಾಮರ್ಥ್ಯದ ಮೂರು ಯಂತ್ರಗಳ ಮೂಲಕ ನೀರೆತ್ತುವ ಕಾರ್ಯ ಮಾಡಲಾಗುತ್ತಿದೆ. ಹೊಸೂರು ಮೂಲಕ ಹತ್ತು ಕಿಲೋಮೀಟರ್ ಪೈಪ್‌ಲೈನ್ ಮೂಲಕ ನೀರು ಹರಿಯಲಿದೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿದೆ ಎಂದು ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ ಹೇಳಿದರು.
ಶಿಷ್ಟಾಚಾರ ಪಾಲಿಸದ ಶಾಸಕ ಬಾಲಕೃಷ್ಣ: ಯೋಜನೆಯ ಸಂಬಂಧ ಸರ್ಕಾರದ ಮಟ್ಟದಲ್ಲಿ 12 ಬಾರಿ ಸಭೆ ನಡೆಸಲಾಗಿದೆ. ಗ್ರಾಮ ಪಂಚಾಯಿತಿ ಚುನಾವಣೆ ಆಗಮಿಸುತ್ತಿರುವುದರಿಂದ ಶಾಸಕ ಸಿ.ಎನ್.ಬಾಲಕೃಷ್ಣ ಆತುರವಾಗಿ ತಾವೊಬ್ಬರೇ ಈ ಯೋಜನೆಗೆ ಪೂಜೆ ನಡೆಸಿ ಚಾಲನೆ ನೀಡಿ¨ªಾರೆ. ಶಿಷ್ಟಾಚಾರ ಪಾಲಿಸಿಲ್ಲ ಇದೇ ಧೋರಣೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಕ್ಲಲೆಸೋಮಹಳ್ಳಿ ಏತನೀರಾವರಿ ಯೋಜನೆಯಿಂದ ಹೆಗ್ಗಡಿಗೆರೆ, ಲಕ್ಕರಸನಹಳ್ಳಿ, ರಂಗಾಪುರ, ಕಲ್ಲೇಸೋಮಹಳ್ಳಿ, ಓಬಳಾಪುರ, ಗೋವಿನಕೆರೆ, ಹೊಂಗೇಹಳ್ಳಿ, ಎಂ.ಶಿವರ, ಸೋಮನಹಳ್ಳಿ, ಮರಗೂರು, ಕೆಂಬಾಳು, ಚಿಕ್ಕರಸನಹಳ್ಳಿ, ಲಕ್ಕಿಹಳ್ಳಿ, ಬಳಘಟ್ಟೆ, ಕಕ್ಕೀಹಳ್ಳಿ, ಬಿದರೆ ಸೇರಿದಂತೆ ಈ ಭಾಗದ 19 ಕೆರೆಗಳನ್ನು ತುಂಬಿಸಲಾಗುತ್ತದೆ ಕಲ್ಲೆಸೋಮಹಳ್ಳಿಸಿದ್ದರಹಟ್ಟಿ ಕೆರೆ ತುಂಬಿಸಲು ಮುಂದಾಗುತ್ತೇನೆ ಎಂದರು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಿರ್ದೇಶಕ ಎಂ.ಶಂಕರ್, ಶ್ರೀನಿವಾಸ ಕನ್‌ಸ್ಟ್ರಕ್ಷನ್ ವ್ಯವಸ್ಥಾಪಕ ಹರೀಶ, ಬಿದ್ರೆರಾಜು, ಅಶೋಕ, ಪುನೀತ್, ಸುರೇಶ ಮೊದಲಾದವರು ಉಪಸ್ಥಿತರಿದ್ದರು.
ಗುರುತ್ವಾಕರ್ಷಣೆ ಮೂಲಕ ಕೆರೆಗೆ ನೀರು: ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಮಾತನಾಡಿ, ಕಲ್ಲೆಸೋಮನಹಳ್ಳಿ ಸಿದ್ದರಹಟ್ಟಿ ಕರೆಗೆ ನೀರು ಹರಿಸಲಾಗುವುದು. ಈಗಾಗಲೇ ಜಾಕ್‌ವೆಲ್ ಕಾಮಗಾರಿ ಪ್ರಾರಂಭವಾಗಿದ್ದು, ಇಲಾಖೆಯ ಮುಖ್ಯ ಅಭಿಯಂತರ ಮಂಜಪ್ಪ ಹಾಗೂ ಕಾರ್ಯಪಾಲಕ ಅಭಿಯಂತರ ಮೋಹನರಾಜ್ ಅವರು ಎರಡು ದಿನದ ಹಿಂದೆ ಸ್ಥಳ ಪರಿಶೀಲನೆ ಮಾಡಿದ್ದಾರೆ. ಯೋಜನೆ ಎಲ್ಲಾ ಕೆರೆಗಳಿಗೆ ಗುರುತ್ವಾಕರ್ಷಣೆಯಿಂದ ಪೈಪ್‌ಲೈನ್ ಮೂಲಕ ನೀರು ಹರಿಸಲಾಗುತ್ತದೆ ಎಂದು ಹೇಳಿದರು.
ಕುರುವಂಕ, ಗೊಲ್ಲರಹೊಸಹಳ್ಳಿ ಕೆರೆ ತುಂಬಿಸಿ: ಶಾಸಕ ಬಾಲಕೃಷ್ಣ ಅವರು ಯಾರೋ ಅನುಷ್ಠಾನಕ್ಕೆ ತಂದಿರುವ ಯೋಜನೆಗಳನ್ನು ತಾವೇ ಮಾಡಿಸಿದ ಹಾಗೇ ಎಲ್ಲಾ ಕಡೆ ಪ್ರಚಾರ ಮಾಡುತ್ತಿ¨ªಾರೆ. ಇದು ಅವರ ಘನತೆಗೆ ಶೋಭೆ ತರುವಂತಹದ್ದಲ್ಲ. ಕುರುವಂಕ ಗೊಲ್ಲರಹೊಸಹಳ್ಳಿ ಕೆರೆಗೆ ನೀರು ತುಂಬಿಸುವ ಕಾಮಗಾರಿಯನ್ನು ಶಾಸಕರು ತಮ್ಮ ಹಿಂಬಾಲಕರಿಗೆ ನೀಡಿದ್ದರಿಂದ ಆ ಯೋಜನೆ ಇಂದಿಗೂ ಪ್ರಾರಂಭವಾಗಿಲ್ಲ. ಮೊದಲು ಅದನ್ನು ಮುಕ್ತಾಯ ಮಾಡಲು ಶಾಸಕರು ಮುಂದಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಒತ್ತಾಯಿಸಿದರು.
ನಾನು ನೀರಾವರಿ ಇಲಾಖೆ ಸಂಸದೀಯ ಕಾರ್ಯದರ್ಶಿಯಾಗಿದ್ದಾಗ ಯೋಜನೆ ಬಗ್ಗೆ ಹೆಚ್ಚು ಆಸಕ್ತಿ ವಹಿಸಿ ಅಧಿಕಾರಿಗಳ ಸಭೆ ಮಾಡಿದ್ದೇನೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ತಾಲೂಕಿನ ಏತನೀರಾವರಿಗೆ ಶ್ರಮಿಸಿದಲ್ಲದೇ ಮೈತ್ರಿ ಸರ್ಕಾರದಲ್ಲಿ ನೀರಾವರಿ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಜೊತೆ ಚರ್ಚಿಸಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಮೂಲಕ ಕಲ್ಲೆಸೋಮನಹಳ್ಳಿ ಏತನೀರಾವರಿ ಯೋಜನೆ ಹಣ ಬಿಡುಗಡೆ ಮಾಡಿಸಿದ್ದೇನೆ
-ಎಂ.ಎ.ಗೋಪಾಲಸ್ವಾಮಿ, ವಿಧಾನ ಪರಿಷತ್ ಸದಸ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.