ಕಿಂಡಿ ಅಣೆಕಟ್ಟು ಬಳಕೆ ನೀರಿಗೂ ಕಟ್ಟಬೇಕು ತೆರಿಗೆ
Team Udayavani, Feb 3, 2020, 5:47 AM IST
ಸುಳ್ಯ: ಕೃಷಿಗೆ ಕಿಂಡಿ ಅಣೆಕಟ್ಟಿನಿಂದ ನೀರು ಬಳಸುತ್ತಿದ್ದೀರಾ? ಹಾಗಾದರೆ ಅದಕ್ಕೆ ತೆರಿಗೆ ಕಟ್ಟಬೇಕು!ಸಣ್ಣ ನೀರಾವರಿ ಇಲಾಖೆಯು ಕಂದಾಯ ಇಲಾಖೆಗೆ ಕಳುಹಿಸಿರುವ ಈ ಬೇಡಿಕೆ ಪಟ್ಟಿ ಕಟ್ಟುನಿಟ್ಟಾಗಿ ಜಾರಿಯಾದರೆ ಕೃಷಿಕರಿಗೆ ಬೇಸಗೆ ಬಿಸಿ ಇನ್ನಷ್ಟು ಹೆಚ್ಚಾಗಲಿದೆ. ಕರ ಭಾರದಿಂದಲೂ ಬಳಲುವ ಆತಂಕ ಎದುರಾಗಿದೆ.
ವಿವರ ಸಲ್ಲಿಸಲು ಸೂಚನೆ
ಸಣ್ಣ ನೀರಾವರಿ ಇಲಾಖೆಗೆ ಒಳಪಟ್ಟಿರುವ ಕಿಂಡಿ ಅಣೆಕಟ್ಟುಗಳಿಂದ ನೇರ ಮತ್ತು ಪರೋಕ್ಷವಾಗಿ ನೀರಿನ ಪ್ರಯೋಜನ ಪಡೆಯುತ್ತಿರುವ ಫಲಾನುಭವಿಗಳಿಂದ ಕಂದಾಯ ವಸೂಲಿ ಮಾಡಲು ಸರಕಾರದ ನಿರ್ದೇಶನವಿದೆ. ಅಂಥವರ ಸರ್ವೆ ನಂಬರ್, ವಿಸ್ತೀರ್ಣ, ಬೆಳೆಯುತ್ತಿರುವ ಬೆಳೆ ವಿವರ ಒದಗಿಸುವಂತೆ ಸಣ್ಣ ನೀರಾವರಿ ಇಲಾಖೆಯು ಕಂದಾಯ ಇಲಾಖೆಗೆ ತಿಳಿಸಿದೆ. ಸೂಕ್ತ ಮಾಹಿತಿ ಆಧಾರದಲ್ಲಿ ನೀರಿಗೆ ಕರ ವಿಧಿಸಲು ಸ್ಪಂದಿಸುವಂತೆ ಪತ್ರದಲ್ಲಿ ಉಲ್ಲೇಖೀಸಲಾಗಿದೆ.
ತಿಂಗಳ ಹಿಂದೆ ನೋಟಿಸ್
ಫಲಾನುಭವಿಗಳ ಪಟ್ಟಿ ಕಳುಹಿಸುವಂತೆ 2019ರ ಡಿ.30ರಂದು ಸುತ್ತೋಲೆ ಕಳಿಸಲಾಗಿದ್ದು, ಜನವರಿ ಮೊದಲ ವಾರದಲ್ಲಿ ತಾಲೂಕು ಕಚೇರಿಗೆ ತಲುಪಿದೆ. ನೀರು ಕರ ವಸೂಲಾತಿ ವಿವರಗಳನ್ನು ಸರಕಾರಕ್ಕೆ ಸಲ್ಲಿಸಬೇಕಾದ ಕಾರಣ ಬೇಡಿಕೆಯನ್ನು 2011-12ರಿಂದ 2016-17ರ ತನಕ ತಾಲೂಕು ಕಚೇರಿಗೆ ಸಲ್ಲಿಸಿತ್ತು. ಆದರೆ 2014-2017ರ ತನಕದ ಕರ ಬೇಡಿಕೆ ವಸೂಲಾತಿ ವಿವರ ಸಲ್ಲಿಕೆ ಆಗಿಲ್ಲದ ಕಾರಣ 2014-15ರಿಂದ 2017-18ರ ತನಕದ ವಸೂಲಾತಿ ವಿವರಗಳನ್ನು ತತ್‌ಕ್ಷಣ ಸಲ್ಲಿಸುವಂತೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
ಕೃಷಿಕರೇ ಹಲಗೆ ಹಾಕಿ ನೀರು ಸಂಗ್ರಹಿಸುತ್ತಾರೆ!
ಇಲಾಖೆ ಕಿಂಡಿ ಅಣೆಕಟ್ಟು ನಿರ್ಮಿಸಿದ ಬಳಿಕ ನಿರ್ವಹಣೆಗೆ ನೆರವು ನೀಡುವುದಿಲ್ಲ. ಫಲಾನುಭವಿಗಳೇ ಹಲಗೆ ಅಳವಡಿಸುತ್ತಾರೆ. ಹಲಗೆ ತೆರವು ಮಾಡುವುದೂ ಅವರೇ. “ಈ ತನಕ ಕರ ಪಾವತಿಸಿಲ್ಲ. ನಾವೇ ಹಲಗೆ ಹಾಕಿ, ನಿರ್ವಹಣೆ ಮಾಡಿ, ಸ್ವಂತ ಪಂಪ್ ಬಳಸಿ ನೀರೆತ್ತಿದ್ದರೂ ತೆರಿಗೆ ಏಕೆ ಕಟ್ಟಬೇಕು’ ಎಂಬುದು ಕೃಷಿಕರ ಪ್ರಶ್ನೆ.
ತಾಲೂಕಿನ 18ಕ್ಕೂ ಅಧಿಕ ಕಿಂಡಿ ಅಣೆಕಟ್ಟು ವ್ಯಾಪ್ತಿಯ ಫಲಾನುಭವಿಗಳಿಂದ ಕರ ವಸೂಲಿಗಾಗಿ ವಿವರ ಸಂಗ್ರಹಿಸುವಂತೆ ಸಣ್ಣ ನೀರಾವರಿ ಮಂಗಳೂರು ವಿಭಾಗದಿಂದ ಸುಳ್ಯ ತಾಲೂಕು ಕಚೇರಿಗೆ ಸುತ್ತೋಲೆ ಕಳುಹಿಸಿದ್ದಾರೆ. ಈಗಿನ ಬಿಸಿಲಿನ ತಾಪದಿಂದಾಗಿ 2 ತಿಂಗಳಿಗಿಂತ ಹೆಚ್ಚು ನೀರು ಇರುವುದಿಲ್ಲ. ಹಾಗಾಗಿ ಕರ ವಸೂಲಿಯಿಂದ ಕೃಷಿಕರಿಗೆ ತೊಂದರೆ ಆಗುತ್ತದೆ.
-ಎಸ್.ಎನ್. ಮನ್ಮಥ
ಜಿ.ಪಂ. ಸದಸ್ಯ, ಬೆಳ್ಳಾರೆ
ಸಣ್ಣ ನೀರಾವರಿ ಇಲಾಖೆ ಮೂಲಕ ನಾವು ಬೇಡಿಕೆ ಪಟ್ಟಿಯನ್ನು ಆಯಾ ತಾ. ಕಂದಾಯ ಇಲಾಖೆಗೆ ಕಳುಹಿಸುತ್ತೇವೆ. ವಸೂಲಿ ಜವಾಬ್ದಾರಿ ಅವರದು. ಕರ ವಸೂಲಿ ಬಗ್ಗೆ ಅಂತಿಮ ತೀರ್ಮಾನಕ್ಕೆ ಬರಲು ಜಿಲ್ಲಾ ಮಟ್ಟದಲ್ಲಿ ಸಭೆಗಳು ನಡೆಯುತ್ತಿವೆ.
ಗೋಕುಲ್‌ದಾಸ್ ಕಾರ್ಯಕಾರಿ ಎಂಜಿನಿಯರ್, ಸಣ್ಣ ನೀರಾವರಿ ಇಲಾಖೆ ಮಂಗಳೂರು
ಏನಿದು ಕರ ಸಂಗ್ರಹ?
ಕಿಂಡಿ ಅಣೆಕಟ್ಟು ನಿರ್ಮಾಣ ಆರಂಭಗೊಂಡ ಕಾಲದಿಂದಲೇ ತೆರಿಗೆ ವಸೂಲಾತಿ ಇದೆ ಎನ್ನುವುದು ಇಲಾಖೆಯ ವಾದ. ಕಿಂಡಿ ಅಣೆಕಟ್ಟುಗಳ ಕಾಮಗಾರಿ ಆರಂಭಕ್ಕೆ ಮೊದಲು ಅದರ ಪ್ರಯೋಜನ ಪ್ರದೇಶ, ಫಲಾನುಭವಿಗಳ ಸಂಖ್ಯೆ, ಕೃಷಿ ಮಾಹಿತಿಗಳನ್ನು ಆಯಾ ಗ್ರಾಮಕರಣಿಕರು ಸಂಗ್ರಹಿಸಿ ಸಲ್ಲಿಸಬೇಕು. ಅಣೆಕಟ್ಟು ನಿರ್ಮಾಣಗೊಂಡ 3 ವರ್ಷಗಳ ಅನಂತರ ನಿಗದಿತ ದರದಡಿ ನೀರಾವರಿ ಇಲಾಖೆಯು ಬೇಡಿಕೆ ಪಟ್ಟಿ ಸಲ್ಲಿಸುತ್ತದೆ. ಕಂದಾಯ ಇಲಾಖೆಯು ಗ್ರಾಮ ಕರಣಿಕರ ಕಚೇರಿ ಮೂಲಕ ಕರ ಸಂಗ್ರಹಿಸಬೇಕು. ಆದರೆ 3 ವರ್ಷಗಳಿಂದ ದ.ಕ. ಜಿಲ್ಲೆಯಲ್ಲಿ ಕರ ವಸೂಲಾತಿ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ಹೊಸ ಕಿಂಡಿ ಅಣೆಕಟ್ಟುಗಳ ವ್ಯಾಪ್ತಿಯ ಮಾಹಿತಿ ಸಲ್ಲಿಸಿಲ್ಲ. ಹೀಗಾಗಿ ಕರ ವಿಧಿಸುವ ಬಗ್ಗೆ ಕಂದಾಯ ಇಲಾಖೆ ಜತೆ ಜಂಟಿ ಪರಿಶೀಲನೆ ನಡೆಸಿ, ಕರ ನಿಗದಿ ಪಡಿಸಲು ಸೂಕ್ತ ದಿನಾಂಕ ನೀಡುವಂತೆ ಸಣ್ಣ ನೀರಾವರಿ ಇಲಾಖೆಯು ಕಂದಾಯ ಇಲಾಖೆಗೆ ಉಲ್ಲೇಖ ಪತ್ರ ನೀಡಿತ್ತು. ಆದರೂ ಕಂದಾಯ ಇಲಾಖೆ ದಿನಾಂಕ ನೀಡಿರಲಿಲ್ಲ. ಕಳೆದ ತಿಂಗಳು ಸಣ್ಣ ನೀರಾವರಿ ಇಲಾಖೆಯು ಸುತ್ತೋಲೆ ರವಾನಿಸಿದ್ದು, ಈ ಹಿಂದಿನ ವರ್ಷದಂತೆ ಕರ ವಿಧಿಸಲಾಗಿದೆ ಎಂದು ಉಲ್ಲೇಖೀಸಲಾಗಿದೆ. ಜತೆಗೆ, ವಸೂಲಾತಿ ಆದ ತತ್‌ಕ್ಷಣ ವಿವರ ಸಲ್ಲಿಸುವಂತೆ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.