ನಾನು ಹೇಗೆ ವಿಜ್ಞಾನಿಯಾದೆ?
Team Udayavani, Feb 4, 2020, 6:49 AM IST
ನಮ್ಮೊಳಗೆ ಜ್ಞಾನ ಹೆಚ್ಚಾಗುತ್ತಾ ಹೋದಂತೆಲ್ಲಾ ನಮ್ಮ ಯೋಚನೆಗೂ, ಸುತ್ತಲಿನ ಪರಿಸರಕ್ಕೂ ಅಜಗಜಾಂತರವಾಗುತ್ತದೆ. ಪಿ.ಯು.ಸಿ ಓದುತ್ತಿರುವ ಶ್ರೀರಂಗಪಟ್ಟಣದ ಸಿ.ಎಸ್. ಮೊಹಮ್ಮದ್ ಸುಹೇಲ್ ವಿಷಯದಲ್ಲೂ ಇದೇ ರೀತಿ ಆಯ್ತು. ಹಾಗಾಗಿ, ಈ ವರಗೆ, ಮೂರು ನಾಲ್ಕು ಶಾಲೆ ಬದಲಿಸಿದ್ದಾನೆ. ಪ್ರಧಾನಿ ಮೋದಿ ಅವರು “ಯುವ ಬಾಲ ಪುರಸ್ಕಾರ’ ಕೊಟ್ಟ ಮೇಲೆಯೇ ಜಗತ್ತು ಇವನ ಕಡೆ ತಿರುಗಿ ನೋಡಲು ಶುರು ಮಾಡಿದ್ದು. ಅದುವರೆಗೂ ಇವನನ್ನು “ಸಖತ್ ತಲೆಹರಟೆ. ಏನೇನೋ ಪ್ರಶ್ನೆ ಕೇಳ್ತಾನೆ’ ಹೀಗೆ ಅಂದವರೇ ಹೆಚ್ಚು. ಈ ಹುಡುಗ ಯುವ ವಿಜ್ಞಾನಿ ಆಗಿದ್ದು ಹೇಗೆ? ಅದರ ತಲ್ಲಣಗಳು ಏನು? ಇಲ್ಲಿ ಹೇಳಿ ಕೊಂಡಿದ್ದಾನೆ.
ಮನೆ ತುಂಬ ಬರೀ ಪುಸ್ತಕಗಳು. ರಾತ್ರಿಯ ಚಂದಿರನೂ, ಬೆಳಗಿನ ಸೂರ್ಯನೂ ಕೂಡ ಅದರಲ್ಲಿ ಸೇರಿಕೊಂಡಿದ್ದರು. ಹಲವಾರು ರಾಕೆಟ್‌ಗಳು, ವಿಮಾನಗಳು ಜೊತೆಯಾಗಿದ್ದವು. ಈ ರಾಕೆಟ್ ಸೂರ್ಯ, ಚಂದ್ರರಿಗೆ ಡಿಕ್ಕಿ ಹೊಡೆಯಲ್ವಾ? ಎಂಬೊಂದು ಅನುಮಾನ ಶುರುವಾಗಿದ್ದೇ ಆವಾಗ. ಪುಸ್ತಕಗಳಲ್ಲಿ ನೋಡಿದ್ದನ್ನು ಆಕಾಶದಲ್ಲಿ ಹುಡುಕಾಡುತ್ತಿದ್ದೆ. ವಿಮಾನವನ್ನು ಇಲ್ಲಿ ನೋಡಿ, ಅದರ ಸದ್ದನ್ನು ಗಗನದಲ್ಲಿ ಕೇಳುತ್ತಿದ್ದೆ. ಆಗ ಏನೋ ಒಂಥರ ಅಚ್ಚರಿ.
ಟಿ.ವಿಯಲ್ಲಿ ಧಾರಾವಾಹಿ, ಕಾರ್ಟೂನ್ ನೆಟ್‌ವರ್ಕ್ ನೋಡೋದು, ಸೈಕಲ್‌ತುಳಿಯೋದು, ಬೀದಿ ಸುತ್ತೋದು ಇವ್ಯಾವೂ ನನಗೆ ಒಗ್ಗಲಿಲ್ಲ. ವಿಪರೀತ ಇಷ್ಟವಾದದು ಪುಸ್ತಕ. ಅವುಗಳನ್ನು ನೋಡ ನೋಡುತ್ತಲೇ ನನ್ನೊಳಗೆ ಅನುಮಾನಗಳು ಹುಟ್ಟಿಕೊಳ್ಳುತ್ತಿದ್ದವು. ಅಮ್ಮ ಟೀಚರ್. ಅವಳನ್ನು ಹೋಗಿ ಕೇಳುತ್ತಿದ್ದೆ; ಚಂದಿರನೇತಕೆ ಓಡುವನಮ್ಮ ಅಂತ. ಆಕೆಗೆ ಗೊತ್ತಿರುವುದನ್ನು ಹೇಳುತ್ತಿದ್ದಳು.
ನಮ್ಮ ಅಪ್ಪ-ಅಮ್ಮ ಕೂಡ ಇಂಥ ವಿಜ್ಞಾನ ಪ್ರೇರಿತ ಪುಸ್ತಕಗಳನ್ನು ತಂದು ಕೊಟ್ಟಿದ್ದರು. ಅವರ ಉದ್ದೇಶ, ಮಗ ಚೆನ್ನಾಗಿ ಓದಬೇಕು. ಟಿ.ವಿ ಗಿವಿ ಅಂತ ಚಟಗಳು ಹತ್ತಬಾರದು ಅನ್ನೋದಷ್ಟೇ ಆಗಿತ್ತು.
ಹೀಗಾಗಿ, ಉಪಗ್ರಹಗಳು, ಡೈನೋಸಾರ್, ರಾಕೆಟ್ ಇವೇ ನನ್ನ ಆತ್ಮೀಯ ಗೆಳೆಯರಾದವು. ಸ್ವಲ್ಪ ಓದು ಬಂದ ಮೇಲೆ. ಬರೀ ಚಿತ್ರನೋಡುತ್ತಿದ್ದವನು ಅದರ ಕೆಳಗಿನ ವಿವರಗಳನ್ನು ಓದತೊಡಗಿದೆ. ಶಾಲೆಯಲ್ಲಿ, ಬಲ್ಬು ಕಂಡು ಹಿಡಿದವರು ಯಾರು? ಫ್ಯಾನ್‌ನ ಜನಕ ಯಾರು? ಹೀಗೆ, ನನಗೆ ಗೊತ್ತಿರುವ ವಿಚಾರಗಳನ್ನು ಗೆಳೆಯರಿಗೆ ಕ್ವಿಜ್ ರೀತಿ ಕೇಳುತ್ತಿದ್ದೆ. ಎಷ್ಟೋ ಗೆಳೆಯರಿಗೆ ಇವನು ಬಹಳ ಬುದ್ಧಿವಂತ ಅಂತಲೂ, ಇನ್ನೊಂದಷ್ಟು ಜನಕ್ಕೆ ಇವನು ಪಾಂಡಿತ್ಯ ಪ್ರದರ್ಶನ ಮಾಡುತ್ತಿದ್ದಾನೆ ಅಂತಲೂ ಅನಿಸಿದ್ದು ಇದೆ. ಆದರೆ, ನನ್ನ ಉದ್ದೇಶ ಅದೇನೂ ಆಗಿರಲಿಲ್ಲ.
ಏಳನೇ ತರಗತಿಗೆ ಬಂದಾಗ ಬ್ರೈನ್‌ಕೆಫೆ ಅನ್ನೋ ವಿಜ್ಞಾನ ಸ್ಪರ್ಧೆಯಲ್ಲಿ ಭಾಗವಹಿಸಿದೆ. ಅದಕ್ಕಾಗಿ ಒಂದು ಮಾಡೆಲ್ ಕೂಡ ಮಾಡಿದೆ. ಅದೊಂದು ವಿಶಿಷ್ಟ ಅನುಭವವಾಯಿತಾದರೂ, ಗೆಲುವೇನೂ ದಕ್ಕಲಿಲ್ಲ. ನಾನು ಇಷ್ಟಕ್ಕೇ ಸುಮ್ಮನಾಗಲಿಲ್ಲ. ಅಪ್ಪ-ಅಮ್ಮನನ್ನು ಪೀಡಿಸಿ ವಿಜ್ಞಾನ ಸ್ಪರ್ಧೆಗಳು, ಪ್ರಬಂಧ ಸ್ಪರ್ಧೆಗಳು, ಮಾಡೆಲ್ ಮಾಡೋದು ಹೀಗೆಲ್ಲ ಮಾಡುತ್ತಲೇ ಇದ್ದೆ. ಯಶಸ್ಸುಗಳೇನೂ ಒಲಿಯದಿದ್ದರೂ, ನನ್ನಲ್ಲಿದ್ದ ಕುತೂಹಲವನ್ನು ಇವು ತಣಿಸುತ್ತಾಹೋದವು.
ಹುಚ್ಚು ಹುಚ್ಚಾಗಿ ಆಡ್ತಾನೆ
ಬದುಕಿನ ಟರ್ನಿಂಗ್ ಪಾಯಿಂಟ್ ಅಂದರೆ, 8ನೇ ತರಗತಿಯಲ್ಲಿ ಇದ್ದಾಗ ನನ್ನ ಈ ಹುಚ್ಚನ್ನು ನೋಡಿ ಅಪ್ಪ-ಅಮ್ಮ ಲ್ಯಾಪ್‌ಟಾಪ್ ಕೊಡಿಸಿದ್ದು. ಅದಕ್ಕೆ ಇಂಟರ್‌ನೆಟ್ ಕೂಡ ಹಾಕಿಸಿಕೊಟ್ಟರು. ಜಗದ ಬೆಳಕು ನನ್ನೊಳಗೆ ಇಣುಕಲು ಶುರುವಾಗಿದ್ದು ಆವಾಗಲೇ. ನನ್ನ ಅಪ್ಪ-ಅಮ್ಮಗೆ ಬಹುಶಃ ಕೌತುಕದ ಹಿಂದೆ ಬೀಳುವ, ಅದಕ್ಕೆ ಉತ್ತರ ಕಂಡುಕೊಳ್ಳುವ ನನ್ನ ಉತ್ಸಾಹ ಹುಚ್ಚು ಅಂತ ಅನ್ನಿಸಿರಬೇಕು ಅಥವಾ ನನ್ನ ಪ್ರಶ್ನೆಗಳಿಂದ ಅವರು ಬಿಡುಗಡೆ ಹೊಂದಲೋ ಏನೋ ಲ್ಯಾಪ್‌ಟಾಪ್ ಕೊಡಿಸಿಬಿಟ್ಟರೋ ಏನೋ…
ಬಾಲ್ಯದಿಂದ ನೋಡಿದ್ದ ವಿಜ್ಞಾನದ ಚಿತ್ರಗಳು, ಅಡಗಿದ್ದ ಕೌತುಕ ಎಲ್ಲದಕ್ಕೂ ಆಗ ಉತ್ತರ ಕಂಡುಹಿಡಿಯಲು ಶುರುಮಾಡಿದೆ. ಎಂ.ಐಟಿ. ಓಸಿ ಡಬ್ಲೂ, ಕೋಡ್ಸರ, ವಿಕಿಪಿಡಿಯಾ, ಗೂಗಲ್ಸ್ ಸ್ಕಾಲರ್ ಹೀಗೆ ಅನೇಕ ಸೈನ್ಸ್ ಸೈಟ್‌ಗಳು ನನ್ನ ಎಷ್ಟೋ ಅನುಮಾನಗಳಿಗೆ ಎದುರಿಗೆ ನಿಂತು ಉತ್ತರ ಕೊಟ್ಟವು. ಅವು ಬಹಳ ಅಪ್ಡೆಟ್ ಸೈಟ್ಸ್‌ಗಳು. ನಮ್ಮ ಶಾಲೆಯ ಪಠ್ಯಕ್ಕಿಂತ ಮೂರು ನಾಲ್ಕು ವರ್ಷ ಮುಂದಿರುತ್ತವೆ. ರಾಜ್ಯವಿಜ್ಞಾನ ಪರಿಷತ್ ಏರ್ಪಡಿಸುವ ರಾಜ್ಯ ಮಟ್ಟದ ಸೈನ್ಸ್ ಫೆಸ್ಟಿವಲ್‌ನಲ್ಲಿ ಮಾನವನ ನಡಿಗೆಯಿಂದ ವಿದ್ಯುತ್ ಹೇಗೆ ಉತ್ಪಾದಿಸಬಹುದು ಅನ್ನೋ ಸಂಶೋಧನಾ ಪ್ರಬಂಧ ಮಂಡಿಸಿದೆ.
ಆಗಲೂ, ಜಗತ್ತಿಗೆ ಈ ಹುಚ್ಚ ಏನೋ ಮಾಡ್ತಾ ಇದ್ದಾನೆ ಅಂತಲೇ ಎಲ್ಲರೂ ಅಂದುಕೊಂಡಿದ್ದರು. ಅದಕ್ಕೆಲ್ಲಾ ನಾನೇನೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಈ ವೇಳೆಗೆ, ಕಂಪ್ಯೂಟರ್ ಪ್ರೋಗ್ರಾಮಿಂಗ್ ಕಡೆ ಒಲವಾಯಿತು. ಸಿ, ಸಿ ಪ್ಲಸ್‌ಪ್ಲಸ್, ಪೈಥಾನ್‌ನಂಥ ಪ್ರೋಗ್ರಾಮಿಂಗ್ ಭಾಷೆಯನ್ನು ಕಲಿಯೋಕೆ ಶುರುಮಾಡಿದೆ. ಡಬ್ಲ್ಯು ಸ್ಕೂಲ್, ಸ್ಟಾಕ್‌ಓವರ್ ಫ್ಲೋ ಸೈಟ್‌ಗಳಲ್ಲಿ ಬಹಳ ಅಪ್‌ಡೇಟ್ ಪ್ರೋಗ್ರಾಮಿಂಗ್ ಸಿಗುತ್ತಾ ಹೋದವು. ಆದರೆ, ನಾನು ಹೆಚ್ಚು ಹೆಚ್ಚು ತಿಳಿದುಕೊಳ್ಳುತ್ತಾ ಹೋದಂತೆ, ಅನುಮಾನ ಹುಟ್ಟೋದು. ಅದನ್ನು ಪರಿಹರಿಸಿಕೊಳ್ಳೋಣ ಅಂತ ಶಾಲೆಯಲ್ಲಿ ಮೇಷ್ಟ್ರುಗಳಿಗೆ ಪ್ರಶ್ನೆ ಕೇಳಿದರೆ ಅಲ್ಲೂ ಉತ್ತರ ದೊರಕುತ್ತಿರಲಿಲ್ಲ. ಬದಲಿಗೆ, ಇವನೇನೋ ಮಹಾನ್ ಬುದ್ಧಿವಂತ. ಸಿಲಬಸ್‌ನಲ್ಲಿ ಇರೋದು ಮಾತ್ರ ಕಲಿಯದೇ ತಲೆಹರಟೆ ಥರ ಪ್ರಶ್ನೆ ಕೇಳ್ತಾನೆ ಅಂತೆಲ್ಲಾ ಅಂದುಕೊಳ್ಳೋರು. ಹೀಗಾಗಿ, ಸೆಲ್ಫ್ಟೀಚ್ ಮಾಡಿಕೊಳ್ಳುತ್ತಾ ಹೋದೆ. ತಿಳುವಳಿಕೆ, ಸುತ್ತಲಿನ ಪ್ರಪಂಚದಿಂದ ನನ್ನನ್ನು ಬೇರ್ಪಡಿಸುತ್ತಾ ಹೋಗುತ್ತಿದ್ದದ್ದು ನನ್ನ ಗಮನಕ್ಕೆ ಬಂತು. ಇದಕ್ಕೆ ಹೊಂದಿಕೊಳ್ಳಲಾಗದೆ 7ರಿಂದ 10ನೇ ತರಗತಿ ಮುಗಿಸುವ ಒಳಗಾಗಿ ಮೂರು ಶಾಲೆಗಳನ್ನು ಬದಲಿಸಬೇಕಾಯಿತು.
ಪ್ರಧಾನಿ ಪ್ರಶಸ್ತಿ ಬಂತು
11ನೇ ಕ್ಲಾಸಿಗೆ ಬಂದೆ. ಸ್ವಲ್ಪ ಖುಷಿಯಾಯ್ತು. ಏಕೆಂದರೆ, ಆಗ ಪಿಸಿಎಂಬಿ ತಗೊಂಡಿದ್ದೆ. ಇಲ್ಲಾದರೂ ಟೀಚರ್‌ಗೆ ಏನಾದರೂ ಪ್ರಶ್ನೆ ಕೇಳಬಹುದಲ್ಲ ಅಂತ ಖುಷಿ ಪಟ್ಟೆ, ಆದರೆ, ನಿರಾಸೆ ಆಗಲು ಬಹಳ ಸಮಯ ಹಿಡಿಯಲಿಲ್ಲ. ಅವರು, ಪುಸ್ತಕದಲ್ಲಿ ಏನಿದೆಯೋ ಅದನ್ನು ಓದೊRಳಪ್ಪ. ಉಳಿದದ್ದು ಆಮೇಲೆ ನೋಡೋಣ ಅನ್ನೋ ರೀತಿ ಇದ್ದರು. ಈ ಮಧ್ಯೆ ನಾನು ಐರೀಷ್ ನ್ಯಾಷನಲ್ ಫೇರ್‌ನಲ್ಲಿ ಭಾಗವಹಿಸಿ ಮಕ್ಕಳ ಅಪೌಷ್ಠಿಕತೆಯ ಬಗ್ಗೆ ಪ್ರಬಂಧ ಮಂಡಿಸಿದ್ದೆ. ಅಮೇರಿಕಾದಲ್ಲಿ ನಡೆಯುವ ಇಂಟರ್‌ನ್ಯಾಷನಲ್ ಸೈನ್ಸ್ ಎಂಜಿನಿಯರಿಂಗ್ ಫೇರ್‌ನಲ್ಲಿ ಎರಡನೇ ಪ್ರಶಸ್ತಿ ಬಂತು. ಅಲ್ಲಿನ ಎಂಐಟಿಯ ಲಿಂಕನ್ ಲ್ಯಾಬರೋಟರಿ, ಒಂದು ನಕ್ಷತ್ರಕ್ಕೆ ನನ್ನ ಹೆಸರು ಇಟ್ಟಿತು. ನಮ್ಮ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ “ರಾಷ್ಟ್ರೀಯ ಬಾಲ ಪುರಸ್ಕಾರ’ ಕೊಟ್ಟಿತು. ಪ್ರಧಾನಿ ಮೋದಿ ಅವರು ಕೈ ಕುಲಕಿ,ಬೆನ್ನು ತಟ್ಟಿ ಭೇಷ್ ಅಂದರು. ಜಗತ್ತಿನೆಲ್ಲೆಡೆ ಇದು ಪ್ರಚಾರ ಆಯ್ತು. ಐಸ್ಯಾಕ್ ನನ್ನ ಜ್ಞಾನವನ್ನು ಗುರುತಿಸಿತು.
ಆಗ, “ಇವನು ಏನೇನೋ ಪ್ರಶ್ನೆ ಕೇಳ್ತಾನೆ ಹುಚ್ಚನ ಥರ’ ಅಂತ ಅಂದು ಕೊಂಡಿದ್ದವರಿಗೆಲ್ಲಾ, ನಾನು ಅಂದು ಕೇಳಿದ ಪ್ರಶ್ನೆಗಳೆಲ್ಲ ಮತ್ತೆ ನೆನಪಾಗಿ, ಮನದ ತಕ್ಕಡಿಯಲ್ಲಿ ಅವುಗಳನ್ನು ತೂಕ ಮಾಡತೊಡಗಿದರು. ಅಲ್ಲಿಯ ತನಕ ಅವರ ತಲೆಯಲ್ಲಿದ್ದ “ಹುಚ್ಚ’ ಅನ್ನೋದು ಬಿಟ್ಟು ಹೋಯಿತು.
ಮಾಸ್ಟರ್ ಆಫ್ ಬಂಕರ್
ಈ ಮಧ್ಯೆ ಇನ್ನೊಂದು ಘಟನೆ ನಡೆಯಿತು. ನಾನು ಸಂಶೋಧನೆಯ ಹಿಂದೆ ಬಿದ್ದಿದ್ದರಿಂದ ಕಾಲೇಜಿಗೆ ಸರಿಯಾಗಿ ಹೋಗಲು ಆಗುತ್ತಿರಲಿಲ್ಲ. ಸಮಾಜದ ಕಣ್ಣಿಗೆ ನಾನೊಬ್ಬ “ಮಾಸ್ಟರ್ ಆಫ್ ಬಂಕರ್’ ಥರ ಕಾಣಿ¤ದ್ದೆ. ಆದರೆ, ನನ್ನೊಳಗಿನ ಜ್ಞಾನದ ಹಸಿವಿಗೆ ಸಂಶೋಧನೆಯೇ ಪುಷ್ಕಳ ಭೋಜನ ಅಂತ ಅವರಿಗೆ ತಿಳಿದಿರಲಿಲ್ಲ. ಹಾಗಂತ ನಾನೇನೂ ಓದಿನಲ್ಲಿ ಹಿಂದುಳಿದಿರಲ್ಲ. ಹೀಗಾಗಿ, ಕಾಲೇಜಲ್ಲಿ ಪರೀಕ್ಷೆಗೆ ಕೂಡಿಸಲು ಆಗಲ್ಲ ಅಂದಾಗ ನನಗೆ ಎರಡು ದಾರಿಗಳು ಕಣ್ಣ ಮುಂದಿದ್ದವು. ಒಂದು, ಸಂಶೋಧನೆ, ಇನ್ನೊಂದು ದ್ವಿತೀಯ ಪಿಯುಸಿ ಪರೀಕ್ಷೆ ಎದುರಿಸುವುದು. ಒಂದು ಆಯ್ಕೆ ಮಾಡಿಕೊಂಡರೆ ಇನ್ನೊಂದು ಬಿಡಬೇಕು. ಬಹಳ ಯೋಚನೆ ಮಾಡಿ, ನನಗೆ ಕಾಲೇಜು ಇಲ್ಲದೇ ಇದ್ದರೂ ಪರವಾಗಿಲ್ಲ, ಸಂಶೋಧನೆ ಮುಂದುವರಿಸುತ್ತೇನೆ ಅನ್ನೋ ತೀರ್ಮಾನಕ್ಕೆ ಬಂದೆ.
ಎಲ್ಲರಿಗೂ ಶಾಕ್ ಆಯಿತು. ಇವನಿಗೇನು ಹುಚ್ಚು? ವರ್ಷ ಪೂರ್ತಿ ಓದಿ, ಪರೀಕ್ಷೆ ಸಮಯದಲ್ಲಿ ಈ ತೀರ್ಮಾನ ತಗೊಂಡನಲ್ಲ ಅಂತ. ಕೊನೆಗೆ, ಹೇಗೋ ಈ ವರ್ಷ ಪರೀಕ್ಷೆ ಬರೆಯುವ ಸುಯೋಗ ದೊರೆತಿದೆ. ಈಗ ಸಿದ್ಧತೆಯಲ್ಲಿ ಇದ್ದೇನೆ. ಇದು ಮುಗಿದ ನಂತರ ಅಮೆರಿಕದ ಎಂ.ಐ.ಟಿಯಲ್ಲಿ ಮಕ್ಕಳ ಅಪೌಷ್ಠಿಕತೆ ತಡೆಯಲು ತಂತ್ರಜ್ಞಾನವನ್ನು ಹೇಗೆಲ್ಲಾ ಬಳಸಿಕೊಳ್ಳುವುದು ಅನ್ನೋ ವಿಷಯದ ಮೇಲೆ ಉನ್ನತ ಅಧ್ಯಯನ ನಡೆಸಲು ಹೋಗುತ್ತಿದ್ದೇನೆ. ನಮ್ಮ ಅಪ್ಪ-ಅಮ್ಮನಿಗೆ, ನನ್ನ ಮಗ ಲ್ಯಾಪ್‌ಟಾಪ್, ಇಂಟರ್‌ನೆಟ್ ಅನ್ನು, ಬದುಕಲ್ಲಿ ಮೇಲೇರೋದಕ್ಕೆ ಬಳಸಿಕೊಂಡಿದ್ದಾನೆ ಅನ್ನೋ ಹೆಮ್ಮೆ ಇದೆ. ಅವರ ನಿರೀಕ್ಷೆಯನ್ನು ಹುಸಿ ಮಾಡದ ಖುಷಿ ನನಗಿದೆ.
ಕೆ.ಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.