ಶತಮಾನ ಕಂಡ ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯದ ಕೊರತೆ
Team Udayavani, Feb 6, 2020, 3:00 AM IST
ಹಾಸನ: ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವುದೇ ದೊಡ್ಡ ಸವಾಲಾಗಿರುವ ಇಂದಿನ ಸಂದರ್ಭದಲ್ಲಿ ಶತಮಾನ ದಾಟಿದ ಶಾಲೆಗಳು ಮೂಲ ಸೌಕರ್ಯ ಕೊರತೆಯಿಂದ ನಲುಗುತ್ತಿವೆ. ಶತಮಾನ ಪೂರೈಸಿರುವ ಜಿಲ್ಲೆಯ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದರೆ, ಮಕ್ಕಳ ಸಂಖ್ಯೆ ಸಮಾಧಾನಕರವಾಗಿರುವ ಶಾಲೆಗಳಲ್ಲೂ ಮೂಲ ಸೌಕರ್ಯದ ಕೊರತೆಯಿದೆ.
ಶತಮಾನ ಕಂಡ 4 ಶಾಲೆಗಳು: ಶಿಕ್ಷಣ ಇಲಾಖೆ ಶತಮಾನ ಪೂರೈಸಿರುವ 4 ಶಾಲೆಗಳನ್ನು ಜಿಲ್ಲೆಯಲ್ಲಿ ಗುರ್ತಿಸಿದೆ. ಆ ಪೈಕಿ ಎರಡು ಶಾಲೆಗಳು ಹಾಸನ ನಗರದಲ್ಲಿದ್ದರೆ, ಸಕಲೇಶಪುರದಲ್ಲಿ ಒಂದು, ಹಳೆಬೀಡಿನಲ್ಲಿ ಮತ್ತೂಂದು ಶಾಲೆಯಿದೆ. 100 ವರ್ಷದ ಹಿಂದೆ ನಿರ್ಮಾಣವಾದ ಈ ಶಾಲೆಗಳಲ್ಲಿ ಪೈಕಿ ಮೂರು ಶಾಲೆಗಳಿಗೆ ಮಾತ್ರ ಮೂಲ ಸೌಕರ್ಯಗಳಿಗಾಗಿ ಕಳೆದ ವರ್ಷ ತಲಾ 5 ಲಕ್ಷ ರೂ. ವಿಶೇಷ ಅನುದಾನ ನೀಡಿದೆ. ಆದರೆ ಈ ಅನುದಾನ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದ್ದು, ಅರೆ -ಬರೆ ವಿಶೇಷ ಅನುದಾನ ವ್ಯವಸ್ಥೆಗಳಿಗಷ್ಟೇ ಸೀಮಿತವಾಗಿದೆ.
ದಿಗ್ಗಜರು ಓದಿದ ಆರ್.ಸಿ. ರಸ್ತೆ ಪ್ರೌಢಶಾಲೆ: ಶತಮಾನ ಪೂರೈಸಿರುವ ಹಾಸನದ ಶಾಲೆಗಳಲ್ಲಿ ಆರ್.ಸಿ.ರಸ್ತೆಯ ಬಾಲಕರ ಸರ್ಕಾರಿ ಪ್ರೌಢಶಾಲೆ ಪ್ರಮುಖವಾದುದು. ಸಾವಿರಾರು ಮಕ್ಕಳು ಓದುತ್ತಿದ್ದ ಈ ಶಾಲೆಯಲ್ಲಿ ಈಗ 240 ಮಕ್ಕಳು ದಾಖಲಾಗಿದ್ದು, ಹಾಜರಾತಿ 150ರಿಂದ 160 ರಷ್ಟಿದೆ. ಪ್ರಧಾನ ಮಂತ್ರಿಯವರಿಗೆ ಪತ್ರಿಕಾ ಕಾರ್ಯದರ್ಶಿಯಾಗಿದ್ದ ಶಾರದಾಪ್ರಸಾದ್ ಅವರಂತಹ ದಿಗ್ಗಜರು ಓದಿದ ಶಾಲೆ ಈಗ ಅವಸಾನದ ಹಾದಿ ಹಿಡಿದಿದೆ. ಸುಮಾರು 10 ಎಕರೆಯಷ್ಟಿದ್ದ ವಿಶಾಲ ಮೈದಾನ ಸೇರಿ ಶಾಲಾ ಕಟ್ಟಡದ ಸ್ಥಳವೂ ಈಗ ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆ (ಹಿಮ್ಸ್)ಗೆ ಸೇರಿದೆ. ಯಾವ ಸಂದರ್ಭದಲ್ಲಾದರೂ ಹಿಮ್ಸ್ ಈ ಶಾಲೆಯನ್ನು ಯಾವಾಗಬೇಕಾದರೂ ಎತ್ತಗಂಡಿ ಮಾಡಿಸಬಹುದು.
ಈಗಿರುವ ಶಾಲೆಯಲ್ಲಿ ಮೂಲ ಸೌಕರ್ಯಗಳನ್ನು ನೋಡಿದರೆ ನಮ್ಮ ಜನಪ್ರತಿನಿಧಿಗಳು ಶಿಕ್ಷಣಕ್ಕೆ ಎಷ್ಟು ಗಮನಕೊಡುತ್ತಿದ್ದಾರೆಂಬುದು ಗೊತ್ತಾಗುತ್ತದೆ. ಈ ಶಾಲೆಯಲ್ಲಿ ಪದವಿಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯ ತರಗತಿಗಳು ಪಾಳಿಯಲ್ಲಿ ನಡೆಯುತ್ತವೆ. ಮುಂಜಾನೆಯಿಂದ 1.30ರ ವರೆಗೆ ಪದವಿಪೂರ್ವ ಕಾಲೇಜು ತರಗತಿಗಳು ನಡೆದರೆ, ಆನಂತರ ಪ್ರೌಢಶಾಲಾ ತರಗತಿಗಳು ಆರಂಭವಾಗುತ್ತವೆ. ಶತಮಾನ ಪೂರೈಸಿರುವ ಈ ಶಾಲಾ ಕಟ್ಟಡ ದುರಸ್ತಿಯಲ್ಲೆ ಆಯಸ್ಸು ಕಳೆದಿದೆ. ಗೋಡೆಗೆ ಮೊಳೆ ಹೊಡೆದರೂ ಗೋಡೆ ಬಿದ್ದೀತೆಂಬ ಆತಂಕ ಕಾಡುತ್ತದೆ. ಅಷ್ಟು ಶಿಥಿಲವಾಗಿದೆ ಶಾಲಾ ಕಟ್ಟಡ.
ಶೌಚಾಲಯದ ದುಸ್ಥಿತಿ: ಶಾಲೆಯಲ್ಲಿನ ಶೌಚಾಲಯಗಳ ಸ್ಥಿತಿ ನೋಡಿದರೆ ಶೌಚಾಲಯಗಳನ್ನು ಬಳಸುವುದೇ ಬೇಡ ಎಂಬ ಜಿಗುಪ್ಸೆ ಮೂಡುತ್ತದೆ. ಶೌಚಾಲಯಗಳು ಮುರಿದು ಬಿದ್ದಿವೆ. ಈ ಶೌಚಾಲಯಗಳನ್ನು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಹಾಳು ಮಾಡಿದ್ದಾರೋ ಎಂಬುದೇ ಜಿಜ್ಞಾಸೆ. ಇನ್ನು ಕೊಠಡಿಗಳ ಕಸ ಹೊಡೆಯಲು ಜವಾನರೂ ಇಲ್ಲದ ಸ್ಥಿತಿ ಈ ಶಾಲೆಯದು. ಈ ಶಾಲೆಗೆ ಮಂಜೂರಾದ 7 ಜವಾನರ ಹುದ್ದೆಗಳಿವೆ. ಆದರೆ ಈಗ ಒಬ್ಬ ಮಹಿಳೆ ಮಾತ್ರ ಸ್ವಚ್ಛತೆ ನೋಡಿಕೊಳ್ಳಬೇಕು. ಆಕೆ ಇಡೀ ಶಾಲೆಯ ಕೊಠಡಿಗಳನ್ನು ಸ್ವಚ್ಛಗೊಳಿಸುವುದಾದರೂ ಹೇಗೆ ? ಹಾಗಾಗಿ ಕೊಠಡಿಗಳು ದೂಳುಮಯ.
ಮುಖ್ಯೋಪಾಧ್ಯಾಯರಿಲ್ಲ: ಈ ಶಾಲೆಯನ್ನು ಸಮರ್ಥವಾಗಿ ನಿಭಾಯಿಸುವ ಮುಖ್ಯೋಪಾಧ್ಯಾಯರೂ ಇಲ್ಲ. ಈ ಹಿಂದೆ ಇದ್ದ ಸಮರ್ಥ ಶಿಕ್ಷಕರೆಲ್ಲ ವರ್ಗವಾಗಿ ಹೋಗಿದ್ದಾರೆ. ಪಾರ್ಥ ಎಂಬ ಶಿಕ್ಷಕರು ಈ ಶಾಲೆಯನ್ನು ಸುಧಾರಿಸಲು ಹರಸಾಹಸಪಟ್ಟು ಹೋರಾಡಿದ್ದರು. ಈಗ ಅವರೂ ವರ್ಗವಾಗಿ ಹೋಗಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ದಿವ್ಯಾಂಗ ಮುಖ್ಯೋಪಧ್ಯಾಯರು ಶಾಲೆಗೆ ವರ್ಗವಾಗಿ ಬಂದಿದ್ದಾರೆ. ಅವರಿಗೆ ಈ ವರೆಗೂ ಶಾಲೆಯ ಆಡಳಿತವನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವಾಗಿಲ್ಲ. 2011-12 ರ ಸಾಲಿನಲ್ಲಿ ಈ ಶಾಲೆಯಲ್ಲಿ 360 ಮಕ್ಕಳು ದಾಖಲಾಗುತ್ತಿದ್ದರು. ಆದರೆ ಈ ವರ್ಷ ಶಾಲೆಗೆ 253 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಅದರಲ್ಲಿ 240 ವಿದ್ಯಾರ್ಥಿಗಳು ಹಾಜರಾಗುತ್ತಾರೆ. ಆದರೆ ಒಮೊಂದು ದಿನ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೈರು ಹಾಜರಾಗುತ್ತಾರೆ. ಶಾಲೆಗೆ ಸರಾಸರಿ 150 ರಿಂದ 160 ವಿದ್ಯಾರ್ಥಿಗಳು ಮಾತ್ರ ಹಾಜರಾಗುತ್ತಾರೆ ಎಂದು ಹೆಸರು ಹೇಳಲಿಚ್ಛಿಸದ ಶಿಕ್ಷಕರೊಬ್ಬರು ಮಾಹಿತಿ ನೀಡಿದ್ದಾರೆ.
ಶಿಕ್ಷಕರ ಕೊರತೆ: ದಾಖಲೆಯಲ್ಲಿ ಮಕ್ಕಳ ಅನುಪಾತಕ್ಕೆ ತಕ್ಕಷ್ಟು ಶಿಕ್ಷಕರಿದ್ದಾರೆ. ಆದರೆ ಕೆಲವರು ರಜೆ, ತರಬೇತಿ ಎಂದು ಹೋದರೆ ಶಾಲೆಯಲ್ಲಿ ಶಿಕ್ಷಕರ ಕೊರತೆ ಸಾಮಾನ್ಯವಾಗಿರುತ್ತದೆ. ಈ ಶಾಲೆಯ ಅಡಳಿತ ಈಗ ಹೇಗಿದೆಯೆಂದರೆ ಮಹಾರಾಜನ ನಂತರ ಸಮರ್ಥ ಯವರಾಜರು ಬರದೇ ಸಾಮಾಜ್ಯ ಪತನವಾಯಿತು ಎಂಬ ಸ್ಥಿತಿ ಹಾಸನದ ಆರ್.ಸಿ.ರಸ್ತೆ ಬಾಲಕರ ಸರ್ಕಾರಿ ಶಾಲೆಯದ್ದಾಗಿದೆ. ಇದೇ ಸ್ಥಿತಿ ಮುಂದುವರಿದರೆ ಇನ್ನು ನಾಲ್ಕೆದು ವರ್ಷಗಳಲ್ಲೇ ಈ ಶಾಲೆ ಮಚ್ಚುವ ಸ್ಥಿತಿ ಎದರಾದರೂ ಅಚ್ಚರಿಯಿಲ್ಲ.
ವಾಣಿ ವಿಲಾಸ ಶಾಲೆಯಲ್ಲಿ ಮಕ್ಕಳ ಹಾಜರಾತಿ ಹೆಚ್ಚು: ಆರ್.ಸಿ.ರಸ್ತೆ ಬಾಲಕರ ಸರ್ಕಾರಿ ಪ್ರೌಢಶಾಲೆ ಮೂಲ ಸೌಕರ್ಯ, ಮಕ್ಕಳ ಕೊರತೆಯಿಂದ ನಲುಗುತ್ತಿದ್ದರೆ, ವಾಣಿ ವಿಲಾಸ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂಲ ಸೌಕರ್ಯಗಳ ಕೊರತೆಯ ನಡುವೆಯೂ ಮಕ್ಕಳ ದಾಖಲಾತಿ ಸುಧಾರಿಸುತ್ತಿದೆ. 2009-10ರಲ್ಲಿ ಮಕ್ಕಳ ದಾಖಲಾತಿ 80 ಕ್ಕೆ ಇಳಿದಿತ್ತು. ಆದರೆ ಈಗ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 436 ವಿದ್ಯಾರ್ಥಿಗಳಿದ್ದರೆ, ಪೂರ್ವ ಪ್ರಾಥಮಿಕ ಶಾಲೆಯಲ್ಲಿ ( ಎಲ್‌ಕೆಜಿ -ಯುಕೆಜಿ) 63 ಮಕ್ಕಳಿದ್ದಾರೆ.
2010 ಶಾಲೆಗೆ ಶಿಕ್ಷಕ ಉಮೇಶ್ ಅವರು ವರ್ಗವಾಗಿ ಬಂದ ನಂತರ ಬೇಸಿಗೆ ರಜೆಯಲ್ಲಿ ಮನೆ, ಮನೆಗೂ ಹೋಗಿ ವಾಣಿವಿಲಾಸ ಶಾಲೆಗೆ ಮಕ್ಕಳನ್ನು ದಾಖಲು ಮಾಡುವಂತೆ ಪೋಷಕರ ಮನವೊಲಿಸಿದ ಪರಿಣಾಮ ಇಂದು ಶಾಲೆ ಮಕ್ಕಳಿಂದ ತುಂಬಿದೆ. ಕ್ರೀಡೋತ್ಸವ, ಶಾಲಾ ಪ್ರವಾಸ ಮತ್ತಿತರ ಕಾರ್ಯಕ್ರಮಗಳಿಂದಾಗಿ ಪೋಷಕರು ಮಕ್ಕಳನ್ನು ವಾಣಿವಿಲಾಸ ಶಾಲೆಗೆ ಸೇರಿಸಲು ಮುಂದಾಗುತ್ತಿದ್ದು, ಹಾಸನ ನಗರದಲ್ಲಿ ಅತಿ ಹೆಚ್ಚು ಮಕ್ಕಳನ್ನು ದಾಖಲಿಸಿಕೊಂಡಿರುವ ಶಾಲೆ ಎಂಬ ಹೆಗ್ಗಳಿಕೆ ಪಡೆದಿದೆ. ಆದರೆ ಈಗ ಶಾಲೆಯಲ್ಲಿ ಕೊಠಡಿಗಳ ಕೊರತೆಯುಂಟಾಗಿದೆ.
ಎರಡು ಕಟ್ಟಡಗಳಲ್ಲಿ ವಾಣಿ ವಿಲಾಸ ಶಾಲೆ ನಡೆಯುತ್ತಿದೆ. ಶತಮಾನ ಪೂರೈಸಿರುವ ಹೆಂಚಿನ ಕಟ್ಟಡ ಮತ್ತು ಇತ್ತೀಚೆಗೆ ನಿರ್ಮಿಸಿದ ಆರ್‌ಸಿಸಿ ಕಟ್ಟಡದಲ್ಲಿ ತರಗತಿಗಳು ನಡೆಯುತ್ತಿವೆ. ಹೊಸ ಕಟ್ಟಡಗಳಲ್ಲಿರುವ 6 ಕೊಠಡಿಗಳಲ್ಲಿ ಕಂಪ್ಯೂಟರ್ ಪ್ರಯೋಗಾಲಯ, ಶಿಕ್ಷಕರ ಕೊಠಡಿ, 30 ವಿಕಲಚೇತನ ಮಕ್ಕಳಿಗೆ ಫಿಜಿಯೋ ಥೆರಫಿಗೆ ಬಳಸಿಕೊಳ್ಳುತ್ತಿದ್ದು, ಒಂದೆರೆಡು ತರಗತಿಗಳು ಮಾತ್ರ ಹೊಸ ಕಟ್ಟಡದಲ್ಲಿ ನಡೆಯುತ್ತಿವೆ.
ಇನ್ನುಳಿದಂತೆ 120 ವರ್ಷದ ಹಳೆ ಕಟ್ಟಡದಲ್ಲಿಯೇ ತರಗತಿಗಳು ನಡೆಯುತ್ತಿವೆ. ಹಳೆಯ ಕಟ್ಟಡ ದುರಸ್ತಿಯಾಗಬೇಕಾಗಿದ್ದು, ಶಾಲೆಯ ಆವರಣ ಮಾತ್ರ ಧೂಳುಮಯ. ಆವರಣಕ್ಕೆ ಇಂಟರ್‌ಲಿಂಕ್ ಟೈಲ್ಸ್ ಅಳವಡಿಸಿದರೆ ದೂಳು ಹತೋಟಿಗೆ ಬಂದು ಪರಿಸ್ಥಿತಿ ಸುಧಾರಿಸುತ್ತದೆ. ಶಿಕ್ಷಣ ಇಲಾಖೆ ಅಥವಾ ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕು ಎಂಬುದು ಶಿಕ್ಷಕರ ಕೋರಿಕೆ. ಅಷ್ಟೇ ಅಲ್ಲ ಶಾಲೆಯಲ್ಲಿ ಶೌಚಾಲಯ, ಕುಡಿಯುವ ನೀರಿನ ಕೊರತೆಯೂ ಶಾಲೆಯಲ್ಲಿದೆ.
53 ಮಕ್ಕಳಿರುವ ಪೂರ್ವ ಪ್ರಾಥಮಿಕ ಶಾಲೆಗೆ ಖಾಸಗಿಯಾಗಿ ಶಿಕ್ಷಕರನ್ನು ನೇಮಿಸಿಕೊಂಡು ಮಕ್ಕಳಿಂದಲೇ ಶುಲ್ಕ ವಸೂಲಿ ಮಾಡಿ ಶಿಕ್ಷಕರಿಗೆ, ಆಯಾಗಳಿಗೆ ವೇತನ ಕೊಡಲಾಗುತ್ತಿದೆ. ಶಾಲೆಯಲ್ಲಿ ಪೂರ್ವ ಪ್ರಾಥಮಿಕ ಶಾಲೆ ನಡೆಯುವುದರಿಂದ ಪ್ರಾಥಮಿಕ ಶಾಲೆಗೆ ಮಕ್ಕಳ ಕೊರತೆ ಕಾಡವುದಿಲ್ಲ. ಶತಮಾನದ ವಾಣಿವಿಲಾಸ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಷದಿಂದ ವರ್ಷಕ್ಕೆ ಹೆಚ್ಚು ಮಕ್ಕಳು ದಾಖಲಾಗುತ್ತಿದ್ದಾರೆ. ಅದಕ್ಕೆ ತಕ್ಕಂತೆ ಶಾಲೆಗೆ ಮೂಲ ಸೌಕರ್ಯಗಳನು ಕಲ್ಪಿಸಿದರೆ ಶತಮಾನದ ಶಾಲೆ ಮಾದರಿ ಶಾಲೆಯಾಗಿ ಮಾರ್ಪಾಡಾಗುವುದರಲ್ಲಿ ಅನುಮಾನವಿಲ್ಲ.
ಹಳೆಬೀಡು ಶಾಲೆಗೆ ಕೆಪಿಎಸ್ ಬಲ: ಶತಮಾನ ಪೂರೈಸಿರುವ ಹಳೆಬೀಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡು ವರ್ವಗಳಿಂದೀಚೆಗೆ ಸುಧಾರಿಸಿಕೊಳ್ಳುತ್ತಿದೆ. ಈ ಶಾಲೆಯಲ್ಲಿ ಎರಡು ದಶಕಗಳ ಹಿಂದೆ 1,500 ಮಕ್ಕಳಿದ್ದರು. ಆದರೆ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಇಳಿಯುತ್ತಾ ಬಂದಿತು. ಆದರೆ ನಾಗರಾಜ್ ಅವರು ಮುಖ್ಯಶಿಕ್ಷಕರಾಗಿ ಬಂದ ನಂತರ ಶಾಲೆಯ ಸ್ಥಿತಿ ಸಧಾರಿಸುತ್ತಾ ಬಂದು ಈಗ ಶಾಲೆಯಲ್ಲಿ ಒಟ್ಟು 540 ಮಕ್ಕಳು ಕಲಿಯುತ್ತಿದ್ದಾರೆ. ಹಳೆಬೀಡು ಶಾಲೆ ಈಗ ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್)ಯಾಗಿ ಮೇಲ್ದರ್ಜೆಗೇರಿದ ಮೇಲೆ ಶಾಲೆಯಲ್ಲಿ ಮೂಲ ಸೌಕರ್ಯಗಳು ಸುಧಾರಿಸಿವೆ,
ಪೂರ್ವ ಪ್ರಾಥಮಿಕ ಶಾಲೆ (ಅಜ್ಜಿಮನೆ)ಯೂ ಶಾಲೆಯಲ್ಲಿ ಪ್ರಾರಂಭವಾಗಿದೆ. ಪೋಷಕರಿಂದ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗುತ್ತಿದ್ದು, ಭವಿಷ್ಯದಲ್ಲಿ ಶಾಲೆಗೆ ಮಕ್ಕಳ ಕೊರತೆಯನ್ನು ನೀಗುವ ವಿಶಾವಸ ಮೂಡಿದೆ. ಹಳೆಬೀಡು ಶಾಲೆಯು ಕರ್ನಾಟಕ ಕಾಂಪೌಂಡ್ ಕೂಡ ಆಕರ್ಷಕವಾಗಿದೆ. ರೈಲು ಬೋಗಿ ಮಾದರಿಯಲ್ಲಿ ನಿರ್ಮಾಣವಾಗಿರುವ ಕಾಂಪೌಂಡ್ ಖಾಸಗಿ ಶಾಲೆಯಷ್ಟೇ ಆಕರ್ಷವಾಗಿದೆ. ಹಾಗೆಯೇ ಶಾಲಾ ಕಟ್ಟಡಗಳೂ ಸುಸಜ್ಜಿತವಾಗಿವೆ. ಸಣ್ಣ – ಪುಟ್ಟ ಕೊರತೆಗಳ ನಡುವೆಯೂ ಹಳೆಬೀಡಿನ ಶತಮಾನದ ಶಾಲೆಯು ಉತ್ತಮ ಶಾಲೆಯಾಗಿ ರೂಪುಗೊಂಡಿದೆ ಎನ್ನುತ್ತಾರೆ ಶಾಲೆಯ ಸಿಬ್ಬಂದಿ.
ಜಿಲ್ಲೆಯಲ್ಲಿ ಶತಮಾನ ಕಂಡ 4 ಶಾಲೆಗಳು: ಜಿಲ್ಲೆಯಲ್ಲಿ ಇದುವರೆಗೂ 4 ಶಾಲೆಗಳನ್ನು ಶತಮಾನದ ಶಾಲೆಗಳೆಂದು ಗುರ್ತಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಕೆ.ಎಸ್. ಪ್ರಕಾಶ್ ತಿಳಿಸಿದ್ದಾರೆ. ಹಾಸನದ ಆರ್.ಸಿ.ರಸ್ತೆ ಸರ್ಕಾರಿ ಪ್ರೌಢಶಾಲೆ, ವಾಣಿವಿಲಾಸ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ, ಹಳೆಬೀಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸಕಲೇಶಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಈ ಶಾಲೆಗಳಲ್ಲಿ ಸಕಲೇಶಪುರದ ಶಾಲೆ ಹೊರತುಪಡಿಸಿ ಇನ್ನುಳಿದ ಮೂರು ಶಾಲೆಗಳಿಗೆ 5 ಲಕ್ಷ ರೂ.ಗಳನ್ನು ಮೂಲ ಸೌಕರ್ಯಗಳಿಗಾಗಿ ಅನುದಾನ ನೀಡಲಾಗಿದೆ. ಪಿಆರ್‌ಇಡಿ ಕಾಮಗಾರಿಗಳನ್ನು ನಿರ್ವಹಿಸುತ್ತಿದೆ. ಇಷ್ಟು ಮೊತ್ತ ಸಾಕಾಗುವುದಿಲ್ಲ. ಮುಂದಿನ ದಿನಗಳಲ್ಲಿ ಶಾಸಕರ ನಿಧಿ ಸೇರಿದಂತೆ ವಿವಿಧ ಮೂಲಗಳಿಂದ ಇನ್ನಷ್ಟು ಅನುದಾನ ಒದಗಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದ್ದಾರೆ.
* ಎನ್. ನಂಜುಂಡೇಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.