ಗರಿಷ್ಠ ನಾರಿನಾಂಶದ ಹಲಸಿನ ತಳಿಗೆ ಸಿದ್ಧತೆ


Team Udayavani, Feb 6, 2020, 3:10 AM IST

garishta-naari

ಬೆಂಗಳೂರು: ಸಾಮಾನ್ಯವಾಗಿ ನಿತ್ಯ ಸೇವಿಸುವ ತರಕಾರಿಗಳಲ್ಲೇ ಜೀರ್ಣಕ್ರಿಯೆಗೆ ಪೂರಕವಾದ ಅತ್ಯಧಿಕ ನಾರಿನಾಂಶವುಳ್ಳ ಹಲಸಿನ ತಳಿಯನ್ನು ಪರಿಚಯಿಸಲು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್‌ಆರ್‌) ಸಿದ್ಧತೆ ನಡೆಸಿದೆ.

ಪ್ರಸ್ತುತ ಇರುವ ತರಕಾರಿ ಮತ್ತು ಅಹಾರ ಧಾನ್ಯಗಳಲ್ಲಿ ಗರಿಷ್ಠ ಶೇ. 1-3ರಷ್ಟು ನಾರಿನಾಂಶ ಇರುತ್ತದೆ. ಈಗಾಗಲೇ ಸಾಕಷ್ಟು ಜನಪ್ರಿಯ ಗೊಳ್ಳುತ್ತಿರುವ ಸಿರಿಧಾನ್ಯಗಳಲ್ಲೂ ಶೇ. 0.5 ಮಾತ್ರ ಕಾಣಬಹುದು. ಆದರೆ, ಇದಕ್ಕಿಂತ ಹಲವು ಪಟ್ಟು ಹೆಚ್ಚು ನಾರಿನಾಂಶ ಇರುವಂತಹ ಹಾಗೂ ಅದನ್ನು ಇತರೆ ತರಕಾರಿಯಂತೆ ಬೇಯಿಸಿ ಸೇವಿಸಲು ಯೋಗ್ಯವಾದ ಹಲಸಿನ ತಳಿಯ ಸಂಶೋಧನೆ ನಡೆಸುತ್ತಿದೆ. ಅಂದುಕೊಂಡಂತೆ ಇದು ಸಾಧ್ಯವಾದರೆ, ಹಲಸಿನ ಬೆಳೆಗಾರರಿಗೆ ಬಂಪರ್‌ ಲಾಭ ಬರಲಿದೆ.

ಈಗಾಗಲೇ ತುಮಕೂರು, ದಕ್ಷಿಣ ಕನ್ನಡ, ಕೇರಳ ಮತ್ತಿತರ ಕಡೆಗಳಲ್ಲಿ ಎಳೆಯ ಹಲಸಿನ ಕಾಯಿಗಳ ಸಮೀಕ್ಷೆ ನಡೆಸಲಾಗಿದೆ. ವಿವಿಧ ಪ್ರಕಾರದ ಹಲಸಿನ ಮರಗಳಿಂದ ಎರಡು ಕೆಜಿಗಿಂತ ಕಡಿಮೆ ಇರುವ ಕಾಯಿಗಳನ್ನು ಕತ್ತರಿಸಿ, ಜೈವಿಕ ರಾಸಾಯನಿಕ ಗುಣಗಳನ್ನು ಪರೀಕ್ಷಿಸಲಾಗುತ್ತಿದೆ. ಅದರಲ್ಲಿ ಈ ಮೂರು ಪ್ರಕಾರದ ಹಲಸಿನ ತಳಿಗಳಲ್ಲಿ ಅತಿ ಹೆಚ್ಚು ಅಂದರೆ ಶೇ. 11-13 ನಾರಿನಾಂಶ ಇರುವುದು ಕಂಡುಬಂದಿದೆ. ಎಲ್ಲ ಪರೀಕ್ಷೆಗಳು ಪೂರ್ಣಗೊಂಡ ನಂತರ ಈ ನಿಟ್ಟಿನಲ್ಲಿ ನಿರ್ದಿಷ್ಟ ಮಾನದಂಡ ವಿಧಿಸಲಾಗುವುದು ಎಂದು ಐಐಎಚ್‌ಆರ್‌ (ಸಿಎಚ್‌ಇಎಸ್‌) ಹಿರೇಹಳ್ಳಿಯ ಪ್ರಧಾನ ವಿಜ್ಞಾನಿ ಡಾ.ಜಿ. ಕರುಣಾಕರನ್‌ “ಉದಯವಾಣಿ’ಗೆ ಮಾಹಿತಿ ನೀಡಿದರು.

ಕರಾವಳಿ ಸೇರಿದಂತೆ ಹಲವು ಭಾಗಗಳಲ್ಲಿ ಈಗಾಗಲೇ ಪಲ್ಯ ಮತ್ತಿತರ ರೂಪದಲ್ಲಿ ಹಲಸಿನ ಕಾಯಿ ಬಳಸಲಾಗುತ್ತಿದೆ. ಆದರೆ, ಹೆಚ್ಚು ನಾರಿನಾಂಶ ಇರುವ ತಳಿಯನ್ನು ಪರಿಚಯಿಸುವುದು ನಮ್ಮ ಉದ್ದೇಶ. ಯಾಕೆಂದರೆ, ಜನ ಅದರಲ್ಲೂ ನಗರವಾಸಿಗಳು ಮಲಬದ್ಧತೆ, ಗ್ಯಾಸ್ಟ್ರಿಕ್‌ ಸೇರಿದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದಕ್ಕೆ ನಾರಿನಾಂಶ ಇರುವ ಹಲಸಿನಕಾಯಿ ಆಹಾರ ಪದಾರ್ಥ ಹೆಚ್ಚು ಅನುಕೂಲ ಆಗುತ್ತದೆ. ಈ ಹಿನ್ನೆಲೆಯಲ್ಲಿ ಉದ್ದೇಶಿತ ಸಂಶೋಧನೆ ಹೆಚ್ಚು ಮಹತ್ವ ಪಡೆದುಕೊಂಡಿದೆ. ಮುಂದೊಂದು ವರ್ಷದಲ್ಲಿ ಸೂಕ್ತ ತಳಿಯೊಂದನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಕೇವಲ ನಾರಿನಾಂಶದ ಆಹಾರ ಬಳಕೆ ಅಲ್ಲ; ಚಿಪ್ಸ್‌, ಹಣ್ಣು, ಜ್ಯೂಸ್‌ ಸೇರಿದಂತೆ ಬಹು ಪಯೋಗಿ ಗುಣ ಗಳನ್ನು ಹೊಂದಿ ರುವ, ಹೆಚ್ಚು ತೊಗಟೆ ಇರದ, ಸುಲಭವಾಗಿ ಕತ್ತರಿಸಬಹುದಾದ ಹಲಸಿನ ತಳಿ ಅಭಿವೃದ್ಧಿ ಮಾಡ ಲಾಗುತ್ತಿದೆ. ಇದರಿಂದ ರೈತರು ಮಾರುಕಟ್ಟೆ ಆಧರಿಸಿ ಹಣ್ಣು ಮತ್ತು ಕಾಯಿ ಎರಡರಿಂದಲೂ ಆದಾಯ ಗಳಿಸಲು ಸಾಧ್ಯವಾಗುತ್ತದೆ. ಸಹಜ ವಾಗಿಯೇ ಲಾಭ ಹೆಚ್ಚಾಗುತ್ತದೆ ಎಂದು ಮಾಹಿತಿ ನೀಡಿದರು.

ಡ್ರ್ಯಾಗನ್‌ ಫ್ರೂಟ್‌ ಸಸಿಗಳು ಕೂಡ ಮೇಳದಲ್ಲಿ ಹೆಚ್ಚು ಬೇಡಿಕೆ ಗಿಟ್ಟಿಸಿದವು. 600 ಕೆಂಪು ಮತ್ತು 1,000 ಬಿಳಿ ಡ್ರ್ಯಾಗನ್‌ ಫ್ರೂಟ್‌ನ ಸಸಿಗಳನ್ನು ಮಾರಾಟಕ್ಕಿಡಲಾಗಿತ್ತು. ಕೆಲವೇ ಕೆಲವು ಸಸಿಗಳು ಉಳಿದಿವೆ. ಖರೀದಿಸಿದವರು ಬಹುತೇಕ ರೈತರು ಆಗಿದ್ದಾರೆ. ಗುರುವಾರ ಮತ್ತಷ್ಟು ಸಸಿಗಳನ್ನು ಮಾರಾಟಕ್ಕಿಡಲಾಗುವುದು ಎಂದು ವಿಜ್ಞಾನಿಗಳು ತಿಳಿಸಿದರು.

ಅರ್ಧ ಎಕರೆಯಲ್ಲಿ ಮಾಸಿಕ 40 ಸಾವಿರ ಗಳಿಕೆ!: ಕೇವಲ ಅರ್ಧ ಎಕರೆ ಜಾಗದಲ್ಲಿ ರೈತನೋರ್ವ ಮಾಸಿಕ 40 ಸಾವಿರ ರೂ. ಲಾಭ ಎಣಿಸುತ್ತಿದ್ದಾರೆ ಎಂದರೆ ನೀವು ನಂಬಲೇ ಬೇಕು!. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಬಾಳೇಪುರ ಗ್ರಾಮದ ರೈತ ಮಹದೇವಯ್ಯ ಮಾಸಿಕ ಸರಾಸರಿ 40 ಸಾವಿರ ರೂ. ಉಳಿತಾಯ ಮಾಡುತ್ತಿದ್ದಾರೆ. ಇವರ ಬಳಿ, 4ಎಕರೆ ಜಮೀನಿದ್ದು ಆ ಪೈಕಿ ಅರ್ಧ ಎಕರೆಯಲ್ಲಿ ಸುಗಂಧರಾಜ ಹೂ ಬೆಳೆಯುತ್ತಿದ್ದಾರೆ. ಕೇವಲ ಪಿಯುಸಿ ಓದಿದ್ದರೂ ಅವರ ಕೈಹಿಡಿದ ಬೆಳೆಯಿಂದ “ರಾಜ’ನಂತೆ ಜೀವನ ಸಾಗಿಸುತ್ತಿದ್ದಾರೆ.

ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್‌ಆರ್‌) ವಿಜ್ಞಾನಿಗಳ ಸಲಹೆ ಮೇರೆಗೆ ಸುಗಂಧರಾಜ ಬಿತ್ತನೆ ಮಾಡಿದರು. ಪರಿಣಾಮ ಕಳೆದ 3 ವರ್ಷಗಳಿಂದ ನಿರಂತರವಾಗಿ ಬೆಳೆ ತೆಗೆಯುತ್ತಿದ್ದು ಕೆ.ಜಿ.ಗೆ ಕನಿಷ್ಠ 50 ರೂ. ಮೇಲ್ಪಟ್ಟು ಮಾರಾಟ ಆಗುತ್ತಿದೆ. ಅವರ ಈ ಸಾಧನೆ ಗುರುತಿಸಿ ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ತೋಟಗಾರಿಕೆ ಮೇಳದಲ್ಲಿ ಗೌರವಿಸಲಾಯಿತು.

“ಮೂರೂವರೆ ಎಕರೆ ಜಮೀನಿನಲ್ಲಿ ರೇಷ್ಮೆ ಬೆಳೆ ಜತೆಗೆ 7 ಸೀಮೆ ಹಸುಗಳನ್ನು ಸಾಕುತ್ತಿದ್ದೇನೆ. ಉಳಿದ ಅರ್ಧ ಎಕರೆಯಲ್ಲಿ ಮಾತ್ರ ಸುಗಂಧರಾಜ ಬೆಳೆಯುತ್ತಿದ್ದೇನೆ. ಸುಗಂಧ ರಾಜದಿಂದಲೇ ಪ್ರತಿ ತಿಂಗಳು ಕನಿಷ್ಠ 40 ಸಾವಿರ ರೂ. ಉಳಿತಾಯ ಆಗುತ್ತಿದೆ. ನನ್ನ ಸಹೋದರ ಪೊಲೀಸ್‌ ಕಾನ್ಸ್‌ಟೇಬಲ್‌ ಆಗಿದ್ದು, ಅವನಿಗಿಂತ ಕಡಿಮೆ ಅವಧಿ ಎಂದರೆ 8 ತಾಸು ದುಡಿಮೆ ಮಾಡಿ, ಹೆಚ್ಚು ಆದಾಯ ಗಳಿಸುತ್ತಿದ್ದೇನೆ. ನೌಕರಿ ಬಂದರೂ ತಂದೆ-ತಾಯಿ ಹೋಗುವುದು ಬೇಡ ಎಂದರು. ಹೀಗಾಗಿ ಕೃಷಿಯಲ್ಲಿ ತೊಡಗಿದೆ’ ಎಂದು “ಉದಯವಾಣಿ’ಯೊಂದಿಗೆ ಅನುಭವ ಹಂಚಿಕೊಂಡರು.

ಮಳೆ ನೀರಲ್ಲಿ ಬಾಳೆ!: ಇದೇ ರೀತಿ, ಆನೇಕಲ್‌ನ ಎಂ.ಕೆಂಪರಾಜು, ಮಳೆಯಾಶ್ರಿತ ಭೂಮಿಯಲ್ಲಿ ಬಾಳೆ ಬೆಳೆದು ಗಮನ ಸೆಳೆದಿದ್ದಾರೆ. “ಮೂರೂವರೆ ಎಕರೆಯಲ್ಲಿ ವಾರ್ಷಿಕ 13 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. ಬೆಳೆಗೆ ನೀರುಣಿಸಲು ಮಳೆನೀರು ಆಶ್ರಯಿಸಿದ್ದೇನೆ. ಇದಕ್ಕಾಗಿ ಜಮೀನಿನಲ್ಲಿ 15 ಲಕ್ಷ ವೆಚ್ಚದಲ್ಲಿ ಒಂದು ಕೋಟಿ ಲೀ. ನೀರು ಸಂಗ್ರಹ ಸಾಮರ್ಥ್ಯದ ಹೊಂಡ ನಿರ್ಮಿಸಿದ್ದೇನೆ’ ಎಂದು ಹೇಳಿದರು. ಮುಕ್ತ ವಾತಾವರಣದಲ್ಲೇ “ಜಿ-9′ ಬಾಳೆ ಬೆಳೆಯುತ್ತಿದ್ದು, ಹೊಂಡದಲ್ಲಿ ಸಾವಯವ ಮೀನುಗಳನ್ನೂ ಬಿಟ್ಟಿದ್ದೇನೆ. ಇದಕ್ಕಿಂತ ಮುನ್ನ ಐಐಎಚ್‌ಆರ್‌ ಅಭಿವೃದ್ಧಿಪಡಿಸಿದ ಅರ್ಕ ಬಾಳೆ ಸಿಂಪಡಣೆ ಮತ್ತು ಬಾಳೆ ಗೊನೆಗೆ ನೇರ ಪೋಷಕಾಂಶಗಳ ಮಿಶ್ರಣ ನೀಡುವ ತಂತ್ರಜ್ಞಾನ ಅಳವಡಿಸಿದ್ದರಿಂದ ಲಾಭ ಪಡೆಯಲು ಸಾಧ್ಯವಾಗಿದೆ’ ಎಂದು ವಿವರಿಸಿದರು. ಇದೇ ವೇಳೆ ಇನ್ನೂ 6 ಜನ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.

ಉತ್ಪಾದನೆ ಜತೆಗೆ ಸಂಸ್ಕರಣೆಗೂ ಆದ್ಯತೆ ಅಗತ್ಯ:”ತೋಟಗಾರಿಕೆ ಬೆಳೆಗಳ ಉತ್ಪಾದನೆ ಹೆಚ್ಚಳದ ಜತೆಗೆ ಸಂಸ್ಕರಣೆಗೂ ಆದ್ಯತೆ ನೀಡುವ ಅವಶ್ಯಕತೆ ಇದೆ ಎಂದು ಕೃಷಿ ಅನುಸಂಧಾನ ಪರಿಷತ್ತು (ಐಸಿಎಆರ್‌) ಮಹಾ ನಿರ್ದೇಶಕ ಡಾ.ಟಿ.ಮಹಾಪಾತ್ರ ಹೇಳಿದರು.ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್‌ಆರ್‌) ಹೆಸರುಘಟ್ಟ ಆವರಣದಲ್ಲಿ 4 ದಿನ ಹಮ್ಮಿಕೊಂಡಿರುವ “ರಾಷ್ಟ್ರೀಯ ತೋಟಗಾರಿಕೆ ಮೇಳ-2020’ಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.

ಭಾರತ ಈಗಾಗಲೇ ವಿವಿಧ ದೇಶಿ ಆಹಾರ ಬೆಳೆ ಬೆಳೆಯುವ ಮೂಲಕ ಸ್ವಾವಲಂಬಿಯಾಗಿದೆ. ಈ ನಿಟ್ಟಿನಲ್ಲಿ ಸಾಗಿ ಇನ್ನೂ ಅಧಿಕ ಪ್ರಮಾಣದಲ್ಲಿ ಬೆಳೆ ಬೆಳೆಯವುದರ ಜತೆಗೆ ಸಂಸ್ಕರಣೆಗೂ ಒತ್ತು ನೀಡಬೇಕು. ಒಟ್ಟಾರೆ ಇದೆಲ್ಲದರ ಗುರಿ 2022ರ ವೇಳೆಗೆ ರೈತರ ಆದಾಯ ದುಪ್ಪಟ್ಟುಗೊಳಿಸುವುದಾಗಿರಬೇಕು ಎಂದರು. ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಕೃಷಿ ಸಂಸ್ಥೆಗಳು ಹಾಗೂ ಸರ್ಕಾರ ಸಂಸ್ಕರಣೆಗೆ ಹೆಚ್ಚಿನ ಒತ್ತು ನೀಡಬೇಕು. ಆ ಮೂಲಕ ರೈತರಿಗೆ ಹೆಚ್ಚು ಲಾಭವಾಗುತ್ತದೆ ಎಂದರು.

ಭಾರತದ ತೋಟಗಾರಿಕೆ ಕ್ಷೇತ್ರದಿಂದ ವಾರ್ಷಿಕ ಸುಮಾರು 350 ದಶಲಕ್ಷ ಟನ್‌ ಆಹಾರ ಉತ್ಪಾದನೆಯಾಗುತ್ತಿದೆ. ಈ ಪ್ರಗತಿಗೆ ಕೇಂದ್ರ ಸರ್ಕಾರದ ಯೋಜನೆ, ಸಂಶೋಧನಾ ಕೃಷಿ-ತೋಟಗಾರಿಕೆ ಸಂಸ್ಥೆಗಳ ತಂತ್ರಜ್ಞಾನ ಆವಿಷ್ಕಾರ, ಅಳವಡಿಕೆಯಿಂದ ಈ ಪ್ರಗತಿ ಸಾಧ್ಯವಾಗಿದೆ ಎಂದು ತಿಳಿಸಿದರು. ಇದೇ ವೇಳೆ ಐಐಎಚ್‌ಆರ್‌ನಿಂದ ಆನ್‌ಲೈನ್‌ ಸೀಡ್‌ ಪೋರ್ಟಲ್‌ ಮತ್ತು “ಬಾಗವಾನಿ’ ಮೊಬೈಲ್‌ ಆ್ಯಪ್‌ ಬಿಡುಗಡೆ ಮಾಡಲಾಯಿತು. ಉಪ ಮಹಾ ನಿರ್ದೇಶಕ (ಮೀನು ಗಾರಿಕೆ) ಡಾ.ಜಾಯಕೃಷ್ಣ ಜಿನಾ, ಐಐಎಚ್‌ಆರ್‌ ನಿರ್ದೇಶಕ ಡಾ.ಎಂ.ಆರ್‌.ದಿನೇಶ್‌ ಇತರರಿದ್ದರು.

ಸಸ್ಯ ಮಾಂಸಾಹಾರಿ ವಿಶೇಷ: ಉತ್ತರ ಭಾರತದಲ್ಲಿ ಹಲಸನ್ನು “ಸಸ್ಯ ಮಾಂಸಾಹಾರಿ’ ಎಂದು ವಿಶ್ಲೇಷಿಸಲಾಗುತ್ತದೆ. ಎಳೆಯ ಕಾಯಿಯನ್ನು ಬೇಯಿಸಿದಾಗ, ಅದು ಮಾಂಸದ ರೀತಿಯಲ್ಲಿ ಕಾಣುತ್ತದೆ. ಹಾಗೂ ಅಗಿಯುವಾಗ ಕೂಡ ಹೆಚ್ಚು-ಕಡಿಮೆ ಮಾಂಸಾಹಾರ ಸೇವನೆ ಅನುಭವ ನೀಡುತ್ತದೆ. ಒಂದು ವೇಳೆ ಹೆಚ್ಚು ನಾರಿನಾಂಶ ಇರುವ ಸೇವನೆಗೆ ಯೋಗ್ಯವಾದ ತಳಿಯನ್ನು ಐಐಎಚ್‌ಆರ್‌ ಅಭಿವೃದ್ಧಿಪಡಿಸಿದರೆ, ಆ ಭಾಗದ ಜನರಿಗೂ ಹೆಚ್ಚು ಅನುಕೂಲ ಆಗುತ್ತದೆ. ಕೊಬ್ಬಿನಂಶವೂ ಇದರಲ್ಲಿ ಇಲ್ಲದಿರುವುದು ಪೂರಕ ಅಂಶವಾಗಿದೆ. ಆಗ, ಮಾಂಸಾಹಾರಕ್ಕೆ ಪರ್ಯಾಯ ಇದಾಗಬಹುದು ಎಂಬ ಲೆಕ್ಕಾಚಾರವೂ ಇದೆ ಎನ್ನಲಾಗಿದೆ. ಆದರೆ, ಈ ನಿಟ್ಟಿನಲ್ಲಿ ಸಾಧಕ-ಬಾಧಕಗಳ ಕುರಿತು ಅಧ್ಯಯನ ಆಗಬೇಕಾಗುತ್ತದೆ.

ಒಂದು ಕುಟುಂಬಕ್ಕೆ ಮೂರು ಸಸಿ ಮಾತ್ರ!: ನಾಲ್ಕನೇ ರಾಷ್ಟ್ರೀಯ ತೋಟಗಾರಿಕೆ ಮೇಳದಲ್ಲೂ “ಸಿದ್ದು’ ಹಲಸು ಹೆಚ್ಚು ಬೇಡಿಕೆ ಗಿಟ್ಟಿಸಿಕೊಂಡಿತು. ಈ ಹಲಸಿನ ಸಸಿಯ ಖರೀದಿಗಿಗಾಗಿ ಜನ ಅಕ್ಷರಶಃ ಮುಗಿಬಿದ್ದರು. ಹಾಗಾಗಿ, ಒಂದು ಕುಟುಂಬಕ್ಕೆ ಮೂರು ಸಸಿಗಳು ಮಾತ್ರ ಎಂಬ ನಿಯಮ ವಿಧಿಸಿ ಮಾರಾಟ ಮಾಡಲಾಯಿತು!ಮೇಳದ ಹಿನ್ನೆಲೆಯಲ್ಲಿ ಸಾವಿರ ಸಸಿಗಳನ್ನು ಐಐಎಚ್‌ಆರ್‌ ಮಾರಾಟಕ್ಕೆ ಇಟ್ಟಿತ್ತು. ಕೇವಲ 3 ತಾಸುಗಳಲ್ಲಿ 850 ಸಸಿಗಳು ಬಿಕರಿಯಾಗಿದ್ದವು. ಜನ ಸಾಲುಗಟ್ಟಿ ನಿಂತು ಉಳಿದ 150 ಸಸಿಗಳನ್ನು ಖರೀದಿಸಿದರು.

12.30ಕ್ಕೆ ಎಲ್ಲವೂ ಖಾಲಿಯಾಗಿದ್ದವು. ಒಂದು ಸಸಿಗೆ 150 ರೂ. ವಿಧಿಸಲಾಗಿತ್ತು ಎಂದು ಡಾ.ಕರುಣಾಕರನ್‌ ತಿಳಿಸಿದರು. ಕಳೆದ ಮೇಳದಲ್ಲೂ “ಸಿದ್ದು’ಗೆ ಅತ್ಯಧಿಕ ಬೇಡಿಕೆ ಕೇಳಿಬಂದಿತ್ತು. ತುಮಕೂರಿನ ಚೇಳೂರು ಗ್ರಾಮದ “ಸಿದ್ದು’ ತಳಿ ವಿಶೇಷ ಗುಣಗಳನ್ನು ಹೊಂದಿದೆ. ಉಳಿದ ಹಲಸಿಗೆ ಹೋಲಿಸಿದರೆ ಸಿದ್ದು’ ಸ್ವಲ್ಪ ಭಿನ್ನ. ಇದು ಹೆಚ್ಚು ಸಿಹಿಯಾಗಿದೆ. ಚಿಕ್ಕ ಗಾತ್ರದ್ದಾಗಿದ್ದು, ಅಬ್ಬಬ್ಬಾ ಎಂದರೆ 20 ತೊಳೆಗಳನ್ನು ಹೊಂದಿದೆ. ಇದರಿಂದ ತೆಗೆದುಕೊಂಡುಹೋಗಲು ತುಂಬಾ ಸುಲಭ. ಜನರಲ್ಲಿ ಕೂಡ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತಿ ಮೂಡಿದೆ ಎಂದು ಹೇಳಿದರು.

* ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

Maha-Election

Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!

HDD–By-election

By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್‌.ಡಿ.ದೇವೇಗೌಡ ಗುಡುಗು

ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Super App: ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

High-Court

Kambala: ಪೆಟಾ ಪಿಐಎಲ್‌; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್‌

CM-Shiigavi-2

MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ

vidan-soudha-kannada

Golden Jubilee: ಕನ್ನಡವೇ ಅಧಿಕಾರಿಗಳ‌ ಹೃದಯದ ಭಾಷೆ ಆಗಲಿ

KSRTC

Transport: ಕೆಎಸ್ಸಾರ್ಟಿಸಿ ದಾಖಲೆ: ಒಂದೇ ದಿನ 1.23 ಕೋಟಿ ಮಂದಿ ಪ್ರಯಾಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Bengaluru: ಸುರಂಗ ರಸ್ತೆ ಕಾಮಗಾರಿಗೆ ಭಾರತ-ಚೀನಾ ಸಂಬಂಧ ಅಡ್ಡಿ! 

Fraud: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ ಇಬ್ಬರಿಗೆ 93 ಲಕ್ಷ ರೂ. ವಂಚನೆ

Fraud: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ ಇಬ್ಬರಿಗೆ 93 ಲಕ್ಷ ರೂ. ವಂಚನೆ

Digital arrest: ವೃದ್ಧೆಗೆ ಡಿಜಿಟಲ್‌ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್‌ ವಂಚಕ

Digital arrest: ವೃದ್ಧೆಗೆ ಡಿಜಿಟಲ್‌ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್‌ ವಂಚಕ

5

Drunk & Drive Case: ಅತಿ ವೇಗದ ಚಾಲನೆ: 522 ಕೇಸ್‌, 1.29 ಲಕ್ಷ ದಂಡ

Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ

Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Maha-Election

Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!

HDD–By-election

By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್‌.ಡಿ.ದೇವೇಗೌಡ ಗುಡುಗು

ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Super App: ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

High-Court

Kambala: ಪೆಟಾ ಪಿಐಎಲ್‌; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್‌

CM-Shiigavi-2

MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.