![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Feb 7, 2020, 3:09 AM IST
ಕಲಬುರಗಿ: “ಕುರಿತೋದದೆಯುಂ ಕಾಯಕ ಪ್ರಯೋಗ ಪರಿಣಿತಮತಿಗಳ್’- ಇಂದು ನುಡಿಹಬ್ಬದಲ್ಲಿ ಕವಿರಾಜಮಾರ್ಗಕಾರ ಇದ್ದಿದ್ದರೆ ಬಹುಶ: ಹೀಗೆಯೇ ಹಾಡುತ್ತಿದ್ದ. ಕವಿರಾಜಮಾರ್ಗಕಾರನ ಹುಟ್ಟೂರಿನವರು ಓದದೆ ಕಾವ್ಯಬಲ್ಲವರು, ಓದದೆಯೂ ಕಾಯಕ ಪರಿಣಿತರು! ಇಡೀ ಅಕ್ಷರ ಹಬ್ಬದ ವಿಜೃಂಭಣೆಯ ಯಶಸ್ಸಿನ ಹಿಂದೆ, ಕನ್ನಡಾಸಕ್ತರ ಕ್ಷಣಕ್ಷಣದ ಖುಷಿಗಳ ಹಿಂದೆ ನೂರಾರು ಅನಕ್ಷರಸ್ಥರ ಬೆವರಿದೆ; ಕಾಯಕ ತಪಸ್ಸಿದೆ.
ಲಕ್ಷಾಂತರ ಜನರಿರುವ ಇಡೀ ಸಮ್ಮೇಳನಕ್ಕೆ ನಿತ್ಯ ಊಟ ಹಾಕುವ 68 ವರ್ಷದ ಬಾಬುಲಾಲ್ ಪ್ರಜಾಪತಿ, ಶಾಲೆ ಕಲಿತವರೇ ಅಲ್ಲ. ಅಡುಗೆಯಲ್ಲಿ ಬಲು ಜಾಣ. 1,200 ಬಾಣಸಿಗರು, ಅಡುಗೆ ಸಹಾಯಕರನ್ನು ಸಂಘಟಿಸಿಕೊಂಡು, ನಾನಾ ಭಾಗಗಳಿಂದ ತರಕಾರಿಯನ್ನು ಟ್ರಕ್ಕಿನಲ್ಲಿ ತುಂಬಿಕೊಂಡು ಹುಬ್ಬಳ್ಳಿಯಿಂದ ಕಲಬುರಗಿಗೆ ಬಂದಿದ್ದಾರೆ. ಅಕ್ಷರ ಹಬ್ಬಕ್ಕೆ ಬಂದವರ ಹೊಟ್ಟೆ ಸಂತೃಪ್ತವಾಗುವಂತೆ ನೋಡಿಕೊಳ್ಳುವುದರಲ್ಲಿಯೇ ಖುಷಿ ಕಾಣುವ “ನಳಮಹಾರಾಜ’.
“ಸಾಲಿ ಕಲಿಯೋ ಭಾಗ್ಯ ಸಿಕ್ಕಿಲ್ರೀ. ಆದ್ರೂ ನಾನು, ಬೇಂದ್ರೆಯ ಕುಣಿಯೋಣು ಬಾರಾ… ಭಾಳ್ ಚೊಲೊ ಹಾಡ್ತೀಣ್ರೀ’ ಎನ್ನುತ್ತಾ, ಸೌಟು ತಿರುಗಿಸುತ್ತಾ, ಕುದಿವ ಕಡಾಯಿಗಳ ಮುಂದೆ ನಿಂತು, ತಣ್ಣಗೆ ಕೆಲಸ ಮಾಡುತ್ತಿದ್ದಾರೆ. ಇಷ್ಟು ಜನ ಸೇರಿದ ಮೇಲೆ, ತಾತ್ಕಾಲಿಕ ಪಾಯಿಖಾನೆಗಳ ದು:ಸ್ಥಿತಿ ಕೇಳಬೇಕೆ? ಕಮೋಡ್‌ಗಳು ಕಟ್ಟಿಕೊಂಡರೆ, ಸಮ್ಮೇಳನದ ವೇದಿಕೆಯಲ್ಲಿ ಕುಳಿತ ಗಣ್ಯರೂ ಮೂಗು ಮುಚ್ಚಿಕೊಳ್ಳಬೇಕು;
ಅಷ್ಟು ಸನಿಹ ಇಲ್ಲಿ ಗಣ್ಯರ ಶೌಚಾಲಯಗಳಿವೆ. ಆ ಗೂಡುಗಳ ಬಾಜುವಿನಲ್ಲಿ ಬೀಡುಬಿಟ್ಟಂತೆ ನಿಂತಿರುವ ಹಣ್ಣುಜೀವ, ಸೂರ್ಯಕಾಂತ. 65ರ ಪ್ರಾಯ, ಬಿಸಿಲಲ್ಲೇ ಬೆಂದಂತೆ ತೋರುತ್ತಾರೆ. ಓದು-ಬರಹ ಎದೆಗೆ ಬಿದ್ದಿಲ್ಲ. “ಈ ವಾಸ್ನೆ ನೋಡಿ ಏನೂ ಅನ್ಸಂಗಿಲ್ರೀ’ ಎನ್ನುವಾಗ ಇವರ ಹೃದಯದೊಳಗೆ, ಕನ್ನಡದ ಗಂಧ ಘಮಗುಡುತ್ತಿತ್ತು.
ಈ ಬಾರಿಯ ಆವರಣ ಸ್ವಚ್ಛ ಬೇರೆಲ್ಲ ಸಮ್ಮೇಳನಕ್ಕೆ ಹೋಲಿಸಿದರೆ, ಈ ಬಾರಿಯ ಆವರಣ ಬಹಳ ಸ್ವಚ್ಛ. ಕಲಬುರಗಿಗೆ “ಧೂಳಿನ ನಗರಿ’ ಎಂಬ ಹಳೇ ಅಪವಾದ ತಟ್ಟದೇ ಇರಲಿಯೆಂದು, 100 ಕೂಲಿಕಾರರು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. “ಇವರೆಲ್ಲರೂ ಅನಕ್ಷರಸ್ಥರು. ಸಹಿ ಹಾಕೋಕೂ ಬರಂಗಿಲ್ರೀ’ ಎನ್ನುತ್ತಾರೆ. ಕೂಲಿ ಕಾರ್ಮಿಕರ ಉಸ್ತುವಾರಿ ಹೊತ್ತ ಲೋಹಿತ್. ಕಡು ಬಡತನ, ಆಳುವ ಸರ್ಕಾರದ ದಿವ್ಯ ನಿರ್ಲಕ್ಷ್ಯಕ್ಕೆ ತುತ್ತಾದ ಪ್ರತಿಮೆಗಳಂತೆ ತೋರುತ್ತಿದ್ದರು.
“ಟೇಮ್ ಆತು ಅಂತ ನಾವು ಡ್ನೂಟಿ ಬಿಟ್ಟು ಹೋಗಲ್ರೀ… ನಾವೇ ಹೋದ್ರೆ, ತಿಳಿದವರಾರೂ ಸಮ್ಮೇಳನದಾಗ ಎಂಜಲು ಬಾಚಲ್ರೀ, ಕಸ ಎತ್ತಂಗಿಲ್ರೀ. ನಾವಲ್ಲದೇ ಇನ್ಯಾರಿ ಸರ ಮಾಡೋರು? ಇಷ್ಟ್ ಜನ ಸೇರಿದ್ದು ನನ್ನ ಬದುಕಲ್ಲೇ ನೋಡಿಲ್ರೀ. ಇವರ ಸೇವೆ ಮಾಡೋ ಅವ್ಕಾಶ ಸಿಕ್ಕಿದ್ದೇ ನನ್ ಪುಣ್ಯ’ ಎನ್ನುತ್ತಾ ಪೊರಕೆ ಹಿಡಿದು ಗುಡಿಸುತ್ತಲೇ ಇದ್ದ ಭಾರತೀಬಾಯಿಯ ಕಣ್ಣುಗಳಲ್ಲಿ ಕಂಡಿದ್ದು ಬಸವಣ್ಣ ಹಚ್ಚಿದ ಕಾಯಕದ ಹಣತೆ.
ಬೆಳಗ್ಗೆ ಐದಕ್ಕೆ ಬಂದು, ರಾತ್ರಿ ಹತ್ತಾದರೂ ಇವರ ಕೆಲಸ ಮುಗಿದಿರುವುದಿಲ್ಲ. ಕೇವಲ ಇವರು ಮಾತ್ರವೇ ಅಲ್ಲ. ಇಲ್ಲಿ ಸೋಮನ ಕುಣಿತದವರು, ಸುಗ್ಗಿ ಹಾಡಿಗೆ ಹೆಜ್ಜೆ ಹಾಕಿದ ವೃದ್ಧೆಯರಾರೂ, ಸ್ಲೇಟ್ ಬಳಪ ಹಿಡಿದವರಲ್ಲ. ಇವರ ಬದುಕೇ ನೋವುಂಡ ಅಖಂಡ ಕಾವ್ಯ. ಸಮ್ಮೇಳನ, ಅಕ್ಷರಿಗಳಿಗೆ ಜ್ಞಾನದೂಟ ನೀಡುತ್ತಿದ್ದರೆ, ಅನಕ್ಷರಿಗಳಿಗೆ ದಿನಗೂಲಿಯಾಗಿ ಹೊಟ್ಟೆ ತುಂಬಿಸಿ, ಸಾರ್ಥಕತೆ ಮೆರೆದಿತ್ತು.
ಕಲಬುರಗಿ ಸಾಕ್ಷರತೆ ಪ್ರಮಾಣದಲ್ಲಿ ರಾಜ್ಯದಲ್ಲಿಯೇ 26ನೇ ಸ್ಥಾನದಲ್ಲಿದೆ (2011 ಜನಗಣತಿ ಆಧಾರ). ಬಡತನದ ಕಾರಣ ಜನರು ಗುಳೆ ಹೋಗುವುದರಿಂದ, ಇಲ್ಲಿನ ಹಲವರು ಶಾಲೆಯ ಮೆಟ್ಟಿಲು ಹತ್ತುವುದಿಲ್ಲ.
-ಪ್ರೊ. ಸಂಗೀತಾ ಕಟ್ಟಿಮನಿ, ಶಿಕ್ಷಣ ತಜ್ಞೆ, ಕಲಬುರಗಿ
ಕನ್ನಡಿಗರೆಲ್ಲರ ಸಂಗಮ ಕಲಬುರಗಿ ಸಾಹಿತ್ಯ ಸಮ್ಮೇಳನದಲ್ಲಿ ಆಗಿದೆ. ಸಾಹಿತ್ಯ ಕುರಿತ ಹಲವು ಅರ್ಥಪೂರ್ಣ ಗೋಷ್ಠಿಗಳು ನಡೆಸಿದ್ದು ಮನಸಿಗೆ ಖುಷಿ ನೀಡಿದೆ.
-ಪೂಜಾ ಬೋನ್ಸ್ಲೆ
ಸಾಹಿತ್ಯ ಸಮ್ಮೇಳನವನ್ನು ಅಚ್ಚುಕಟ್ಟಾಗಿ ಆಯೋಜಕರು ನಿರ್ವಹಿಸಿ¨ªಾರೆ. ಊಟ ಸೇರಿ ಎಲ್ಲಿಯೂ ಯಾವುದೇ ಸಮಸ್ಯೆ ಕಂಡು ಬರಲಿಲ್ಲ. ಇದಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುವೆ.
-ಭಾರತಿ ಅಪ್ಪಾಸಾಹೇಬ್
ಇದೇ ಮೊದಲ ಬಾರಿಗೆ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದೇನೆ. ಅಬ್ಟಾ, ಎಷ್ಟೊಂದು ಸಂಖ್ಯೆ! ಕನ್ನಡಿಗರ ಹೃದಯದಲ್ಲಿ ಸಾಹಿತ್ಯ ಅಭಿರುಚಿ ಅರಳಿ, ಸಮ್ಮೇಳನ ಸಾರ್ಥಕವಾಗಲಿ.
-ವಂದನಾ
ಮಕ್ಕಳ ಸಾಹಿತ್ಯದ ಕುರಿತ ವಿಚಾರಗಳಿಗೆ ಮತ್ತಷ್ಟು ಗೋಷ್ಠಿಗಳ ಅಗತ್ಯವಿತ್ತು. ಕಾರಣ, ಇಂದಿನ ಮಕ್ಕಳೇ ಕನ್ನಡದ ಭವಿಷ್ಯ. ಅವರಿಗೆ ಸಾಹಿತ್ಯದ ಮೇಲೆ ಪ್ರೀತಿ ಹುಟ್ಟಿಸುವ ಕೆಲಸ ಆಗಬೇಕಿತ್ತು.
-ವಿದ್ಯಾಶ್ರೀ ವಿ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಉದ್ಯೋಗ ಸೇರಿದಂತೆ ಹಲವು ರೀತಿಯ ಸಮಸ್ಯೆಗಳಿವೆ. ಈ ಕುರಿತು ಮತ್ತಷ್ಟು ಚರ್ಚೆಗೆ ಸಾಹಿತ್ಯ ಸಮ್ಮೇಳನ ವೇದಿಕೆ ಆಗಬೇಕಾಗಿತ್ತು.
-ಪ್ರಭಾಕರ್
* ಕೀರ್ತಿ ಕೋಲ್ಗಾರ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.