ಹೀಗೆ ಬಂದು ಹಾಗೆ ಹೋದ ಡಿವಿಡಿ ಪ್ಲೇಯರ್
Team Udayavani, Feb 8, 2020, 5:00 AM IST
ಈ ಕಥೆಯೂ ಹಾಗೆಯೇ. ಅಲ್ಪಾಯುಷಿಗಿಂತ ಸ್ವಲ್ಪ ಹೆಚ್ಚಿನ ಆಯಸ್ಸು ಪಡೆದದ್ದು ಡಿವಿಡಿ ಪ್ಲೇಯರ್. ವಿಸಿಡಿ ಪ್ಲೇಯರ್‌ನಷ್ಟು ಆಯಸ್ಸು ಪಡೆದು ಈ ಬುವಿಗೆ ಬಂದಿರಲಿಲ್ಲ ಡಿವಿಡಿ ಪ್ಲೇಯರ್. ಹಾಗಾಗಿ ಆಯಸ್ಸು ಪಡೆದರೂ ಒಂದಿಷ್ಟು ಕಾಲ ಕತ್ತಲಲ್ಲೇ ಕಳೆಯುವಂತಾದದ್ದು ಸುಳ್ಳಲ್ಲ.
ವಿಎಚ್‌ಎಸ್ ಪ್ಲೇಯರ್ ಪರಿಚಯವಾಗಿದ್ದು 1978ರಲ್ಲಿ. ಅನಂತರ 1982ರಲ್ಲಿ ಸೋನಿ ಕಂಪೆನಿ ವಿಸಿಡಿಯನ್ನು ಅಭಿವೃದ್ಧಿಪಡಿಸಿತು. 90ರ ದಶಕದ ಕೊನೆಯವರೆಗೂ ಇವುಗಳದ್ದೇ ರಾಜ್ಯಭಾರ. ಟಾಕೀಸಿಗೆ ಹೋಗದ ಕುಟುಂಬಗಳು ಮನೆಯಲ್ಲೇ ಮನೋರಂಜನೆ ಪಡೆಯಬೇಕಾಗಿದ್ದರೆ ಇವುಗಳನ್ನೇ ಆಶ್ರಯಿಸಬೇಕಿತ್ತು. ಆಗ ದೂರದರ್ಶನವಿದ್ದರೂ, ಕನ್ನಡ ಚಲನಚಿತ್ರಗಳು ಮತ್ತು ಕಾರ್ಯಕ್ರಮ ಬರುತ್ತಿದ್ದದ್ದೇ 1994ರ ಬಳಿಕ .
ತಂತ್ರಜ್ಞಾನದ ವೇಗವೆಂದರೆ ಅದೇ ಶರವೇಗ. ಬಿಲ್ಲಿನಿಂದ ಬಿಟ್ಟ ಬಾಣ ಎಷ್ಟು ವೇಗದಲ್ಲಿ ಗುರಿ ತಲುಪುತ್ತದೋ ಹಾಗೆಯೇ. ಯಾವುದೇ ಹೊಸ ತಾಂತ್ರಿಕ ಅಭಿವೃದ್ಧಿ ಮಾರುಕಟ್ಟೆಗೆ ಪ್ರವೇಶ ಪಡೆದ ಕೂಡಲೇ ಒಂದು ಕ್ಷಣ ಅಲ್ಲೋಲ ಕಲ್ಲೋಲವನ್ನು ಉಂಟು ಮಾಡುತ್ತದೆ. ಅದುವರೆಗೂ ಅದನ್ನೇ ಪರಮ ಸುಖವೆಂದು ಅನುಭವಿಸುತ್ತಿದ್ದವ ಮತ್ತು ತಿಳಿದುಕೊಂಡವನೂ ಒಮ್ಮೆಲೆ ಅದನ್ನು ದೂರಕ್ಕೆಸೆದು ಹೊಸ ಸಂತಸಕ್ಕೆ ಹಾತೊರೆಯುತ್ತಾನೆ.
ಈ ಜೀವನ ರೀತಿಯನ್ನು ಸುಲಭವಾಗಿಸಲೆಂದೇ ಬಂದದ್ದು ಈ ತಾಂತ್ರಿಕ ಅಭಿವೃದ್ಧಿ. ಅದೀಗ ಯಾವ ಕ್ಷೇತ್ರವನ್ನೂ ಬಿಟ್ಟಿಲ್ಲ. ಹೀಗೆಂದ ಮಾತ್ರಕ್ಕೆ ಹಿಂದೆ ಅಭಿವೃದ್ಧಿ ಆಗುತ್ತಿರಲಿಲ್ಲವೆಂದಲ್ಲ. ಆದರೆ, ಆಗ ಅಭಿವೃದ್ಧಿ ಎನ್ನುವುದು ಒಂದು ನಿರ್ದಿಷ್ಟ ಗತಿಯಲ್ಲಿ ಸಾಗುತ್ತಿತ್ತು. ಯಾವುದೇ ಆವಿಷ್ಕಾರದ ಹೊಸ ತಲೆಮಾರೆಂದರೂ ಕನಿಷ್ಠ 15-20 ವರ್ಷಗಳಾದರೂ ಇರುತ್ತಿತ್ತು. ಇದರರ್ಥ ಒಂದು ಸಂಶೋಧನೆಗೆ ಕನಿಷ್ಠ ಆಯಸ್ಸು ಎಂದಿತ್ತು. ಒಂದುವೇಳೆ ಈ ಅವಧಿಯ ಮಧ್ಯೆ ಹೊಸತು ಬಂದರೂ ಅದರ ದರ, ಲಭ್ಯತೆ ಎರಡೂ ಸ್ವಲ್ಪ ನಗರ ಸೀಮಿತವಾಗಿತ್ತು. ಹಾಗಾಗಿ 15 ವರ್ಷದ ಜನಪ್ರಿಯತೆಯ ಬಾಳುವೆಗೇನೂ ಕೊರತೆ ಇರಲಿಲ್ಲ.
ಈಗಿನದ್ದೇ ಬೇರೆ
ಈಗಿನ ತಾಂತ್ರಿಕ ಅಭಿವೃದ್ಧಿಯ ವೇಗದಲ್ಲಿ ಅಲ್ಪಾಯುಷಿಗಳೇ ಹೆಚ್ಚು. ಜತೆಗೆ ಎಲ್ಲದಕ್ಕೂ ಎಲ್ಲವೂ ಪರ್ಯಾಯ ಎನ್ನುವ ಆಲೋಚನೆ. ಇದಿಲ್ಲದಿದ್ದರೆ ಇದನ್ನು ಬಳಸಿ ಎನ್ನುವ ಆಯ್ಕೆಗಳು ನಮ್ಮ ಮುಂದಿವೆ. ಹಾಗಾಗಿಯೇ ಭಗವದ್ಗೀತೆಯ ಪರಿವರ್ತನೆ ಜಗದ ನಿಯಮ ಎನ್ನುವುದು ಈ ಹೊತ್ತಿಗೆ ಹೆಚ್ಚು ಒಪ್ಪುವಂಥದ್ದು. ಅದರಲ್ಲಿ ಸಣ್ಣದೊಂದು ಬದಲಾವಣೆ ಮಾಡಿಕೊಳ್ಳಬೇಕಷ್ಟೇ. ಪರಿವರ್ತನೆ ಎಂದರೆ ಅದನ್ನು ನಾವು ಬದಲಾವಣೆ ಎಂದು ಮಾಡಿಕೊಳ್ಳಬೇಕಷ್ಟೇ.
ಹೆಚ್ಚು ಬಾಳಲಿಲ್ಲ
ಪೇಜರ್‌ಗೆ ಹೋಲಿಸಿದರೆ ಡಿವಿಡಿ ಪ್ಲೇಯರ್‌ನದ್ದು ಸ್ವಲ್ಪ ಹೆಚ್ಚಿನ ಆಯಸ್ಸು. ಸುಮಾರು 30 ವರ್ಷಗಳ ಹಿಂದೆ ಬಂದದ್ದು ವಿಸಿಡಿ (ವಿಸಿಅರ್) ಪ್ಲೇಯರ್. 30 ರಿಂದ 40 ವರ್ಷಗಳ ಕಾಲ ಬದುಕಿದ್ದು ಇದೇ. ಆದರೆ ಡಿವಿಡಿ ಬದುಕಿದ್ದು ಹೆಚ್ಚೆಂದರೆ 15 ವರ್ಷಗಳು. ಈಗಲೂ ಉಸಿರು ಹಿಡಿದು ಬದುಕುತ್ತಿದೆ ಕೆಲವರ ಮನೆಯಲ್ಲಿ.
ಅದೇ ಮೂವತ್ತು ವರ್ಷಗಳ ಹಿಂದೆ ಯಾವುದೇ ಗಣೇಶೋತ್ಸವಗಳಿಗೆ ಹೋದರೆ ರಾತ್ರಿ ಸಿನಿಮಾ ಹಾಕುವುದೇ ಈ ವಿಸಿಡಿ ಯಂತ್ರದಿಂದ. ಮನೆಯಲ್ಲೂ ಮನರಂಜನೆ ಎಂದರೆ ಅದೇ. ಹೊಸ ಸಿನಿಮಾಗಳೂ ಒಂದು ವರ್ಷದೊಳಗೆ ಈ ವಿಸಿಡಿ ಲೈಬ್ರರಿಗೆ ಬರುತ್ತಿತ್ತು. ಊರಿನಲ್ಲಿ ಅದರಲ್ಲೂ ಪೇಟೆಯಲ್ಲಿ ಹತ್ತರಿಂದ 15 ವಿಸಿಡಿ ಲೈಬ್ರರಿಗಳಿರುತ್ತಿದ್ದವು. ಅಲ್ಲಿ ಒಂದಿಷ್ಟು ಕ್ಯಾಸೆಟ್‌ಗಳಿರುತ್ತಿದ್ದವು. ನಾವು ವಿಸಿಡಿ ಯಂತ್ರವೂ ಸೇರಿದಂತೆ 300 ರೂ. ನಷ್ಟು ಹಣವನ್ನು ಅಂಗಡಿಯವನ್ನಲ್ಲಿಟ್ಟು, ಇಬ್ಬರಿಗೂ (ನನಗೂ-ವ್ಯಾಪಾರಿ) ಪರಿಚಯವಿರುವ ವ್ಯಕ್ತಿಯಿಂದ ಶಿಫಾರಸು ಮಾಡಿಸಿ, ವಿಳಾಸ ಬರೆದು ವಿಸಿಡಿಯನ್ನು ತೆಗೆದುಕೊಂಡು ಹೋಗಬೇಕಿತ್ತು ನಮಗೆ ಬೇಕಾದ ಸಿನಿಮಾಗಳ ಕ್ಯಾಸೆಟ್‌ನೊಂದಿಗೆ. ಒಂದು ದಿನದ ಬಾಡಿಗೆ ಸುಮಾರು ನೂರು ರೂ. ಇಷ್ಟೆಲ್ಲಾ ಕೊಟ್ಟು ಮನೆಗೆ ಹೋಗಿ ಎರಡರಿಂದ ಮೂರು ಸಿನೆಮಾ ನೋಡಬೇಕು. ಕೆಲವೊಮ್ಮೆ ನಾಲ್ಕೈದು ಸಿನಿಮಾ ನೋಡಿಬಿಡಬೇಕೆಂಬ ಹಠಕ್ಕೆ ರಾತ್ರಿಯೆಲ್ಲ ಸಿನೆಮಾ ನೋಡಿ ಬಿಡುತ್ತಿದ್ದೆವು. ಹೀಗೇ ನೋಡಿಕೊಂಡಿರುತ್ತಿದ್ದ ಕಾಲದಲ್ಲಿ ಸುಮಾರು 1997-98 ರ ಸುಮಾರಿನಲ್ಲಿ ಪರಿಚಯವಾದದ್ದು ಡಿವಿಡಿ ಪ್ಲೇಯರ್. ಆರಂಭದಲ್ಲಿ ಬಂದದ್ದು ದೊಡ್ಡ ಪೆಟ್ಟಿಗೆ ಮಾದರಿಯಲ್ಲಿ. ಆಮೇಲೆ ಪೋರ್ಟಬಲ್ ಡಿವಿಡಿ ರೂಪದಲ್ಲಿ ಬಂದಿತು. ಆಮೇಲೆ ಅಲ್ಲಿಂದ ದೂರಕ್ಕೆ ಬಂದು ಟೇಪ್‌ರೆಕಾರ್ಡರ್ ಜತೆ ಮದುವೆಯಾಗಿ ಬಂದಿತು. ಕೆಳಗೆ ಕ್ಯಾಸೆಟ್ ಹಾಕಿ ಕೇಳಿದರೆ, ಅದರ ತಲೆ ಮೇಲೆ ತಿರುಗುವ ಡಿವಿಡಿ ಸಿಡಿ ಹಾಕಬಹುದಾದ ಸೌಲಭ್ಯ.
ಹೀಗೆ ತರಹೇವಾರಿ ರೂಪ ತಾಳುವಷ್ಟರಲ್ಲಿ ಬಂದದ್ದು ಕಂಪ್ಯೂಟರ್ ಎಂಬ ಈ ಶತಮಾನದ ಮಾಂತ್ರಿಕ. ಅದರಲ್ಲಿ ಮೊದಲು ಡಿವಿಡಿ ಸೌಲಭ್ಯವಿಲ್ಲವಾದರೂ, ಬಳಿಕ ಡಿವಿಡಿ ಪ್ಲೇಯರ್ ಕಂಪ್ಯೂಟರ್‌ನಲ್ಲೂ ಅಂತರ್ಗತಗೊಂಡಿತು. ಹಾಗೆ ಹೇಳುವುದಾದರೆ ಅದೊಂದು ರೀತಿಯಲ್ಲಿ ರೂಪಾಂತರ. ಇಂಥ ರೂಪಾಂತರ ಮುಗಿಸಿ ಈಗ ಸಂಪೂರ್ಣವಾಗಿ ಬದಿಗೆ ಸರಿದಿದೆ. ಪೆನ್‌ಡ್ರೈವ್ ಬಂದ ಮೇಲಂತೂ
ಡಿವಿಡಿ ಯ ಬದುಕಿಗೆ ತೆರೆ ಬಿದ್ದಿದೆ.
ಇಂದಿಗೂ ಹೇಳುತ್ತೇನೆ, ಈ ಡಿವಿಡಿ ಪ್ಲೇಯರ್ ಗಳು ನನಗೆ ನೆನಪುಗಳನ್ನು ಉಳಿಸಿಲ್ಲ ; ಆದರೆ ವಿಸಿಡಿ ಪ್ಲೇಯರ್ ಮಾತ್ರ ಸಾವಿರಾರು ನೆನಪುಗಳನ್ನು ಕಟ್ಟಿಕೊಟ್ಟಿದೆ. ಅದರಲ್ಲಿ ಎಷ್ಟು ತಾಜಾತನವಿದೆ ಎಂದರೆ, ತಾಂತ್ರಿಕತೆಯ ಬಗೆಗಿನ ಬೆರಗು ಹಾಗೇ ಉಳಿದಿದೆ, ಕೆಸುವಿನ ಎಲೆಯ ಮೇಲೆ ನಿಂತು ಸೂರ್ಯನ ಬೆಳಕಿಗೆ ಹೊಳೆಯುವ ನೀರಿನ ಬಿಂಬದಂತೆಯೇ.
ಅದೇ ನಿಜ.
ರೂಪರಾಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.