ಶರಾವತಿ ಅಭಯಾರಣ್ಯಕ್ಕೆ ಕೆಲ ಗ್ರಾಮಗಳ ಸೇರ್ಪಡೆಗೆ ವಿರೋಧ
Team Udayavani, Feb 10, 2020, 5:30 PM IST
ಶಿರಸಿ: ಶಿವಮೊಗ್ಗ ಶರಾವತಿ ಅಭಯಾರಣ್ಯಕ್ಕೆ ತಾಲೂಕಿನ ಕೆಲವು ಗ್ರಾಮಗಳ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಫೆ. 20ರಂದು ರಾಗಿಹೊಸಳ್ಳಿ ಗ್ರಾಮದಲ್ಲಿ ರಸ್ತೆ ತಡೆ ಮತ್ತು ಬೃಹತ್ ಪ್ರತಿಭಟನಾ ಸಭೆ ಜರುಗಿಸಲು ತೀರ್ಮಾನಿಸಲಾಯಿತು.
ರವಿವಾರ ರಾಗಿಹೊಸಳ್ಳಿಯ ಶಾಂಭವಿ ಸಭಾಭವನದಲ್ಲಿ ಜರುಗಿದ ಜಿಲ್ಲಾ ಅರಣ್ಯಭೂಮಿ ಹೋರಾಟಗಾರರ ವೇದಿಕೆ ಅಧ್ಯಕ್ಷ ಎ. ರವೀಂದ್ರ ನಾಯಕ ಅಧ್ಯಕತೆಯಲ್ಲಿ ಜರುಗಿದ “ಅಭಯಾರಣ್ಯ ವ್ಯಾಪ್ತಿಯ ಪ್ರದೇಶದ ಜಾಗೃತಿ ಸಭೆ’ಯಲ್ಲಿ ಕೆಲ ತೀರ್ಮಾನಕ್ಕೆ ಬರಲಾಯಿತು. ಶಿರಸಿ ತಾಲೂಕಿನ ಹೆಬ್ರೆ, ಹೊಸೂರು, ಬುಗುಡಿ ಹೀಗೆ ಮೂರು ಗ್ರಾಮಗಳ ಸುಮಾರು 549.97 ಹೆಕ್ಟೇರ್ ಅರಣ್ಯ ಪ್ರದೇಶವನ್ನು ಶರಾವತಿ ಅಭಯಾರಣ್ಯಕ್ಕೆ ಸಂಬಂಧಿಸಿದ ಕ್ಷೇತ್ರಕ್ಕೆ ಒಳಪಡಿಸುವುದರಿಂದ ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸರಕಾರದ ಮೇಲೆ ಪ್ರತಿಭಟನೆ ಮೂಲಕ ಒತ್ತಡ ಹೇರಲು ತೀರ್ಮಾನಿಸಲಾಯಿತು. ಯೋಜನೆ ಜಾರಿ ಪೂರ್ವದಲ್ಲಿ ಜನರ ಅಭಿಪ್ರಾಯ ಸಂಗ್ರಹಿಸಿರುವುದಿಲ್ಲ, ಅಭಯಾರಣ್ಯ ವಿಸ್ತರಣೆ ಕುರಿತು ಜನಜಾಗೃತಿ ಮೂಡಿಸಿರುವುದಿಲ್ಲ, ಅರಣ್ಯವ್ಯಾಪ್ತಿಯಲ್ಲಿ ವಾಸ್ತವ್ಯ ಹಾಗೂ ಸಾಗುವಳಿಗಾಗಿ ಅರಣ್ಯಭೂಮಿ ಹಕ್ಕಿಗಾಗಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಮಂಜೂರಿಗೆ ಅರ್ಜಿಗಳು ವಿಚಾರಣೆ ಹಂತದಲ್ಲಿರುವಾಗಲೇ ಅಧಿಸೂಚನೆಯಿಂದ ಈ ಪ್ರದೇಶದ ಅರಣ್ಯ ಸಾಗುವಳಿದಾರರ ಹಕ್ಕು ಕುಂಠಿತವಾಗುತ್ತದೆ.
ಅರಣ್ಯವ್ಯಾಪ್ತಿಯಲ್ಲಿ ಅರಣ್ಯಪ್ರದೇಶಕ್ಕೆ ಹೊಂದಿಕೊಂಡಿರುವ ಕಂದಾಯ ಭೂಮಿ ಸಾಗುವಳಿದಾರರಿಗೆ ಯೋಜನೆಯಿಂದ ಮುಂಬರುವ ದಿನಗಳಲ್ಲಿ ಸ್ವತಂತ್ರತೆ ಮತ್ತು ಸ್ವಾವಲಂಬನೆ ಜೀವನಕ್ಕೆ ಆತಂಕ ಉಂಟಾಗುತ್ತವೆ. ಈ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಈ ಪ್ರದೇಶದ ಮಾನವನ ಸ್ವತಂತ್ರ ಜೀವನಕ್ಕೆ ದಿಗ್ಭಂಧನೆ ಹಾಗೂ ಮೂಲಭೂತ ಹಕ್ಕು ಮತ್ತು ಸೌಲಭ್ಯದಿಂದ ವಂಚಿತರಾಗುವುದಲ್ಲದೇ ಮಾನವ ಹಕ್ಕು ಪಡೆಯಲು ಈ ಯೋಜನೆ ಮಾರಕವಾಗಿರುವುದರಿಂದ ಇದನ್ನು ಕೈಬಿಡುವ ನಿಟ್ಟಿನಲ್ಲಿ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಆದ್ದರಿಂದ ಸರ್ಕಾರದ ಮೇಲೆ ಒತ್ತಡ ತರಲು ಫೆ. 20ರಂದು ರಾಗಿಹೊಸಳ್ಳಿಯಲ್ಲಿ ಪ್ರತಿಭಟನೆ ಜರುಗಿಸಲು ತೀರ್ಮಾನಿಸಲಾಯಿತು.
ಸಭೆ ಅಧ್ಯಕ್ಷತೆ ವಹಿಸಿದ್ದ ಬಂಡಲ ಗ್ರಾಪಂ ಅಧ್ಯಕ್ಷ ದೇವರಾಜ ಮರಾಠಿ ಮಾತನಾಡಿದರು. ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರವೀಣ ಗೌಡ್ರ, ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ ನಾಯ್ಕ, ಅನಂತ ಗೌಡ, ಮಂಜುನಾಥ ಗೌಡ, ಬಾಬು ಯಂಕು ಮರಾಠಿ, ಅನಂತ ಗೌಡ, ಮಾಬ್ಲೇಶ್ವರಗೌಡ, ನಂದು ಮರಾಠಿ ಮುಂತಾದವರು ಇದ್ದರು. ಕೃಷ್ಣ ಮರಾಠಿ ಸ್ವಾಗತಿಸಿದರು. ಗಜಾನನ ನಾಯ್ಕ ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.