ಮಕ್ಕಳ ಸಾಮರ್ಥ್ಯ ಅರಿತ ಸಿಇಒ
Team Udayavani, Feb 11, 2020, 1:06 PM IST
ಯಾದಗಿರಿ: ನಗರದ ಸ್ಟೇಷನ್ ಬಜಾರ್ ಪ್ರೌಢಶಾಲೆಗೆ ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಶರ್ಮಾ ಭೇಟಿ ನೀಡಿ ಪರಿಶೀಲಿಸಿದರು.
ಮಕ್ಕಳಿಗೆ ವಿಜ್ಞಾನ ಸೂತ್ರಗಳ ಕುರಿತು ಪ್ರಶ್ನೆ ಮಾಡಿದರು. 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಮಾರು 60ರಷ್ಟು ವಿದ್ಯಾರ್ಥಿಗಳಿರುವ ತರಗತಿಯಲ್ಲಿ ಎಲ್ಲಾ ಮಕ್ಕಳ ಸಾಮರ್ಥ್ಯ ಅರಿಯುವ ಪ್ರಯತ್ನ ಮಾಡಿದರು. ಅವರು ಕೇಳಿದ ಬಹುತೇಕ ಪ್ರಶ್ನೆಗಳಿಗೆ ಹಲವು ವಿದ್ಯಾರ್ಥಿಗಳು ಸಮರ್ಪಕ ಉತ್ತರ ನೀಡಿದ್ದು, ಇತರೆ ಮಕ್ಕಳು ಎಡವಿದ್ದರಿಂದ ವಿಷಯ ಶಿಕ್ಷಕರನ್ನು ಎಷ್ಟು ಅಧ್ಯಾಯ ಪಾಠ ಮಾಡಿದ್ದೀರಾ ಎಂದು ಪ್ರಶ್ನಿಸಿದರು.
ಬಳಿಕ ಇನ್ನೊಂದು ತರಗತಿ ಕೋಣೆಗೆ ಭೇಟಿ ನೀಡಿ, ಅಲ್ಲಿನ ಮಕ್ಕಳಿಗೆ ಗಣಿತ ವಿಷಯದ ಕುರಿತು ಪ್ರಶ್ನಿಸಿ, ಮಕ್ಕಳು ಗಣಿತದಲ್ಲಿ ಎಷ್ಟು ಪರಿಣಿತರಾಗಿದ್ದಾರೆ ಎನ್ನುವುದನ್ನು ಅರಿತರು. ವಿದ್ಯಾರ್ಥಿಗಳು ಪ್ರಾಥಮಿಕ ಶಿಕ್ಷಣವನ್ನು ಮುಕ್ತಾಯಗೊಳಿಸಿ 10ನೇ ತರಗತಿಗೆ ಬಂದದೂ ಹಲವು ಮಕ್ಕಳಿಗೆ ಸೂಕ್ತ ಉತ್ತರ ನೀಡುವ ಸಾಮರ್ಥ್ಯ ಇಲ್ಲದಿರುವುದನ್ನು ಮನಗಂಡ ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಲಿಂಗಪ್ಪ ಪುಟಗಿ, ಶಿಕ್ಷಣ ಇಲಾಖೆ ಅಧಿಕಾರಿ, ಮುಖ್ಯಗುರು ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀನಿವಾಸರೆಡ್ಡಿ, ಶಾಲಾ ಮುಖ್ಯಗುರು ಇದ್ದರು.